ಜಿಲ್ಲಾ ಸುದ್ದಿತಾಜಾ ಸುದ್ದಿ

ಮೌನ ನಾಣ್ಯಗಳಲ್ಲಿ ಮೊಳಗುವ ಇತಿಹಾಸ: ಸಂಸದ ಬಿ.ವೈ. ರಾಘವೇಂದ್ರ

Share Below Link

ಶಿವಮೊಗ್ಗ: ನಾಣ್ಯಗಳು ಮಾತಾಡುವುದಿಲ್ಲ; ಆದರೆ ಅವು ಮೌನವಾಗಿಯೇ ನಮ್ಮ ಗತಕಾಲದ ಇತಿಹಾಸ ಮತ್ತು ಸಂಸ್ಕೃತಿಯನ್ನು ಹಾಗೂ ಆರ್ಥಿಕ ವೈಭವವನ್ನು ಸ್ಪಷ್ಟವಾಗಿ ತಿಳಿಸುತ್ತವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಟ್ರಸ್ಟ್ ವತಿಯಿಂದ ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಜ.೧೬ರ ಇಂದಿನಿಂದ ಮೂರು ದಿನಗಳ ಕಾಲ ಆಯೋಜಿಸಿರುವ ರಾಷ್ಟ್ರಮಟ್ಟದ ನಾಣ್ಯ-ನೋಟುಗಳು, ಅಂಚೆ ಚೀಟಿಗಳು ಹಾಗೂ ಅಪರೂಪದ ವಸ್ತುಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಹಾಗೂ ವಿದೇಶಗಳ ಅಪರೂಪದ ನಾಣ್ಯ- ನೋಟುಗಳು, ವಿವಿಧ ಅರಸರ ಕಾಲದ ಚಿನ್ನ-ಬೆಳ್ಳಿ ನಾಣ್ಯಗಳು ಈ ಪ್ರದರ್ಶನದ ವಿಶೇಷ ವಾಗಿವೆ. ಇವು ಆಯಾ ಕಾಲಘಟ್ಟದ ಅರಸರ ಆರ್ಥಿಕ ವ್ಯವಸ್ಥೆ, ಧಾರ್ಮಿಕ ನಂಬಿಕೆಗಳು ಮತ್ತು ಆಡಳಿತ ಕ್ರಮಗಳನ್ನು ಅನಾವರಣ ಗೊಳಿಸುತ್ತವೆ. ವಿಜಯನಗರ ಅರಸರ ಕಾಲದ ಬಂಗಾರದ ನಾಣ್ಯಗಳು ಹಾಗೂ ಮಲೆನಾಡಿನ ಕೆಳದಿ ಅರಸರ ನಾಣ್ಯಗಳು ವೀಕ್ಷಕ ರನ್ನು ವಿಶೇಷವಾಗಿ ಆಕರ್ಷಿಸುತ್ತಿವೆ. ಇಷ್ಟು ಸಮೃದ್ಧ ಸಂಗ್ರಹವನ್ನು ಸಮರ್ಪಕ ವಾಗಿ ವೀಕ್ಷಿಸಲು ಕನಿಷ್ಠ ಅರ್ಧ ದಿನವಾ ದರೂ ಬೇಕಾಗುತ್ತದೆ ಎಂದು ಹೇಳಿದರು.
ಸಂಗ್ರಹಕಾರರ ಅಪಾರ ಶ್ರಮ ಮತ್ತು ಸಂಶೋಧನಾ ಮನೋಭಾವ ಈ ಪ್ರದರ್ಶನದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇಂತಹ ಹವ್ಯಾಸವನ್ನು ಇಂದಿನ ಯುವ ಪೀಳಿಗೆಯೂ ಬೆಳೆಸಿಕೊಳ್ಳಬೇಕು. ಬಾಲ್ಯದಲ್ಲಿ ಹಳೆಯ ನಾಣ್ಯಗಳನ್ನು ಡಬ್ಬಗಳಲ್ಲಿ ಸಂಗ್ರಹಿಸಿ ಅವುಗಳೊಂದಿಗೆ ಬೆಳೆದ ಭಾವನೆ ಗಳು ನಮ್ಮ ನೆನಪುಗಳ ಭಾಗವಾಗಿವೆ ಎಂದರು.
ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಹಳೆಯ ನಾಣ್ಯ-ನೋಟುಗಳ ಸಂಗ್ರಹವು ಮಕ್ಕಳಲ್ಲಿ ಇತಿಹಾಸದ ಅರಿವು ಮೂಡಿಸುತ್ತದೆ. ಇಂತಹ ಪ್ರದರ್ಶನಗಳು ನಮ್ಮ ಗತಕಾಲದ ಇತಿಹಾಸ ಮತ್ತು ಸಂಸ್ಕೃತಿಯ ಜೀವಂತ ಪ್ರತಿಬಿಂಬವಾಗಿದ್ದು, ಚರಿತ್ರೆಯನ್ನು ಮರುಸ್ಮರಣೆ ಮಾಡುವ ಅವಕಾಶ ನೀಡುತ್ತವೆ ಎಂದರು.
ಇತ್ತೀಚೆಗೆ ಲಕ್ಕುಂಡಿಯಲ್ಲಿ ಮನೆ ಅಡಿಪಾಯದಲ್ಲಿ ಪತ್ತೆಯಾದ ಬಂಗಾರದ ಆಭರಣಗಳು ಮತ್ತು ನಾಣ್ಯಗಳು ನಮ್ಮ ದೇಶದ ಹಿಂದಿನ ವೈಭವವನ್ನು ತೋರಿಸುತ್ತವೆ ಎಂದು ಉದಾಹರಿಸಿದರು.
ಸೂಡ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅವರು ಮಾತನಾಡಿ, ಭಾರತವನ್ನು ವಿವಿಧ ಅರಸರು ಹಾಗೂ ವಿದೇಶಿ ಆಕ್ರಮಣಕಾರರು ಆಳಿದ ಇತಿಹಾಸವನ್ನು ಅರಿಯಲು ಆ ಕಾಲದ ನಾಣ್ಯ-ನೋಟುಗಳು ಪ್ರಮುಖ ಸಾಕ್ಷಿಗಳಾಗಿವೆ. ಇಂತಹ ಅಮೂಲ್ಯ ಪ್ರದರ್ಶನವನ್ನು ಮೂರು ದಿನಗಳ ಕಾಲ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ ಎಂದು ಪ್ರಶಂಸಿಸಿದರು.
ಪ್ರದರ್ಶನವು ವಿದ್ಯಾರ್ಥಿಗಳು, ಇತಿಹಾಸಾಸಕ್ತರು ಹಾಗೂ ಸಂಗ್ರಹಕಾರರಿಗೆ ಅಪೂರ್ವ ಅಧ್ಯಯನ ವೇದಿಕೆಯಾಗಿದ್ದು, ಶಿವಮೊಗ್ಗದ ಸಾಂಸ್ಕೃತಿಕ ಬದುಕಿಗೆ ಮತ್ತೊಂದು ಮೆರುಗು ನೀಡಿದೆ.
ಕಾರ್ಯಕ್ರಮದಲ್ಲಿ ಮಾಜಿ ಸೂಡ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ದೇವದಾಸ್ ಎನ್. ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಸ್. ಚಂದ್ರಕಾಂತ್, ಜಂಟಿ ಕಾರ್ಯದರ್ಶಿ ಎಲ್. ಸುಬ್ರಹ್ಮಣ್ಯ, ಕೋಶಾಧ್ಯಕ್ಷ ವಿನೋದ್ ಕುಮಾರ್ ಜೈನ್ ಸೇರಿದಂತೆ ಹಲವರು ಭಾಗವಹಿಸಿದ್ದರು.