ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಅರಣ್ಯ ಕಬಳಿಕೆ ಮತ್ತು ನಾಶ ತಡೆಗೆ ಡೀಮ್ಡ್ ರಕ್ಷಣಾ ಯೋಜನೆ ರೂಪಿಸಿ ಜಾರಿಮಾಡಿ : ಹೆಗಡೆ

Share Below Link

ಶಿವಮೊಗ್ಗ: ಪಶ್ಚಿಮ ಘಟ್ಟದಲ್ಲಿ ಡೀಮ್ಡ್ ಕಂದಾಯ ಅರಣ್ಯಗಳ ಕಬಳಿಕೆ, ಅರಣ್ಯ ನಾಶ ಆಗುತ್ತಲೇ ಇದ್ದು, ರಾಜ್ಯ ಸರ್ಕಾರ ಕೂಡಲೇ ಡೀಮ್ಡ್ ಅರಣ್ಯ ಅಭಿವೃದ್ಧಿ ರಕ್ಷಣಾ ಯೋಜನೆ ರೂಪಿಸಿ ಜಾರಿ ಮಾಡಬೇಕು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದರು.
೨೦೨೨ ರಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವೀಟ್‌ನಲ್ಲಿ ಕೇವಲ ೩.೩ ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯ ಇದೆ ಎಂದು ಘೋಷಿಸಿದೆ. ಡೀಮ್ಡ್ ಅರಣ್ಯ ರಕ್ಷಣೆ ಅಭಿವೃದ್ಧಿಗೆ ಅರಣ್ಯ ಇಲಾಖೆ ಕ್ರಿಯಾಯೋಜನೆ ರೂಪಿಸಲಿದೆ ಎಂದು ಆದೇಶದಲ್ಲಿ ಅಫಿಡವಿಟ್ ನಲ್ಲಿ ಅಧಿಕೃತವಾಗಿ ಸರ್ಕಾರ ಪ್ರಕಟಪಡಿಸಿದೆ. ಆದರೆ, ಈವರೆಗೆ ಅಂಥ ಯೋಜನೆ ರೂಪಿಸಿಲ್ಲ ಎಂದು ದೂರಿದರು.
ಸೊರಬದ ಉದ್ರಿಯ ಮಲೆನಾಡು ಕೆರೆ ಸಮಾವೇಶದಲ್ಲಿ ಮಲೆನಾಡಿನ ೪೦೦೦ ಕೆರೆಗಳ ಅತಿಕ್ರಮಣ ತೆರವು ಮಾಡಲು ಕಾಲಮಿತಿಯ ಕಾರ್ಯಾಚರಣೆಗೆ ಜಿಲ್ಲಾಡಳಿತಗಳು ಮುಂದಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಸಾಗರ ತಾಲೂಕು ತಾಳಗುಪ್ಪಾ ಹೋಬಳಿಯ ೫ ಗ್ರಾಮಗಳಲ್ಲಿ ಕಾನು ಅರಣ್ಯಗಳು ಒಟ್ಟೂ ೨೦೦೦ ಎಕರೆ ಪ್ರದೇಶ ಹೊಂದಿದೆ. ಸ್ಥಾಪಿತ ಹಿತಾಸಕ್ತಿಗಳು ಕಾನು ಅರಣ್ಯ ಭೂಮಿ ಕಬಳಿಸುವ ಕೃತ್ಯಗಳಲ್ಲಿ ತೊಡಗಿ ದ್ದಾರೆ. ಇವುಗಳಿಗೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಪೂರ್ಣ ತಡೆಹಾಕುವಂತೆ ಒತ್ತಾಯಿಸಿದರು.
ಮಲೆನಾಡು ಬರದ ನಾಡಾಗುತ್ತಿದೆ. ಭೂಕುಸಿತ ಹೆಚ್ಚುತ್ತಿದೆ. ಘಟ್ಟದ ನದಿಗಳು ಸಾಯುತ್ತಿವೆ. ನಾಡಿಗೆ ನೀರುಣಿಸುವ ಹೊಳೆ-ಹಳ್ಳ, ಕೆರೆಗಳನ್ನು ಉಳಿಸಲು ಇಲ್ಲಿನ ನದಿ ಕಣಿವೆಗಳ ಕಂದಾಯ ಅರಣ್ಯಗಳನ್ನು ಸಂರಕ್ಷಿಸುವ ಯೋಜನೆಗಳನ್ನು ಜಾರಿಗೆ ತರಬೇಕು. ಕಂದಾಯ, ಅರಣ್ಯ ಕಾಯಿದೆಗಳ ಕಟ್ಟುನಿಟ್ಟಿನ ಪಾಲನೆ ಆಗುವಂತೆ ಕ್ರಮ ಕೈಗೊಳ್ಳಬೇಕು. ರೈತರ, ವನವಾಸಿಗಳ ಸಹಭಾಗಿತ್ವದ ಸಮಗ್ರ ಅರಣ್ಯ ನೀತಿ ರೂಪಿಸಬೇಕು ಎಂದು ಹೇಳಿದರು.
ಮಲೆನಾಡಿನ ಮಂಗನ ಕಾಯಿಲೆಗೆ ಕ್ರಮ ಕೈಗೊಳ್ಳಬೇಕು. ಅತಿಯಾದ ಕೀಟನಾಶಕ ಬಳಕೆ ತಡೆಗಟ್ಟಬೇಕು. ಅಕ್ರಮ ಮರಳುಗಾರಿಕೆ ನಿಲ್ಲಿಸಬೇಕು. ಜಲಮಾಲಿನ್ಯ ತಡೆಯಬೇಕು. ಉಚ್ಚ ನ್ಯಾಯಾಲಯದಲ್ಲಿ ಇರುವ ಅರಣ್ಯ ಮೊಕದ್ದಮೆಗಳಲ್ಲಿ ಸರಿಯಾದ ವಾದ ಮಂಡಿಸದೇ ಘಟ್ಟದ ಅರಣ್ಯಗಳು ಖಾಸಗಿಯವರ ಪಾಲಾಗುತ್ತಿದೆ. ಅರಣ್ಯ ಇಲಾಖೆ ಬಲವಾದ ವಾದ ಮಂಡಿಸಿ ಅರಣ್ಯ ಭೂಮಿ ರಕ್ಷಿಸಬೇಕು. ಭೀಮಸೇತು, ಹಗಲತ್ತಿ, ಕಟ್ಟೆಕೊಪ್ಪ ಇನ್ನಿತರ ಒಟ್ಟೂ ೧೦ ನ್ಯಾಯಾಲಯ ಪ್ರಕರಣಗಳಲ್ಲಿ ೧೦೦೦೦ ಎಕರೆ ಅರಣ್ಯ ಭೂಮಿಯ ಅಳಿವು ಉಳಿವಿನ ಪ್ರಶ್ನೆ ಇದೆ ಎಂದರು. ವೃಕ್ಷಲಕ್ಷ ಆಂದೋಲನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅರಣ್ಯ, ಜೀವವೈವಿಧ್ಯ ಸಂರಕ್ಷಣೆ ಸಂವರ್ಧನೆಗೆ ೧೯೮೩ ರಿಂದ ಜನಾಂದೋಲನ ನಡೆಸುತ್ತಿದೆ. ಅರಣ್ಯ ವರ್ಕಿಂಗ್ ಪ್ಲಾನ್‌ನಲ್ಲಿ ಬದಲಾವಣೆ ಮಾಡಬೇಕು ಎಂದು ಒತ್ತಡ ಹಾಕಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರೊ. ಬಿ.ಎಂ. ಕುಮಾರಸ್ವಾಮಿ, ಶ್ರೀಪಾದ ಬಿಚ್ಚುಗತ್ತಿ, ಕೆ.ವೆಂಕಟೇಶ ಇದ್ದರು.