ಪುರುಷರ ಮೇಲೂ ನಡೆಯುವ ದೌರ್ಜನ್ಯ ತಪ್ಪಿಸಲು ರಾಷ್ಟ್ರೀಯ ಆಯೋಗ ರಚಿಸಲು ಆಗ್ರಹ…
ಶಿವಮೊಗ್ಗ: ಪುರುಷರ ಮೇಲೂ ನಡೆಯುವ ದೌರ್ಜನ್ಯಗಳನ್ನು ತಡೆಯಲು ರಾಷ್ಟ್ರೀಯ ಪುರುಷರ ಆಯೋಗ ರಚಿಸುವಂತೆ ಆಗ್ರಹಿಸಿ ಇಂದು ಅಂತರ ರಾಷ್ಟ್ರೀಯ ಮಾನವ ಹಕ್ಕುಗಳ ಕಲ್ಯಾಣ ಸಂಸ್ಥೆ ಹಾಗೂ ಅಪರಾಧ ನಿಯಂತ್ರಣ ಸಂಸ್ಥೆ ಇಂದು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಮಹಿಳೆಯರಷ್ಟೇ ಪುರುಷರು ಕೂಡ ವಿಶಿಷ್ಟ ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮಹಿಳೆಯರ ವಿಷಯದಲ್ಲಿ ನಮ್ಮ ಸಮಾಜ ಹೆಚ್ಚು ಒತ್ತನ್ನು ಕೊಡುತ್ತದೆ. ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತದೆ. ಆದರೆ, ಪುರುಷರು ಕೂಡ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರು ಪಡುವ ಹಿಂಸೆ ಅನೇಕ ಬಾರಿ ದಾಖಲಾಗುವುದೇ ಇಲ್ಲ. ಪುರುಷ ಸಂಬಂಧಿತ ಚರ್ಚೆಗಳು ಗಮನಕ್ಕೆ ಬರುವುದಿಲ್ಲ. ಅವರು ಕೂಡ ಅಸಮಾನತೆಯನ್ನು ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಪುರುಷರ ಆಯೋಗ ರಚಿಸಿ ನ್ಯಾಯ ಒದಗಿಸಿಕೊಡುವಂತೆ ವಿನಂತಿಸಿ ಮನವಿ ಸಲ್ಲಿಸಲಾಯಿತು.
ಪುರುಷರನ್ನು ಶೋಷಣೆ ಮತ್ತು ಹಿಂಸೆಯಿಂದ ರಕ್ಷಿಸಲು ಅತ್ಯಾಚಾರ ಸೇರಿದಂತೆ ಅನೇಕ ಘಟನೆಗಳಲ್ಲಿ ಪುರುಷರ ಮೇಲೆ ತಪ್ಪನ್ನು ಹೊರಿಸುವುದು ಸ್ವಾಭಾವಿಕವಾಗಿದೆ. ಅಂತಹವರಿಗೆ ನ್ಯಾಯ ಒದಗಿಸುವುದು ಮತ್ತು ಪುರುಷರ ಹಾಗೂ ಅವರ ಕುಟುಂಬದ ಮೂಲಭೂತ ಹಕ್ಕುಗಳನ್ನು ಕಾಪಾಡುವುದು, ಸುಳ್ಳು ದೂರುಗಳನ್ನು ಪರಿಶೀಲಿಸುವುದು, ಆಕಸ್ಮಾತ್ ಮಹಿಳೆಯರು ಕೊಟ್ಟ ದೂರು ಸುಳ್ಳೆಂದು ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು.
ಸಂಸ್ಥೆಯ ಸ್ಥಾಪಕ ಮತ್ತು ರಾಷ್ಟ್ರೀಯ ನಿರ್ದೇಶಕ ಅಬ್ದುಲ್ ರಜಕ್, ರಾಷ್ಟ್ರೀಯ ಅಧ್ಯಕ್ಷ ಸಂತೋಷ್ ಕುಮಾರ್., ಪ್ರಮುಖರಾದ ಅಬ್ದುಲ್ ರಜಕ್, ಅಫ್ತಾಬ್ ಫರ್ವೀಜ್, ನವೀನ್ ಎಸ್ ಇನ್ನಿತರರಿದ್ದರು.