ಅಗತ್ಯವಿರುವವರಿಗೆ ನೆರವು ನೀಡಿದರೆ ಸೇವೆ ಸಾರ್ಥಕ: ಸುಮತಿ…
ಶಿವಮೊಗ್ಗ: ಜೀವನದಲ್ಲಿ ತುಂಬಾ ಸಂಕಷ್ಟದಲ್ಲಿ ಇರುವವರಿಗೆ ನೆರವು ನೀಡಿದಾಗ ನಾವು ಮಾಡುವ ಸೇವೆಯು ಸಾರ್ಥಕವಾಗುತ್ತದೆ. ಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಹೇಳಿದರು.
ರಾಜೇಂದ್ರನಗರದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಸಭಾಂಗಣದಲ್ಲಿ ಸಂಪೂರ್ಣ ದೃಷ್ಠಿದೋಷ ಹೊಂದಿರುವ ೩ನೇ ತರಗತಿ ವಿದ್ಯಾರ್ಥಿನಿ ದೀಪ್ತಿಗೆ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ನೀಡಿ ಮಾತನಾಡಿ, ಸಮಾಜದಲ್ಲಿ ತುಂಬಾ ಕಷ್ಟದಲ್ಲಿ ಜೀವನ ನಡೆಸುತ್ತಿರುವ ಅನೇಕರು ಇದ್ದು, ಅವರಿಗೆ ಸಹಾಯ ಮಾಡಲು ಮುಂದಾಗ ಬೇಕು. ಇದರಿಂದ ಬದುಕಿಗೆ ಬೆಳಕು ನೀಡಿದಂತಾಗುತ್ತದೆ ಎಂದರು.
ರೋಟರಿ ಸಂಸ್ಥೆಯು ನಿರಂತರ ವಾಗಿ ಸಮಾಜಮುಖಿ ಕಾರ್ಯ ಗಳನ್ನು ನಡೆಸುತ್ತಿದ್ದು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವರಿಗೆ ನೆರವು ನೀಡಲಾಗುತ್ತಿದೆ. ಬಾಲಕಿಯು ದೃಷ್ಠಿದೋಷ ಎದುರಿಸುತ್ತಿದ್ದು, ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡಲಾಗಿದೆ ಎಂದರು.
ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ರೋಟರಿ ಸಂಸ್ಥೆಗಳು ಹೆಚ್ಚಿನ ಆದ್ಯತೆ ನೀಡಿ ಸೇವಾ ಚಟುವಟಿಕೆ ಗಳನ್ನು ಮಾಡಿಕೊಂಡು ಬರುತ್ತಿದೆ. ಸಾರ್ವಜನಿಕರಿಗೆ ಅನುಕೂಲ ವಾಗುವ ಸಮುದಾಯ ಸೇವಾ ಕಾರ್ಯಗಳ ಜತೆಯಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ. ವಿಜಯ್‌ಕುಮಾರ್ ಮಾತನಾಡಿ, ಕಷ್ಟದಲ್ಲಿ ಇರುವ ಇಂತಹ ಮಕ್ಕಳಿಗೆ ಸಂಘ ಸಂಸ್ಥೆಗಳ ಜತೆಗೆ ಸರ್ಕಾರಗಳು ವಿಶೇಷ ಗಮನ ಹರಿಸಿ ಮುಖ್ಯ ವಾಹಿನಿಗೆ ತರಲು ಸಹಕಾರ ನೀಡಬೇಕು. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಮಾಡುತ್ತಿರುವ ಸೇವೆ ಶ್ಲಾಘನೀಯ ಎಂದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಕಾರ್ಯದರ್ಶಿ ಕುಮಾರ ಸ್ವಾಮಿ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ಕೃಷ್ಣಮೂರ್ತಿ, ಮುಕುಂದೇಗೌಡ, ಹುಲಿರಾಜ ಗುಬ್ಬಿ, ಕೇಶವಪ್ಪ, ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.