ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸ್ಮಶಾನದ ಬಗ್ಗೆ ಅನಗತ್ಯ ಭಯ ಬೇಡ: ಪರೋಪಕಾರಂ ಶ್ರೀಧರ್..

Share Below Link

ಶಿವಮೊಗ್ಗ: ಜನ ಸಾಮಾನ್ಯ ರಲ್ಲಿ ಸ್ಮಶಾನಗಳ ಬಗ್ಗೆ ಇರುವ ಅವ್ಯಕ್ತ ಹಾಗೂ ಅನಗತ್ಯ ಭಯ, ಮೈಲಿಗೆ, ಹಿಂಜರಿಕೆಯನ್ನು ದೂರ ಮಾಡಿ ಮಢ್ಯತೆಯನ್ನು ತೊಲಗಿಸಬೇಕಿದೆ. ಮೃತರು ಶಾಶ್ವತ ಸದ್ಗತಿ ಪಡೆದ ಸ್ಥಳದಲ್ಲಿ ನಾವು ಸ್ವಚ್ಛತೆ ಕಾಪಾಡ ಬೇಕಿದೆ. ಅಲ್ಲದೆ ಗಿಡ-ಮರ ಬೆಳೆಸಿ ಸುಂದರ ಪರಿಸರ ನಿರ್ಮಿಸಿ ಮೂಲ ಸೌಲಭ್ಯ ಕಲ್ಪಿಸಿದಲ್ಲಿ ಸ್ಮಶಾನದ ಬಗ್ಗೆ ಜನರಲ್ಲಿರುವ ಭಾವನೆ ಬದಲಾಗುತ್ತದೆ ಎಂದು ಪರೋಪಕಾರಂ ಕುಟುಂಬದ ಶ್ರೀಧರ್ ಎನ್.ಎಂ. ಹೇಳಿದರು.
ವಿದ್ಯಾನಗರದ ರೋಟರಿ ಚಿತಾಗಾರದಲ್ಲಿ ನಿನ್ನೆ ಬೆಳಗ್ಗೆ ೬ರಿಂದ ೮ ಗಂಟೆಯವರೆಗೆ ೬೬೦ನೇ ಕಾರ್ಯಕ್ರಮದ ಭಾಗವಾಗಿ ‘ನಡೆಯಿರಿ ಸ್ಮಶಾನಕ್ಕೆ ಭೇಟಿ ನೀಡೋಣ’ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ನಂತರ ಅವರು ಮಾತನಾಡಿದರು.
ಸಾಮಾನ್ಯವಾಗಿ ಶವಸಂಸ್ಕಾರ, ಪಿತೃಪಕ್ಷದ ಸಂದರ್ಭ ಹೊರತು ಪಡಿಸಿದಲ್ಲಿ ಸ್ಮಶಾನಕ್ಕೆ ಭೇಟಿ ನೀಡುವವರು ವಿರಳಾತಿವಿರಳ. ಸಾವಿನ ಸಂದರ್ಭದಲ್ಲಿ ಅಶ್ರು ತರ್ಪಣ ಅಥವಾ ಗೌರವ ಸಲ್ಲಿಸಿ ಭಾರವಾದ ಹೃದಯದಿಂದ ಸ್ಮಶಾನ ವೈರಾಗ್ಯ ಅನುಭವಿಸಿ ಹಿಂದಿರು ಗುವವರೇ ಹೆಚ್ಚು ಎಂದರು.


ಶವದ ಮೆರವಣಿಗೆ ಅಥವಾ ಸಂಸ್ಕಾರಕ್ಕೆ ತೆರಳುವುದು ಶ್ರೇಷ್ಠ ಹಾಗೂ ಪುಣ್ಯದ ಕೆಲಸ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಆದರೆ ನಾನು ನನ್ನದು ಎಂಬ ಮಮಕಾರ ಇರುವ ಮನುಷ್ಯ ನಿಯಮಿತವಾಗಿ ಸ್ಮಶಾನಕ್ಕೆ ಭೇಟಿ ನೀಡಿದಲ್ಲಿ ತನ್ನ ಬದುಕಿನ ಇತಿಮಿತಿ ಗಳನ್ನು ಅರ್ಥ ಮಾಡಿಕೊಳ್ಳುತ್ತಾನೆ. ಆಗ ಅವನ ಮನಸ್ಸಿನಲ್ಲಿ ಇರುವ ಮನೋವಿಕಾರಗಳು ಕಡಿಮೆಯಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದರು.
ಸ್ಮಶಾನದಲ್ಲಿ ಅತೃಪ್ತ ಆತ್ಮಗಳಿರುತ್ತವೆ, ಇವು ಮನುಷ್ಯನಿಗೆ ಕಾಟ ಕೊಡುತ್ತವೆ ಎಂಬುವುದಕ್ಕೆ ಯಾವುದೇ ವೈeನಿಕ ನೆಲೆಗಟ್ಟಿಲ್ಲ. ಬರಿ ಅಂತೆಕಂತೆಗಳನ್ನು ನಂಬಬಾರದು. ಮೂಢನಂಬಿಕೆ ಯನ್ನು ಹೋಗಲಾಡಿಸಿ ಸಮಾಜ ದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪರೋಪಕಾರಂ ಕುಟುಂಬ ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಈ ಹಿಂದೆಯೂ ಸ್ಮಶಾನದಲ್ಲಿ ಸ್ವಚ್ಛತೆ ನಡೆಸಲಾಗಿದೆ. ಅಲ್ಲದೆ ‘ನಡೆಯಿರಿ ಸ್ಮಶಾನಕ್ಕೆ ಭೇಟಿ ನೀಡೋಣ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಅಂಧಾನುಕರಣೆ ಬಗ್ಗೆ ಜನರಲ್ಲಿ ಜಗೃತಿ ಮೂಡಿಸಬೇಕಿದೆ ಎಂದರು.
ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದ ನಂತರ ಸಾಂದರ್ಭಿಕ ವಾಗಿ ಮಾತನಾಡಿದ ಕಾರ್ಪೋರೇಟರ್ ಅನಿತಾ ರವಿಶಂಕರ್, ಸ್ಮಶಾನಕ್ಕೆ ಬಂದವರು ನೋವಿನಿಂದ ಹಿಂತಿರುಗುತ್ತಾರೆ. ಪರೋಪಕಾರಂ ಕುಟುಂಬದವ ರಂತೆ ನಿಸ್ವಾರ್ಥದಿಂದ ಸ್ಮಶಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದಲ್ಲಿ ಸಂತಸ ಹಾಗೂ ಸಂತೃಪ್ತಿಯಿಂದ ಮನೆಗೆ ಹಿಂತಿರುಗಬಹುದು. ಇಂತಹ ಸತ್ಕಾರ್ಯಗಳಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಪರೋಪಕಾರಂ ಕುಟುಂಬದ ಅನಿಲ್ ಹೆಗಡೆ, ಕಾರ್ಪೆಂಟರ್ ಕುಮಾರಣ್ಣ, ರಾಘವೇಂದ್ರ ಎನ್.ಎಂ., ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರವಿಶಂಕರ ಕೆ.ಬಿ., ಚಾಯ್‌ವಾಲಾ ದಿನೇಶ್ ದಾಸ್ ವೈಷ್ಣವ್, ಸಾಫ್ಟ್‌ವೇರ್ ಇಂಜಿನಿಯರ್ ಸುನೀಲ್, ನರಪತ್ ಪಟೇಲ್, ಬ್ಯಾಂಕ್ ಉದ್ಯೋಗಿ ಕಿರಣ್, ರಾಯಲ್ ಮೆಡಿಕಲ್ಸ್‌ನ ಲೋಹಿತ್ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಪರೋಪಕಾರಂ ಕುಟುಂಬದವರು ಸತ್ಯ ಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ… ಗೀತೆಗೆ ಹೆಜ್ಜೆ ಹಾಕಿದರು.