ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ಪವಿತ್ರ ವಿಭೂತಿ ಬುಧವಾರ: ಪಶ್ಚಾತ್ತಾಪದ ಭಸ್ಮದಿಂದ ಪುನರುತ್ಥಾನದ ಬೆಳಕಿನತ್ತ ಪಯಣ…

Share Below Link

ಲೇಖನ: ರಾಕೇಶ್ ಡಿಸೋಜ, ಶಿವಮೊಗ್ಗ
ವಿಶ್ವದಾದ್ಯಂತ ಕಥೋಲಿಕ ಕ್ರೈಸ್ತ ಭಕ್ತರು ಪವಿತ್ರ ಲೆಂಟ್ ಋತುವಿನ ದಿವ್ಯ ಪ್ರವೇಶದ್ವಾರ ವಾದ ವಿಭೂತಿ ಬುಧವಾರವನ್ನು ಫೆ.೧೮ರ ನಾಳೆ ಶ್ರದ್ಧಾಭಕ್ತಿಯಿಂದ ಆಚರಿಸಲಿದ್ದಾರೆ. ಅಂದು ಚರ್ಚ್‌ಗಳಲ್ಲಿ ಪೂಜ್ಯ ಯಾಜಕರು ವಿಶೇಷವಾಗಿ ಭಕ್ತರ ನೆತ್ತಿಯಲ್ಲಿ ಭಸ್ಮದ ಗುರುತು ಇಡುತ್ತಾರೆ. ಆ ಕ್ಷಣದಲ್ಲಿ ಕೇಳಿಬರುವ ಆ ಶಾಶ್ವತ ವಾಕ್ಯ ನೀನು ಧೂಳಿನಿಂದ ಉಂಟಾದವನು ಮರಳಿ ಧೂಳಿಗೇ ಮರಳುವೆ… ಇದು ಮಾನವನ ಅಹಂಕಾರವನ್ನು ಕರಗಿಸುವ ದೈವಿಕ ಸತ್ಯವನ್ನು ನೆನಪಿಸುತ್ತದೆ.


ಬೈಬಲ್ ಶ್ರೀಗ್ರಂಥದಲ್ಲಿ ಕೀರ್ತನೆಗಳು ೧೦೪ : ೨೯-೩೦ರಲ್ಲಿ ಹೀಗೆ ಹೇಳುತ್ತದೆ:
ತಲ್ಲಣಗೊಳ್ಳುವುವು ನೀ ಮುಖ ಮರೆಮಾಡಿಕೊಳ್ಳಲು |
ಮಣ್ಣುಪಾಲಾಗುವವು ನೀನವುಗಳ ಉಸಿರನಡಗಿಸಲು ||
ನೀ ಉಸಿರನ್ನೂದಲು ಹೊಸದಾಗುವುವು |
ಪುನಶ್ಚೇತನಗೊಳ್ಳುವುದು ಜಗವೆಲ್ಲವು ||
ಈ ವಾಕ್ಯವು ನಮ್ಮ ಅಸ್ತಿತ್ವದ ಅಲ್ಪತೆಯನ್ನು ಮಾತ್ರವಲ್ಲ ದೇವರ ಸಾನ್ನಿಧ್ಯವಿಲ್ಲದ ಜೀವನದ ವ್ಯರ್ಥತೆಯನ್ನೂ ಸ್ಪಷ್ಟಪಡಿಸುತ್ತದೆ. ನಮ್ಮ ಉಸಿರೂ, ನಮ್ಮ ಜೀವನವೂ ದೇವರ ದಯೆಯ ದಾನವೇ ಎಂಬ ಅರಿವನ್ನು ಈ ದಿನ ಗಾಢಗೊಳಿಸುತ್ತದೆ.
ಭಸ್ಮವು ಕೇವಲ ಒಂದು ಆಚರಣೆಯ ಚಿಹ್ನೆಯಲ್ಲ ಬದಲಿಗೆ ಅದು ಆತ್ಮಪರಿಶೀಲನೆಯ ಜಾಗೃತಿ. ಭಸ್ಮವು ಹೆಮ್ಮೆ, ಅಹಂಕಾರ ಮತ್ತು ಲೋಕಾಸಕ್ತಿಗಳನ್ನು ಸುಟ್ಟು ಭಸ್ಮವಾಗುವಂತೆ ಮಾಡುವ ಸಂಕೇತ. ಮಾನವನು ಎಷ್ಟೇ ಶಕ್ತಿ, ಸಂಪತ್ತು, ಸ್ಥಾನಮಾನ ಗಳಿಸಿದರೂ ಅಂತಿಮವಾಗಿ ಧೂಳಿಗೇ ಮರಳುವವನೆಂಬ ಸತ್ಯವನ್ನು ಇದು ನೆನಪಿಸುತ್ತದೆ.
ಆದರೆ ಇದೇ ಭಸ್ಮದಲ್ಲಿ ಪುನರುತ್ಥಾನದ ಬೀಜವಿದೆ. ಭಸ್ಮವು ನಾಶದ ಚಿಹ್ನೆಯಲ್ಲ, ಅದು ಹೊಸ ಜೀವಿತದ ಆರಂಭದ ಸಂಕೇತ. ಪಶ್ಚಾತ್ತಾಪದಿಂದ ಹೊಸ ಜೀವನಕ್ಕೆ ಎzಳುವ ದಾರಿ ಎಂಬ ಸತ್ಯವನ್ನು ವಿಭೂತಿ ಬುಧವಾರ ನಮ್ಮ ಮುಂದಿಡುತ್ತದೆ.
ಲೆಂಟ್ (ಪಾಸ್ಕ ಕಾಲ) ಋತುವಿನ ಆತ್ಮವು ಉಪವಾಸ, ಪ್ರಾರ್ಥನೆ ಮತ್ತು ಧರ್ಮದಾನ ಎಂಬ ಮೂರು ಪ್ರಮುಖ ಸ್ತಂಭಗಳಲ್ಲಿ ನೆಲೆಗೊಂಡಿದೆ.
ಉಪವಾಸವು ದೇಹದ ನಿಯಂತ್ರಣ ಮಾತ್ರವಲ್ಲ ಬದಲಿಗೆ ಅದು ಆತ್ಮದ ಉದ್ಧಾರ. ಆಹಾರದ ತ್ಯಾಗಕ್ಕಿಂತ ಅದು ಅಹಂಕಾರದ ತ್ಯಾಗ. ದೇಹದ ಆಸೆಗಳನ್ನು ನಿಯಂತ್ರಿಸುವಾಗ ಮನಸ್ಸು ದೇವರ ಕಡೆಗೆ ತಿರುಗುತ್ತದೆ. ತ್ಯಾಗದ ಮೂಲಕ ನಾವು ಕ್ರಿಸ್ತನ ತ್ಯಾಗವನ್ನು ಅನುಭವಿಸುತ್ತೇವೆ. ಉಪವಾಸವು ನಮ್ಮ ಒಳಗಿನ ಗರ್ವವನ್ನು ಕುಗ್ಗಿಸಿ, ದಯೆ ಮತ್ತು ಕರುಣೆಯನ್ನು ಬೆಳೆಯಿಸುತ್ತದೆ.
ಪ್ರಾರ್ಥನೆಯು ದೇವರ ಮುಖವನ್ನು ಹುಡುಕುವ ಆತ್ಮಯಾತ್ರೆಯಾಗಿದೆ. ಅದು ನಮ್ಮ ಹೃದಯದ ಉಸಿರಾಗಿದ್ದು, ನಿಶ್ಶಬ್ದತೆಯಲ್ಲಿ ದೇವರ ಧ್ವನಿಯನ್ನು ಆಲಿಸುವಾಗ ಆತ್ಮವು ಆಧ್ಯಾತ್ಮಿಕ ಎತ್ತರಕ್ಕೆ ಏರುತ್ತದೆ. ಕುಟುಂಬ ಪ್ರಾರ್ಥನೆ, ಶಿಲುಬೆ ಮಾರ್ಗ, ಧ್ಯಾನ ಇವೆಲ್ಲವು ಕ್ರೈಸ್ತ ವಿಶ್ವಾಸಿಗಳಲ್ಲಿ ವಿಶ್ವಾಸದ ಬೇರುಗಳನ್ನು ಗಟ್ಟಿಗೊಳಿಸುವ ಸಾಧನಗಳಾಗಿವೆ.
ಧರ್ಮದಾನವು ಪ್ರೀತಿಯ ಜೀವಂತ ರೂಪವಿದ್ದಂತೆ. ಉಪವಾಸ ಮತ್ತು ಪ್ರಾರ್ಥನೆಯ ಫಲ ಧರ್ಮದಾನದಲ್ಲಿ ಕಾಣಬೇಕು. ಬಂಗಾರ ಸಂಗ್ರಹಿಸುವುದಕ್ಕಿಂತ ದಯೆ ಹಂಚುವುದು ಶ್ರೇಷ್ಠ. ಅಗತ್ಯವಿರುವವರೊಂದಿಗೆ ಹಂಚಿಕೊಳ್ಳುವ ಮನೋಭಾವವೇ ಕ್ರಿಸ್ತನ ಪ್ರೀತಿಯ ನಿಜವಾದ ಸಾಕ್ಷ್ಯವಾಗಿದೆ.
ಲೆಂಟ್ ಅವಧಿ ಅಥವಾ ಪಾಸ್ಕ ಕಾಲವು ಭೌತಿಕ ಮಿತಿಗಳನ್ನು ಮೀರಿ ದೈವಿಕ ದಾರಿಯಲ್ಲಿ ಸಾಗುವ ಕಾಲವಾಗಿದೆ. ಇದು ಆತ್ಮಪರಿಶೀಲನೆಯ ಸಮಯ. ಪಾಪದಿಂದ ದೂರ ಸರಿದು, ಸತ್ಯ ಮತ್ತು ನೀತಿಯ ಮಾರ್ಗದಲ್ಲಿ ನಡೆಯುವ ಸಂಕಲ್ಪದ ಘಳಿಗೆಯಾಗಿದೆ.
ವಿಭೂತಿ ಬುಧವಾರದ ಭಸ್ಮವು ನೆತ್ತಿಯ ಮೇಲಿನ ಗುರುತು ಮಾತ್ರವಲ್ಲ ಅದು ಹೃದಯದ ಒಳಗಿನ ಪರಿವರ್ತನೆಯ ಸಂಕೇತ. ಈ ಪವಿತ್ರ ಋತುವಿನಲ್ಲಿ ನಾವು ಉಪವಾಸ, ಪ್ರಾರ್ಥನೆ ಮತ್ತು ಧರ್ಮದಾನದ ಮೂಲಕ ಆತ್ಮವನ್ನು ಶುದ್ಧಗೊಳಿಸಿ, ಕ್ರಿಸ್ತನ ಪುನರುತ್ಥಾನದ ಬೆಳಕಿನತ್ತ ಹೆಜ್ಜೆ ಇಡೋಣ. ಧೂಳಿನಿಂದ ಬಂದ ನಾವು ದೈವಿಕ ಕೃಪೆಯಿಂದ ಶಾಶ್ವತ ಜೀವದತ್ತ ಸಾಗುವವರಾಗೋಣವೇ…

Leave a Reply

Your email address will not be published. Required fields are marked *