ಸೇಕ್ರೆಡ್ ಹಾರ್ಟ್ ಸ್ಕೂಲ್‌ನಲ್ಲಿ ಹೃದಯಾಂಜಲಿ.. ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ …
ಲೇಖನ: ಅ. ರಾಕೇಶ್ ಡಿಸೋಜ, ಹಳೆಯ ವಿದ್ಯಾರ್ಥಿ, ಸೇಕ್ರೆಡ್ ಹಾರ್ಟ್ ಹೈಸ್ಕೂಲ್
ಶಾಲೆ ಎಂದರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಾಠ ಹೇಳುವ ಕೇಂದ್ರವಲ್ಲ. ಅದು ಬದುಕಿನ ಮೊದಲ ಪಾಠ ಹೇಳುವ ಮಂದಿರ. ನಾ ಪಾಠ ಕಲಿತ ಮಂದಿರವೇ ಸೇಕ್ರೆಡ್ ಹಾರ್ಟ್ ಹೈಸ್ಕೂಲ್. ಈ ಶಾಲೆಯ ಹೆಸರು ಕೇಳುತ್ತಿದ್ದಂತೆ ಸಾವಿರಾರು ಹಳೆಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನೆನಪುಗಳ ಮಳೆಯೇ ಸುರಿಯುತ್ತದೆ. ಹೆಡ್‌ಮಾಸ್ಟರ್ ರೆ|ಫಾ| ಎಡಕುನ್ನಾಥ್, ಕನ್ನಡ ಮೇಸ್ಟ್ರು ಹನುಮಂತಪ್ಪ ಸರ್, ಪಿಟಿ ಸರ್ ಫಿಲೋಮಿನ್‌ರಾಜ್, ರಸ್ಕಿನಾ ಮೇಸ್ಟ್ರು, ರಶೀದ್ ಮೇಸ್ಟ್ರು, ಶಾಸ್ತ್ರಿ ಸರ್ ಹೀಗೆ ಪಾಠ ಹೇಳಿದ, ಪೆಟ್ಟು ಕೊಟ್ಟ ಎಲ್ಲಾ ಮೇಸ್ಟ್ರುಗಳೂ ನೆನಪಾಗುತ್ತಾರೆ.

ಕಪ್ಪು ಬೋರ್ಡಿನ ಮೇಲೆ ಬರೆಯುತ್ತಿದ್ದ ಗುರುಗಳ ಕೈಚಲನೆ, ಬೆಳಗಿನ ಪ್ರಾರ್ಥನಾ ಸಭೆಯ ಶಾಂತ ಧ್ವನಿ, ಬೆಲ್ ಮೊಳಗುತ್ತಿ ದ್ದಂತೆ ಕ್ಲಾಸ್‌ರೂಮಿನಿಂದ ಹೊರಬರುತ್ತಿದ್ದ ಮಕ್ಕಳ ಗದ್ದಲ, ಶಾಲಾ ಮೈದಾನದಲ್ಲಿ ನಡೆದ ಆಟ-ಓಟ, ತುಂಟಾಟ, ಗೆಳೆತನದ ಮುಗ್ಧ ಜಗಳಗಳು ಈ ಎಲ್ಲವೂ ಬದುಕಿನ ಅಮೂಲ್ಯ ಪುಟಗಳಾಗಿ ಹೃದಯದಲ್ಲಿ ಸದಾ ಉಳಿದಿವೆ.
ಶಿವಮೊಗ್ಗದ ಬಿ.ಹೆಚ್. ರಸ್ತೆಯ ಚರ್ಚ್ ಹಿಂಭಾಗದ ಲ್ಲಿರುವ ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆ ಎಂದರೆ ಸಾವಿರಾರು ವಿದ್ಯಾರ್ಥಿಗಳ ಬದುಕಿನ ಮೊದಲ ಹೆಜ್ಜೆ. ಈ ಶಾಲೆಯಂಗಳದಲ್ಲಿ ಕಳೆದ ಬಾಲ್ಯ, ಇಂದು ಹೃದಯಾಂಜಲಿ ಎಂಬ ಹೆಸರಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ವಾಗಿ ಮತ್ತೆ ಜೀವಂತವಾಗುವ ಮೂಲಕ ಈ ಶಾಲೆಯಲ್ಲಿ ಕಲಿತ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು ಮತ್ತೊಮ್ಮೆ ತನ್ನೆಡೆಗೆ ಕೈಬೀಸಿ ಕರೆಯುತ್ತಿದೆ.
ಮೇಸ್ಟ್ರು ಕೊಟ್ಟ ಹೋಂ ವರ್ಕ್ ಮಾಡದಿದ್ದಾಗ, ಹೇಳಿಕೊಟ್ಟ ಪಾಠ ಸರಿಯಾಗಿ ಕಲಿಯದಿದ್ದಾಗ, ಶಾಲೆಗೆ ಚಕ್ಕರ್ ಹೊಡೆದಾಗ, ತಲೆಗೆ ಎಣ್ಣೆ ಹಾಕಿ ಸರಿಯಾಗಿ ಬಾಚದಿದ್ದಾಗ ಹೀಗೆ ಏನಾದರೊಂದು ತಪ್ಪು ಮಾಡಿದ ಒಮ್ಮೆ ಮೇಸ್ಟ್ರು ಕೈಯಲ್ಲಿ ತಿಂದ ಬೆತ್ತದ ಏಟು ಆ ಕ್ಷಣದಲ್ಲಿ ನೋವು ತಂದಿರಬಹುದು. ಆದರೆ ಇಂದು ಹಿಂತಿರುಗಿ ನೋಡಿದಾಗ, ಆ ಬೆತ್ತದ ಹಿಂದೆ ಇದ್ದ ಕಾಳಜಿ, ಶಿಸ್ತು ಮತ್ತು ನಮ್ಮ ಭವಿಷ್ಯದ ಚಿಂತೆ ಸ್ಪಷ್ಟವಾಗಿ ಕಾಣುತ್ತದೆ. ಸೇಕ್ರೆಡ್ ಹಾರ್ಟ್ ಶಾಲೆಯ ಗುರುಗಳು ವಿದ್ಯಾರ್ಥಿಗಳನ್ನು ಪಾಠಕ್ಕೆ ಮಾತ್ರ ಸೀಮಿತಗೊಳಿಸದೆ, ಬದುಕಿಗೆ ತಯಾರು ಮಾಡಿದ ಸತ್ಯ ಇಂದು ನಮ್ಮ ನಮ್ಮ ನಮ್ಮ ಜೀವನದಲ್ಲಿ ನಾವು ಕಾಣಬಹುದಾಗಿದೆ.
ಇಲ್ಲಿ ಪಾಠ ಹೇಳಿದ ಶಿಕ್ಷಕರು ಕೇವಲ ಗುರುಗಳಲ್ಲ, ಅವರು ಮಾರ್ಗದರ್ಶಕರು, ಪಾಲಕರು, ಬದುಕಿನ ದಾರಿದೀಪಗಳು. ತಪ್ಪು ಮಾಡಿದಾಗ ತಿದ್ದಿದ ಕೈ, ಸಂಕಷ್ಟದ ವೇಳೆಯಲ್ಲಿ ಧೈರ್ಯ ತುಂಬಿದ ಮಾತು, ಯಶಸ್ಸಿನ ಕ್ಷಣದಲ್ಲಿ ಬೆನ್ನು ತಟ್ಟಿದ ಪ್ರೀತಿಯ ಸ್ಪರ್ಶ ಇವೆಲ್ಲವೂ ಸೇಕ್ರೆಡ್ ಹಾರ್ಟ್ ಶಾಲೆಯ ಸಂಸ್ಕೃತಿಯ ಜೀವಾಳವಾಗಿದೆ.
ಸೇಕ್ರೆಡ್ ಹಾರ್ಟ್ ಹೈಸ್ಕೂಲ್ ಎಂದ ತಕ್ಷಣ ಮೊದಲು ನೆನಪಿಗೆ ಬರುವುದೇ ಅಲ್ಲಿನ ವಿಶಾಲವಾದ ಪುಟ್‌ಬಾಲ್ ಗ್ರೌಂಡ್, ಇಲ್ಲಿ ನಾವು ಆಡಿದ ಪುಟ್‌ಬಾಲ್, ಖೋಖೋ, ಕಬಡ್ಡಿ, ಲಗೋರಿ, ಚಿನ್ನಿದಾಂಡು, ಮರಕೋತಿ ಆಟ -ಓಟಗಳ ಖುಷಿ ಇಂದು ಹಿರಿಯ ವಯಸ್ಸಿನಲ್ಲೂ ಮನಸ್ಸನ್ನು ಮತ್ತೆ ಬಾಲ್ಯಕ್ಕೆ ಕರೆದೊಯ್ಯುತ್ತದೆ. ಆ ಮಣ್ಣಿನ ಸುವಾಸನೆ, ಗೆzಗ ಬರುವ ಸಂಭ್ರಮ, ಸೋತಾಗ ಬಾಡುವ ಮುಖ ಎಲ್ಲವೂ ಸೇಕ್ರೆಡ್ ಹಾರ್ಟ್‌ನ ಶಾಲೆಯ ಅಮೂಲ್ಯ ಸ್ಮೃತಿಗಳು.

ಶಾಲೆ, ಚರ್ಚ್‌ನ ಫಾದರ್ ಮತ್ತು ಸಿಸ್ಟರ್‍ಸ್ ಮನೆಯ ಆವರಣದಲ್ಲಿದ್ದ ಮಾವಿನ ಮರಕ್ಕೆ ಕಲ್ಲು ಬೀಸಿದ್ದು, ಬೀಳುವ ಹಣ್ಣು ಹಿಡಿಯಲು ನಡೆದ ಓಟ, ಆ ಸಂದರ್ಭದಲ್ಲಿ ಕಲ್ಲು ಹೊಡೆಯುವಾಗ ಇದ್ದ ಧೈರ್ಯ ಮತ್ತು ಮೇಸ್ಟ್ರು ನೋಡಿದರೆ ಸಿಕ್ಕಿಬೀಳುವ ಭಯ ಇವೆಲ್ಲವೂ ಬಾಲ್ಯದ ಮುಗ್ದ ಸಾಹಸಗಳಾಗಿದ್ದವು. ಆ ಕ್ಷಣಗಳು ಇಂದು ನಮಗೆ ನಗುವಿನ ನೆನಪಾಗಿ ಮಾತ್ರ ಉಳಿದರೆ, ಕೇವಲ ಮೊಬೈಲ್‌ನಲ್ಲೇ ಹೆಚ್ಚು ಸಮಯ ಕಳೆಯುವ ಇಂದಿನ ಮಕ್ಕಳಿಗೆ ಅಂತಹ ಭಾಗ್ಯವೇ ಇಲ್ಲದಂತಾಗಿದೆ.
ಶಾಲೆಯ ಕಾಂಪೌಂಡ್ ಬಳಿ ಮಾರಾಟಕ್ಕೆಂದು ಭಯ್ಯಾ ತಳ್ಳಿಕೊಂಡು ಬರುತ್ತಿದ ಐಸ್‌ಕ್ರೀಂ ಗಾಡಿ ಗಂಟೆಯ ಶಬ್ದ , ಅಜ್ಜಿ ಪುಟ್ಟಿಯಲ್ಲಿ ತರುತ್ತಿದ್ದ ಬೆಲ್ಲದ ಹಣ್ಣು, ಪೇರಲೆ, ನೆಲ್ಲಿಕಾಯಿ, ಬೋರೇ ಹಣ್ಣು ಸೇರಿದಂತೆ ಇತ್ಯಾದಿ ಹಣ್ಣುಗಳ ರುಚಿ ಇಂದಿಗೂ ನಾಲಿಗೆಯಲ್ಲಿ ಉಳಿದಿದೆ. ಕೈಯಲ್ಲಿ ಹಣ ಇರದಿದ್ದರೂ, ಸ್ನೇಹಿತರೊಂದಿಗೆ ಹಂಚಿಕೊಂಡು ತಿಂದ ಆ ಕ್ಷಣಗಳು ನಿಜವಾದ ಸಂತೋಷ ಎಂದರೆ ಏನು ಎಂಬುದನ್ನು ಕಲಿಸಿವೆ.
ಸೇಕ್ರೆಡ್ ಹಾರ್ಟ್ ಶಾಲೆ ಪಾಠ ಪುಸ್ತಕದ eನಕ್ಕಷ್ಟೇ ಸೀಮಿತವಾಗಿರಲಿಲ್ಲ. ಇಲ್ಲಿ ಕಲಿತದ್ದು ಜೀವನಪಾಠ. ಶಿಸ್ತು, ಪ್ರಾಮಾಣಿಕತೆ, ಸಹಬಾಳ್ವೆ, ಸೇವಾ ಮನೋಭಾವ ಈ ಮಲ್ಯಗಳನ್ನು ವಿದ್ಯಾರ್ಥಿಗಳ ಬದುಕಿನಲ್ಲಿ ಅಚ್ಚುಕಟ್ಟಾಗಿ ಭಿತ್ತಿದ ಪವಿತ್ರ ಭೂಮಿ ಇದು. ಸ್ನೇಹಿತನ ಜೊತೆ ನಡೆದ ಪುಟ್ಟ ಜಗಳಗಳು, ಮಾತು ಬಿಟ್ಟುಕೊಂಡ ಕ್ಷಣಗಳು, ಮತ್ತೆ ಒಂದೇ ಬೆಂಚಿನಲ್ಲಿ ಕೂತಾಗ ಕರಗಿದ ಕೋಪ ಇವೆಲ್ಲವೂ ಜೀವನಪಾಠಗಳೇ ಆಗಿದ್ದು, ಜೊತೆಗೆ ಬದುಕನ್ನು ಕಲಿಸಿತು. ಗೆಲ್ಲುವುದನ್ನು, ಸೋಲುವುದನ್ನು, ಹಂಚಿಕೊಳ್ಳುವುದನ್ನು, ಕ್ಷಮಿಸುವುದನ್ನು ಹೀಗೆ ಎಲ್ಲವನ್ನೂ ಅಲ್ಲಿ ಕಲಿತೆವು. ಒಳ್ಳೆಯ ವಿದ್ಯಾರ್ಥಿಯಾಗುವುದಕ್ಕಿಂತ ಒಳ್ಳೆಯ ಮನುಷ್ಯನಾಗು ಎಂಬ ಸಂದೇಶ ಇಲ್ಲಿ ಪ್ರತಿದಿನವೂ ಮನವಾಗಿ ಸಾರಲ್ಪಡುತ್ತಿತ್ತು. ಇಂದು ನಾವು ಯಾರೇ ಆಗಿರಲಿ, ಯಾವ ಹುzಯ ಇರಲಿ, ಆ ಶಾಲೆಯ ಒಂದು ಪುಟ್ಟ ವಿದ್ಯಾರ್ಥಿಯೇ ನಮ್ಮೊಳಗೆ ಇನ್ನೂ ಜೀವಂತ. ನೆನಪುಗಳು ಎಂದಿಗೂ ಹಳೆಯದಾಗುವುದಿಲ್ಲ. ಶಾಲೆಯ ಗಂಟೆ ಈಗ ಮೊಳಗುವುದಿಲ್ಲ, ಆದರೆ ನೆನಪುಗಳ ಶಬ್ದ ಮಾತ್ರ ಹೃದಯದಲ್ಲಿ ನಿರಂತರವಾಗಿದೆ.
ಇಂತಹ ಅದೆಷ್ಟೋ ಬಾಲ್ಯದ ನೆನಪುಗಳು ಹೃದಯಾಂಜಲಿ ಎಂಬ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಮತ್ತೆ ಒಂದೇ ವೇದಿಕೆಯಲ್ಲಿ ಸೇರಿಕೊಳ್ಳುವ ಕ್ಷಣಗಣನೆ ಆರಂಭವಾಗಿದ್ದು, ವರ್ಷಗಳ ಅಂತರವನ್ನು ಕರಗಿಸಿದ ಆ ಕ್ಷಣಗಳಲ್ಲಿ, ಮುಖದಲ್ಲಿ ಕಾಲದ ಗುರುತುಗಳಿದ್ದರೂ, ಮನಸ್ಸು ಮಾತ್ರ ಮತ್ತೆ ಸೇಕ್ರೆಡ್ ಹಾರ್ಟ್ ಶಾಲೆಯ ವಿದ್ಯಾರ್ಥಿ ಯಂತೆಯೇ ಹಿಗ್ಗತೊಡಗಿದೆ.
ಇಂದು ವೈದ್ಯರು, ಶಿಕ್ಷಕರು, ಉದ್ಯಮಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು, ಸಿನಿಮಾ ನಟರು, ಸನ್ಯಾಸಿಗಳು, ಸಮಾಜಸೇವಕರಾಗಿ ನಿಂತಿರುವ ಈ ಹಿರಿಯ ವಿದ್ಯಾರ್ಥಿ ಗಳೆಲ್ಲರಿಗೂ ಒಂದೇ ಗುರುತು ನಾವು ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಂಬ ಹೆಮ್ಮೆ. ಕಾಲ ಬದಲಾಗಬಹುದು, ಜೀವನ ದಾರಿ ಬದಲಾಗ ಬಹುದು. ಆದರೆ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆ ಕೊಟ್ಟ ಮಲ್ಯಗಳು, ನೆನಪುಗಳು ಮತ್ತು ಸಂಬಂಧಗಳು ಎಂದಿಗೂ ಬದಲಾಗುವುದಿಲ್ಲ.
ಹೃದಯಾಂಜಲಿ ಎಂಬ ಹೆಸರಿನಡಿ ನಡೆಯುತ್ತಿರುವ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕೇವಲ ಕಾರ್ಯಕ್ರಮವಲ್ಲ, ಅದು ಭಾವನೆಗಳ ಮಹಾಸಂಗಮ. ವರ್ಷಗಳ ಅಂತರವನ್ನು ಕ್ಷಣಾರ್ಧದಲ್ಲಿ ಕರಗಿಸಿದ ಮಿಲನ. ಬಿಳಿಯಾಗಿ ಹೊಳೆಯುತ್ತಿರುವ ತಲೆಗೂದಲು, ಮುಖದಲ್ಲಿ ಕಾಲದ ಗುರುತುಗಳಿದ್ದರೂ, ಮನಸ್ಸು ಮಾತ್ರ ಮತ್ತೆ ವಿದ್ಯಾರ್ಥಿಯಂತೆಯೇ ಹಳೆಯ ಬಾಲ್ಯದ ಗೆಳೆಯರನ್ನು ನೋಡಿದಾಗ ಹಿಗ್ಗಿತು. ಇದು ಕೇವಲ ಸಮ್ಮಿಲನವಲ್ಲ. ಇದು ನಮ್ಮ ಬಾಲ್ಯಕ್ಕೆ ಸಲ್ಲಿಸಿದ ನಮನ. ಗುರುಗಳಿಗೆ, ಗೆಳೆಯರಿಗೆ ಮತ್ತು ಬದುಕಿಗೆ ದಿಕ್ಕು ತೋರಿಸಿದ ಆ ಪವಿತ್ರ ಶಾಲೆಗೆ ಸಲ್ಲಿಸಿದ ಕೃತಜ್ಞತೆಯ ನಮನ.
