ಲೇಖನಗಳು

ಗೋವಾ: ನಶೆಯ ನಾಡಲ್ಲ; ನಮನದ ನೆಲೆ …

Share Below Link

ಮಳೆಯು ಸಣ್ಣ ಹನಿಹನಿಯಾಗಿ ಬೀಳುತ್ತಿದ್ದ ಹೊತ್ತಿಗೆ, ನಾನು ನನ್ನ ಕಾರನ್ನೇರಿ ಮನಸ್ಸಿಗೆ ಹಿತವೆನಿಸಿದ ಸಂಗೀತವನ್ನು ಕೇಳುತ್ತಾ ಗೋವಾದತ್ತ ಪಯಣಿಸುತ್ತಿದ್ದೆ, ಮನಸ್ಸು ಬರಿದಾಗಿತ್ತು, ಬದುಕು ಒಂದೇ ರೀತಿಯ ಯಂತ್ರವಾದ ಅನುಭವ. ಈ ಎಲ್ಲದರಿಂದ ದೂರ, ನಾನೊಬ್ಬನಾಗಿ ಮನಸ್ಸಿಗೆ ಒಂದು ವಿಶ್ರಾಂತಿ ಬೇಕಿತ್ತು. ಆದರೆ ನಾನು ಹುಡುಕಿದ್ದು ಮೋಜು-ಮಸ್ತಿ ಅಲ್ಲ. ಬದಲಿಗೆ ಮನಃಶಾಂತಿ ಮತ್ತು ಆಧ್ಯಾತ್ಮ.
ಬಹುಶಃ ಅನೇಕರು ಗೋವಾಕ್ಕೆ ಮೋಜು ಮಸ್ತಿಗಾಗಿ ಹೋಗುತ್ತಾರೆ. ಆದರೆ ಈ ಬಾರಿ ನನ್ನ ಗೋವಾ ಪಯಣವೇ ಬೇರೆಯಿತ್ತು. ಬೀಚ್ ಹೊರತುಪಡಿಸಿ ಚರ್ಚು, ಮನ, ಧ್ಯಾನ, ಪ್ರಾರ್ಥನೆ ಇವುಗಳ ನಡುವೆ ಆತ್ಮನ ವಿಶ್ರಾಂತಿಗಾಗಿ ನಾನು ಹೊರಟಿz. ಮಳೆಗಾಲವಾದ್ದರಿಂದ ವಿಶೇಷವಾಗಿ ಮೋಜು ಮಸ್ತಿಗೆ ಬರುವ ಟೂರಿಸ್ಟ್‌ಗಳಿಗೆ ಇದು ಅನ್‌ಸೀಸನ್, ಈ ಕಾರಣಕ್ಕೆ ಇಲ್ಲಿನ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿತ್ತು. ಜನಸಂದಣಿ ಅಷ್ಟಾಗಿ ಇರಲಿಲ್ಲ. ವಾತಾವರಣ ತುಂತುರು ಮಳೆಯೊಂದಿಗೆ ಪ್ರಶಾಂತತೆಯಿಂದ ಕೂಡಿತ್ತು.


ಗೋವಾ ಎಂದರೆ ಸಾಮಾನ್ಯವಾಗಿ ನಮ್ಮ ಮನಸ್ಸಿಗೆ ಬರುವ ಚಿತ್ರ ಕಡಲ ತೀರ, ರೇವ್ ಪಾರ್ಟಿಗಳು, ಕ್ಯಾಸಿನೋ, ಫುಡ್‌ಸ್ಟಾಲ್‌ನಲ್ಲಿ ಸೀ-ಫುಡ್, ಲಾಂಗ್ ಡ್ರೈವ್, ಅಬ್ಬರದ ಸಂಗೀತ. ಮೋಜು, ಮಸ್ತಿ, ನೈಟ್‌ಲೈಫ್ ಮತ್ತು ಮಧ್ಯದ ಅಮಲಿನ ರೋಮಾಂಚನ!
ಆದರೆ, ಈ ಬಣ್ಣದಾಚೆಯ ಗೋವಾವನ್ನೂ ಕೂಡ ಪ್ರತಿಯೊಬ್ಬರೂ ನೋಡಬೇಕಿದೆ. ಅದು ಆಧ್ಯಾತ್ಮದ ಹೃದಯದಲ್ಲಿ ಬೇರೂರಿರುವ, ಶಾಂತಿಯ ದಿಗಂತವನ್ನೇ ತಲುಪಿಸುವ ತಾಣವೂ ಹೌದು.
ಗೋವಾ ಕೇವಲ ಪ್ರವಾಸಿಗರ ಮೋಜಿನ ಸ್ಥಳವಲ್ಲ. ಇದು ಒಂದು ಆಧ್ಯಾತ್ಮಿಕ ತೀರ್ಥಯಾತ್ರೆಯ ತಾಣವೂ ಹೌದು. ಅಲ್ಲಿ ಹೊಳೆಯುತ್ತಿದೆ ಇನ್ನೊಂದು ಲೋಕ. ಶಾಂತ, ಆಧ್ಯಾತ್ಮಿಕ, ಪವಿತ್ರ ಗೋವಾ! ಗೋವಾ ಕೇವಲ ಮೋಜು-ಮಸ್ತಿ, ನಶೆ ಮತ್ತು ನಗುವಿನ ತೀರವಲ್ಲ; ಅದು ಚರ್ಚುಗಳ ಘಂಟನಾದಲ್ಲಿ ಕಣ್ಣೀರಿಟ್ಟು ಪ್ರಾರ್ಥಿಸುವ ಭಕ್ತನ ಕಿರಣವಾಗಿದೆ.
ಗೋವಾ ನೂರಾರು ವರ್ಷಗಳ ಕಾಲ ಪೋರ್ಚುಗೀಸ್ ಆಳ್ವಿಕೆಯ ಪಾಶ್ಚಾತ್ಯ ಹಾಗೂ ಭಾರತೀಯ ಸಂಸ್ಕೃತಿಗಳ ಸಮ್ಮಿಲನವಾಗಿದೆ. ಪೋರ್ಚುಗೀಸ್ ಆಡಳಿತದ ೪೫೦ ವರ್ಷಗಳ ಅವಧಿಯಲ್ಲಿ ಗೋವಾ ಲೈಂಗಿಕ ಆನಂದದ ತಾಣವಾಗದೆ ಧರ್ಮ-ಭಾವನೆಯ ಪರಿಪಕ್ವತೆಯ ನೆಲವಾಯಿತು. ಇಲ್ಲಿ ನಿರ್ಮಿತವಾದ ಚರ್ಚುಗಳು ಇಡೀ ಏಷ್ಯಾ ಖಂಡದ ಆಧ್ಯಾತ್ಮಿಕ ರತ್ನಗಳಾಗಿ ವಿಜೃಂಭಿಸುತ್ತಿವೆ.
ಚರ್ಚುಗಳ ಚೆಲುವೆಯಂತಿರುವ ಗೋವಾ: ವಾಸ್ಕೋ ದ ಗಾಮನ ಕಾಲದಿಂದ ಗೋವಾಕ್ಕೆ ಬಂದು ನೆಲೆಸಿದ ಕ್ರೈಸ್ತ ವಿಶ್ವಾಸವು ಇಲ್ಲಿಯ ಚರ್ಚುಗಳಲ್ಲಿ ಇಂಗಿಗೂ ಜೀವಂತವಾಗಿದೆ. ಬೋಮ್ ಜೀಸಸ್ ಬಸಿಲಿಕಾ ಇಲ್ಲಿರುವ ಸೆಂಟ್ ಫ್ರಾನ್ಸಿಸ್ ಝೇವಿಯರ್ ಅವರ ಪವಿತ್ರ ದೇಹ, ಶತಮಾನಗಳಿಂದ ಭಕ್ತಿ ಮತ್ತು ಪವಿತ್ರತೆಯ ಪ್ರತಿರೂಪವಾಗಿದೆ. ಕ್ಯಾಥೋಲಿಕ್ ಚರ್ಚಿನಲ್ಲಿ ನಗುತಿದ್ದ ಕ್ರೂಸ್, ಜಪಮಾಲೆಯ ಪ್ರಾರ್ಥನೆಗಳು, ಸಂತ ಝೇವಿಯರ್ ಅವರ ಶವಮೂರ್ತಿ ನೋಡಿದ ಕ್ಷಣ ಒಂದು ಪ್ರತ್ಯೇಕ ಶಕ್ತಿಯ ಅನುಭವವಾಯಿತು. ಈ ಜಗತ್ತಿನಲ್ಲಿ ಧರ್ಮಗಳು ವಿಭಿನ್ನ ಇರಬಹುದು, ಆದರೆ ಶ್ರದ್ಧೆಯ ಶಕ್ತಿಗೆ ಎಡೆಯೂ ಒಂದೇ ಸ್ಪಂದನೆ.
ಈ ಪವಿತ್ರ ಕ್ಷೇತ್ರವನ್ನು ಯುನೆಸ್ಕೋ ಜಾಗತಿಕ ಪಾರಂಪರಿಕ ತಾಣವೆಂದು ಘೋಷಿಸಿದೆ. ಈ ಚರ್ಚಿನಲ್ಲಿ ಪ್ರವೇಶಿಸುತ್ತಿದ್ದಂತೆ ಒಂದೊಂದು ಹೆಜ್ಜೆಯೂ ಭಕ್ತಿಯಿಂದ ತುಂಬಿರುತ್ತದೆ,ಈ ಮೂಲಕ ಆಧ್ಯಾತ್ಮಿಕ ನೆಮ್ಮದಿ ದೊರೆಯುತ್ತದೆ.
ಸೇವ್ ಕೆತೆಡ್ರಲ್ ಏಷ್ಯಾದ ಅತಿದೊಡ್ಡ ಚರ್ಚ್. ಒಳಗೆ ಪ್ರವೇಶಿಸುತ್ತಿದ್ದಂತೆ ನಮಗರಿವಿಲ್ಲದೇ ತಲೆ ಬಾಗುತ್ತದೆ, ಧ್ಯಾನದಲ್ಲಿ ಮನಸ್ಸು ಕಳೆದು ಹೋಗುತ್ತದೆ. ಸೇಂಟ್ ಕೆಜಿಟಾನ್, ಚರ್ಚ್ ಆಫ್ ಲೇಡಿ ಆಫ್ ಇಮಾಕ್ಯುಲೇಟ್ ಕನ್ಸೆಪ್ಷನ್, ರೆಸ್‌ಮಗೋ ಚರ್ಚ್ ಇವೆಲ್ಲವೂ ಮನದಿಂದ ಮಾತನಾಡುವ ದೇವಮಂದಿರಗಳು.
ಗೋವಾ ಒಂದು ಪ್ರeಯ ಪಯಣವೂ ಹೌದು. ಇಲ್ಲಿನ ಪ್ರತಿಯೊಂದು ಚರ್ಚ್, ಗಲ್ಲಿಗಲ್ಲಿಯಲ್ಲಿರುವ ಛಾಪೆಲ್‌ಗಳು ಮತ್ತು ಹೋಲಿ ಕ್ರಾಸ್‌ಗಳು, ಪ್ರತಿಯೊಂದು ಕಾಲುವೆ, ಸಮುದ್ರ, ದ್ವೀಪವೂ ಒಂದು ಪಾಠ ಹೇಳುತ್ತದೆ. ಅದುವೇ ಮನುಷ್ಯನೊಳಗಿನ ಆಳವಾದ ಶಾಂತಿಗೆ ತಲುಪುವ ಸಾಧನೆಯ ಪಾಠ.


ಅಲ್ಲಿ ಕೇವಲ ಮನರಂಜನೆಗಾಗಿ ಬರುವ ಪ್ರವಾಸಿಗರು ಅಲ್ಲದೆ, ಶ್ರದ್ಧೆಯಿಂದ ತಪಸ್ಸಿಗಾಗಿ, ನಿಶ್ಯಬ್ದದೊಳಗೆ ದೇವರನ್ನು ಹುಡುಕುವ ಆಧ್ಯಾತ್ಮಿಕ ಚಿಂತಕರು ಕೂಡಾ ಸಾಕಷ್ಟಿzರೆ. ಗೋವಾಕ್ಕೆ ಇಂದು ಅನೇಕ ಯುರೋಪಿಯನ್ ರಾಷ್ಟ್ರಗಳಿಂದ ಧರ್ಮಯಾತ್ರಾರ್ಥಿಗಳು ಕೂಡಾ ಬರುತ್ತಿzರೆ. ಇಲ್ಲಿನ ಚರ್ಚುಗಳಲ್ಲಿ ಪ್ರತಿದಿನದ ಪ್ರಾರ್ಥನೆ, ಬಲಿ ಪೂಜೆ, ಪವಿತ್ರ ಪರಮಪ್ರಸಾದದ ಆರಾಧನೆಗಳು ನಡೆಯುತ್ತವೆ. ಅದರೊಟ್ಟಿಗೆ, ಇಲ್ಲಿಯ ಬೈಬಲ್ ಪಾಠ ತರಗತಿಗಳು, ಸಾನ್ನಿಧ್ಯ ಶಿಬಿರಗಳು, ಸಂತ ಸೆಬಾಸ್ಟಿಯನ್ ಅಥವಾ ಲೌರೋ ದೈವದ ಉತ್ಸವಗಳು ಇವುಗಳೆ ಗೋವಾದ ಆಧ್ಯಾತ್ಮಿಕ ಚರಿತ್ರೆಗೆ ಪ್ರಭಾವ ಬೀರುತ್ತವೆ. ಇಂತಹ ಪಾವಿತ್ರ್ಯತೆ ಹೊಂದಿರುವ ಈ ಸ್ಥಳವು ನಾವು ನೋಡದೇ ಇರುವ ಗೋವಾ ಒಂದು ಆಧ್ಯಾತ್ಮಿಕತೆಯ ದೀಪದಂತೆ ಮಿಂಚುತ್ತಿದೆ.
ಚರ್ಚುಗಳ ಒಳಗೆ ಕಲೆಯ ಅನುಭವ: ಇಲ್ಲಿನ ಚರ್ಚುಗಳು ಕೇವಲ ಧಾರ್ಮಿಕ ನೆಲೆಗಳಲ್ಲ, ಕಲಾತ್ಮಕ ತಾಣಗಳೂ ಹೌದು. ಗೋಥಿಕ್ ಶೈಲಿ, ಬೊರೋಕ್ ನಿರ್ಮಾಣ, ಪೇಂಟಿಂಗ್‌ಗಳು, ಮರದ ಶಿಲ್ಪಗಳು, ಇವುಗಳ ನಡುವೆ ಇಲ್ಲಿ ದೇವರನ್ನು ಕಾಣುವುದು ಸಾಧ್ಯ!
ಸಂಸ್ಕೃತಿಯ ಸಂಭ್ರಮ: ಗೋವಾಕ್ಕೆ ನೀವು ಕ್ರಿಸ್‌ಮಸ್ ಅಥವಾ ಈಸ್ಟರ್ ಸಮಯದಲ್ಲಿ ಬಂದರೆ, ನೀವು ನೋಡೋದು ದೇವರ ಹಬ್ಬ, ಜನರ ಹರ್ಷ. ಚರ್ಚುಗಳಲ್ಲಿ ಮೆರವಣಿಗೆ, ದೀಪಗಳ ಹೊಳಪು, ಸ್ಮಿತಮುಖದ ಮಕ್ಕಳ ಭಕ್ತಿಪೂರ್ವಕ ಹಾಡುಗಳು, ದೈನಂದಿನ ಆತ್ಮಪಠಣ ಈ ಎಲ್ಲವೂ ಗೋವಾಕ್ಕೆ ಸಾಂಸ್ಕೃತಿಕ ಪಾವಿತ್ರತೆಯ ಹೊಸ ಬಣ್ಣ ನೀಡುತ್ತದೆ.
ನಿಗೂಢದ ನಡುವೆ ನಿಜವಾದ ಶಾಂತಿ: ಜೀವನದ ಅತಿಕ್ರಮಣ, ವಿಶ್ವದ ಗದ್ದಲದ ನಡುವಿನ ತಂಪಾದ ತಾಣ ಗೋವಾ. ಇಲ್ಲಿ ಸೀ ಶೆಲ್‌ನ ಶಬ್ದವಿಲ್ಲದ ನಿಶ್ಯಬ್ಧತೆಯ ಮಧ್ಯೆ ಸಿಗುತ್ತದೆ ಆತ್ಮದ ಶಾಂತಿ. ಚರ್ಚಿನ ಒಂದು ಮೂಲೆಯಲ್ಲಿ ಇಲ್ಲವೇ ಕುರ್ಚಿಯಲ್ಲಿ ಅಥವಾ ನೆಲದ ಮೇಲೆ ಕುಳಿತಾಗ ಗೋವಾ ನಿಮ್ಮನ್ನು ನಿಮ್ಮೊಳಗೆ ಇಳಿಸಿಕೊಳ್ಳುತ್ತದೆ.
ಗೋವಾ ಎಂದರೆ ಮದ್ಯದ ಗ್ಲಾಸ್ ಅಲ್ಲ, ಪ್ರಾರ್ಥನೆಗಾಗಿ ಕೈಮುಗಿಯುವುದು. ಅದು ಡಿಜೆ ಮಿಕ್ಸಿಂಗ್ ನಾದವಲ್ಲ, ಚರ್ಚಿನ ಘಂಟೆಯ eನಧ್ವನಿ. ಅದು ನಿರ್ಲಜ್ಜತೆಯ ತಣಿಯಲ್ಲ, ಬದಲಿಗೆ ಧರ್ಮದ ದೀಪದಲ್ಲಿ ಬೆಳಕಾಗಿರುವ ಸ್ಥಳ.
ದೇವಾಲಯಗಳ ನಾಡು: ಗೋವಾದ ಹೃದಯದಲ್ಲಿ ನಾನಾ ಯುಗಗಳಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ತಿರುಳನ್ನು ಹೊಂದಿರುವ ಚರ್ಚ್ ಮತ್ತು ದೇವಸ್ಥಾನಗಳ ಶ್ರೇಣಿ ಕಂಗೊಳಿಸುತ್ತಿದೆ. ಪಾಂಡವ ಕಾಲದಿಂದ ಗೋವದಲ್ಲಿ ಶೈವ ಮತ್ತು ವೈಷ್ಣವ ದೇವಾಲಯಗಳ ಸ್ಥಾಪನೆಯಾಗಿದೆ.
ಮಂಗೇಶಿ ದೇವಸ್ಥಾನ, ಶಾಂತಾ ದುರ್ಗಾ ದೇವಸ್ಥಾನ, ಮಹಾಲಸಾ ದೇಗುಲ ಇವುಗಳ ಪವಿತ್ರತೆ, ಗಂಭೀರತೆಗೆ ದೈವಿಕ ಛಾಯೆ ಇದೆ. ನಿತ್ಯ ಹೋಮ, ಆರತಿ, ಜತ್ರೆಗಳಲ್ಲಿ ಭಾಗವಹಿಸಿದರೆ ಗೋವಾಕ್ಕೆ ಹೊಸ ಅರ್ಥ ಸಿಗುತ್ತದೆ.
ಸಹಬಾಳ್ವೆಯ ಸಂಕೇತ: ಇಲ್ಲಿ ಇರುವ ಮಸೀದಿಗಳು ಕೂಡ ಸಮಾನ ಶ್ರದ್ಧೆಯಿಂದ ಭಕ್ತರನ್ನು ಸೆಳೆಯುತ್ತವೆ. ಸಫಾ ಮಸೀದಿ, ಪರ್ಷಿಯನ್ ಶೈಲಿಯಲ್ಲಿ ನಿರ್ಮಿತವಾದ ಈ ಮಸೀದಿ ಶಾಂತಿಯ ಸಂಕೇತವಾಗಿದೆ.
ಮನಃಶಾಂತಿಯ ಹುಡುಕಾಟ: ಗೋವಾಕ್ಕೆ ಆಧ್ಯಾತ್ಮಿಕ ದೃಷ್ಟಿಯಿಂದ ಭೇಟಿ ನೀಡಿದರೆ ಮಾತ್ರಭೋಗವಿಲ್ಲದ ಮನಪೂರ್ಣ ಜಗತ್ತನ್ನು ನೋಡುವ ದೃಷ್ಟಿಕೋನ ಬದಲಾಗುವುದು. ಚರ್ಚಿನಲ್ಲಿ ಹಮ್ಮಿಕೊಂಡ ಮಾಸ್, ಚರ್ಚ್ ಮತ್ತು ದೇಗುಲದ ಪ್ರಾರ್ಥನೆಯ ಘಂಟೆಗಳು, ಮುಂಬತ್ತಿ-ದೀಪದ ಬೆಳಕು ಈ ಎಲ್ಲವೂ ಮನಸ್ಸಿಗೆ ಶಾಂತಿ ನೀಡುತ್ತವೆ.
ಹೌದು, ಗೋವಾ ನಶೆಗೂ, ನೃತ್ಯಕ್ಕೂ ಪ್ರಸಿದ್ಧ. ಆದರೆ ಈ ರಾಜ್ಯದ ನಿಜವಾದ ಜೀವಾಳ ಚರ್ಚ್ ಮತ್ತು ದೇವಾಲಯಗಳಲ್ಲಿದೆ. ಅದು ಕೇವಲ ಧಾರ್ಮಿಕ ಪರಂಪರೆ ಅಲ್ಲ; ಅದು ಸಂಸ್ಕೃತಿಯ ಜೀವಂತ ಜವಾಬ್ದಾರಿ.
ಇನ್ನಾದರೂ ಗೋವಾಕ್ಕೆ ಭಿನ್ನ ದೃಷ್ಟಿಕೋನದಿಂದ ಭೇಟಿ ನೀಡಿದರೆ ನಶೆಯಲ್ಲ, ನಿಶ್ಶಬ್ದ ತಪಸ್ಸಿನ ಮೋಹದಲ್ಲಿ ಆಳ್ವಿರಿ. ದೇವರ ದರ್ಶನ ಮಾತ್ರವಲ್ಲ, ಆತ್ಮದ ಶುದ್ಧೀಕರಣವೂ ಅಲ್ಲಿ ಲಭಿಸುತ್ತದೆ.
ನಶೆ ಏರಿಸಿಕೊಳ್ಳಲು ಗೋವಾಕ್ಕೆ ಹೋಗುವುದು ಬೇಡ, ನಮನಕ್ಕಾಗಿ ಹೋಗೋಣ, ಮೋಜು – ಮಸ್ತಿ ಬದಿಗಿರಲಿ, ಮನವನ್ನು ಅನುಭವಿಸೋಣ. ಚಿರಸ್ಥಾಯಿಯಾದ ಆಧ್ಯಾತ್ಮಿಕ ದ್ವಾರವದು. ನಮ್ಮ ಮುಂದಿನ ಗೋವಾ ಯಾತ್ರೆ ಮೋಜಿನಲ್ಲಿ ಅಲ್ಲ; ಒಂದು ಆಧ್ಯಾತ್ಮಿಕ ಸಂಚಲನಕ್ಕೆ ಸಿದ್ಧವಿರಲಿ..!

ರಾಕೇಶ್ ಡಿಸೋಜ
ಮೊ: ೯೪೪೮೩೪೩೨೧೧