ಶೀಘ್ರ ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲು ಸೂಚನೆ
ಹುಣಸಗಿ: ತಾಲ್ಲೂಕಿನ ಗೆದ್ದಲಮರಿ, ಜುಮಲಪೂರ ಗ್ರಾಮಗಳಲ್ಲಿ ಗುರುವಾರ ಸಂಜೆ ಸುರಿದ ಮಳೆಗೆ ಹಾನಿಗೊಳಗಾದ ಭತ್ತದ ಗzಗಳನ್ನು ಯುವ ಮುಖಂಡ ರಾಜ ವೇಣುಗೋಪಾಲ ನಾಯಕ ಅವರು ಭೇಟಿ ನೀಡಿ ಪರಿಶೀಲಿಸಿದರು.
ನಂತರ ಪರಿಶೀಲನೆಯಲ್ಲಿ ಭಾಗಿಯಾದ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ರೈತರ ಜಮೀನಿನಲ್ಲಿ ಇರುವ ಭತ್ತದ ಬೆಳೆ ನೆಲಕಚ್ಚಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು ರೈತರಿಗೆ ಮತ್ತಷ್ಟು ಹಾನಿಯುಂಟಾಗಿದೆ. ಹಾಗಾಗಿ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಅಧಿಕಾರಿಗಳು ತಕ್ಷಣವೇ ಬೆಳೆ ಹಾನಿಯಾದ ರೈತರಿಗೆ ಆದಷ್ಟು ಬೇಗ ಪರಿಹಾರ ನೀಡಲು ಶೀಘ್ರ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ತಹಸೀಲ್ದಾರ ಬಸಲಿಂಗಪ್ಪ ನೈಕೋಡಿ ಮಾತನಾಡಿ, ಕಂದಾಯ ಹಾಗೂ ಕೃಷಿ ಇಲಾಖೆಯ ಜಂಟಿ ಯಾಗಿ ಬೆಳೆ ಸಮೀಕ್ಷೆ ನಡೆಯುತ್ತಿದ್ದು ಬೆಳೆ ಹಾನಿಗೊಳಗಾದ ರೈತರು ಅಗತ್ಯ ದಾಖಲೆಗಳನ್ನು ನಾಡ ಕಚೇರಿಗೆ ತಲುಪಿಸುವಂತೆ ಅಲ್ಲಿಯೇ ಇದ್ದ ರೈತರಿಗೆ ಹೇಳಿದರು.
ಈ ವೇಳೆ ಕೃಷಿ ಇಲಾಖೆಯ ಅಧಿಕಾರಿಗಳು, ಗ್ರಾಮಾಡಳಿತಾಧಿಕಾರಿಗಳು, ಸೇರಿದಂತೆ ರೈತಾಪಿ ವರ್ಗ ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.