ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬದಲಾವಣೆಗಾಗಿ ನನಗೊಂದು ಅವಕಾಶ ಕೊಡಿ: ಗೀತಾ

Share Below Link

ಶಿವಮೊಗ್ಗ: ಬದಲಾವಣೆಗಾಗಿ ನನಗೊಂದು ಅವಕಾಶ ಕೊಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಹೇಳಿದರು.
ಅವರು ಇಂದು ನಗರದ ಕೋಟೆ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಮುಖಂಡರು ಹಾಗೂ ಪತಿ ಶಿವರಾಜ್ ಕುಮಾರ್‌ರೊಂದಿಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೋದ ಕಡೆಯಲೆಲ್ಲಾ ಉತ್ತಮ ವಾತಾವರಣ ಕಂಡು ಬರುತ್ತಿದೆ. ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಮಹಿಳೆಯರು ಕೂಡ ಹೆಚ್ಚಾಗಿ ಬರುತ್ತಿದ್ದಾರೆ. ಗೆದ್ದೆ ಗೆಲ್ಲುತ್ತೇನೆ ಎಂಬ ವಿಶ್ವಾಸ ನನಗಿದೆ. ನನಗೊಂದು ಅವಕಾಶ ಕೊಡಿ. ನಾನು ಖಂಡಿತ ಮತದಾರರ ಋಣ ತೀರಿಸುತ್ತೇನೆ ಎಂದ ಅವರು, ಮಲೆನಾಡಿನ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಮೊದಲಿನಿಂದಲೂ ಈ ಬಗ್ಗೆ ನನಗೆ ಗೊತ್ತಿದೆ. ಅಡಿಕೆ ಬೆಳಗಾರರ ಸಮಸ್ಯೆ, ಮುಳುಗಡೆ ಸಂತ್ರಸ್ಥರ ಸಮಸ್ಯೆ, ಮಹಿಳೆಯರ ಸಮಸ್ಯೆಗಳು, ಸಾಗುವಳಿ ರೈತರ ಸಮಸ್ಯೆ, ಉದ್ಯೋಗದ ಸಮಸ್ಯೆ, ಕಾರ್ಖಾನೆಗಳ ಸಮಸ್ಯೆಗಳ ಬಗ್ಗೆ ಗೊತ್ತು. ಖಂಡಿತ ಇವೆಲ್ಲವುಗಳನ್ನು ಪಟ್ಟಿ ಮಾಡಿಕೊಂಡಿರುವೆ ಎಂದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಗಳು ಈಗಾಗಲೇ ಅನುಷ್ಠಾನ ಗೊಂಡಿವೆ. ಇವು ನಮ್ಮ ಕೈಹಿಡಿಯ ಲಿವೆ. ಜೊತೆಗೆ ಕೇಂದ್ರ ಮಟ್ಟದ ಕಾಂಗ್ರೆಸ್‌ನ ಗ್ಯಾರಂಟಿಗಳು ಕೂಡ ಜೊತೆಗಿವೆ. ವಾತಾವರಣ ಚೆನ್ನಾಗಿದೆ. ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಟ ಶಿವರಾಜ್‌ಕುಮಾರ್ ಮಾತನಾಡಿ, ಹೋದ ಕಡೆಯಲ್ಲೆಲ್ಲ ಅಪಾರ ಜನಸಂಖ್ಯೆ ಸೇರುತ್ತಿದೆ. ಕೇವಲ ಶಿವಣ್ಣನನ್ನು ನೋಡಲು ಮಾತ್ರ ಬರುವುದಿಲ್ಲ ಎಂಬುದು ಅವರ ಮುಖದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಗೀತಕ್ಕನನ್ನು ಗೆಲ್ಲಿಸಬೇಕು ಎಂಬ ಭಾವವು ಇದರಲ್ಲಿ ಸೇರಿಕೊಂಡಿರುತ್ತದೆ. ಒಂದು ಹೊಸ ಬದಲಾವಣೆ ಬೇಕಾಗಿದೆ. ಗೀತಾಳಿಗೆ ಅವಕಾಶ ಕೊಡಬೇಕು ಎಂದರು.
ಈಗಾಗಲೇ ಗೀತಾ ಅವರು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿ ಕೊಂಡಿದ್ದಾರೆ. ಮಲೆನಾಡಿನ ಸಮಸ್ಯೆ ಗಳ ಬಗ್ಗೆ ಅರಿವಿದೆ. ಶಕ್ತಿಧಾಮದ ಮೂಲಕ ಶೈಕ್ಷಣಿಕ ಸೇವೆಯನ್ನು ಮಾಡುತ್ತಿದ್ದಾರೆ. ಎಲ್ಲ ಕಡೆ ಉತ್ತಮ ವಾತಾವರಣವಿದೆ. ನಂಬಿಕೆ ನಮಗೆ ಇದೆ. ನಾವು ಗೆಲ್ಲುತ್ತೇವೆ ಎಂದರು.
ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಹಾಗೂ ಮಾಜಿ ವಿಧಾನ ಪರಿಷತ್ ಶಾಸಕ ಆರ್. ಪ್ರಸನ್ನಕುಮಾರ್ ಅವರು ಮಾತನಾಡಿ, ಈ ಬಾರಿ ಗೀತಾ ಶಿವರಾಜ್ ಕುಮಾರ್ ಅವರು ಗೆಲ್ಲುತ್ತಾರೆ. ಅವರ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರು ಪರಿಶ್ರಮಿಸಲಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ರಾಜ್ಯ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್, ಕೋಟೆ ಮಾರಿಕಾಂಬಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಮುಖರಾದ ಜಿ.ಡಿ. ಮಂಜುನಾಥ್, ಆರ್. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್ ಮುಂತಾದವರು ಇದ್ದರು.