ಕಾಂಗ್ರೆಸ್ – ಪೊಲೀಸರ ವಿರುದ್ಧ ಆರೋಪಕ್ಕೆ ಸೀಮಿತವಾದ ಬಿಜೆಪಿ ಸತ್ಯಶೋಧನಾ ಸಮಿತಿ!
ಶಿವಮೊಗ್ಗ: ನಗರದ ಹೊರವಲಯದ ಶಾಂತಿನಗರ (ರಾಗಿಗುಡ್ಡ)ದಲ್ಲಿ ಈದ್‌ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಹಿಂದೂ ಮನೆಗಳ ಮೇಲೆ ನಡೆದಿರುವ ಕಲ್ಲು ತೂರಾಟ ಹಾಗೂ ಹಲ್ಲೆ ಪೂರ್ವನಿಯೋಜಿತ ಕೃತ್ಯವಾಗಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ಯಾಗಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸುದ್ದಿಗೋಷ್ಟಿಯಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಳೀನ್‌ಕುಮಾರ್ ಕಟೀಲ್ ನೇತೃತ್ವದ ಬಿಜೆಪಿ ಸತ್ಯಶೋಧನಾ ಸಮಿತಿಯ ಪ್ರಮುಖರು ನಗರದ ರಾಗಿಗುಡ್ಡ ಹಾಗೂ ಅಂದಿನ ಗಲಭೆಯಲ್ಲಿ ಗಾಯಗೊಂಡವನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ನಂತರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಐದಾರು ಕಡೆಯಲ್ಲಿ ಇಂತಹ ಘಟನೆ ನಡೆದಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಗಿಗುಡ್ಡದ ಘಟನೆಗೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವೈಫಲ್ಯವೇ ಪ್ರಮುಖ ಕಾರಣ ಎಂದು ಗಂಭೀರವಾಗಿ ಆರೋಪಿಸಿದ ಕಟೀಲ್, ಹಿಂದೂಗಳ ಭಾವನೆ ಕೆರಳಿಸುವ ಕಟೌಟ್‌ಗಳಿಂದಾಗಿ ಈ ಘಟನೆ ನಡೆದಿದೆ. ಟಿಪ್ಪು ಕಾಲಡಿಯಲ್ಲಿ ಹಿಂದೂಗಳಿರುವ ಕಟೌಟ್, ಅಖಂಡ ಭಾರತದ ಚಿತ್ರದಲ್ಲಿ ಔರಂಗಜೇಬ್, ದೊಡ್ಡ ಖಡ್ಗ, ಸಾಬ್ರ ಸಾಮ್ರಾಜ್ಯ ಎಂದು ಬರೆಯಲಾಗಿತ್ತು. ಇದಕ್ಕೆ ಪೊಲೀಸರು ಏಕೆ ಅವಕಾಶ ನೀಡಿದರು ಎಂದು ಪ್ರಶ್ನಿಸಿದರು.
ಇಡೀ ಶಿವಮೊಗ್ಗದಲ್ಲಿ ಗಣಪತಿ ಉತ್ಸವ ಶಾಂತಿಯುತವಾಗಿ ನಡೆದಿದೆ. ರಾಗಿಗುಡ್ಡದಲ್ಲೂ ಗಣಪತಿ ಉತ್ಸವ ನಡೆದಿದ್ದು, ಇದರಲ್ಲಿ ಭಾಗವಹಿಸಿದವರ ಟಾರ್ಗೆಟ್ ಮಾಡಲಾಗಿದೆ. ಕೇವಲ ಹಿಂದೂಗಳ ಮನೆಗಳನ್ನು ಹುಡುಕಿ ಕಲ್ಲು ತೂರಲಾಗಿದೆ. ಪ್ರಮುಖ ವಾಗಿ ಮಹಿಳೆಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದರು.
ಪೊಲೀಸರ ಎದುರೇ ಕಲ್ಲು ತೂರಾಟ ನಡೆದಿದೆ. ಜಿಲ್ಲಾ ರಕ್ಷಣಾಧಿಕಾರಿಗಳು ಸ್ಥಳದಲ್ಲೇ ಇದ್ದರೂ ಸಹ ಪೊಲೀಸರಿಗೆ ರಕ್ಷಣೆ ಇಲ್ಲದ ಮೇಲೆ, ಸಾರ್ವಜನಿಕರ ಪರಿಸ್ಥಿತಿ ಏನಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದೂಗಳ ಮೇಲಿನ ಹಲ್ಲೆಯನ್ನು ಪರಸ್ಪರ ಎರಡು ಕೋಮುಗಳ ನಡುವಿನ ಹಲ್ಲೆ ಎಂದು ಬಿಂಬಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸ ಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಶಿವಮೊಗ್ಗಕ್ಕೆ ಬಂದ ನಂತರ ಅವರ ಸೂಚನೆ ಮೇರೆಗೆ ಅಮಾಯಕ ಹಿಂದೂಗಳ ಮೇಲೆ ಕೇಸ್ ಹಾಕಿದ್ದಾರೆ. ಕಲ್ಲಿನಿಂದ ಹೊಡೆತ ತಿಂದು ಚಿಕಿತ್ಸೆ ಪಡೆಯುತ್ತಿರುವವರ ವಿರುದ್ಧವೂ ಕೇಸ್ ಹಾಕಲಾಗಿದೆ. ಉಗ್ರವಾದಿಗಳ ಪರವಾದ ಹಾಗೂ ಮಹಿಳೆಯರ ವಿರೋಧಿ ಸರ್ಕಾರ ಇದಾಗಿದೆ ಎಂದು ಟೀಕಿಸಿದರು.
ಮೊದಲ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ೨೪ ಹಿಂದೂಗಳ ಹತ್ಯೆಯಾಗಿತ್ತು. ಆಗ ಟಿಪ್ಪುವನ್ನು ಹಿರೋ ಆಗಿ ಬಿಂಬಿಸಿದ್ದ ಸರ್ಕಾರ ಈಗ ೨ನೇ ಅವಧಿಗೆ ಔರಂಗಜೇಬನನ್ನು ಬಿಂಬಿಸುತ್ತಿದೆ. ಇವರಿಗೆ ಹಿಂದುಗಳನ್ನು ವಿರೋಧಿಸುವುದೇ ಕೆಲಸ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಐದಾರು ಜಿಲ್ಲೆಗಳಲ್ಲಿ ನಡೆದ ಮೆರವಣಿಗೆ ಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದರೂ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದರಿಂದ ಇದು ನಮ್ಮ ಸರ್ಕಾರ ಎಂಬ ಧೈರ್ಯ ದಿಂದ ಎಲ್ಲವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗಲಭೆಗಳು ನಡೆದಾಗ ಪೊಲೀಸ್ ಇಲಾಖೆಯ ಕೈ ಕಟ್ಟಿ ಹಾಕುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಭಯೋತ್ಪಾದಕ ಶಕ್ತಿಗಳಿಗೆ ಪ್ರೇರಣಾ ಶಕ್ತಿಯಾಗಿ ಕಾಂಗ್ರೆಸ್ ನಿಂತಿದೆ ಎಂದು ಆರೋಪಿಸಿದರು.
ರಾಗಿಗುಡ್ಡ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಬೇಕು, ನ್ಯಾಯಾಂಗ ತನಿಖೆಯಾಗಿ ಶಿಕ್ಷೆ ಕೊಡಿಸಬೇಕು, ಕಲ್ಲುತೂರಾಟ ದಿಂದ ಉಂಟಾದ ಹಾನಿಗೆ ಪರಿಹಾರ ನೀಡಬೇಕು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು, ರಾಗಿಗುಡ್ಡಕ್ಕೆ ಹೆಚ್ಚಿನ ಪೊಲೀಸ್ ನಿಯೋಜಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಡಿಸಿಎಂಗಳಾದ ಕೆ.ಎಸ್. ಈಶ್ವರಪ್ಪ, ಅಶ್ವತ್ಥನಾರಾಯಣ, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ಮುಖಂಡರಾದ ರವಿಕುಮಾರ್, ಎಸ್. ದತ್ತಾತ್ರಿ, ಶಾಸಕರಾದ ಚನ್ನಬಸಪ್ಪ, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಮತ್ತಿತರರಿದ್ದರು.