ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸರ್ಕಾರದ ವೈಫಲ್ಯತೆಯಿಂದ ರೈತ ಸಮುದಾಯ ಕಂಗಾಲು: ಕಾಗೇರಿ

Share Below Link

ಹೊನ್ನಾಳಿ-ನ್ಯಾಮತಿ: ರಾಜ್ಯದ ೨೨೦ ತಾಲ್ಲೂಕುಗಳಲ್ಲಿ ಭೀಕರ ಬರಗಾಲದಿಂದ ರೈತ ಸಮುದಾಯ ತತ್ತರಿಸಿ ಹೋಗಿದ್ದು ಕಾಂಗ್ರೆಸ್ ಸರ್ಕಾರ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡದೇ ಅಧಿಕಾರದ ಹಗ್ಗಜಗ್ಗಾಟದಲ್ಲಿ ಮುಳುಗಿ ಹೋಗಿದೆ ಎಂದು ವಿಧಾನಸಭೆ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ರೈತರ ಜಮೀನು ಗಳಿಗೆ ಬರ ಅಧ್ಯಯನ ತಂಡ ದೊಂದಿಗೆ ಭೇಟಿ ನೀಡಿ ಹಾನಿ ಯಾದ ಮೆಕ್ಕೆಜೋಳದ ಬೆಳೆಯನ್ನು ವೀಕ್ಷಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹಿಂದೆಂದೂ ಕಾಣದ ಬರಗಾಲದ ಭೀಕರತೆಗೆ ರೈತ ಸಮುದಾಯ ನಲುಗಿ ಹೋಗಿದೆ. ಸಕಾಲದಲ್ಲಿ ಮಳೆಯಾಗದೇ ರೈತರು ಬೆಳೆದ ಫಸಲು ಒಣಗಿ ಹೋಗಿದೆ, ಮಳೆಯಾಗದೇ ಯಾವ ಬೆಳೆಯೂ ಕೈಸೇರದೇ ರೈತರು ತೀವ್ರ ಆತಂಕ ದಲ್ಲಿದ್ದು ಬೆಳೆ ಹಾನಿಯಿಂದ ಸಾಲದ ಶೂಲಕ್ಕೆ ಹೆದರಿ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ರೈತ ಸಮುದಾಯದ ಸಂಕಷ್ಟಕ್ಕೆ ನೆರವಾಗದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ೧೭ ತಂಡಗಳನ್ನು ರಚಿಸಿ ರಾಜ್ಯದೆಡೆ ಸಂಚರಿಸಿ ಬರ ಅಧ್ಯಯನ ನಡೆಸಿ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರಿ ರೈತರಿಗೆ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಅವರು ತಿಳಿಸಿದರು.


ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಬರಗಾಲ ಪರಿಸ್ಥಿತಿಯ ಬಗ್ಗೆ ಸರ್ಕಾರದ ಮೇಲೆ ಒತ್ತಡ ತಂದು ರೈತ ಸಮುದಾಯಕ್ಕೆ ಸಿಗಬೇಕಾದ ಬೆಳೆ ಪರಿಹಾರವನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗು ವುದು ಎಂದು ಭರವಸೆ ನೀಡಿದರು.
ಬಿಜೆಪಿ ಪಕ್ಷವು ತಂಡಗಳನ್ನು ರಚಿಸಿ ಬರ ಅಧ್ಯಯನ ಮಾಡಲು ಮುಂದಾಗುತ್ತಿದ್ದಂತೆಯೇ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಜಿ ಉಸ್ತುವಾರಿ ಸಚಿವರಿಗೆ ೧ ವಾರದೊಳಗೆ ಬರ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿzರೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದಿಂದ ಕಾವೇರಿ ವಿಚಾರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಇಂತಹ ವಿಷಮ ಪರಿಸ್ಥಿತಿಯಲ್ಲೂ ಕಾವೇರಿ ನೀರು ತಮಿಳುನಾಡಿಗೆ ಹರಿಯುವಂತಾ ಗಿದೆ. ರಾಜ್ಯದಲ್ಲಿ ಕುಡಿಯುವ ನೀರಿಗೆ ತತ್ವಾರ, ಕಾನೂನು ಶಾಂತಿ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಸರ್ಮಪಕ ವಿದ್ಯುತ್ ವಿತರಣೆಯಾಗುತ್ತಿಲ್ಲ. ಜನುವಾರು ಗಳಿಗೆ ಮೇವಿಲ್ಲದೇ ಹಾಲಿನ ಡೈರಿಗಳಲ್ಲಿ ಹಾಲಿನ ಪ್ರಮಾಣ ಕಡಿಮೆಯಾಗಿದೆ. ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಬೇಕು ಇಂತಹ ಸಾಕಷ್ಟು ಜನಪರ ಕಾಳಜಿಯ ವಿಚಾರಗಳಲ್ಲಿ ಕಾಂಗ್ರೆಸ್ ಸರ್ಕಾರವು ಸಂಪೂರ್ಣ ವಿಫಲ ವಾಗಿದ್ದು ತಮ್ಮ ೩೦ ವರ್ಷಗಳ ರಾಜಕೀಯ ಅನುಭವದಲ್ಲಿ ಇಂತಹ ಬೇಜವಾಬ್ದಾರಿ ಸರ್ಕಾರವನ್ನು ನೋಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಎ ಗಂಭೀರ ವಿಚಾರ ಗಳಿಗೆ ಪರಿಹಾರ ಕಂಡುಕೊಳ್ಳುವ ಬದಲಾಗಿ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡಿ ತೋರಿಸುತ್ತಾ ೫ ಗ್ಯಾರಂಟಿ ಯೋಜನೆಗಳ ಪ್ರಚಾರದಲ್ಲಿ ಮುಳುಗಿಹೋಗಿದೆ ಆ ಯೋಜನೆ ಗಳೂ ಎಷ್ಟರಮಟ್ಟಿಗೆ ಜನಸಾಮಾನ್ಯರಿಗೆ ತಲುಪಿವೆ ಎಂದು ಮೊದಲು ಪ್ರಶ್ನಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮನ್ನು ಯಾವಾಗ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಾರೋ ಎಂಬ ಆತಂಕ ವಿದ್ದರೆ ಡಿ.ಕೆ.ಶಿವಕುಮಾರ್ ಅವರಿಗೆ ಸಿದ್ದರಾಮಯ್ಯನವರನ್ನು ಕೆಳಗಿಳಿಸಿ ತಾನು ಮುಖ್ಯಮಂತ್ರಿ ಯಾಗಬೇಕೆಂಬ ಹಪಾಹಪಿ. ಇದರ ನಡುವೆ ಮಂತ್ರಿಗಳು ಮತ್ತು ಶಾಸಕರು ವರ್ಗಾವಣೆ ದಂಧೆ, ಗುತ್ತಿಗೆದಾರರಿಂದ ಹಣ ವಸೂಲಿ ಸೇರಿದಂತೆ ಹಣ ಮಾಡುವ ದಂಧೆಯಲ್ಲಿ ಮುಳುಗಿಹೋಗಿದ್ದು ಇಂತಹ ಸರ್ಕಾರವನ್ನು ನೋಡುವ ದುರ್ದೈವ ರಾಜ್ಯದ ಜನರ ಪಾಲಿಗೆ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಚಿವ ರೇಣುಕಾಚಾರ್ಯ ವಿವಾದಗಳಿಂದ ನಾಯಕ:
ಬರ ಅಧ್ಯಯನ ತಂಡದಿಂದ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಹೆಸರನ್ನು ಕೈ ಬಿಟ್ಟಿದ್ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರೇಣುಕಾಚಾರ್ಯ ಅವರು ಪಕ್ಷದ ಚೌಕಟ್ಟಿನಲ್ಲಿರದೇ ವಿವಾದಗಳನ್ನು ಸೃಷ್ಟಿಸಿ ನಾಯಕನಾಗಲು ಹೊರಟಿದ್ದಾರೆ. ಅವರು ತಮ್ಮನ್ನು ಪಕ್ಷದವರು ಕರೆಯುವ ಹಾಗೆ ವ್ಯಕ್ತಿತ್ವವನ್ನು ಮೊದಲು ಬೆಳಿಸಿಕೊಳ್ಳುವುದನ್ನು ಕಲಿಯಬೇಕು ಎಂದು ಮಾರ್ಮಿಕವಾಗಿ ನುಡಿದರು.
ಅನ್ನದಾತನ ಅಳಲು:
ಮಾದನಭಾವಿಯ ರೈತ ಓಂಕಾರಪ್ಪ ಅವರು ಸಂಸದ ಜಿ.ಎಂ. ಸಿದ್ದೇಶ್ ಮತ್ತು ಬರ ಅಧ್ಯಯನ ತಂಡದವರಲ್ಲಿ ಸ್ವಾಮಿ ನಾವು ಬೆಳೆದ ಬೆಳೆ ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು ಜೀವನ ಮಾಡುವುದೇ ಕಷ್ಟ ಸಾಧ್ಯವಾಗಿದ್ದು ನೀವುಗಳು ಮನಸ್ಸು ಮಾಡಿದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ನಮ್ಮ ಹಾನಿಯಾದ ಬೆಳೆಗೆ ಸಮರ್ಪಕ ಪರಿಹಾರ ಕೊಡಿಸಲು ಸಾಧ್ಯವೆಂದು ಪರಿಪರಿಯಾಗಿ ಬೇಡಿಕೊಂಡ ದೃಶ್ಯ ಮನ ಕಲಕುವಂತಿತ್ತು.
ದಾನಿಹಳ್ಳಿ ಮೃತ ರೈತನ ಕುಟುಂಬಕ್ಕೆ ಸಾಂತ್ವಾನ:
ಇತ್ತೀಚಿಗೆ ಆತ್ಮಹತ್ಯೆ ಮಾಡಿ ಕೊಂಡಿದ್ದ ಮೃತ ನಾಗರಾಜ್ ಕುಟುಂಬಕ್ಕೆ ಬರ ಅಧ್ಯಯನ ತಂಡವು ಭೇಟಿ ನೀಡಿ ಸಾಂತ್ವಾನ ಹೇಳಿತು. ಈ ಸಂದರ್ಭದಲ್ಲಿ ಮೃತ ರೈತನ ಮರಣ ಪ್ರಮಾಣ ಪತ್ರದಲ್ಲಿ ಲೋಪ-ದೋಷವಾಗಿದ್ದನ್ನು ಶಿವಮೊಗ್ಗದ ಜಿ ಆರೋಗ್ಯಾಧಿಕಾರಿಗೆ ಸಂಸದ ಜಿ.ಎಂ.ಸಿದ್ದೇಶ್ ಅವರು ದೂರವಾಣಿ ಮುಖಾಂತರ ಸಂಪರ್ಕಿಸಿ ದಾಖಲೆಗಳನ್ನು ಸರಿ ಮಾಡಿಕೊಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರಪ್ಪ, ಪ್ರೊ| ಲಿಂಗಣ್ಣ, ಮಾಜಿ ಮುಖ್ಯ ಸಜೇತಕ ಶಿವಯೋಗಿಸ್ವಾಮಿ, ದುಂಡಪ್ಪ, ವೀರೇಶ್ ಹನಗವಾಡಿ, ತಾಲ್ಲೂಕು ಉಸ್ತುವಾರಿ ಶಾಂತರಾಜ್ ಪಾಟೀಲ್, ಅಸಂಘಟಿತ ಪ್ರಕೋಷ್ಠದ ರಾಜ್ಯ ಸಂಚಾಲಕ ಎ.ಬಿ. ಹನುಮಂತಪ್ಪ,ಮೆಸ್ಕಾಂ ಮಾಜಿ ನಿರ್ದೇಶಕ ಎಸ್. ರುದ್ರೇಶ್, ಮುಖಂಡರಾದ ಸಿ.ಕೆ.ರವಿಕುಮಾರ್, ಎಂ.ಆರ್. ಮಹೇಶ್, ಎ.ಜಿ, ಮಹೇಂದ್ರ ಗೌಡ, ಎಂ.ಯು.ನಟರಾಜ್, ಯಕ್ಕನಹಳ್ಳಿ ಜಗದೀಶ್, ನೆಲಹೊನ್ನೆ ದೇವರಾಜ್, ಅಜಯ್‌ರೆಡ್ಡಿ, ಕೆ.ವಿ.ಚನ್ನಪ್ಪ, ಕಡೂರಪ್ಪ, ರೈತ ಮುಖಂಡರಾದ ಬೆಳಗುತ್ತಿ ಉಮೇಶ್, ಕೆ.ಸಿ.ಬಸಪ್ಪ, ಪ್ರವೀಣ್, ಶಾಂತರಾಜ್ ಮತ್ತಿತರರು ಉಪಸ್ಥಿತರಿದ್ದರು.