ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ನೃತ್ಯ ಆಸ್ವಾದನೆಗೆ ತುಸುವಾದರೂ ಗ್ರಂಥಗಳ ಓದುವಿಕೆ ಸಂಸ್ಕಾರ ಬೇಕು: ಮಾವಿನಕುಳಿ

Share Below Link

ಸಾಗರ: ಎ ಕಲೆಗಳ ಕಲಿಕೆಗೆ ಹಾಗೂ ಆಸ್ವಾದನೆಗೆ ತುಸುವಾದರೂ ಭಾರತದ ಮಹಾನ್ ಗ್ರಂಥಗಳ ಓದುವಿಕೆಯ ಸಂಸ್ಕಾರ ಬೇಕು ಎಂದು ನಿವೃತ್ತ ಪ್ರಾಂಶುಪಾಲ ಜಯಪ್ರಕಾಶ್ ಮಾವಿನಕುಳಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀನಗರದ ನೃತ್ಯ ಭಾಸ್ಕರ ಸಭಾಂಗಣದಲ್ಲಿ ನಾಟ್ಯ ತರಂಗ ಟ್ರಸ್ಟ್ ವತಿಯಿಂದ ಋತು ನೃತ್ಯ ವೈವಿಧ್ಯ- ವರ್ಷ ನೃತ್ಯ ಹರ್ಷ ಕಾರ್ಯಕ್ರಮ ಯೋಜನೆಯಡಿ ಏರ್ಪಡಿಸಿದ್ದ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾತನಾಡಿ, ರಾಮಾಯಣ, ಮಹಾಭಾರತ ಹಾಗೂ ಭಾಗವತ ಗ್ರಂಥಗಳನ್ನು ಸ್ವಲ್ಪವಾದರೂ ಅಧ್ಯಯನ ಮಾಡಬೇಕು ಎಂದರು.
ಕಲೆಯ ಸಿದ್ಧಿಗಾಗಲೀ, ಆಸ್ವಾದನೆಗಾಗಲೀ ಒಂದು ಸಣ್ಣ ಸಂಸ್ಕಾರ ಬೇಕಾಗುತ್ತದೆ. ಅದು ಬೇರೆ ಕಡೆಯಿಂದ ಬರುವಂಥದ್ದಲ್ಲ. ಹತ್ತಾರು ನಾಟಕಗಳನ್ನು, ನೃತ್ಯಗಳನ್ನು ನೋಡುತ್ತಿದ್ದರೆ ನಿಮಗೆ ಅರ್ಥ ವಾಗುತ್ತದೆ. ಭಾರತದ ಮಹಾನ್ ಕೃತಿಗಳಾದ ರಾಮಾಯಣ, ಮಹಾ ಭಾರತ, ಭಾಗವತ ಗ್ರಂಥಗಳನ್ನು ತುಸುವಾದರೂ ತಿಳಿದುಕೊಳ್ಳದಿದ್ದರೆ ನಿಮಗೆ ಯಾವ ಕಲೆಯನ್ನು ಆಸ್ವಾದಿಸುವುದು ಕಷ್ಟ. ಬೇರೆ ಕಾದಂಬರಿಗಳನ್ನು ಓದದಿದ್ದರೂ ತೊಂದರೆಯಿಲ್ಲ. ಈ ಮೂರು ಗೃಂಥಗಳನ್ನು ಮಕ್ಕಳಿಗೆ ಪೋಷಕರು ಓದಿಸಿ ಎಂದು ಸಲಹೆ ನೀಡಿದರು.
ಭರತನಾಟ್ಯ, ಕೂಚಿಪುಡಿ ನೃತ್ಯಗಳನ್ನು ಮಾತಿಲ್ಲದೆ ಅದರ ಅರ್ಥವನ್ನು ಪೇಕ್ಷಕರಿಗೆ ಮುಟ್ಟಿಸುವುದು ಬಹಳ ಕಷ್ಟ. ಅದಕ್ಕಾಗಿ ಭಾವನೆಗಳನ್ನು, ರಸಗಳನ್ನು, ಚಲನೆಗಳ ನವರಸ ಭಾವಗಳನ್ನು ತಮ್ಮ ಅಭಿನಯ, ಅಂಗಾಂಗ, ಕಣ್ಣಿನ ಚಲನೆ, ಮುದ್ರಿಕೆಗಳ ಮೂಲಕ ನೃತ್ಯಗಾರರು ನಮಗೆ ಹೇಳುತ್ತಾರೆ. ನೃತ್ಯ ಕಲೆ ಬಹಳ ಕಷ್ಟದ ಕಲೆಯಾಗಿದ್ದು, ಇದಕ್ಕೆ ಬಹಳ ಪರಿಶ್ರಮ, ನಿರಂತರ ಅಭ್ಯಾಸ ಬೇಕು. ಸ್ವಾಭಾವಿಕವಾಗಿ ಯುವತಿಯರು ವಿವಾಹದ ನಂತರ ನೃತ್ಯವನ್ನು ಮುಂದುವರೆಸುವುದು ಕಷ್ಟ. ಹಾಗಾಗಿ ಪೋಷಕರು ಸಂಗೀತಾಭ್ಯಾಸಕ್ಕೆ ಹೆಚ್ಚು ಒಲವು ತೋರುತ್ತಾರೆ. ನೃತ್ಯಾಭ್ಯಾಸಕ್ಕೆ ಮಕ್ಕಳನ್ನು ಕಳಿಸುವುದು ಕಡಿಮೆ. ಆದರೆ ಇದಕ್ಕೆ ಡಾ| ಪದ್ಮಾ ಸುಬ್ರಹ್ಮಣ್ಯಂ ನಂತವರು ಅಪವಾದ. ಅವರು ನೃತ್ಯಕ್ಕಾಗಿಯೇ ತಮ್ಮ ಬದುಕನ್ನು ಮೀಸಲಾಗಿಟ್ಟಿzರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಾಟ್ಯಗುರು ವಿದ್ವಾನ್ ಜಿ.ಬಿ.ಜನಾರ್ದನ್ ಅವರು ಮಾತನಾಡಿ, ಲೇಖಕರು ತಮ್ಮ ಭಾವಾಭಿವ್ಯಕ್ತಿಯನ್ನು ಅಕ್ಷರದ ಮೂಲಕ ಸಾಹಿತ್ಯ ರಚಿಸುತ್ತಾರೆ. ನೃತ್ಯಪಟುಗಳು ತಮ್ಮ ಅಂಗಾಂಗ ವಿನ್ಯಾಸಗಳಲ್ಲಿ ಕಲೆಯನ್ನು ಪ್ರಸ್ತುತಪಡಿಸುತ್ತಾರೆ. ಈ ನೃತ್ಯ ತರಬೇತಿ ಸಂಸ್ಥೆಯಲ್ಲಿ ಹಲವಾರು ಪ್ರತಿಭಾವಂತ ಕಲಾವಿದರಿzರೆ. ಕಳೆದ ೧೦ ವರ್ಷಗಳಿಂದ ಋತು ವೈವಿಧ್ಯ ಕಾರ್ಯಕ್ರಮ ನಡೆಸಿ ಕೊಂಡು ಬರುತ್ತಿದ್ದು, ಪೇಕ್ಷಕರ ಕೊರತೆ ಕಂಡು ಬರುತ್ತಿದೆ. ಟಿ.ವಿ., ಮೊಬೈಲ್ ವ್ಯಾಮೋಹ ಸಾಂಪ್ರ ದಾಯಕ ಕಲೆಗಳ ಬೆಳವಣಿಗೆಯನ್ನು ಕುಂಠಿತ ಗೊಳಿಸಿದೆಯೇನೋ ಎನಿಸಿದೆ. ವಿದ್ಯಾರ್ಥಿಗಳು, ಪೋಷಕರು ನೃತ್ಯ ಕಲೆಯನ್ನು ಕಲಿಯಲು, ಆಸ್ವಾದಿಸಲು ಬರಬೇಕು ಎಂದರು.
ಬೆಂಗಳೂರಿನ ಪ್ರತಿಭಾ ಸತ್ಯವೆಣ್ಣನ್ ಅವರು ಭರತನಾಟ್ಯ, ಪ್ರಿಯಾಂಕಾ ರಾಮಚಂದ್ರಯ್ಯ ಮತ್ತು ಮೇಘನಾ ಚಂದ್ರಮೌಳಿ ಅವರು ಯುಗಳ ಕೂಚಿಪುಡಿ ನೃತ್ಯ ಪ್ರದರ್ಶನ ನೀಡಿದರು. ನಾಟ್ಯ ತರಂಗದ ವಿದ್ಯಾಥಿಗಳು ನೃತ್ಯಾಂಕುರ ನೃತ್ಯ ಪ್ರದರ್ಶನ ನೀಡಿದರು.
ನಂದಿನಿ ಪ್ರಾರ್ಥಿಸಿದರು. ಪೂಜ ಸ್ವಾಗತಿಸಿದರು. ಅಕ್ಷತಾ ವಂದಿಸಿದರು. ಶಮಾ ನಿರೂಪಿಸಿದರು.