ಹೆಣ್ಣು ಕಾವ್ಯ ಕಟ್ಟುವುದೇ ಒಂದು ವಿಸ್ಮಯ…
ಶಿವಮೊಗ್ಗ : ಮಾಧ್ಯಮದ ಹಂಗು ಬಿಟ್ಟು ಕವಿತೆಗಳು ಅರಗಬೇಕು ಎಂದು ಸಾಹಿತಿ ಹಾಗೂ ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್, ಶಿಕ್ಷಕರ ಸಾಹಿತ್ಯ ಪರಿಷತ್ ಇವರ ಆಶ್ರಯದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕಿ ಅನಿತಾ ಸೂರ್ಯ ಅವರ ಮನದ ಹನಿಗಳು ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ಹೆಣ್ಣಿಗೂ ಕಾವ್ಯಕ್ಕೂ ಅವಿನಾಭಾವ ಸಂಬಂಧ ವಿದೆ. ಅದು ತಾಯಿ-ಮಗು ಸಂಬಂಧದಂತೆ ಪ್ರತಿ ಹೆಣ್ಣಿಗೂ ಕಾವ್ಯದ ಕಲ್ಪನೆ ಇರುತ್ತದೆ. ಹೆಣ್ಣು ಕಾವ್ಯ ಕಟ್ಟುವುದೇ ಒಂದು ವಿಸ್ಮಯ. ನಮ್ಮ ಜನಪದ ಹೆಣ್ಣುಮಕ್ಕಳು ತಮ್ಮ ಒಡಲಾಳದ ನೋವುಗಳನ್ನು ಕಾವ್ಯದ ಮೂಲಕ ಹೊರಹಾಕಿ zರೆ. ಪುರುಷರ ಕಾವ್ಯಗಳಿಗೆ ಮಿಗಿಲಾಗಿ ಹೆಣ್ಣಿನ ಸಂವೇದನೆಯ ಕಾವ್ಯಗಳು ಹೊರಬಂದಿವೆ ಎಂದರು.
ಜಗತ್ತನ್ನು ಮೆಚ್ಚಿಸಲು ಕಾವ್ಯ ಬರಬೇಕಾಗಿಲ್ಲ. ಒಳ್ಳೆಯ ಕವಿತೆಗಳು ಒಳ್ಳೆಯ ಕಾವ್ಯಗಳನ್ನು ಓದುವುದ ರಿಂದ ಬರುತ್ತವೆ. ಹೆಣ್ಣು ತನ್ನ ನೋವು, ಆತಂಕ, ಸಿಟ್ಟು ಸಹನೆ ಎಲ್ಲವನ್ನು ಕಾವ್ಯಗಳ ಮೂಲಕ ಹೇಳುತ್ತಾಳೆ. ಒಡಲಾಡದ ಬೇಗುದಿ ಗಳು ಕಾವ್ಯದ ರೂಪದಲ್ಲಿ ಹೊರ ಬಂದಾಗ ಅದು ಗಟ್ಟಿ ಕಾವ್ಯವಾಗುತ್ತದೆ ಎಂದರು.

ಪುಸ್ತಕ ಕುರಿತು ಮಾತನಾಡಿದ ಪತ್ರಕರ್ತ ರವಿಕುಮಾರ್, ಇತ್ತೀಚಿನ ಕವಯತ್ರಿಯರು ಸಿದ್ಧ ಮಾದರಿಯನ್ನು ಒಡೆದು ಹೊಸಬಗೆಯ ಕಾವ್ಯಗಳನ್ನು ರಚಿಸುತ್ತಿzರೆ. ಇವುಗಳನ್ನು ವಿಮರ್ಶೆ ಎಂಬ ಬ್ಯಾಟರಿ ಬೆಳಕಿನಲ್ಲಿ ನೋಡೇ ಎದೆಯ ಹಣತೆಯ ಬೆಳಕಲ್ಲಿ ನೋಡಬೇಕು. ಮಹಿಳೆಯರು ತಮ್ಮ ನೋವುಗಳ ಕುರಿತು ಕಾವ್ಯ ರಚಿಸುವುದೇ ಇಂದು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕಿ ಅನಿತಾ ಸೂರ್ಯ ಅವರ ಈ ಕೃತಿ ಗಮನಸೆಳೆಯುತ್ತದೆ. ಇಲ್ಲಿ ೫೨ ಕವಿತೆಗಳಿವೆ. ತಂದೆ, ತಾಯಿ, ಬುದ್ಧ, ಬಸವ, ಪ್ರಕೃತಿ, ನೋವು, ನಲಿವು, ಶೋಷಣೆ, ಪ್ರತಿಧ್ವನಿ ಎಲ್ಲವೂ ವ್ಯಕ್ತವಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಕವಿತೆ ಬರೆಯುವುದು ಕೂಡ ಒಂದು ಹುಚ್ಚಾಗಿದೆ. ಇದರಿಂದ ಮನಸ್ಸು ಹಗುರವಾಗುತ್ತದೆ. ಕಸಾಪ ಉದಯೋ ನ್ಮುಖ ಕವಿಗಳಿಗೆ ವೇದಿಕೆ ಕಲ್ಪಿಸಿಕೊಡುತ್ತಿದೆ. ಸಾಹಿತ್ಯ ಗ್ರಾಮ ದಲ್ಲಿ ಒಂದು ದೊಡ್ಡ ಗ್ರಂಥಾಲಯವನ್ನು ನಿರ್ಮಿಸಲಾ ಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಇಲ್ಲಿಗೆ ಬರಮಾಡಿಕೊಂಡು ಪುಸ್ತಕಗಳನ್ನು ಓದುವುದಕ್ಕೆ ಪ್ರೇರಣೆ ನೀಡಲಾಗುವುದು ಎಂದರು.
ಮನದ ಹನಿಗಳು ಕೃತಿ ರಚಿಸಿದ ಅನಿತಾ ಸೂರ್ಯ ಅವರು ಮಾತನಾಡಿ, ಕವಿತೆ ಬರೆದು ನಿರಾಳವಾಗಿzನೆ. ಬಹಳ ವರ್ಷ ಗಳಿಂದ ಮನಸ್ಸನ್ನು ಕಾಡುತ್ತಿದ್ದ ವಸ್ತುಗಳು, ವೇದನೆಗಳು ಕವಿತೆಯಾಗಿ ರೂಪುಗೊಂಡಿವೆ. ಕುಟುಂಬದವರ ಸಹಕಾರ ಇದಕ್ಕಿದೆ. ಕುವೆಂಪು ಅವರ ಪ್ರಭಾವ ದಟ್ಟವಾಗಿದೆ ಎಂದು ಪುಸ್ತಕ ಕುರಿತ ತಮ್ಮ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ವಕೀಲ ಕೆ.ಪಿ. ಶ್ರೀಪಾಲ್, ಸಾಹಿತಿ ಪ್ರೊ| ಸತ್ಯನಾರಾಯಣ್ ಮುಂತಾದವರಿದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಕರಾದ ಸುರೇಶ್ ಮಲ್ಲಿಗೆ ಮನೆ, ಲತಾ ರಾಜಕುಮಾರ್, ನೇತ್ರಾವತಿ, ಶೋಭಾ ಅವರನ್ನು ಸನ್ಮಾನಿಸಲಾಯಿತು.

