ಕ್ರಿಕೆಟ್: ಟೀಂ ಇಂಡಿಯಾಗೆ ಮುಖಭಂಗ; ಸರಣಿ ಗೆದ್ದ ಆಸ್ಟ್ರೇಲಿಯಾ…
ಚೆನ್ನೈ: ಟೀಂ ಇಂಡಿಯಾ ವಿರುದ್ಧದ ೩ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ೨೧ ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, ೩ ಪಂದ್ಯಗಳ ಏಕದಿನ ಸರಣಿಯನ್ನು ೨-೧ ಅಂತರದಲ್ಲಿ ವಶಪಡಿಸಿಕೊಂಡಿದೆ.
ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ ೨೭೦ ರನ್‌ಗಳ ಸವಾಲಿನ ಗುರಿ ಬೆನ್ನು ಹತ್ತಿದ ೪೯.೧ ಓವರ್‌ನಲ್ಲಿ ೨೪೮ ರನ್‌ಗಳಿಗೆ ಆಲೌಟ್ ಆಗುವ ಮೂಲಕ ೨೧ ರನ್ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಅಂತೆಯೇ ೩ ಪಂದ್ಯಗಳ ಏಕದಿನ ಸರಣಿಯನ್ನು ೨-೧ ಅಂತರದಲ್ಲಿ ಸೋತಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ೪೯ ಓವರ್‌ಗಳಲ್ಲಿ ೨೬೯ ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದು ಕೊಂಡಿತು. ಬಳಿಕ ಗುರಿ ಬೆನ್ನಟ್ಟಿದ ಭಾರತ, ವಿರಾಟ್ ಕೊಹ್ಲಿ (೫೪) ಅರ್ಧಶತಕದ ಹೊರತಾಗಿಯೂ ೪೯.೧ ಓವರ್‌ಗಳಲ್ಲಿ ೨೪೮ ರನ್‌ಗಳಿಗೆ ಆಲೌಟ್ ಆಯಿತು. ೭೨ ಎಸೆತಗಳನ್ನು ಎದುರಿಸಿದ ಕೊಹ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ೫೪ ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ ಆಲ್‌ರೌಂಡ್ ಪ್ರದರ್ಶನ ನೀಡಿದರೂ (೪೦ ರನ್ ಹಾಗೂ ೩ ವಿಕೆಟ್) ಯಾವುದೇ ಪ್ರಯೋಜನ ಆಗಲಿಲ್ಲ. ಶುಭಮನ್ ಗಿಲ್ ೩೭, ಕೆ.ಎಲ್. ರಾಹುಲ್ ೩೨, ನಾಯಕ ರೋಹಿತ್ ಶರ್ಮಾ ೩೦ ರನ್ ಗಳಿಸಿದರು. ಸೂರ್ಯಕುಮಾರ್ ಕುಮಾರ್ ಸತತ ಮೂರನೇ ಸಲವೂ ಗೋಲ್ಡನ್ ಡಕ್ ಔಟ್ ಆದರು.
ಆಸ್ಟ್ರೇಲಿಯಾದ ಪರ ಆಡಂ ಜಂಪಾ ನಾಲ್ಕು ಹಾಗೂ ಅಶ್ಟನ್ ಅಗರ್ ಎರಡು ವಿಕೆಟ್ ಕಬಳಿಸಿ ದರು. ಈ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ಯಾವುದೇ ಬ್ಯಾಟರ್ ಅರ್ಧಶತಕ ಗಳಿಸದ ಹೊರತಾಗಿಯೂ ಸವಾಲಿನ ಮೊತ್ತ ಪೇರಿಸಲು ಯಶಸ್ವಿಯಾಯಿತು. ಮಿಚೆಲ್ ಮಾರ್ಷ್ ೪೭, ಅಲೆಕ್ಸ್ ಕ್ಯಾರಿ ೩೮, ಟ್ರಾವಿಸ್ ಹೆಡ್ ೩೩, ಮಾರ್ನಸ್ ಲಾಬುಶೇನ್ ೨೮, ಸೀನ್ ಅಬಾಟ್ ೨೬, ಮಾರ್ಕಸ್ ಸ್ಟೋಯಿನಿಸ್ ೨೫, ಆಶ್ಟನ್ ಅಗರ್ ೧೭, ಮಿಚೆಲ್ ಸ್ಟಾರ್ಸ್ ೧೦ ಹಾಗೂ ಆಡಂ ಜಂಪಾ ಅಜೇಯ ೧೦ ರನ್ ಗಳಿಸಿದರು. ನಾಯಕ ಸ್ಟೀವ್ ಮಿತ್ ಖಾತೆ ತೆರೆಯುವಲ್ಲಿ ವಿಫಲ ರಾದರು. ಭಾರತದ ಪರ ಹಾರ್ದಿಕ್ ಪಾಂಡ್ಯ ಹಾಗೂ ಕುಲದೀಪ್ ಯಾದವ್ ತಲಾ ಮೂರು ಮತ್ತು ಮೆಹಮ್ಮದ್ ಸಿರಾಜ್ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್‌ಗಳನ್ನು ಗಳಿಸಿದರು.