ದೇವಿಗ ಹರಕೆ ತೀರಿಸಿದ ಭಕ್ತರು – ಜನಮನ ಸೆಳೆದ ಹೂ-ಹಣ್ಣಿನ ಅಲಂಕಾರ…
ಶಿವಮೊಗ್ಗ, (ಹೊಸನಾವಿಕ): ಐತಿಹಾಸಿಕ ಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯ ಎರಡನೇ ದಿನವಾದ ಇಂದು ಮುಂಜನೆ ೪ರ ಹೊತ್ತಿಗೆ ಅಮ್ಮ ಗಾಂಧಿಬಜರಿನ ತವರುಮನೆಯಿಂದ ಕೋಟೆ ರಸ್ತೆಯ ಗದ್ದುಗೆಗೆ ಗಂಗಾಮತಸ್ಥರ ಗಂಗಾಪೂಜೆ ಹಾಗೂ ಮಂಗಳವಾದ್ಯದೊಂದಿಗೆ ಎದುರುಗೊಂಡು ಮೆರವಣಿಗೆ ಯಲ್ಲಿ ಕೋಟೆ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ನಂತರ ಹರಿಜನ ಸಮಾಜದ ಬಾಂಧವರು ಬೇವಿನುಡಿಗೆ ಯೊಂದಿಗೆ ಆಗಮಿಸಿ ಮಾರಿಕಾಂಬೆಗೆ ಪೂಜೆ ಸಲ್ಲಿಸಿದರು. ತದನಂತರ ಕುರುಬ ಸಮಾಜದ ಚೌಡಿಕೆ ಕುಟುಂಬದವರು ದೇವಿಗೆ ನೈವೇದ್ಯ ಸಲ್ಲಿಸಿದರು. ಬೆಳಿಗ್ಗೆ ೬ರಿಂದ ೧೦ ಗಂಟೆಯವರೆಗೆ ವಾಲ್ಮೀಕಿ ಸಮಾಜದವರು ನಂತರ ಸಂಜೆ ೪ರವರೆಗೆ ಉಪ್ಪಾರ ಸಮಾಜದವರು, ೪ರಿಂದ ೧೦.೩೦ರವರೆಗೆ ಮಡಿವಾಳ ಸಮಾಜದವರು ನಾಲ್ಕು ದಿನಗಳ ಕಾಲ ಸರದಿಯಂತೆ ಗದ್ದುಗೆಯಲ್ಲಿ ಅಮ್ಮನವರಿಗೆ ಪೂಜೆಯನ್ನು ಸಲ್ಲಿಸಲಿzರೆ.

ಮಾರಿಕಾಂಬ ದೇವಾಲಯದ ಸುತ್ತಲೂ ಭಕ್ತಾಧಿಗಳಿಗೆ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದ್ದು, ದೇವಿಯ ದರ್ಶನಕ್ಕೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷ ದರ್ಶನಕ್ಕೂ ೫೦೦ ರೂ. ಟಿಕೇಟ್ ವ್ಯವಸ್ಥೆ ಮಾಡಲಾಗಿದ್ದು, ಬರುವ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.
ದೇವಳದ ಸುತ್ತಲೂ ನೂರಾರು ಮಳಿಗೆಗಳು ಜತ್ರೆಯ ಸಂಭ್ರಮಕ್ಕೆ ಮೆರುಗು ನೀಡಿದ್ದವು. ತಮ್ಮ ಹರಕೆ ತೀರಿಸಲು ಕೋಳಿ, ಕುರಿ ಅರ್ಪಣೆಗೆ ಭಕ್ತರು ಸಿದ್ಧರಾಗಿ ಬಂದಿದ್ದರು. ಬೇವಿನ ಉಡುಗೆಯನ್ನು ತೊಟ್ಟ ಭಕ್ತಾಧಿಗಳು ಸನ್ನಿಧಿಗೆ ಆಗಮಿಸಿ ತಮ್ಮ ಹರಕೆ ತೀರಿಸಿದರು.
ಸುತ್ತಮುತ್ತಲ ಹಳ್ಳಿಯ ಸಾವಿರಾರು ಜನರು ಸಾಗರೋಪಾದಿ ಯಲ್ಲಿ ಆಗಮಿಸಿ, ದೇವಿಯ ದರ್ಶನ ಪಡೆಯುತ್ತಿzರೆ. ದೇವಿಯ ಮಡಿಲಲ್ಲಿ ಪುಟ್ಟ ಮಕ್ಕಳನ್ನು ಕೂರಿಸಿ ಹರಕೆ ತೀರಿಸುವ ಸಂಪ್ರದಾಯ ಕೂಡ ಚಾಲ್ತಿಯ ಲ್ಲಿದ್ದು, ಪೋಷಕರು ದೇವಿಗೆ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಸೀರೆ, ಮಡಿಲಕ್ಕಿ ಸಮರ್ಪಣೆ ವಿಶೇಷವಾಗಿ ನಡೆಯಿತು.
ಭಕ್ತಾಧಿಗಳಿಗೆ ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್ ಮಸಾಲೆ ಮಜ್ಜಿಗೆ ವಿತರಿಸಿದರು. ಹಲವು ಸಂಘ-ಸಂಸ್ಥೆಗಳು ಬೆಳಿಗ್ಗೆಯಿಂದಲೇ ನಿರಂತರವಾಗಿ ಮಜ್ಜಿಗೆ ಮತ್ತು ಪಾನಕ ಹಂಚಿದರು. ಹಣ್ಣು-ಕಾಯಿ ಮಾಡಿಸಿಕೊಂಡು ಬಳಿಕ ದೇವಿಯ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಬಳೆಗಳ ಅಂಗಡಿಗಳು ಮಹಿಳೆಯರಿಂದ ತುಂಬಿ ತುಳುಕುತ್ತಿತ್ತು. ಈ ಹಬ್ಬದಲ್ಲಿ ಹಸಿರು ಬಳೆ ಪಡೆದು ಧರಿಸುವುದೇ ಶ್ರೇಷ್ಠ ಎಂದು ಭಾವಿಸಲಾಗಿದೆ.
ನಗರದ ಹಲವು ಮನೆಗಳಲ್ಲಿ ಶಾಮಿಯಾನ ಹಾಕಿ ನೆಂಟರಿಷ್ಟರಿಗೆ ಆಹ್ವಾನಿಸಿ ಜಾತ್ರೆಯ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಈ ಭಾರಿಯ ಹಣ್ಣು ಮತ್ತು ಹೂಗಳ ವಿಶೇಷ ಅಲಂಕಾರ ಊರ-ಪರ ಊರ ಭಕ್ತರ ಪ್ರಶಂಸೆಗೆ ಪಾತ್ರವಾಯಿತು. ಈ ಅಲಂಕಾರದ ಜವಾಬ್ದಾರಿಯನ್ನು ರಾಜ್ಯ ಕಾಂಗ್ರೆಸ್ ಮುಖಂಡರೂ ಆದ ಕೊಡುಗೈ ದಾನಿ ಖ್ಯಾತಿಯ ಎಂ.ಶ್ರೀಕಾಂತ್ ವಹಿಸಿದ್ದರು.
ರಾಜ್ಯದ ವಿವಿಧೆಡೆಗಳಿಂದ ಬರುವ ಭಕ್ತರಿಗೆ ನಗರದ ಬಿ.ಹೆಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ವಾಹನ ನಿಲುಗಡೆಗೆ ಅವಕಾಸ ಕಲ್ಪಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ನಗರದೆಲ್ಲೆಡೆ ಸಿಸಿ ಕ್ಯಾಮೆರಾ ಕಣ್ಗಾವಲು ಹಾಕಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

