ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಡೆಂಗ್ಯೂ ಜ್ವರ ಕುರಿತು ನಿರ್ಲಕ್ಷ್ಯ ಸಲ್ಲದು…

Share Below Link

ಶಿವಮೊಗ್ಗ : ಡೆಂಗ್ಯೂ ಜ್ವರವು ಮಾರಕ ಖಾಯಿಲೆಯಾಗಿದ್ದು ಇದರಿಂದ ಜೀವಹಾನಿ ಸಹ ಸಂಭವಿಸಬಹುದಾದ್ದರಿಂದ ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷ್ಯ ಮಾಡಬಾರದು. ಕೂಡಲೇ ಚಿಕಿತ್ಸೆ ಪಡೆಯಬೇಕು ಹಾಗೂ ಎಲ್ಲರೂ ಸೇರಿ ನಿಯಂತ್ರಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್ ಕೆ.ಎಸ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಕ್ಷೇತ್ರ ಶಿಕ್ಷಣ ಇಲಾಖೆ, ಇನ್ನಿತರ ಇಲಾಖೆಗಳ ಸಹಯೋಗದೂಂದಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಪ್ರೌಢಶಾಲಾ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಡೆಂಗ್ಯೂ ಕುರಿತಾದ ತರಬೇತಿ ಕಾರ್‍ಯಾಗಾರ ಉದ್ಘಾಟಿಸಿ ಮಾತನಾಡಿದರು.
ಯಾವುದೆ ಖಾಯಿಲೆ ಬಂದರೆ ಅದು ಆರೋಗ್ಯ ಇಲಾಖೆಗೆ ಮಾತ್ರ ಸಂಬಂಧ ಪಟ್ಟಿರುವುದು ಎಂಬ ಮನೋಭಾವ ಬೆಳೆದಿದೆ. ಆದರೆ ಡೆಂಗ್ಯೂ, ಮಲೇರಿಯಾ, ಚಿಕುನ್ ಗುನ್ಯ ದಂತಹ ಸೋಂಕಿನ ವಿರುದ್ದ ಎಲ್ಲರೂ ಸೇರಿ ಹೋರಾಟ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ. ಡೆಂಗ್ಯು ನಿಯಂತ್ರಣದಲ್ಲಿ ನಮ್ಮ ಮುಖ್ಯ ಉದ್ದೇಶ ಲಾರ್ವಾಗಳ ನಿರ್ಮೂಲನೆ ಮಾಡುವುದಾಗಿದೆ. ಇದರಲ್ಲಿ ಶಿಕ್ಷಕರ ಪಾತ ಬಹು ಮುಖ್ಯವಾಗಿದ್ದು, ನೀವು ಈ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ತೋರದೆ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡುದಪ್ಪ ಕಸಬಿ ಮಾತನಾಡಿ ಸೊಳ್ಳೆ ಉತ್ಪಾದನೆ ನಿಯಂತ್ರಣ ಮಾಡಿದರೆ ಮಾತ್ರ ಡೆಂಗ್ಯೂ ಕಡಿಮೆ ಮಾಡಬಹುದು ಎಂದರು.
ತಾಲ್ಲೂಕು ಆರೋಗ್ಯಧಿಕಾರಿ ಡಾ. ಚಂದ್ರಶೇಖರ್ ಜಿ.ಬಿ ಮಾತನಾಡಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ಜೂನ್ ನಂತರದಲ್ಲಿ ಇದು ಹೆಚ್ಚಾಗುತ್ತಾ ಹೋಗುತ್ತದೆ. ಇಲಾಖೆಗಳ ಸಹಕಾರ ದಿಂದ ಇದನ್ನು ತಡೆಯಬಹುದು. ಆ ನಿಟ್ಟಿನಲ್ಲಿ ಎಲ್ಲರೂ ಕ್ರಮವಹಿಸಿ ಕೆಲಸ ಮಾಡಬೇಕು ಎಂದರು.
ಕಾರ್ಯಾಗಾರದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಹುಸೇನ್ ಸಾಬ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಕಿರಣ್, ಪ್ರೌಢಶಾಲಾ ಶಿಕ್ಷಕರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *