ಶುದ್ದ ನೀರು ಪೂರೈಕೆ ನಿಮ್ಮ ಕೈಯಲ್ಲಿ ಆಗದಿದ್ದರೆ ಹೇಳಿ ನಾವು ಮಾಡಿ ತೋರಿಸುತ್ತೇವೆ: ಸವಾಲ್…
ಶಿವಮೊಗ್ಗ: ನಗರದಲ್ಲಿ ಹದಗೆಟ್ಟಿರುವ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ, ಸಾರ್ವಜನಿಕರಿಗೆ ಶುದ್ಧ ನೀರು ನೀಡಿ, ಇಲ್ಲದೇ ಹೋದರೆ ನಿರ್ವಹಣೆಯ ಜವಾಬ್ದಾರಿಯನ್ನು ನಮಗಾದರೂ ಕೊಡಿ ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ಇಲಾಖೆಗೆ ಸವಾಲು ಹಾಕಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಕುಡಿಯುವ ನೀರಿನ ಅವ್ಯವಸ್ಥೆಯ ಬಗ್ಗೆ ಒಕ್ಕೂಟದ ಪ್ರಮುಖರುಆಕ್ರೋಶ ವ್ಯಕ್ತಪಡಿಸುತ್ತಾ ಪಾಲಿಕೆ ಮತ್ತು ಜಲ ಮಂಡಳಿಗೆ ಸವಾಲು ಹಾಕಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತ ಕುಮಾರ್ ಮಾತನಾಡಿ, ಕಳೆದ ಹಲವು ದಿನಗಳಿಂದ ನಗರದಲ್ಲಿ ಶುದ್ಧ ನೀರಿನ ಕುಡಿಯುವ ವ್ಯವಸ್ಥೆ ಸರಿಯಾಗುತ್ತಿಲ್ಲ. ಇದರಿಂದ ಸಾವಿರಾರು ಜನರಿಗೆ ಆರೋಗ್ಯದಲ್ಲಿ ತೊಂದರೆ ಉಂಟಾಗಿದೆ. ಮಣ್ಣು ಮಿಶ್ರಿತ ನೀರು ಸರಬರಾಜಾಗುತ್ತಿದ್ದು, ಒಕ್ಕೂಟದ ಸದಸ್ಯರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಈ ಮಾತನ್ನು ಹೇಳಬೇಕಾಗಿದೆ ಎಂದರು.
ನ್ಯೂ ಮಂಡ್ಲಿಯ ಕೆ.ಆರ್.ವಾಟರ್ ವರ್ಕ್ಸ್‌ನ ನೀರು ಶುದ್ದೀಕರಣ ಘಟಕ ದಲ್ಲಿ ಸರಿಯಾದ ಯಂತ್ರಗಳೇ ಇಲ್ಲ, ಅವೈಜನಿಕವಾಗಿ ಶುದ್ಧೀಕರಣ ಮಾಡಲಾಗುತ್ತಿದೆ. ಈ ಹಿಂದೆ ಉಪಯೋಗಿಸುತ್ತಿದ್ದ ಆಲಂ ಕೆ.ಕೆ. ಗೆ ಬದಲಾಗಿ ಅಲ್ಯೂಮಿನಿಯಂ ಕ್ಲೋರೈಡ್‌ನ್ನು ಬಳಸಲಾಗುತ್ತಿದೆ. ಈ ಕಾರ್ಯ ಕೂಡ ಅಪೂರ್ಣವಾಗಿ ನಡೆಯುತ್ತಿದ್ದು, ಮಣ್ಣು ಮಿಶ್ರಿತ ನೀರು ಟ್ಯಾಂಕ್‌ಗೆ ಸರಬರಾಜಗುತ್ತಿದೆ. ಆಲಂನ ಟ್ರೀಟ್‌ಮೆಂಟ್ ಘಟಕ ಅತ್ಯಂತ ಶಿಥಿಲವಾಗಿದ್ದು, ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ ಎಂದರು.
ಪ್ರಮುಖವಾಗಿ ಇಲ್ಲಿರುವ ಎಲ್ಲಾ ಯಂತ್ರಗಳು ಹಾಗೂ ಶುದ್ದಿಕರಣದ ವಿಧಾನಗಳು ಕಳೆದ ೫೦ ವರ್ಷದ ಹಿಂದಿನದಾಗಿದೆ, ಯಂತ್ರಗಳೆಲ್ಲ ತುಕ್ಕು ಹಿಡಿದಿವೆ. ಅನೇಕ ಯಂತ್ರಗಳು ಕೆಲಸವನ್ನೇ ಮಾಡುತ್ತಿಲ್ಲ. ನದಿ ನೀರಿನಿಂದ ಸರಬರಾಜಗುವ ಮಣ್ಣು ಮಿಶ್ರಿತ ನೀರನ್ನು ಈ ಯಂತ್ರಗಳು ತಿರುಗಿಸಿ ಬೇರ್ಪಡಿಸಬೇಕಾಗುತ್ತದೆ. ಆದರೆ ಆ ಯಂತ್ರಗಳೇ ತಿರುಗುತ್ತಿಲ್ಲ, ದೋಷಪೂರಿತ ಯಂತ್ರಗಳೇ ಇವೆ ಎಂದು ದೂರಿದರು.
ಡಾ. ಸತೀಶ್‌ಕುಮಾರ್ ಶೆಟ್ಟಿ ಮಾತನಾಡಿ, ನೀರಿನ ಶುದ್ಧೀಕರಣದ ಘಟಕದ ಒಳಭಾಗ ಮತ್ತು ಹೊರ ಭಾಗಗಳಲ್ಲಿ ಅಸಮರ್ಪಕ ನಿರ್ವಹಣೆ ಯಿದೆ. ಈ ಎಲ್ಲಾ ತೊಂದರೆಗಳು ಕೆಲವು ವರ್ಷಗಳಿಂದ ಕಂಡು ಬರುತ್ತಿದ್ದರೂ ಸಹ ಗಮನಹರಿಸಿಲ್ಲ. ಹಾಗಾಗಿ ಜನರಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣ ವಾಗಿದೆ ಎಂದು ದೂರಿದರು.
ಕುಡಿಯುವ ನೀರಿನ ವ್ಯವಸ್ಥೆಯ ಮೇಲೆಯೇ ನಗರದ ಜನರ ಆರೋಗ್ಯವಿದೆ. ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡಬೇಡಿ, ಕೂಡಲೇ ಶಾಸಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಶೀಘ್ರವೇ ಸಮಸ್ಯೆ ಬಗೆಹರಿಸದಿದ್ದರೆ ವೇದಿಕೆ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರಕ್ಕೆ ಹೊಸ ನೀರು ಶುದ್ದೀಕರಣ ಘಟಕ ಬೇಕು: ಶಿವಮೊಗ್ಗ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈಗ ಇರುವ ನೀರಿನ ಸರಬರಾಜು ಸಾಮರ್ಥ್ಯ ತುಂಬ ಕಡಿಮೆ ಇದೆ. ಮತ್ತು ಹಳೆಯ ಪದ್ಧತಿ ಇದೆ. ಮುಂದಿನ ೨೫ ವರ್ಷಗಳನ್ನು ಗಮನದಲ್ಲಿರಿಸಿ ಅತ್ಯಾಧುನಿಕವಾದ ಹೊಸದಾಗಿ ಶುದ್ಧೀಕರಣ ಘಟಕ ಸ್ಥಾಪನೆಯಾಗಬೇಕಾಗಿದೆ. ಅಲ್ಲದೆ ೨೪/೭ ಕುಡಿಯುವ ನೀರಿನ ಯೋಜನೆ ಕೂಡ ವಿಫಲವಾಗಿದೆ. ಹಾಗಾಗಿ ಹೆಚ್ಚಿನ ಸಾಮರ್ಥ್ಯದ ಹೊಸ ತಂತ್ರಜನದ ನೀರು ಶುದ್ಧೀಕರಣ ಘಟಕ ಶಿವಮೊಗ್ಗಕ್ಕೆ ಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಒಕ್ಕೂಟದ ಅಧ್ಯಕ್ಷ ಎಸ್.ಆರ್. ಗೋಪಾಲ್, ಪ್ರಮುಖರಾದ ಇಕ್ಬಾಲ್ ನೇತಾಜಿ, ಸೀತಾರಾಮ್, ನಾಗರಾಜ್ ಗೋರೆ, ಚನ್ನವೀರಪ್ಪ ರಘುಪತಿ ಇನ್ನಿತರರಿದ್ದರು.