ಕಾರ್ಮೆಲ್ ಮಾತೆಯ ಮಹೋತ್ಸವ: ಸರ್ವಧರ್ಮೀಯರಿಗೂ ಆಸರೆಯಾದ ಮಹಾತಾಯಿ…
ವಿಶೇಷ ಲೇಖನ: ರಾಕೇಶ್ ಡಿಸೋಜ, ಮೊ: ೯೪೪೮೩ ೪೩೨೧೧, ಶಿವಮೊಗ್ಗ.
ಆಕಾಶವನ್ನೆಲ್ಲಾ ಆವರಿಸಿದ ಕಾರ್ಮೋಡ, ಮಿಂಚು, ಗುಡುಗು, ಸಿಡಿಲು, ರೊಂಯ್ಯನೆ ಬೀಸುವ ಗಾಳಿಯೊಂದಿಗೆ ಧೋ.. ಎಂದು ಸುರಿಯುವ ಮಳೆ ಇದು ಮುಂಗಾರು ಮಳೆಗಾಲದಲ್ಲಿ ಕಾಣುವ ಪ್ರಮುಖ ದೃಶ್ಯಾವಳಿ. ಎಲ್ಲೆಡೆ ಮಳೆಯದ್ದೇ ಕಾರುಬಾರು. ಹೀಗೆ ಜೂನ್ ತಿಂಗಳ ಮೊದಲ ವಾರದಲ್ಲಿ ನೈರುತ್ಯ ಮುಂಗಾರಿನ ಮೂಲಕ ದೇಶಾದ್ಯಂತ ೪ ತಿಂಗಳ ಪಯಣಕ್ಕೆ ಇದು ಮುನ್ನುಡಿ ಬರೆಯುತ್ತಿದೆ. ಅದೇ ರೀತಿ ರಾಜ್ಯದ ಮಳೆನಾಡು ಭಾಗದಲ್ಲಿ ಪ್ರತಿ ವರ್ಷ ಅದರ ಅಬ್ಬರ ಜೋರಾಗಿಯೇ ಇರುತ್ತಿತ್ತು. ಈ ರೀತಿಯ ಮುಂಗಾರು ಮಳೆಯ ಹನಿಗಳನ್ನು ಕಣ್ತುಂಬಿಕೊಳ್ಳುವ ಜೊತೆ ಜೊತೆಗೆ ತುಂಗೆಯ ತಟದಲ್ಲಿ ವಾಸಿಸುತ್ತಿದ್ದ ಜನತೆಗೆ ನೆರೆಯ ಭಯ ಸದಾ ಕಾಡುತ್ತಿರುತ್ತಿತ್ತು. ಆದರೂ ಸಹ ನಗರದ ಕ್ರೈಸ್ತ ಭಕ್ತರು ಮಳೆಗಾಲಕ್ಕೆ ಮುನ್ನುಡಿ ಬರೆಯುವ ಜೂನ್ ತಿಂಗಳಲ್ಲಿಯೇ ಪ್ರತಿವರ್ಷ ಯೇಸುವಿನ ಪವಿತ್ರ ಹೃದಯದ (ಸೇಕ್ರೆಡ್ ಹಾರ್ಟ್) ಹಬ್ಬವನ್ನು ಭಕ್ತಿಭಾವದಿಂದ ಆಚರಿಸುತ್ತಿದ್ದರು. ಆದರೆ ೧೯೨೮ರಿಂದ ಈಚೆಗೆ ಸೇಕ್ರೆಡ್ ಹಾರ್ಟ್ ಹಬ್ಬದ ಜೊತೆಗೆ ಜುಲೈ ೧೬ರಂದು ಮಳೆಯ ಆರ್ಭಟದ ನಡುವೆಯೇ ಕಾರ್ಮೆಲ್ ಮಾತೆಯ ಮತ್ಸವವನ್ನು ಸಹ ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸತೊಡಗಿದರು.

ಭಕ್ತಿಯ ಪಥದಲ್ಲಿ ದೇವಮಾತೆಯ ಸ್ಮರಣೆ ಸದಾ ನಮನಾರ್ಹ. ಇದೇ ಮಾರ್ಗದಲ್ಲಿ ಕಾರ್ಮೆಲ್ ಮಾತೆಯ ಮಹೋತ್ಸವವೂ ಭಕ್ತರ ಹೃದಯದಲ್ಲಿ ಅನನ್ಯ ಪ್ರೇರಣೆಯಾಗಿಯೇ ಚಿಮ್ಮುತ್ತದೆ. ಕಾರ್ಮೆಲ್ ಮಾತೆಯ ಮಹೋತ್ಸವ ಇದು ಕೇವಲ ಕ್ರೈಸ್ತರ ಹಬ್ಬವಲ್ಲ, ಇದು ಮಾನವೀಯತೆಗಾಗಿ ಒಟ್ಟಾಗಿ ಬರುವ ಹೃದಯಗಳ ಹಬ್ಬ. ಪ್ರತಿ ವರ್ಷದಂತೆ ಈ ಬಾರಿಯ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ನಡೆಯಲಿರುವ ಕಾರ್ಮೆಲ್ ಮಾತೆಯ ಉತ್ಸವ, ಜಾತಿ, ಮತ, ಭಾಷೆಗಳ ಎಲ್ಲ ಪರಿಧಿಗಳನ್ನು ಮೀರಿದ ಅತ್ಯಂತ ಹೃದಯಸ್ಪರ್ಶಿ ದೃಶ್ಯಗಳಿಗೆ ವೇದಿಕೆಯಾಗಿದೆ.
ಚರ್ಚ್ ಪ್ರಾಂಗಣದಲ್ಲಿ ನೋಡಿದರೆ, ಕೇವಲ ಕ್ರೈಸ್ತ ಸಮುದಾಯದವರು ಮಾತ್ರವಲ್ಲ ಹಿಂದೂ, ಮುಸ್ಲಿಂ, ಬೌದ್ಧ, ಜೈನ, ಲಿಂಗಾಯತ, ಬ್ರಾಹ್ಮಣ, ದಲಿತ ಎಲ್ಲ ಬಗೆಯ ನಂಬಿಕೆಗಳು ಹೊಂದಿರುವ ಜನರು ಮಾತನಾಡುತ್ತಾ, ನಗುತ್ತಾ, ದೇವಮಾತೆಗೆ ಭಕ್ತಿಯಿಂದ ನಮಿಸುತ್ತಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಾರೆ.
ಮಾತೆಯ ಉತ್ಸವದ ಹಿನ್ನೆಲೆ: ಜುಲೈ ೧೬; ಈ ದಿನ ವಿಶ್ವದೆಲ್ಲೆಡೆಯ ಕ್ರೈಸ್ತರು ಮತ್ತು ದೇವ ಮಾತೆಯ ಭಕ್ತರಿಗೆ ಶುಭದಿನ. ಅಂದು ಕಾರ್ಮೆಲ್ ಬೆಟ್ಟದ ಮೇಲೆ ದೇವ ಮಾತೆ ಪ್ರತ್ಯಕ್ಷವಾಗಿ ಮನುಕುಲಕ್ಕೆ ದರ್ಶನ ನೀಡಿದ್ದರು. ಈ ಕಾರಣ ದಿಂದಲೇ ವಿಶ್ವದೆಲ್ಲೆಡೆ ಕಾರ್ಮೆಲ್ ಮಾತೆಯ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅಂತೆಯೇ ಮಲೆನಾಡಿನ ಹೃದಯ ಭಾಗವಾದ ಶಿವಮೊಗ್ಗ ನಗರದಲ್ಲಿ ಕ್ರಿ.ಶ. ೧೯೨೮ರಲ್ಲಿ ಇಲ್ಲಿನ ಜೀವನದಿ ತುಂಗೆಯು ಉಕ್ಕಿ ಹರಿದು ನೂರಾರು ಜನಸಾಮಾನ್ಯರು, ಸಾವಿರಾರು ಪ್ರಾಣಿಪಕ್ಷಿಗಳು ಹಾಗೂ ಅಪಾರ ಪ್ರಮಾಮದ ಆಸ್ತಿಪಾಸ್ತಿ ನಾಶವಾಗಿತ್ತು. ಹೀಗೆ ಜಲಪ್ರಳಯ ವಾದಾಗ ಅಂದಿನ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಜಾತಿ-ಧರ್ಮದ ಬೇಧವಿಲ್ಲದೆ ಪ್ರವಾಹ ಪೀಡಿತರಿಗೆ ಆಶ್ರಯ ನೀಡಿ, ಚರ್ಚ್‌ನ ಅಂದಿನ ಧರ್ಮಕೇಂದ್ರದ ಗುರುಗಳು, ಮೇರಿ ಇಮ್ಯಾಕ್ಯುಲೇಟ್ ಕನ್ಯಾಸ್ತ್ರೀ ಮಠದ ಸಿಸ್ಟರ್‍ಸ್‌ಗಳು ನಿರಾಶ್ರಿತರಿಗೆ ಊಟೋಪಚಾರದ ವ್ಯವಸ್ಥೆಯ ಜೊತೆಗೆ ಅನಾರೋಗ್ಯ ಪೀಡಿತರಿಗೆ ಶುಶ್ರೂಷೆಯನ್ನೂ ಸಹ ನೀಡುತ್ತಿದ್ದರು. ಆದರೆ ಪ್ರಕೃತಿಯ ಮುನಿಸು ಕಡಿಮೆಯಾಗದೆ ದಿನದಿಂದ ದಿನಕ್ಕೆ ಮಳೆಯ ಆರ್ಭಟ ಹೆಚ್ಚಿತು. ಈ ಕಾರಣದಿಂದ ತುಂಗೆಯ ಒಡಲು ತುಂಬಿ, ಜೀವನದಿಯಲ್ಲಿ ಪ್ರವಾಹ ಉಂಟಾಯಿತು.
ಮಾತೆಯ ಮೊರೆಹೋದ ನಿರಾಶ್ರಿತರು: ಈ ಸಂದರ್ಭದಲ್ಲಿ ಚರ್ಚ್‌ನಲ್ಲಿ ಆಶ್ರಯ ಪಡೆದಿದ್ದ ನೆರೆ ನಿರಾಶ್ರಿತರು ಸೇರಿದಂತೆ ಜಾತಿ-ಧರ್ಮದ ಬೆಧವಿಲ್ಲದೆ ನಗರದ ವಿವಿಧ ಸ್ಥಳಗಳಿಂದ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಬಂದು ಕಾರ್ಮೆಲ್ ಮಾತೆಯ ಸನ್ನಿಧಿಯಲ್ಲಿ ಸೇರಿ ಪ್ರಕೃತಿ ವಿಕೋಪದಿಂದ ತಮ್ಮನ್ನು ರಕ್ಷಿಸಲು ಪರಿಪರಿಯಾಗಿ ಬೇಡಿಕೊಂಡು ಕಣ್ಣೀರಿಟ್ಟು ಪ್ರಾರ್ಥಿಸಿದರು. ಬೇಡಿದ ವರಪಡೆದು ಪುನೀತರಾದರು.
ಮುನಿಸು ಬಿಟ್ಟ ಮಳೆರಾಯ: ನಂತರ ಮಳೆರಾಯ ತನ್ನ ಆರ್ಭಟವನ್ನು ಕಡಿಮೆಗೊಳಿಸ ತೊಡಗಿದ, ಹಾಗೆಯೇ ತುಂಗೆಯ ಪ್ರವಾಹವು ನಿಧಾನವಾಗಿ ಇಳಿಯಿತು ಎಂಬ ಬಲವಾದ ನಂಬಿಕೆ ಅಂದಿನಿಂದ ಇಂದಿನವರೆಗೂ ಮಾತೆಯ ಭಕ್ತರಲ್ಲಿದೆ.
ಈ ಕಾರಣದಿಂದಾಗಿ ಅಂದಿನಿಂದ ಪ್ರತಿವರ್ಷವೂ ಕಾರ್ಮೆಲ್ ಮಾತೆಯ ಹಬ್ಬವನ್ನು ಈ ದೇವಾಲಯದಲ್ಲಿ ಮಾತ್ರ ಅದ್ದೂರಿಯಾಗಿ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ ಮತ್ತು ಕಾರ್ಮೆಲ್ ಮಾತೆಯ ಉತ್ತರಿಕೆ ಹಾಗೂ ಜೇನುಮೇಣದ ಭತ್ತಿಗಳನ್ನು ಭಕ್ತರಿಗೆ ನೀಡಿ ಗೌರವಿಸಲಾಗುತ್ತಿದೆ ಹಾಗೂ ರಾಜ್ಯದ ವಿವಿಧ ಭಾಗದಿಂದ ಕ್ರೈಸ್ತರು, ಹಿಂದೂ-ಮುಸ್ಲಿಂಮರು ಕಾರ್ಮೆಲ್ ಮಾತೆಯ ಉತ್ಸವವನ್ನು ಆಚರಿಸಲು ಮಲೆನಾಡಿದ ಹೃದಯ ಭಾಗವಾದ ಶಿವಮೊಗ್ಗ ನಗರದಲ್ಲಿರುವ ಇಂದಿನ ಸೇಕ್ರೆಡ್ ಹಾರ್ಟ್ ಪ್ರಧಾನಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಕಾರ್ಮೆಲ್ ಮಾತೆಗೆ ಹೂವು, ಧೂಪ, ಮೇಣದ ಭತ್ತಿ, ದವಸ- ಧಾನ್ಯಗಳನ್ನು ಕಾಣಿಕೆಯಾಗಿ ಅರ್ಪಿಸಿ ಧನ್ಯತಾಭಾವ ಹೊಂದುತ್ತಿದ್ದಾರೆ.
ಮಹೋತ್ಸವ ನಿಮಿತ್ತ ದೇವಮಾತೆಗೆ ವಿಶೇಷ ನವದಿನ ಪ್ರಾರ್ಥನೆ, ರಥೋತ್ಸವ, ಧ್ವಜರೋಹಣ, ಸಾಮೂಹಿಕ ಬಲಿ ಪೂಜೆ, ದೀಪ ಆರಾಧನೆ ಹಾಗೂ ಶ್ರದ್ಧಾ ಸಮರ್ಪಣೆಯ ಮೂಲಕ ಭಕ್ತರು ಪಾಲ್ಗೊಳ್ಳುತ್ತಾರೆ. ಜಾತಿ ಧರ್ಮದ ಬೇದವಿಲ್ಲದೆ ಭಕ್ತರು ತಮ್ಮ ಜೀವನದಲ್ಲಿ ಮಾತೆಯ ಹಸ್ತಕ್ಷೇಪದಿಂದ ಬಂದ ಪರಿಹಾರ, ಚಿಕಿತ್ಸೆ, ಶಾಂತಿ ಮತ್ತು ಸಂತೋಷವನ್ನು ಸ್ಮರಿಸಿ, ಆಕೆಯ ಆಶೀರ್ವಾದ ಪಡೆಯಲು ದೇವಾಲಯಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ.

ಆಧ್ಯಾತ್ಮಿಕ ಸಂದೇಶ: ಈ ಮಹೋತ್ಸವ, ಭಕ್ತರ ಹೃದಯದಲ್ಲಿ ವಿಶ್ವಾಸ, ಭರವಸೆ ಮತ್ತು ಶುದ್ಧತೆಯ ಸ್ಫೂರ್ತಿಯಾಗಿದೆ. ಕಾರ್ಮೆಲ್ ಮಾತೆ ತನ್ನ ವಾತ್ಸಲ್ಯದಿಂದ ಭಕ್ತರನ್ನು ತನ್ನ ತಾಯ್ತನದ ತೆನೆಗೋಡೆಯಿಂದ ರಕ್ಷಿಸುತ್ತಾಳೆ ಎಂಬ ನಂಬಿಕೆಯೇ ಈ ದಿನದ ಕೇಂದ್ರಬಿಂದು. ಪ್ರಾರ್ಥನೆಯ ಮೂಲಕ, ಕಾರ್ಮೆಲ್ ಮಾತೆಯ ನೆರವಿನ ಮೂಲಕ, ಕ್ರೈಸ್ತ ಜೀವನದಲ್ಲಿ ಶ್ರದ್ಧೆ ಮತ್ತು ಶಾಂತಿಯನ್ನು ಹೇಗೆ ಗಳಿಸಬಹುದು ಎಂಬುದರ ಸಂದೇಶ ಹರಡುತ್ತದೆ.
ಸಮಾಜಿಕ ಸಂಕೇತ : ಕಾರ್ಮೆಲ್ ಮಾತೆಯ ಮಹೋತ್ಸವವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ. ಇದು ಸಮುದಾಯ ಸಂಘಟನೆಯ ಒಂದು ರೂಪವಾಗಿದೆ. ಬಡವರಿಗೆ ಆಹಾರ, ಅನಾಥ ಮಕ್ಕಳಿಗೆ ಉಡುಗೊರೆ, ಆರೋಗ್ಯ ಶಿಬಿರಗಳು ಇತ್ಯಾದಿ ಕಾರ್ಯಕ್ರಮಗಳ ಮೂಲಕ ಈ ಮಹೋತ್ಸವ, ಸಮಾಜ ಸೇವೆಯತ್ತವೂ ತನ್ನ ಕೈಚಾಚಿದೆ.
ಭಕ್ತಿಯ ಹೃದಯದಲ್ಲಿ ಭಾಸವಾಗುವ ತಾಯಿಯೇ ಕಾರ್ಮೆಲ್ ಮಾತೆ. ಆಕೆ ಪ್ರಾರ್ಥನೆಯ ತಂತಿಯಿಂದ ನಮ್ಮ ಜೀವನ ಜಾಲವನ್ನು ಬೆಸೆಯುವ ದೇವತಾಯೆ. ಅವರ ಮಹೋತ್ಸವವನ್ನು ಆಚರಿಸುವ ಈ ಪವಿತ್ರ ಕಾಲ, ಆಧ್ಯಾತ್ಮಿಕ ಎದೆಯನ್ನು ನವೀಕರಿಸಲು ಒಂದು ಸುವರ್ಣಾವಕಾಶವಾಗಿದೆ.
ಆಕೆಯು ಭರವಸೆಯ ತಾಯಿಯಾಗಿದ್ದಾಳೆ. ಕಾರ್ಮೆಲ್ ಮಾತೆ ಎಂದರೆ ಭಯವಿಲ್ಲದ ಭರವಸೆಯ ಸಂಕೇತ. ಆಕೆ ಎಲ್ಲ ಸಂಕಟಗಳಲ್ಲಿಯೂ ನಮ್ಮ ಜೊತೆ ಇರುವ, ದಾರಿ ತೋರಿಸುವ ಬೆಳಕು. ಪ್ರಾರ್ಥನೆಯ ದಾರಿಯಲ್ಲಿ ದೈವಿಕ ಬಂಧವನ್ನು ಆಳಗೊಳಿಸುವ ಆಕೆಯ ಅಸ್ತಿತ್ವ, ನಮ್ಮ ಹೃದಯದಲ್ಲಿ ವಿಶ್ವಾಸವನ್ನೂ ಶಾಂತಿಯನ್ನೂ ನೆಲೆಗೊಳಿಸುತ್ತದೆ.
ತಾಯಿಯ ಸುರಕ್ಷಾ ತೆನೆ : ಸ್ಕಾಪುಲರ್ ಧರಿಸುವ ಸಂಪ್ರದಾಯ, ಕಾರ್ಮೆಲ್ ಮಾತೆಯೊಂದಿಗಿನ ಶಾಶ್ವತ ಸಂಬಂಧವನ್ನು ಸೂಚಿಸುತ್ತದೆ. ಇದು ತಾಯಿಯ ಶರಣಾರ್ಥಿತ್ವ, ಮರಣದ ನಂತರದ ರಕ್ಷಣೆ ಹಾಗೂ ದೇವಮಾತೆಯ ಪ್ರೀತಿಯ ಸಂಕೇತವಾಗಿದೆ. ಭಕ್ತರು ಇದನ್ನು ಧರಿಸುವುದರಿಂದಲೇ ಆತ್ಮದಲ್ಲಿ ಶುದ್ಧತೆ, ಬದ್ಧತೆ ಮತ್ತು ಪ್ರಾರ್ಥನೆಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ.
ಆಧ್ಯಾತ್ಮಿಕ ಪುನರುಜ್ಜೀವನ : ಕಾರ್ಮೆಲ್ ಮಾತೆಯ ಉತ್ಸವವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ. ಇದು ಆತ್ಮಾವಲೋಕನ, ಶುದ್ಧೀಕರಣ ಮತ್ತು ದೇವರೊಂದಿಗೆ ಸಂಬಂಧದ ಪುನರಾವೃತ್ತಿಯ ಸಮಯ. ಈ ಸಂದರ್ಭದಲ್ಲಿ ನಡೆಯುವ ನವ ದಿನಗಳು, ಪ್ರತಿದಿನ ಸಾಯಂಕಾಲದ ಆರಾಧನೆಗಳು, ಭಕ್ತಿಯ ಸಜ್ಜೆಗೊಳಿಸುತ್ತವೆ. ಎ ದಿನಗಳಿಗೂ ವಿಭಿನ್ನ ಆಧ್ಯಾತ್ಮಿಕ ವಿಷಯದೊಂದಿಗೆ ಪ್ರಬೋಧನೆ ಭಕ್ತನ ಮನಸ್ಸಿಗೆ ಆತ್ಮದ ಪಥವನ್ನು ತೆರೆದಿಡುತ್ತವೆ.
ಏಕೆಂದರೆ ಆಕೆ ಮನದಲ್ಲಿ ಪ್ರಾರ್ಥಿಸಿದ ತಾಯಿ. ಕ್ರೈಸ್ತ ವಿಶ್ವಾಸದ ಮೊದಲ ಪ್ರಾರ್ಥಕಿ. ಆಕೆಯು ಕಾನಾ ವಿವಾಹದ ಸಂದರ್ಭದಲ್ಲಿ ಮಾಡಿದ ಮಧ್ಯಸ್ಥಿಕೆಯಿಂದಲೇ ಕ್ರಿಸ್ತನ ಪ್ರಥಮ ಅದ್ಭುತ ನಡೆಯಿತು. ಆಕೆಯ ಪ್ರಾರ್ಥನೆ ಇಂದೂ ಸಹ ಕೋಟಿಗಟ್ಟಲೆ ಜೀವಗಳಲ್ಲಿ ಬದಲಾವಣೆ ತರುತ್ತಿದೆ. ಈ ಭಕ್ತಿಯಿಂದ ತುಂಬಿದ ಸಮಯದಲ್ಲಿ, ಪ್ರಾರ್ಥನೆಗೆ ಹೊಸ ದೃಷ್ಟಿಕೋನ ದೊರೆಯುತ್ತದೆ. ಕಾರ್ಮೆಲ್ ಮಾತೆಯ ಭಕ್ತಿಗೆ ಆದರ್ಶವಾದದ್ದು ಆಕೆಯ ಸೇವಾ ಮನೋಭಾವ. ಸಮಾಜದತ್ತ ಆಕೆಯ ಪ್ರೀತಿಯ ಪ್ರತಿಬಿಂಬ. ಇದು ಭಕ್ತಿಯಿಂದ ಹುಟ್ಟುವ ಸೇವಾ ಚೇತನ ಎಂಬ ದೈವಿಕ ಸಂದೇಶವಾಗಿದೆ.

ಕಾರ್ಮೆಲ್ ಮಾತೆಯ ಮಹೋತ್ಸವವು ನಮ್ಮೊಳಗಿನ ಪವಿತ್ರತೆಯನ್ನು ಪುನಶ್ಚೇತನಗೊಳಿಸುವ ಕಾಲ. ಪ್ರಾರ್ಥನೆಯ ಶಕ್ತಿ, ಮಾತೆಯ ಪ್ರೇಮ, ದೇವರ ಚಿತ್ತಕ್ಕೆ ಶರಣಾಗುವ ಮನಸ್ಥಿತಿ ಇವುಗಳ ಸಮಾಹಾರವೇ ಈ ಪವಿತ್ರ ಉತ್ಸವ. ಅವನ ಭಯದಲ್ಲಿ ನಡೆವವರನ್ನು ಮಾತೆ ಕೈಬಿಡುವುದಿಲ್ಲ. ಆಕೆಯ ಪ್ರಾರ್ಥನೆಯ ಹೊಳಪಿನಲ್ಲಿ ಆತ್ಮವೂ ಬೆಳಗುವುದು.
ಅಲ್ಲಿ ಧರ್ಮದ ವ್ಯತ್ಯಾಸವಿಲ್ಲ; ಮಾತೆಯ ಮಡಿಲಲ್ಲರೂ ಮಕ್ಕಳು. ಮಾತೆಯ ಮೆರವಣಿಗೆಯಲ್ಲಿ ಮನುಷ್ಯತ್ವದ ಮೆರಗು ಕಾಣಸಿಗುವುದು. ಇವುಗಳು ಕೇವಲ ದೃಶ್ಯವಲ್ಲ , ಇವು ದೈವಿಕ ತಾಯಿಯ ಪ್ರೀತಿಯಲ್ಲಿ ಅಸ್ತಿತ್ವ ಪಡೆಯುವ ಮಾನವೀಯತೆಯ ಚಿಹ್ನೆಗಳು. ತಾಯಿಗೆ ಎ ಮಕ್ಕಳು ಒಂದೇ ಎಂಬುದಕ್ಕೆ ಈ ಮಹೋತ್ಸವವೇ ಸಾಕ್ಷಿಯಾಗಿದೆ. ಇಲ್ಲಿ ಯಾರನ್ನೂ ಬೇರ್ಪಡಿಸಲಾಗುತ್ತಿಲ್ಲ. ನಾವೆಲ್ಲರೂ ಕಾರ್ಮೆಲ್ ಮಾತೆಯ ಮಕ್ಕಳು.
ತಮ್ಮ ಧರ್ಮಬೇರೆ ಆದರೂ, ಆಕೆ ತಾಯಿ ಎಂಬ ನಂಬಿಕೆ ಒಂದೇ ಎಂಬ ಸಂಕೇತ. ಧರ್ಮ ಬೇರ್ಪಡಿಸಲಿ, ಆದರೆ ಪ್ರೀತಿ ಮಾತೆಯಂತೆ ಎಲ್ಲರನ್ನೂ ಕೂಡಿಸಲಿ. ಮಾತೆಯ ನೆರಳು ಮಾನವೀಯತೆಗೂ ಆಶ್ರಯ. ಈ ಮಹೋತ್ಸವ ಸಾಮರಸ್ಯ, ಸಹಬಾಳ್ವೆ, ಮತ್ತು ವಿಶ್ವಸ್ನೇಹ ಎಂಬ ಮಲ್ಯಗಳ ಪ್ರತೀಕವಾಗಿದೆ. ಜತಿ-ಧರ್ಮ ಎಂಬ ಗೋಡೆಗಳ ನಡುವೆಯೂ ಭಗವತಿ ಮಾತೆಯ ಪ್ರೀತಿ ಎಲ್ಲರಿಗೂ ಒಂದೇ ಎಂಬುದನ್ನು ಈ ಹಬ್ಬ ಮತ್ತೊಮ್ಮೆ ಸಾಬೀತುಪಡಿಸಿದೆ. ಧರ್ಮ ನಮ್ಮ ಆಯ್ಕೆ ಆಗಬಹುದು, ಆದರೆ ತಾಯಿ ಎಲ್ಲರಿಗೂ ಒಂದೇ.
ಕಾರ್ಮೆಲ್ ದೇವಮಾತೆಯ ಮಹೋತ್ಸವವು ಕೇವಲ ನೋಡುವಷ್ಟು ಮಾತ್ರವಲ್ಲ ; ಅನುಭವಿಸುವ ಉತ್ಸವವೂ ಹೌದು. ವಿಶ್ವಾಸದ ತಾಯಿ ಕಾರ್ಮೆಲ್ ಮಾತೆಯ ಆಶೀರ್ವಾದ ಎಲ್ಲರ ಮೇಲೆ ಹರಿದು ನಮ್ಮೆಲ್ಲರ ಜೀವನವೂ ಬೆಳಗಲಿ. ಸಮಸ್ತ ಜನತೆಗೆ ಕಾರ್ಮೆಲ್ ಮಾತೆ ಮಹೋತ್ಸವದ ಶುಭಾಶಯಗಳು.
