ಬಲವಂತವಾಗಿ 2 ಹಸು ಮತ್ತು 1 ಎತ್ತನ್ನು ವಶಕ್ಕೆ ಪಡೆದ ಫೈನಾನ್ಸ್ …!
ಶಿವಮೊಗ್ಗ : ಸಾಲ ವಸೂಲಾತಿಗೆ ರೈತನ ಮನೆಗೆ ನುಗ್ಗಿ ಬಲವಂತದಿಂದ ಎರಡು ಹಸು ಹಾಗೂ ಒಂದು ಎತ್ತನ್ನು ವಶಕ್ಕೆ ಪಡೆದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ನಗರದ ಫೈನಾನ್ಸ್ವೊಂದರ ಸಿಬ್ಬಂದಿಗಳು ಸಿದ್ಲಿಪುರದ ರೈತ ಭರತ್ ಎಂಬುವರಿಗೆ ಮೂರು ಹಸುಗಳ ಖರೀದಿಗೆ ಎರಡು ಲಕ್ಷ ರೂ.ಗಳ ಸಾಲ ನೀಡಿದ್ದರು. ಅವರು ನಿರಂತರ ವಾಗಿ ಸಾಲ ಮರುಪಾವತಿಸುತ್ತಾ ಬಂದಿದ್ದು, ಈಗಾಗಲೇ ಒಂದೂವರೆ ಲಕ್ಷ ರೂ. ಮರು ಪಾವತಿಸಿದ್ದಾರೆ. ೯,೩೦೦ ರೂ.ಗಳ ಒಂದು ಕಂತು ಬಾಕಿ ಇದ್ದು ಈ ಕಾರಣದಿಂದ ಫೈನಾನ್ಸ್ ಸಿಬ್ಬಂದಿಗಳು ಗೂಂಡಾಗ ಳೊಂದಿಗೆ ಆಗಮಿಸಿ ಬಲವಂತವಾಗಿ ಕೊಟ್ಟಿಗೆಯಲ್ಲಿದ್ದ ಎರಡು ಹಸು ಮತ್ತು ಒಂದು ಎತ್ತನ್ನು ತೆಗೆದು ಕೊಂಡು ಹೋಗಿ ಬೆಳಿಗ್ಗೆಯಿಂದಲೇ ಫೈನಾನ್ಸ್ ಕಛೇರಿಯ ಬಳಿ ಆ ಮೂಕ ಪ್ರಾಣಿಗಳಿಗೆ ಮೇವನ್ನು ನೀಡದೇ ಕೂಡಿ ಹಾಕಿದ್ದರು. ಈ ವಿಷಯ ತಿಳಿದ ರಾಜ್ಯ ರೈತಸಂಘದ ಜಿ ಘಟಕ ಸ್ಥಳಕ್ಕೆ ತೆರಳಿ ಫೈನಾನ್ಸ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ, ಅದೇ ಆಟೋ ದಲ್ಲಿ ಹಸುಗಳನ್ನು ಮರಳಿ ರೈತರ ಮನೆಗೆ ಕಳುಹಿಸಿದ್ದು, ಸಧ್ಯಕ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂದರ್ಭದಲ್ಲಿ ರೈತಸಂಘದ ಪ್ರಮುಖರಾದ ಹಿಟ್ಟೂರು ರಾಜು, ಚಂದ್ರಯ್ಯ, ರಾಘವೇಂದ್ರ, ಶೇಖರಪ್ಪ, ಪುರದಾಳು ನಾಗರಾಜ್, ಭಾಗ್ಯ ರಾಘವೇಂದ್ರ ಮೊದಲಾದವರಿದ್ದರು.
