ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಬೇವು-ಬೆಲ್ಲದಿಂದ ಮಂಗಳಸೂತ್ರದವರೆಗೆ ಯುಗಾದಿಯೇ ಬರೆದ ಪ್ರೀತಿಯ ಅಧ್ಯಾಯ…

Share Below Link

ಕಳೆದ ಕೆಲ ವರ್ಷಗಳ ಹಿಂದ ಯುಗಾದಿಯ ಆ ಮುಂಜಾನೆ ಇನ್ನೂ ಮನಸ್ಸಿನ ಅಂಗಳದಲ್ಲಿ ಹಸಿರಾಗಿಯೇ ಅರಳುತ್ತದೆ. ಹಬ್ಬದ ಸಂಭ್ರಮ, ವಸಂತದ ಮೃಧುವಾದ ಗಾಳಿ, ಹೊಸ ವರ್ಷವನ್ನು ಬರಮಾಡಿಕೊಳ್ಳುವ ಉತ್ಸಾಹ ಇವೆಲ್ಲದರ ನಡುವೆ ಕಾಲೇಜಿನ ಕಾರಿಡಾರ್‌ನಲ್ಲಿ ನಡೆದ ಆ ಕ್ಷಣ ನನ್ನ ಬದುಕಿನ ದಿಕ್ಕೇ ಬದಲಿಸಿತು.
ಹಸಿರು ಲಂಗ ದಾವಣಿ ಧರಿಸಿ ಅನಿರೀಕ್ಷಿತವಾಗಿ ಮುಖಾಮುಖಿಯಾದ ನೀನು ಏನೂ ಹೇಳದೇ ನಗುಮುಖದಿಂದ ನನ್ನ ಕೈಗೆ ಬೇವು-ಬೆಲ್ಲ ಇಟ್ಟು ಯುಗಾದಿ ಶುಭಾಶಯ ಎಂದ ಆ ಕ್ಷಣ, ಅದು ಕೇವಲ ಹಬ್ಬದ ಶುಭಾಶಯವಾಗಿರಲಿಲ್ಲ. ನಮ್ಮ ಜೀವನದ ಹೊಸ ಅಧ್ಯಾಯವೊಂದರ ಶುಭಾರಂಭವಾಗಿತ್ತು.
ನಿನ್ನನ್ನು ನೋಡಿದ ಕ್ಷಣವೇ ಹೃದಯದಲ್ಲೊಂದು ವಿಶೇಷ ಭಾವನೆ ಮೊಳಗಿದಂತಾಯಿತು. ಆಗ ಅದು ನಮಗೆ ತಿಳಿಯಲಿಲ್ಲ, ಆದರೆ ಆ ಕ್ಷಣದ ನಮ್ಮಿಬ್ಬರ ನಡುವೆ ನಿಷ್ಕಲ್ಮಷ ಪ್ರೀತಿ ಚಿಗುರಿತ್ತು. ದಿನಗಳು ಸಾಗಿದಂತೆ ಆ ಪ್ರೀತಿ ಬೇವು-ಬೆಲ್ಲದ ರುಚಿಯಂತೆ ರೂಪುಗೊಂಡಿತು. ಅಲ್ಲಿ ಸಿಹಿಯೂ ಇತ್ತು, ಸ್ವಲ್ಪ ಕಹಿಯೂ ಇತ್ತು. ಸಣ್ಣ ಜಗಳಗಳು, ಕೋಪದ ಕ್ಷಣಗಳು, ನಗು, ಕೀಟಲೆ ಇವೆಲ್ಲವೂ ನಮ್ಮ ಪ್ರೀತಿಯ ಹಾದಿಯ ಮಧುರ ನೆನಪುಗಳಾಗಿ ಉಳಿದವು.
ಓದಿನ ಒತ್ತಡದ ನಡುವೆ, ನಗುವಿನ ಹೊತ್ತಿನಲ್ಲಿ, ಕಣ್ಣೀರು ತುಂಬಿದ ಕ್ಷಣಗಳಲ್ಲೂ ನಾವು ಒಬ್ಬರಿಗೊಬ್ಬರು ನೆರಳಾಗಿ ನಿಂತೆವು. ನಿಧಾನವಾಗಿ, ನಮಗರಿವಿಲ್ಲದೇ, ಒಬ್ಬರನ್ನೊಬ್ಬರು ಬಿಟ್ಟು ಇರಲಾರದಷ್ಟು ಹತ್ತಿರವಾದೆವು. ನೀನೇ ನನ್ನ ಜೀವದ ಸಂಗಾತಿ, ನಿನ್ನಿಲ್ಲದೆ ನನಗೆ ಏನೂ ಇಲ್ಲ… ಎಂಬ ಭಾವನೆ ಹೃದಯದಲ್ಲಿ ಬೇರು ಬಿಟ್ಟಿತು.
ವರ್ಷಗಳು ಕಳೆಯುತ್ತಾ ಬಂದವು. ಕಾಲ ಬದಲಾಗಿತ್ತು. ಆದರೆ ನಮ್ಮ ಪ್ರೀತಿ ಮಾತ್ರ ಕಾಲಕ್ಕೆ ಸವಾಲು ಹಾಕಿದಂತೆ ಇನ್ನಷ್ಟು ಗಟ್ಟಿಯಾಗಿ ಬೆಳೆಯಿತು. ಯುಗಾದಿಯಂದು ಸಣ್ಣ ಸಂಭ್ರಮದಿಂದ ಆರಂಭವಾದ ನಮ್ಮ ಸಂಬಂಧ, ಯುಗಯುಗಗಳಿಗೂ ಸಾಗುವಂತಹ ಶಾಶ್ವತ ಬಂಧವಾಗಿ ಬೆಸೆದುಕೊಂಡಿತು.


ಯುಗ ಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿ ಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ ನಮ್ಮ ಪ್ರೀತಿ ಶಾಶ್ವತ…
ಇದು ಕೇವಲ ಸಿನಿಮಾ ಹಾಡಿನ ಸಾಲುಗಳಲ್ಲ, ಬದಲಿಗೆ ನಮ್ಮ ಹೃದಯದ ಧ್ವನಿಯಾಗಿದೆ. ಅಂದು ನೀನು ಬೇವು-ಬೆಲ್ಲ ನೀಡಿ ಶುಭಾಶಯ ಕೋರಿ ನಮ್ಮ ಪ್ರೀತಿಗೆ ಕಾರಣವಾಗಿದ್ದರೆ, ಇಂದು ಇದೇ ಯುಗಾದಿಯ ದಿನ ನಮ್ಮ ಜೀವನದ ಮಹತ್ವದ ತಿರುವಾಗಿ ಪರಿಣಮಿಸಿತು. ಬೇರೆ ಬೇರೆ ಧರ್ಮದಲ್ಲಿ ಹುಟ್ಟಿ ಬೆಳೆದ ನಾವಿಬ್ಬರೂ ನಮ್ಮ ಕುಟುಂಬದ ಹಿರಿಯರ ಒಪ್ಪಿಗೆ ಮತ್ತು ಆಶೀರ್ವಾದ ಪಡೆದು ಚರ್ಚ್‌ನಲ್ಲಿ ದೇವರ ಸಾನಿಧ್ಯದಲ್ಲಿ ಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ಪವಿತ್ರ ಪೂಜಾ ಪೀಠದ ಮುಂದೆ ಮೊಣಕಾಲೂರಿ ಪರಸ್ಪರ ಕೈ ಹಿಡಿದು ಮದುವೆಯ ಪ್ರಮಾಣವಚನ ಸ್ವೀಕರಿಸಿದ ಕ್ಷಣ, ಅದು ಕೇವಲ ಮದುವೆಯಲ್ಲ, ಅದು ಎರಡು ಹೃದಯಗಳು ಶಾಶ್ವತವಾಗಿ ಒಂದಾದ ಪವಿತ್ರ ಘಳಿಗೆಯಾಗಿ ಕೌಟುಂಬಿಕ ಜೀವನಕ್ಕೆ ನಾಂದಿಯಾಯಿತು.
ಆ ಕ್ಷಣದಲ್ಲಿ ನಾವು ಮಾಡಿದ ವಾಗ್ದಾನ, ಕಷ್ಟದಲ್ಲೂ, ಸುಖದಲ್ಲೂ, ನೋವಿನಲ್ಲೂ, ಸಂತೋಷದಲ್ಲೂ ಜೊತೆಯಾಗಿ ಸಾಗುವೆವು ಎಂಬ ನಂಬಿಕೆ ನಮ್ಮ ಬದುಕಿನ ಅಸ್ತಿವಾರವಾಯಿತು. ಯುಗಾದಿ ಎಂದರೆ ಕೇವಲ ಹಬ್ಬವಲ್ಲ. ಅದು ವಸಂತದ ಆರಂಭ. ಪ್ರಕೃತಿ ಹೊಸ ಚೈತನ್ಯದಿಂದ ಕಂಗೊಳಿಸುವ ಕಾಲ. ಗಿಡ ಮರಗಳಲ್ಲಿ ಹೊಸ ಎಲೆ ಚಿಗುರಿ, ಹೂವುಗಳು ಅರಳಿ, ಭೂಮಿ ಹಸಿರು ಹೊದಿಕೆ ಹೊದ್ದಿದಂತೆ ಕಾಣುತ್ತದೆ. ಅದೇ ರೀತಿ, ಇಂದು ನಮ್ಮ ಬದುಕಲ್ಲೂ ಹೊಸ ಚೈತನ್ಯ ಅರಳಿದ ದಿನವೇ ಈ ಯುಗಾದಿ.
ಈ ಬಂಧನ ಜನುಮ ಜನುಮದ ಅನುಭಂದನ
ಈ ಪ್ರೇಮ ಸಂಗೀತ.. ಸಂತೋಷ ಸಂಕೇತ…
ಈ ಬಂಧನ ನನ್ನ ನಿನ್ನ ಮಿಲನ ತಂದ ಹೊಸ ಜೀವನ
ಈ ಬಂಧನ ಎದೆಯ ತುಂಬಿ ಬಂದ
ಒಂದು ಸುಖ ಭಾವನ…
ಈ ಬಂಧನ ಕೇವಲ ಒಂದು ಸಂಬಂಧವಲ್ಲ, ಇದು ಜನ್ಮ ಜನ್ಮಗಳ ಅನುಬಂಧ. ಹೃದಯದಿಂದ ಹೃದಯಕ್ಕೆ ಬರೆದ ಶಾಶ್ವತ ಕಥೆ. ಇಂದು ನಾವು ಕುಟುಂಬ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿzವೆ. ಜೀವನದ ಹಾದಿಯಲ್ಲಿ ಎದುರಾಗುವ ಪ್ರತಿಯೊಂದು ಸವಾಲನ್ನೂ ಒಟ್ಟಿಗೆ ಎದುರಿಸುವ ಸಂಕಲ್ಪ ನಮ್ಮದು. ನೋವಿನಲ್ಲಿ ನಲಿವಾಗಿ, ಕಷ್ಟದಲ್ಲಿ ಬಲವಾಗಿ, ಸುಖದಲ್ಲಿ ನಗುತ್ತಾ ಪರಸ್ಪರ ಅರ್ಥ ಮಾಡಿಕೊಂಡು ಸಾಗುವ ನಮ್ಮ ಪಯಣ. ಇದು ಕೇವಲ ಇಬ್ಬರ ಕಥೆಯಲ್ಲ, ಇದು ಪ್ರೀತಿಯ ಪರಮಾರ್ಥ.
ಬೇವು-ಬೆಲ್ಲದ ರುಚಿಯಂತೆ ಜೀವನದ ಎ ರಸಗಳನ್ನೂ ಒಟ್ಟಿಗೆ ಸವಿಯುತ್ತಾ, ಪ್ರತೀ ದಿನವನ್ನೂ ಯುಗಾದಿಯಂತೆ ಹೊಸ ಆರಂಭವನ್ನಾಗಿ ಮಾಡೋಣ ಎಂಬ ಆಶಯ ನಮ್ಮದು. ಯುಗಾದಿಯೊಂದು ಸರಳ ಶುಭಾಶಯ ಜೀವನಪೂರ್ತಿ ಉಳಿಯುವ ಪ್ರೀತಿಯ ಕಥೆಯಾಗಬಹುದು ಎಂಬುದಕ್ಕೆ ನಾವು ಜೀವಂತ ಸಾಕ್ಷಿ. ಪ್ರೀತಿ.. ಅದು ಕೆಲವೊಮ್ಮೆ ಒಂದು ನಗು, ಒಂದು ಕ್ಷಣ, ಒಂದು ಬೇವು-ಬೆಲ್ಲದ ತುಂಡಿನಿಂದ ಆರಂಭವಾಗಬಹುದು, ಆದರೆ ಅದು ನಿಸ್ವಾರ್ಥ ಮತ್ತು ನಿಷ್ಕಲ್ಮಷದಿಂದ ಕೂಡಿದ್ದರೆ ಅದರ ಅಂತ್ಯ ಸುಖಾಂತ್ಯದೊಂದಿಗೆ ಶಾಶ್ವತವಾಗಿರುತ್ತದೆ.

Leave a Reply

Your email address will not be published. Required fields are marked *