ಜಿಲ್ಲಾ ಸುದ್ದಿತಾಜಾ ಸುದ್ದಿ

ಎಟಿಎನ್‌ಸಿ ಕಾಲೇಜಿನಲ್ಲಿ ಅಗ್ನಿ ಅವಘಡ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ

Share Below Link

ಶಿವಮೊಗ್ಗ: ನಗರದ ಮಹಾವೀರ ಸರ್ಕಲ್ ಬಳಿಯ ಸರ್.ಎಂ.ವಿ. ರಸ್ತೆಯಲ್ಲಿ ಆ.೨೫ರ ಶುಕ್ರವಾರ ಮಧ್ಯಾಹ್ನ ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ಸಿದ್ಧತೆ, ಹೂವು- ಹಣ್ಣಿನ ಖರೀದಿ ಸೇರಿದಂತೆ ಮತ್ತಿತರೆ ಕಾರಣಗಳಿಗೆ ಸಾಗುತ್ತಿದ್ದ ಸಾರ್ವಜನಿಕರಿಗೆ ಅಚ್ಚರಿ ಹಾಗೂ ಕುತೂಹಲ ಗರಿಗೆದರಿತ್ತು. ಎಟಿಎನ್‌ಸಿ ಕಾಲೇಜಿನ ಆವರಣ ದೊಳಗೆ ಸಾಗಿದ ಅಗ್ನಿ ಶಾಮಕ ವಾಹನ ಹಾಗೂ ಸಿಬ್ಬಂದಿ, ಮುಗಿಲೆತ್ತರಕ್ಕೆ ಚಿಮ್ಮುತ್ತಿದ್ದ ಜಲ ಸಿಂಚನ ಕಂಡು ಕಾಲೇಜಿನದರೂ ಬೆಂಕಿ ಬಿತ್ತಾ ಎಂದು ಕ್ಷಣ ಕಾಲ ಆತಂಕಕ್ಕೆ ಕಾರಣವಾಯಿತು.
ಆದರೆ, ಎಟಿಎನ್‌ಸಿ ಕಾಲೇಜಿನ ಎನ್‌ಎಸ್‌ಎಸ್ ವತಿಯಿಂದ ಸದರಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿರುವ ಕುವೆಂಪು ವಿವಿ ಮಟ್ಟದ ಅಂತರ ಕಾಲೇಜು ಶಿಬಿರದ ಸ್ವಯಂ ಸೇವಕರಿಗೆ ಬೆಂಕಿ ಅವಘಡ ಉಂಟಾಗುವ ರೀತಿ, ಅದನ್ನು ಆರಿಸುವ ಬಗೆ ಕುರಿತು ಅಗ್ನಿ ಶಾಮಕ ಇಲಾಖೆ ಪ್ರಾತ್ಯಕ್ಷಿಕೆ ಹಮ್ಮಿಕೊಂಡಿರುವುದನ್ನು ಅರಿತು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಬೆಂಕಿ ಹತ್ತಿಕೊಂಡರೆ ನಾವು ಯಾರಿಗೆ ಹೇಳಬೇಕು, ಯಾವ ನಂಬರ್‌ಗೆ ಫೋನ್ ಮಾಡಬೇಕು, ಚಿತ್ರಮಂದಿರ, ಪೆಟ್ರೋಲ್ ಬಂಕ್ ಮತ್ತಿತರೆಡೆ ಏಕೆ ಮರಳು ತುಂಬಿದ ಬಕೆಟ್ ಇಟ್ಟರುತ್ತಾರೆ, ಅಲ್ಲದೆ ಗೃಹ ಬಳಕೆಯ ಸಿಲಿಂಡರ್‌ನಿಂದ ಬೆಂಕಿ ಹತ್ತಿದಾಗ ಅದನ್ನು ಆರಿಸುವ ಬಗೆ, ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಬೆಂಕಿಯನ್ನು ನೀರು, ಮಣ್ಣು, ಕಾರ್ಬನ್ ಡೈ ಆಕ್ಸೈಡ್ ಬಳಸಿ ನಂದಿಸುವುದು ಹೇಗೆ? ಯಾವುದು ಸೂಕ್ತ ಎಂಬುದನ್ನು ತಿಳಿಸಿ ಕೊಡಲಾಯಿತು.
ನಂತರ ಕಾಲೇಜಿನ ಆವರಣ ದಲ್ಲಿ ಬೆಂಕಿ ಆರಿಸುವ ನಾನಾ ಹಂತ, ಬೆಂಕಿ ಆರಿಸುವ ಯಂತ್ರದ ಪರಿಚಯ, ಬೆಂಕಿ ಆರಿಸುವ ವಿಧಿ ವಿಧಾನಗಳನ್ನು ಪ್ರದರ್ಶಿಸ ಲಾಯಿತು. ಅವಘಡಗಳನ್ನು ನಿರ್ವಹಿಸುವ ಬಗೆಯನ್ನು ಪ್ರಾತ್ಯಕ್ಷಿಕೆ ಮೂಲಕ ಮನವರಿಕೆ ಮಾಡಿಕೊಡಲಾಯಿತು.
ಕುವೆಂಪು ವಿವಿಯ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ, ಎಟಿಎನ್‌ಸಿ ಕಾಲೇಜಿನ ಪ್ರಾಚಾರ್ಯೆ ಪ್ರೊ| ಮಮತಾ ಪಿ.ಆರ್., ನಿವೃತ್ತ ಪ್ರಾಂಶುಪಾಲ ಪ್ರೊ| ಡಿ.ಎಸ್. ಮಂಜುನಾಥ್, ಎನ್‌ಎಸ್‌ಎಸ್ ಶಿಬಿರಾಧಿಕಾರಿ ಗಳಾದ ಪ್ರೊ.ಕೆ.ಎಂ. ನಾಗರಾಜ್, ಪ್ರೊ. ಎಸ್. ಜಗದೀಶ್, ಪ್ರೊ. ಮಂಜುನಾಥ್, ಅಗ್ನಿ ಶಾಮಕ ಇಲಾಖೆಯ ದೇವೇಂದ್ರ ನಾಯ್ಕ್, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.