ಜಿಲ್ಲಾ ಸುದ್ದಿತಾಜಾ ಸುದ್ದಿದೇಶ

ವಿಜ್ರಂಭಣೆಯ ಶ್ರೀ ರಾಮೇಶ್ವರ ಎಳ್ಳಮಾವಾಸ್ಯೆ ಜಾತ್ರೆಗೆ ಬನ್ನಿ…

Share Below Link

ಲೇಖನ: ಬಿ. ವರಲಕ್ಷ್ಮಿ ಪ್ರಕಾಶ್, ಮೊ: ೬೩೬೬೦೯೧೪೪೫
ಎಳ್ಳಮಾವಾಸ್ಯೆ ದಕ್ಷಿಣಾಯನದ ಮಾರ್ಗಶಿರ ಮಾಸದ ಅಮಾವಾಸ್ಯೆಯ ದಿನವಾಗಿದ್ದು, ಎಳ್ಳು ಬೆಳೆ ಬರುವ ದಿನವನ್ನು ಎಳ್ಳಮಾವಾಸ್ಯೆ ಎಂದು ಆಚರಿಸುತ್ತಾರೆ. ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ರೈತರು ಈ ದಿನವನ್ನು ಆಚರಿಸುತ್ತಾರೆ. ಈ ದಿನ ರಾಜ್ಯದ ಮಲೆನಾಡು, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಪ್ರದೇಶದಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ.
ಮಲೆನಾಡಿನ ಮಡಿಲಿನ ಲ್ಲಿರುವ ತೀರ್ಥಹಳ್ಳಿಯು ಪುರಾಣಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಪವಿತ್ರ ತುಂಗಾ ನದಿಯ ತೀರದಲ್ಲಿರುವ ತೀರ್ಥರಾಜ ಪುರದಲ್ಲಿ (ಅಂದರೆ ಈಗಿನ ತೀರ್ಥಹಳ್ಳಿಯಲ್ಲಿ) ಪ್ರತಿ ವರ್ಷ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಉತ್ಸವವು ವಿಜೃಂಭಣೆಯಿಂದ ನಡೆಯುತ್ತದೆ.


ಈ ಬಾರಿ ಡಿಸೆಂಬರ್ ೧೯ರ ನಾಳೆ ಬೆಳಗಿನ ಜವ ತುಂಗಾ ನದಿ ಮಧ್ಯದಲ್ಲಿ ರುವ ರಾಮಕೊಂಡದಲ್ಲಿ ತೀರ್ಥಸ್ನಾನ, ಶ್ರೀ ಪರಶುರಾಮ ತೀರ್ಥಪೂಜೆ, ತೀರ್ಥಾಭಿಷೇಕ, ಸಂಜೆ ಖ್ಯಾತ ಓಡಿಸ್ಸಿ ನೃತ್ಯಪಟು ಉದಯ ಕುಮಾರ ಶೆಟ್ಟಿ ತಂಡದಿಂದ ನೃತ್ಯ ವೈಭವ ನಡೆಯಲಿದೆ. ೨೦ರ ಶನಿವಾರ ಶ್ರೀ ರಾಮೇಶ್ವರ ದೇವರ ರಥೋತ್ಸವ, ಸಂಜೆ ದೇಹದಾಢ್ಯ ಸ್ಪರ್ಧೆ ಮತ್ತು ೨೧ರ ಸಂಜೆ ತುಂಗಾ ನದಿ ತಟದ ಮರಳು ಗುಡ್ಡೆಯ ಮೇಲೆ ಬೀಚ್ ವಾಲಿಬಾಲ್ ಮಾದರಿಯಲ್ಲಿ ಇದೇ ಪ್ರಥಮ ಬಾರಿಗೆ ವಾಲಿಬಾಲ್ ಪಂದ್ಯಾವಳಿ, ಚಲನಚಿತ್ರದ ಹಿನ್ನೆಲೆ ಗಾಯಕ ರಾಮಚಂದ್ರ ಹಡಪದ ತಂಡ ದಿಂದ ಸಂಗೀತ ಸಂಜೆ, ನಂತರ ಸಿಡಿಮದ್ದು ಪ್ರದರ್ಶನದೊಂದಿಗೆ ತೆಪ್ಪೋತ್ಸವ ನಡೆಯಲಿದೆ.
ಸ್ಕಂದ ಪುರಾಣದಂತೆ ತಂದೆ ಜಮದಗ್ನಿಯ ಆe ಅನ್ವಯ ಪರಶುರಾಮನು ತಾಯಿ ರೇಣುಕಾದೇವಿಯ ಶಿರವನ್ನು ಕಡಿದುರುಳಿಸಿದನು. ಪರಶುವಿಗೆ (ಕೊಡಲಿಗೆ) ತಗಲಿದ ಮಾತೃಹತ್ಯಾ ದೋಷವನ್ನು ದೂರಗೊಳಿಸಲು ಪರಶುರಾಮನು ತೀರ್ಥ ಯಾತ್ರೆ ಯನ್ನು ಕೈಗೊಂಡನು. ಆದರೆ ಮಾತೃಹತ್ಯೆಯ ಪಾಪವು ಹೋಗದಾಯಿತು.


ಮಾರ್ಗಶಿರ ಅಮಾವಾಸ್ಯೆ ಯಂದು ತೀರ್ಥಹಳ್ಳಿಗೆ ಬಂದು ತುಂಗೆಯ ತೀರ್ಥದಲ್ಲಿ ಕೊಡಲಿ ಯನ್ನು ತೊಳೆದನು. ಎಳ್ಳಿನಷ್ಟಿದ್ದ ಕಲೆಯೂ ತುಂಗೆ ನೀರಿನಿಂದ ತೊಳೆದು ಹೋಯಿತು. ಪರಶುರಾಮನು ಮಾತೃಹತ್ಯಾ ದೋಷದಿಂದ ಮುಕ್ತನಾದನೆಂಬ ಪ್ರತೀತಿ ಇದೆ. ಅಂದಿನಿಂದ ಇಲ್ಲಿ ಎಳ್ಳಮಾವಾಸ್ಯೆಯಂದು ಪ್ರಾತಃಕಾಲದಲ್ಲಿ ಭಕ್ತರು ಮಾರ್ಗಶಿರದ ತೀವ್ರ ಚಳಿ ಇದ್ದರೂ ತೀರ್ಥ ಸ್ನಾನ ಮಾಡಿ ರಾಮೇಶ್ವರನ ದರ್ಶನವನ್ನು ಪಡೆಯುತ್ತಾರೆ. ಪಾಡ್ಯದಂದು ರಾಮೇಶ್ವರ ನಿಗೆ ರಥೋತ್ಸವ, ಬಿದಿಗೆಯಂದು ತುಂಗಾನದಿಯಲ್ಲಿ ತೆಪ್ಪೋತ್ಸವ ಜರುಗುತ್ತದೆ.
ತೆಪ್ಪೋತ್ಸವದಂದು ತುಂಗಾ ನದಿಯ ಕಮಾನಿನ ಸೇತುವೆಯ ಸೌಂದರ್ಯ ಮನಮೋಹಕ ವಾಗಿರುತ್ತದೆ. ಕೆಳಗೆ ಭಕ್ತಜನರು ತುಂಗೆಯಲ್ಲಿ ತೇಲಿ ಬಿಡುವ ಬೆಳಗುವ ಹಣತೆಗಳು, ಆಗಸದಲ್ಲಿ ನಕ್ಷತ್ರಲೋಕವನ್ನು ಸೃಷ್ಟಿಸಿ ಮಿಂಚುವ, ನೀರಿನಲ್ಲಿ ಪ್ರತಿಫಲಿಸಿ ಮಾಯವಾಗುವ ಬಾಣ- ಬಿರುಸುಗಳು, ಈ ಸೌಂದರ್ಯ ವನ್ನು ಕಣ್ಣಾರೆ ಕಂಡು ಆಸ್ವಾದಿಸಬೇಕು.
ಸುಮಾರು ೨೫ ಲಕ್ಷ ರೂ. ವೆಚ್ಚದಲ್ಲಿ ಎಳ್ಳಮಾವಾಸ್ಯೆ ಜತ್ರೆ ನಡೆಯಲಿದ್ದು, ಬೃಹದಾಕಾರದ ಪರಶುರಾಮನ ಮೂರ್ತಿ ವಿಶೇಷ ಆಕರ್ಷಣೆಯಾಗಿದೆ. ಶ್ರೀ ರಾಮೇಶ್ವರನ ದರ್ಶನದೊಂದಿಗೆ ಮೂರು ದಿನಗಳ ಜತ್ರಾ ಮಹೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳಬಹುದಾಗಿದೆ.