ನಾಳೆ ಸಿಎಂರಿಂದ ಜನಪರ ಬಜೆಟ್ ಮಂಡನೆ: ಆಯ್ನೂರ್ ವಿಶ್ವಾಸ…
ಶಿವಮೊಗ್ಗ,: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಮಂಡಿಸಲಿರುವ ೧೫ನೇ ಬಜೆಟ್ ಆಶಾಕಿರಣ ಬಜೆಟ್ ಆಗಲಿದ್ದು ಜನಪರ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲವಿದೆ, ಕಾರ್ಮಿಕರ ಸಮಸ್ಯೆಗಳಿವೆ, ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಬರಬೇಕಾಗಿದೆ. ವೇತನ ಆಯೋಗದ ಸಂಪೂರ್ಣ ಜರಿಯಾಗಬೇಕಾಗಿದೆ. ಅಸಂಘಟಿತ ಕಾರ್ಮಿಕರ ಸಮಸ್ಯೆಗಳಿವೆ. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ಎಂಬಂತೆ ನಾಳಿನ ಬಜೆಟ್ ಮಂಡನೆಯಾಗಲಿದೆ ಎಂದ ಅವರು, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು, ಕೆಲವು ಸಚಿವರು ಗಳನ್ನು ಬಜೆಟ್ ಮಂಡನೆ ಮುಂಚೆಯೇ ಭೇಟಿ ಮಾಡಿದ್ದೇನೆ. ಅವರೆಲ್ಲರೂ ಈ ಬಾರಿಯ ಬಜೆಟ್ ಜನಪರ ಬಜೆಟ್ ಆಗಲಿದೆ ಎಂದಿದ್ದಾರೆ. ಜನಪರ ಪಂಚ ಯೋಜನೆಗಳನ್ನು ಜರಿ ಮಾಡುವುದರ ಜೊತೆಗೆ ಅದಕ್ಕೆ ಹಣ ಜೋಡಿಸುವುದರ ಬಗ್ಗೆಯೂ ಮುಖ್ಯಮಂತ್ರಿಗಳು ಯೋಚನೆ ಮಾಡುತ್ತಾರೆ ಎಂದರು.
ಮುಖ್ಯವಾಗಿ ರೈತರು ಸಂಕಷ್ಟದಲ್ಲಿ ದ್ದಾರೆ. ಹಲವು ಕಡೆ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಕೃಷಿ ಕಾರ್ಮಿಕರು ವಲಸೆ ಹೋಗದ ರೀತಿಯಲ್ಲಿ ನೋಡಬೇಕಾಗಿದೆ. ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ತನ್ನ ಮಲತಾಯಿ ಯೋಜನೆಯನ್ನು ಮುಂದುವರೆಸಿದೆ. ಅನುದಾನವನ್ನು ಕೊಡದೇ ಕೇವಲ ರಾಜಕಾರಣಕ್ಕಾಗಿ ರಾಜ್ಯದ ಹಕ್ಕನ್ನೇ ಕಸಿದುಕೊಂಡಿದೆ. ಇದರ ವಿರುದ್ಧ ಕರ್ನಾಟಕ ಸರ್ಕಾರವೇ ದೆಹಲಿಗೆ ಹೋಗಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಸಮಸ್ಯೆಗಳು ತಿಳಿಯಲೇ ಇಲ್ಲ. ಇಂತಹ ಹಲವು ಸನ್ನಿವೇಶಗಳ ನಡುವೆಯೂ ರಾಜ್ಯದ ಬಜೆಟ್ ಕರ್ನಾಟಕದ ಜನತೆಗೆ ಒಂದು ರೀತಿಯಲ್ಲಿ ಖಂಡಿತ ಆಶಾಕಿರಣವಾಗಲಿದೆ ಎಂದರು.
ಪಿಂಚಣಿ ಸಮಸ್ಯೆಗೆ ಉತ್ತರ ಸಿಗಲಿದೆ. ಅನುದಾನಿತ ನೌಕರರಿಗೂ ಸಹ ನಿವೃತ್ತಿ ವೇತನ ಸಿಗುವ ಅವಕಾಶವಿದೆ. ಈಗಾಗಲೇ ರಾಜ್ಯ ಸರ್ಕಾರ ಮಧ್ಯಂತರವಾಗಿ ಶೇ. ೧೭ರಷ್ಟು ಪರಿಹಾರ ಒದಗಿಸಿದೆ. ಪೂರ್ಣ ಪ್ರಮಾಣದ ವೇತನ ಆಯೋಗದ ವರದಿ ಜರಿಯಾಗಲಿದೆ. ಒಟ್ಟಾರೆ ನಾಳಿನ ಬಜೆಟ್ ಬಡಜನರ, ಕಾರ್ಮಿಕರ, ಸರ್ಕಾರಿ ನೌಕರರ, ರೈತರ ಪರವಾಗಿ ಬರುತ್ತದೆ ಎಂದರು.
ಪ್ರಮುಖರಾದ ವೈ.ಹೆಚ್. ನಾಗರಾಜ್, ಧೀರರಾಜ್ ಹೊನ್ನವಿಲೆ ಶಿ.ಜು.ಪಾಶ. ಜಿ.ಪದ್ಮನಾಭ್, ಕೃಷ್ಣ, ಇದ್ದರು.