ಹತ್ತು ಹಲವು ಹವ್ಯಾಸಗಳ ಹನ್ನೊಂದು ಹೆಣ್ಣುಮಕ್ಕಳು…!
ಮನೆಗೆಲಸ ಮೊದಲು ನಂತರ ಇತರೆ ಚಟುವಟಿಕೆಗಳು ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತಿನಿತ್ಯ ಕುಕ್ಕರ್ ಕೂಗಿಸುತ್ತಾ, ಕಸ ಮುಸುರೆ ತಪ್ಪಿಸದೇ, ಗಂಡ ಮಕ್ಕಳನ್ನು ನಿಭಾಯಿಸಿಕೊಂಡು ವಿಶಿಷ್ಠ ಕಲೆಯೊಂದರಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿ ಕೊಂಡು ಯಶಸ್ಸು ಸಾಧಿಸುತ್ತಿರುವ ಹನ್ನೊಂದು ಮಹಿಳಾ ಮಣಿಗಳ ರೋಚಕ ಕಥೆಯಿದು!
ಹೌದು, ಚಿಕ್ಕಮಗಳೂರು ಜಿ ಕೊಪ್ಪ ತಾಲೂಕಿನ ಕೆಸವೆ ಗ್ರಾಮದ ಕ॒ಲಾತ್ಮಿಕ ॒ತಂಡದ॒ ಈ ಹೆಂಗಳೆಯರು ತೆಂಗಿನಗರಿ ಹಾಗೂ ಬಾಳೆದಿಂಡು ಗಳಲ್ಲಿ ಕಲೆ ಅರಳಿಸುತ್ತಾ ದೀಪದ ಕಂಬ ಹಾಗೂ ವೇದಿಕೆಗಳನ್ನು ಸಿದ್ಧಪಡಿಸಿ ಪರಿಸರ ಸ್ನೇಹಿ ಸಾಂಪ್ರದಾಯಕ ಅಲಂಕಾರದ ಸ್ಪರ್ಶ ನೀಡುತ್ತಿzರೆ. ಜೊತೆಗೆ ಕುಟುಂಬದ ಆರ್ಥಿಕ ನಿರ್ವಹಣೆ ಯಲ್ಲಿ ತಮ್ಮ ಪಾಲನ್ನು ಸಮರ್ಥ ವಾಗಿ ಸೇರಿಸುತ್ತಾ ಸ್ವಾವಲಂಬನೆಯ ಹಾದಿಯಲ್ಲಿ ಮುಂದೆ ಸಾಗುತ್ತಿzರೆ.

ಇತ್ತೀಚೆಗೆ ಉಡುಪಿ ಶಿರೂರು ಮಠದ ಅತೀ ಚಿಕ್ಕ ಸ್ವಾಮೀಜಿಗಳಾದ ಶ್ರೀವೇದವರ್ಧನತೀರ್ಥ ಶ್ರೀಪಾದರ ಪರ್ಯಾಯ ಪೀಠಾರೋಹಣ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ ಬಡಗು ಮಾಳಿಗೆಯ ಅರಳುಗದ್ದಿಗೆ ಅರಳಿದ್ದು ಈ ಕಲಾತ್ಮಿಕ ತಂಡದಿಂದಲೇ! ನೋಡಲೆರಡು ಕಣ್ಣು ಸಾಲ ದೆಂಬಂತೆ ಸುಂದರವಾಗಿ ಸಿದ್ಧಪಡಿಸಲ್ಪಟ್ಟಿದ್ದ ಬೃಹತ್ ವೇದಿಕೆ, ದೀಪದ ಕಂಬಗಳು, ನೋಡಿದ ಸ್ವಾಮೀಜಿಗಳೆಲ್ಲರೂ ಮನದುಂಬಿ ಆಶೀರ್ವದಿಸಿದರೆ, ಮೈಸೂರು ಮಹಾರಾಜರಾದ ಯದುವೀರ ಒಡೆಯರ ಮೆಚ್ಚಿ ಉದ್ಗಾರ ತೆಗೆದರು. ಹಾಡಿ ಹೊಗಳಿದವರು ಲಕ್ಷಾಂತರ ಭಕ್ತರು!
ಕಲೆ ಯಾರಲ್ಲಿ ಯಾವಾಗ ಯಾವ ರೀತಿ ಹುಟ್ಟಿಕೊಳ್ಳು ತ್ತದೆಂಬುದು ಊಹಿಸಲೂ ಅಸಾಧ್ಯ. ಅಂತೆಯೇ ೨೦೧೦ರಲ್ಲಿ ಪತ್ರಿಕೆಯೊಂದರ ಲೇಖನ ದಿಂದ ಪ್ರಭಾವಿತರಾದ ಈ ೧೧ ಜನ ಪ್ರವೀಣೆಯರು ಕಾರ್ಯ ಪ್ರವೃತ್ತ ರಾದರು. ಹೆಜ್ಜೆಯ ಮೇಲೆ ಹೆಜ್ಜೆಯ ನಿಕ್ಕುತ ತೆಂಗಿನಗರಿ ಬಾಳೆದಿಂಡುಗಳನ್ನೇ ದಂಡಿಸುತ್ತ ಕಲೆಯರಳಿಸುವ ಕಲಾತ್ಮಿಕ ತಂಡ ವನ್ನು ರಚಿಸಿಕೊಂಡರು. ಆರಂಭ ದಲ್ಲಿ ಕೊಪ್ಪದ ಸುತ್ತಮುತ್ತಲಿನ ಯಾವುದೇ ಸಭೆ – ಸಮಾರಂಭ, ಉದ್ಘಾಟನೆ, ನಿಶ್ಚಿತಾರ್ಥ, ಮದುವೆ – ಮುಂಜಿ ತಾಳಮದ್ದಲೆ ಮುಂತಾದ ಕಾರ್ಯಕ್ರಮಗಳಿಗೆ ಹದವಾದ ಗರಿಗಳನ್ನು ನೀಟಾಗಿ ಕತ್ತರಿಸಿ ಗುತ್ತಾಗಿ ಪೋಣಿಸಿ ಆಕರ್ಷಕ ದೀಪದ ಕಂಬಗಳನ್ನು ತಯಾರಿಸು ತ್ತಿದ್ದ ಈ ಪರಿವಾರ ಇದೀಗ ಭಾರೀ ಬೃಹತ್ ವೇದಿಕೆ ಅಲಂಕಾರ ಮಾಡುವಷ್ಟು ರೂಪುಗೊಂಡಿದೆ. ಎತ್ತರಕ್ಕೇರಿದೆ. ಒಮ್ಮೊಮ್ಮೆ ಇವರಿಗೆ ಬೇಕಾದ ಗುಣಮಟ್ಟದ ಗರಿಗಳು ಸಿಗುವುದೇ ದುಸ್ತರ. ಹಾಗೇ ಸಿಕ್ಕರೂ ಭಾರೀ ಹಣ ತೆರಬೇಕೆಂಬುದೂ ಅಷ್ಟೇ ಮುಖ್ಯ.

ಉಡುಪಿ ಶಿರೂರ ಮಠದ ಶ್ರೀವೇದವರ್ಧನ ತೀರ್ಥರನ್ನು ಹಿಂದೊಮ್ಮೆ ಕೊಪ್ಪ ನಾಗರಿಕ ವೇದಿಕೆ ಸನ್ಮಾನಿಸಿದ್ದು, ಆಗ ಈ ಟೀಮಿನ ಅಲಂಕಾರಕ್ಕೆ ಮಾರು ಹೋಗಿ ಈಗ ಪರ್ಯಾಯೋತ್ಸವದ ಮುಖ್ಯ ವೇದಿಕೆಯ ಸಿದ್ಧತೆಗೆ ಕಲಾತ್ಮಿಕ ತಂಡ ವನ್ನು ಉಡುಪಿಗೆ ಆಹ್ವಾನಿಸಿದ್ದು ಇತಿಹಾಸ ಸೇರಿದ ಮಹತ್ವದ ಘಟನೆ! ನೋಡುಗರು ಕಣ್ಣ ಕಣ್ಣ ಬಿಡುವಂಥ ಕಲಾಕೃತಿಗಳಿಗೆ ವಾಜ್, ಬುಕ್ಕೆ, ಮ್ಯಾಟ್, ಬುಟ್ಟಿ, ನವಿಲು, ತಾವರೆ, ಶ್ರೀಕೃಷ್ಣ, ಚಕ್ರ ಮುಂತಾದ ರೂಪುಕೊಟ್ಟು ಸಿದ್ಧಪಡಿಸುವ ಕಲೆ ಈ ಕಲಾತ್ಮಿಕ ತಂಡಕ್ಕೆ ಕರತಲಾಮಲಕ! ಅದೂ ಕೆಲ ದಿನಗಳಲ್ಲಿ ಬಾಡಿಹೋಗುವ ಬಾಳೆದಿಂಡು ಗರಿಗಳಲ್ಲಿ! ಥಾಯ್ಲೆಂಡ್, ಬಾಲಿ, ಶ್ರೀಲಂಕಾ ದೇಶಗಳಲ್ಲಿ ಬಲು ಜನಪ್ರಿಯ ವಾಗಿರುವ ಈ ಕಲೆ ಜನೂರ್ ಆರ್ಟ್ ಎಂದೇ ಖ್ಯಾತಿ ಪಡೆದಿದೆ. ಗರಿ – ದಿಂಡುಗಳು ಕಲೆಯಾಗಿ ಮಾರ್ಪಡಲು ಕತ್ತರಿ, ಸಣ್ಣ ಚಾಕು, ಕಾರ್ಡಬೋರ್ಡ, ಹಗ್ಗ, ರೀಪ, ಮಳೆಗಳು, ಸ್ಟೆಪ್ಲರ್, ಸುತ್ತಿಗೆ ಸಾಕು. ಪರಿಶ್ರಮದ ಈ ಕೆಲಸಕ್ಕೆ ಮುಖ್ಯ ಸಾಕಷ್ಟು ತಾಳ್ಮೆ ಅರ್ಪಣಾ ಮನೋಭಾವ ಬೇಕೇಬೇಕು.
ಮೂಲ ಕೃಷಿ ಕುಟುಂಬ ದವರಾದ ಮಂಗಳಾ ಪ್ರವೀಣ, ಶಿಲ್ಪಾ ಗೋಪಾಲಕೃಷ್ಣ, ಅರ್ಚನಾ ರಾಜೇಶ್, ಸ್ವಾತಿ ಪ್ರವೀಣ, ಜಯಚಿತ್ರ ಸುಭಾಷ್, ಭಾಗ್ಯ ಶಶಿಧರ್, ರಚನಾ ಶ್ರೀರಂಗ, ಪ್ರಭಾ ಶ್ರೀಕಾಂತ, ಶುಭಲಕ್ಷ್ಮೀ ಸುನಿಲ್, ಭಾರ್ಗವಿ ರಾಘವೇಂದ್ರ ಹಾಗೂ ಬೃಂದಾ ಭರತ್ ಎಲ್ಲರೂ ಪದವೀಧರರು. ಸಮಾನ ವಯಸ್ಕರು (೩೫-೪೫). ಸಮಾನ ಮನಸ್ಕರು. ವಿವಾಹಿತರು. ಇಲ್ಲಿ ಯಾರೂ ಲೀಡರ್, ಬಾಸ್ ಎಂಬ ಭಾವನೆ ಖಂಡಿತಾ ಇಲ್ಲ. ಇವರೆಲ್ಲ ಪರಸ್ಪರ ಸಂಬಂಧಿಕರೂ ಅಹುದೆಂಬುದು ಒಳಗಿನ ಗುಟ್ಟು! ಹಗಲು – ರಾತ್ರಿಯನ್ನದೇ ಕೆಲಸ ಮಾಡಿ ಮುಗಿಸಬೇಕೆಂಬ ಇವರ ಕೈಚಳಕ, ಛಲ, ಗುರಿ.. ಸಾಧನೆ ಮೆಚ್ಚಬೇಕಾದz!
ವಿವಿಧ ಹೊಸ ವಿನ್ಯಾಸಗಳಿಗೆ ಆದ್ಯತೆ ಕೊಡುವುದು ಇವರ ವಿಶೇಷತೆ. ಮೊದಲು ಉಚಿತ ವಾಗಿದ್ದ ಈ ಕಾಯಕ ಕ್ರಮೇಣ ಉದ್ದಿಮೆಯಾಗಿ ಬೆಳೆದದ್ದು ಇವರ ಉಮೇದಿಯನ್ನು ಇಮ್ಮಡಿ ಗೊಳಿಸಿದೆ. ಪ್ರತಿ ಹಂತದಲ್ಲೂ ಕುಟುಂಬದ ಗಂಡಸರು ನೀಡುವ ಸಹಾಯ ಸಹಕಾರಗಳನ್ನು ಇವರೆಲ್ಲ ನೆನೆಯದೇ ಇರುವುದಿಲ್ಲ. ಈ ತಂಡದ ಕಲಾಕೌಶಲ್ಯವನ್ನು ಇಷ್ಟಪಟ್ಟು ಪ್ರೋತ್ಸಾಸಿದ ಹೆಸರಾಂತ ಲೇಖಕಿ ಶಿವಮೊಗ್ಗದ ಡಾ.ಕೆ.ಎಸ್. ಪವಿತ್ರಾ, ಅದಮ್ಯ ಚೇತನ ಸಂಸ್ಥೆಯ ಡಾ.ತೇಜಸ್ವಿನಿ ಅನಂತ ಕುಮಾರರಂಥ ಅನೇಕ ಗಣ್ಯರು ಸ್ಮರಣೀಯರು. ಇತ್ತೀಚೆ ಉಡುಪಿ ಯಲ್ಲಿ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಇವರ ಕಲಾನೈಪುಣ್ಯತೆಯನ್ನು ಕಂಡು ಬೆರಗಾದವರು ರಾಜ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು.
ಈ ಹನ್ನೊಂದು ಗಟ್ಟಿಗಿತ್ತಿಯರು ಕಲೆಗೂ ಸೈ, ಕಾರು ಚಾಲನೆಗೂ ಜೈ. ಇವರಲ್ಲಿ ಒಂದಿಬ್ಬರು ಸರಕಾರಿ ಶಾಲೆಗಳಲ್ಲಿ ಉಚಿತ ಬೋಧನೆ ಮಾಡುತ್ತಿದ್ದರೆ, ಮಂಡಲ್ ಆರ್ಟ್, ಪೇಂಟಿಂಗ್, ರಂಗೋಲಿ ಗಳಲ್ಲಿ ಕೆಲವರು ಪರಿಣಿತರು. ಒಬ್ಬರಂತೂ ಇಡೀ ಭಗವದ್ಗೀತೆ ಯನ್ನು (೧೮ಅಧ್ಯಾಯ) ಮುಖೋದ್ಗತ ಮಾಡಿಕೊಂಡು ಶೃಂಗೇರಿ ಶ್ರೀವಿಧುಶೇಖರ ಭಾರತಿ ಶ್ರೀಗಳಿಗೆ ಒಪ್ಪಿಸಿ ಆಶೀರ್ವಾದ ಪಡೆದದ್ದು ಮಾತ್ರ ತಂಡದ ಹೆಗ್ಗಳಿಕೆಯೇ!
ಸದಸ್ಯರ ಕೆಲ ಯುಟ್ಯೂಬ್ ಚಾನೆಲ್‌ಗಳೂ ಸಕ್ರೀಯವಾಗಿವೆ. ಗೆಜ್ಜೊಸ್ತ್ರ ಬತ್ತಿ ಮಾಡುವಲ್ಲಿ ಸಿದ್ಧಹಸ್ತರಾದ ಓರ್ವ ಸದಸ್ಯೆ ತರಬೇತಿ ಶಿಬಿರ, ಪ್ರದರ್ಶನಗಳನ್ನೂ ನಡೆಸುವುದುಂಟು. ತಂಪು ಪಾನೀಯ ಮಸಾಲೆ ಮಜ್ಜಿಗೆ, ಹಪ್ಪಳ ಸಂಡಿಗೆ ಮಾಡುತ್ತಾ ಸ್ವ- ಸಹಾಯ ಸಹಕಾರಿ ಸಂಘಗಳನ್ನೂ ನಡೆಸುತ್ತಾರೆ. ಜೊತೆಗೆ ಭಾಷಣ, ಸಂಗೀತ, ಹಾಸ್ಯ- ಹರಟೆ, ನಾಟ್ಯ ನಾಟಕಾದಿ ಕಲೆಗಳನ್ನೂ ಮೈಗೂಡಿಸಿ ಕೊಂಡಿದ್ದು ತಮ್ಮ ಪ್ರವೃತ್ತಿಯ ಪ್ರಪಂಚಕ್ಕೆ ಪರಿಮಿತಿಯಿಲ್ಲವೆಂಬು ದಕ್ಕೆ ಪ್ರತ್ಯಕ್ಷ ಪುರಾವೆಯೊದಗಿ ಸಿzರೆ.
ಅಲ್ಲಲ್ಲಿ ಕೆಲ ಪ್ರಶಸ್ತಿ ಪುರಸ್ಕಾರ ಸನ್ಮಾನಗಳಿಗೆ ತೃಪ್ತಿ ಪಟ್ಟುಕೊಂಡ ಈ ಕಲಾತ್ಮಿಕ ತಂಡವನ್ನು ಸರ್ಕಾರ, ಸಂಘ ಸಂಸ್ಥೆಗಳು ಸಮಾಜ ಇನ್ನೂ ಸರಿಯಾಗಿ ಗುರುತಿಸಿ ಗೌರವಿಸ ಬೇಕಾಗಿದೆ. ಮುಂಬರುವ ದಿನಗಳಲ್ಲಿ ತಮ್ಮ ಹವ್ಯಾಸಕ್ಕೆ ಹೊಸ ರೂಪ ಕೊಟ್ಟು ಮದುವೆ ಮಂಟಪಗಳಿಗೆ ಭೂಮದ ಊಟಕ್ಕೆ ರಂಗೋಲಿ ರೂಪದ ಅಲಂಕಾರದ ಸ್ಪ ರ್ಶ ನೀಡಬೇಕೆಂದಿರುವ ಇವರು ವೃತ್ತಿ – ಪ್ರವೃತ್ತಿಗಳ ಮಧ್ಯೆ ಸಮತೋಲನ ಕಾಯ್ದುಕೊಂಡು ಹೋಗುತ್ತಿರುವ ಪ್ರತಿಭಾ ಸಂಪನ್ನರು. ವಿಶಿಷ್ಟವಾದ ಈ ಕಲೆಗೆ ಎಲ್ಲರೂ ಮೆಚ್ಚುಗೆ ಸೂಚಿಸುವ ಮೂಲಕ ಅಭಿನಂದಿಸೋಣ.
ಮೊ. ೯೪೪೮೩ ೯೨೮೬೦, ೯೯೦೧೬ ೨೧೦೮೮ ಗಳಿಗೆ ಕರೆ ಮಾಡಿ ಕಲಾತ್ಮಿಕಾ ತಂಡವನ್ನು ಸಂಪರ್ಕಿಸಬಹುದು.
ನಾರಾಯಣ ವೆಂ.ಭಾದ್ರಿ.
ನವನಗರ, ಹುಬ್ಬಳ್ಳಿ.
ಮೊ. ೯೨೪೩೨ ೪೮೯೭೨.
