ವಿದ್ಯುತ್ ಕಣ್ಣಾಮುಚ್ಚಾಲೆ ತಪ್ಪಿಸುವಂತೆ ಗ್ರಾಹಕರ ಆಗ್ರಹ
ಹೊಸನಗರ : ತಾಲೂಕಿನಲ್ಲಿ ಕೆಲವು ತಿಂಗಳಿನಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ವಿದ್ಯುತ್ ಸರಬರಾಜಿನಲ್ಲಿ ಇರುವ ತೊಂದರೆಗಳನ್ನು ಮೆಸ್ಕಾಂ ಇಲಾಖೆ ಬೇಗನೆ ಸರಿಪಡಿಸಿಕೊಂಡು ಗುಣ ಮಟ್ಟದ ವಿದ್ಯುತ್ ಸರಬರಾಜಿಗೆ ಮುಂದಾಗಬೇಕೆಂದು ಗ್ರಾಹಕರು ಒಕ್ಕೊರಲಿನಿಂದ ಆಗ್ರಹಿಸಿದರು.
ಪಟ್ಟಣದ ಮೆಸ್ಕಾಂ ಕಚೇರಿನಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರು ಮಾತನಾಡಿ, ಕೂಡಲೇ ಹರಿದ್ರಾವತಿ ಗ್ರಾಮದಲ್ಲಿ ೧೧೦ ಕೆವಿ ವಿದ್ಯುತ್ ಘಟಕ ನಿರ್ಮಾಣಕ್ಕೆ ಮೆಸ್ಕಾಂ ಅಗತ್ಯ ಕ್ರಮಕೈಗೊಳ್ಳಬೇಕು. ತಾಲೂಕಿನ ವಿದ್ಯುತ್ ಕಣ್ಣಾಮುಚ್ಚಾಲೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮರಗಳ ಕಟಾವು ಸೇರಿದಂತೆ ಟವರ್ ಲೈನ್ ನಿರ್ಮಾಣಕ್ಕೆ ಕೇಂದ್ರ ಪರಿಸರ ಇಲಾಖೆ ಅನುಮತಿ ಪಡೆಯುಲು ಅಽಕಾರಿಗಳು ಸಂಸದರ ಗಮನ ಸೆಳೆಯುವಂತಾಗಬೇಕು. ಏಕಾಏಕಿ ೩೩ ಕೆವಿ ವಿದ್ಯುತ್ ಕಡಿತ ಮಾಡಿ ಲೈನ್ ಕ್ಲಿಯರೆನ್ಸ್ ಮಾಡದೇ ಸರ್ಕಾರಿ ರಜದಿನಗಳಲ್ಲಿ ಎಲ್‌ಸಿ ಮಾಡಬೇಕು. ಇದರಿಂದ ವ್ಯಾಪಾರ ವಹಿವಾಟಿಗೆ ಆಗುವ ಅನಾಹುತ ತಪ್ಪಿಸಬಹುದು ಎಂದು ಜನತೆ ಮನವಿ ಮಾಡಿದರು.
ಈ ಬಾರಿ ವಿದ್ಯುತ್ ಬಿಲ್ ಹೆಚ್ಚಾಗಿರುವ ಸಂಗತಿ ಸಭೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಆದರೆ, ಗ್ರಾಹಕರ ಪ್ರಶ್ನೆಗಳಿಗೆ ಅಧಿಕಾರಿ ವರ್ಗ ಹಾಗೂ ಗುತ್ತಿಗೆದಾರ ರಿಂದ ಸಮರ್ಪಕ ಉತ್ತರ ದೊರೆ ಯದ ಕಾರಣ ಸಭೆಯು ಕೆಲಕಾಲ ಗೊಂದಾಲದ ಗೂಡಾಗಿ ಪರಿಣಮಿ ಸಿತು. ಇದೇ ವೇಳೆ ವಿದ್ಯುತ್ ತಂತಿಗಳ ಮೇಲೆ ಬೆಳೆದಿರುವ ಮರಗಳ ಕಟಾವು ಜೊತೆಗೆ ಲೈನ್ ಕ್ಲಿಯರೆಸ್ಸಿಗಾಗಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದು ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವ ಭರವಸೆಯೊಂದಿಗೆ ಸಭೆ ಮುಕ್ತಾಯವಾಗಿತು.
ಸಭೆಯಲ್ಲಿ ಜಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಶಶಿಧರ್, ಸಾಗರ ವಿಭಾಗದ ಕಾರ್ಯಪಾಲಕ ಇಂಜಿನಿಯರ ವೆಂಕಟೇಶ್, ಹೊಸನಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್, ಸಹಾಯಕ ಇಂಜಿನಿಯರ್ ಮಾಯಣ್ಣಗೌಡ, ನಗರ ಶಾಖಾಧಿಕಾರಿ ಪ್ರಕಾಶ್ ಟಾಕಣ್ಣನವರ್, ರಿಪ್ಪನ್‌ಪೇಟೆಯ ಸಹಾಯಕ ಇಂಜಿನಿಯರ್ ಶಂಕರ್ ಖದಂಮ್, ಸಹಾಯಕ ಲೆಕ್ಕಾಧಿಕಾರಿ ಎಸ್. ರಾಘವೇಂದ್ರ, ಗ್ರಾಹಕ ರಾದ ಕುಂಬತ್ತಿ ಗಣೇಶ್ ಐತಾಳ್, ಉದ್ಯಮಿ ಶ್ರೀಷಾ, ಮುಡಬಾಗಿಲು ರಮಾನಂದ, ಅರೆಮನೆ ವಿನಾಯಕ್, ಬಿ.ಎಸ್. ಸುರೇಶ್. ರಾಜಶ್ರೀ, ಕಲಕೈ ಸ್ವರೂಪ್, ಎಂ.ವಿ.ಜಯರಾಮ್, ಪ್ರಿಯಾಂಕ ಪೂರ್ಣೆಶ್, ವಿಠಲ್ ರಾವ್ ಸೇರಿದಂತೆ ಹಲವರು ಹಾಜರಿದ್ದರು.