ಇತರೆತಾಜಾ ಸುದ್ದಿರಾಜಕೀಯ

ಸಿಎಂ ಜನತಾ ದರ್ಶನ: ಹರಿದುಬಂದ ಜನಸಾಗರ…

Share Below Link

ಬೆಂಗಳೂರು: ಗೃಹ ಕಚೇರಿ ಕೃಷ್ಣಾ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನತಾ ದರ್ಶನ ಕಾರ್ಯಕ್ರಮ ನಡೆಸುತ್ತಿದ್ದು, ಈ ವೇಳೆ ಅಹವಾಲು ಹೇಳಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಭಾರಿ ಸಂಖ್ಯೆಯಲ್ಲಿ ಜನ ಸಾಗರವೇ ಹರಿದುಬಂದಿದೆ.
ಅಹವಾಲು ಸ್ವೀಕರಿಸಲು ಒಟ್ಟು ೨೦ ಕೌಂಟರ್ ಸ್ಥಾಪಿಸಲಾಗಿದೆ. ವಿಶೇಷಚೇತನರು ಮತ್ತು ಹಿರಿಯ ನಾಗರಿಕರಿಗೆ ಎರಡು ಕೌಂಟರ್‌ಗಳನ್ನು ಮೀಸಲಿರಿಸಿದೆ. ಸ್ವೀಕರಿಸಿದ ಅಹವಾಲುಗಳನ್ನು ಇಲಾಖಾವಾರು ವಿಂಗಡಿಸಿ ತಂತ್ರಾಂಶದಲ್ಲಿ ದಾಖಲಿಸಿ ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಿದ ನಂತರ ಮುಖ್ಯಮಂತ್ರಿಗಳು ಅವರ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸುವರು. ಇದರಂತೆ ಕೌಂಟರ್ ಗಳಲ್ಲಿ ಸರತಿ ಸಾಲಿನಲ್ಲಿ ನಿಂತ ಜನರು, ತಮ್ಮ ಅಹವಾಲು ಸಲ್ಲಿಸುತ್ತಿದ್ದಾರೆ.


ಇಂದು ಮುಖ್ಯಮಂತ್ರಿಗಳ ಪ್ರಥಮ ಜನತಾ ದರ್ಶನ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ ಆಯೋಜಿ ಸಿದ್ದು, ಸದರಿ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರು ಸ್ಥಳದಲ್ಲೇ ಹಾಜರಿದ್ದು ಕುಂದುಕೊರತೆ /ಅಹವಾಲುಗಳ ಮೇಲೆ ಕ್ರಮ ವಹಿಸಲು ಸೌಲಭ್ಯ ಕಲ್ಪಿಸಲಾಗಿದೆ. ಇಂದು ಸಿಎಂಗೆ ಅಹವಾಲು ಸಲ್ಲಿಸಲು ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಭಾರೀ ನೂಕುನುಗ್ಗಲು ಉಂಟಾಗಿತ್ತು.
ಸಾರ್ವಜನಿಕರಿಂದ ಮುದ್ದಾಂ/ಆನ್‌ಲೈನ್‌ನಲ್ಲಿ ಸ್ವೀಕೃತವಾಗುವ ಕುಂದುಕೊರತೆ/ಅಹವಾಲುಗಳನ್ನು ಏಕೀಕೃತ ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ವ್ಯವಸ್ಥೆಯಲ್ಲಿ ದಾಖಲಿಸಿ, ಸ್ವೀಕೃತಿಯನ್ನು ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಸ್ವೀಕೃತಿ ಸಂಖ್ಯೆ ಬಳಸಿ ತಮ್ಮ ಕುಂದುಕೊರತೆ/ಅಹವಾಲಿನ ಸ್ಥಿತಿಗತಿಯನ್ನು ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯಲ್ಲಿ ಅಥವಾ ೧೯೦೨ ಸಂಖ್ಯೆಗೆ ಕರೆಮಾಡಿ ತಿಳಿದುಕೊಳ್ಳಬಹುದು.
ಸ್ವೀಕರಿಸಲಾದ ಕುಂದುಕೊರತೆ/ಅಹವಾಲುಗಳನ್ನು ವಿಷಯದ ಆಧಾರದಲ್ಲಿ ಸಂಬಂಧಿಸಿದ ಇಲಾಖೆಗಳ/ಅಧೀನ ಸಂಸ್ಥೆಗಳ ಅಧಿಕಾರಿಗಳ ಲಾಗಿನ್‌ಗಳಿಗೆ ತಕ್ಷಣ ರವಾನಿಸಲಾಗುತ್ತದೆ. ಮುಖ್ಯಮಂತ್ರಿ ಗಳ ಜನತಾದರ್ಶನ ದಲ್ಲಿ ಸ್ವೀಕೃತವಾದ ಕುಂದುಕೊರತೆ/ಅಹವಾಲುಗಳನ್ನು ಸ್ವಯಂಚಾಲಿತ ವಾಗಿ ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳ ಇ- ಆಫೀಸ್ ಲಾಗಿನ್‌ಗೆ ಕಳುಹಿಸುವ ವ್ಯವಸ್ಥೆ ಅಳವಡಿಸಲಾಗಿದೆ. ಇ- ಆಫೀಸ್‌ನಲ್ಲಿ ಸದರಿ ಕಡತದ ಪ್ರತಿ ಹಂತದ ಚಲನೆಯನ್ನು ಎಪಿಐ ಮೂಲಕ ಏಕೀಕೃತ ಸಾರ್ವಜನಿಕ ಕುಂದು ಕೊರತೆಗಳ ನಿವಾರಣಾ ವ್ಯವಸ್ಥೆಗೆ ಒದಗಿಸಲಾಗುತ್ತದೆ.
ಸ್ವೀಕೃತವಾದ ಅಹವಾಲುಗಳ ಪ್ರಗತಿ ಪರಿಶೀಲಿಸಲು ಪ್ರತ್ಯೇಕ ಡಾಶ್‌ಬೋರ್ಡ್ ಅಭಿವೃದ್ದಿ ಪಡಿಸಲಾಗಿದೆ. ಈ ಡ್ಯಾಶ್‌ಬೋರ್ಡ್ ನಲ್ಲಿ ಇಲಾಖಾ/ಜಿಲ್ಲಾವಾರು ಸ್ವೀಕೃತ ವಾದ ಕುಂದುಕೊರತೆ ಮತ್ತು ಅಹವಾಲುಗಳ ಸಂಖ್ಯೆ, ವಿಲೇ ಮಾಡಲಾದ ಮತ್ತು ಬಾಕಿ ಉಳಿದಿರುವ ಕುಂದುಕೊರತೆ ಮತ್ತು ಅಹವಾಲುಗಳ ವಿವರ ಲಭ್ಯವಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಸೀಮಾಬಾನು ಅವರು ಜಿಲ್ಲಾ ಪಂಚಾಯಿತಿ ತಮ್ಮ ಮನೆಯನ್ನು ಅಕ್ರಮವಾಗಿ ಪ್ರವೇಶ ಮಾಡಿರುವ ಬಗ್ಗೆ ದೂರು ಸಲ್ಲಿಸಿದರು.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಡಿ.ಪಿ.ಭಾಗ್ಯ ಅವರ ಮನೆ ಶೇ.೬೦ ಹಾನಿಯಾಗಿದ್ದು ಶೇ.೧೦೦ರ ಪರಿಹಾರ ಒದಗಿಸಿಕೊಡುವಂತೆ ಮನವಿ ಸಲ್ಲಿಸಿದರು. ಈ ಮನವಿ ಗಳನ್ನು ಆದ್ಯತೆ ಮೇಲೆ ಪರಿಗಣಿಸಿ ಸಮಸ್ಯೆಯನ್ನು ಪರಿಶೀಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.
ಬಸವರಾಜು ಎಂಬುವವರು ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಸಹೋದರ ವೆಂಕಟರಾಜ್ ಅವರ ನೆರವಿಗೆ ಬರುವಂತೆ ಮನವಿ ಮಾಡಿದರು. ಸಿಎಂ ಅವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸ್ಥಳದಲ್ಲಿಯೇ ಒಂದು ಲಕ್ಷ ರೂ. ಮಂಜೂರು ಮಾಡಿದರು.


ಸೀಗೇಹಳ್ಳಿಗೇಟ್ ನಿವಾಸಿ ಸುನಿತ ಅವರ ದೂರು. ಆರೋಗ್ಯ ಹದಗೆಟ್ಟು ವಿಕ್ಟೋರಿಯಾ ಆಸ್ಪತ್ರೆಗೆ ಅ.೨೦ ರಂದು ಹೋಗಿದ್ದೆ. ರಾತ್ರಿಯಿಡೀ ಬೇಧಿ ಆಗಿದ್ದರಿಂದ ನನ್ನ ಬಟ್ಟೆ ಗಲೀಜಗಿತ್ತು. ಇದಕ್ಕೆ ಆಸ್ಪತ್ರೆ ಸಿಬ್ಬಂದಿ ಮಧ್ಯರಾತ್ರಿ ಯಲ್ಲೇ ಆಸ್ಪತ್ರೆಯಿಂದ ತೆರಳುವಂತೆ ಬೆದರಿಸಿದರು. ಆಯಾಸಗೊಂಡಿದ್ದ ನನಗೆ ಗ್ಲೂಕೋಸ್ ಕೂಡ ಹಾಕದೆ ಕೆಟ್ಟದಾಗಿ ವರ್ತಿಸಿದರು ಎಂದು ದೂರಿದರು. ಮುಖ್ಯಮಂತ್ರಿಗಳು ಸ್ಥಳದಲ್ಲೇ ಇದ್ದ ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜವೇದ್ ಅಖ್ತರ್ ಅವರನ್ನು ಕರೆದು ಸಂಬಂಧಪಟ್ಟವರಿಂದ ವಿವರಣೆ ಕೇಳುವಂತೆ ಸೂಚಿಸಿದರು.
ರಾಮನಗರದ ಅಂಧ ವೃದ್ಧ ಷಣ್ಮುಖಪ್ಪ ಅವರು ಎರಡು ಬೇಡಿಕೆಗಳನ್ನು ಸಿಎಂ ಎದುರಿಗಿಟ್ಟರು. ತನ್ನ ಮಗ ವೀರೇಶ್‌ಗೆ ಕೆಎಂಎಫ್ ನಲ್ಲಿ ಕೆಲಸ ಕಾಯಂ ಆಗಬೇಕು ಮತ್ತು ಸ್ವಯಂ ಉದ್ಯೋಗ ಮಾಡಲು ಬ್ಯಾಂಕ್‌ನಿಂದ ಸಾಲ ಸವಲತ್ತು ಒದಗಿಸಿಕೊಡಬೇಕು ಎನ್ನುವ ಬೇಡಿಕೆಗಳನ್ನು ಮುಂದಿಟ್ಟರು.
ಎರಡೂ ಬೇಡಿಕೆಗೆ ಸ್ಪಂದಿಸಿದ ಸಿಎಂ ಎಸಿಎಸ್ ಮತ್ತು ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್ ಅವರನ್ನು ಕರೆದು ಸಾಲ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲು ಇರುವ ಮಾರ್ಗ ಗಳನ್ನು ಪರಿಶೀಲಿಸುವಂತೆ ಸೂಚಿಸಿ ದರು. ಪುತ್ರನ ಕೆಲಸ ಕಾಯಂಗೂ ಕೆಎಂಎಫ್ ಎಂಡಿ ಅವರಿಗೆ ಸೂಚಿಸುವುದಾಗಿ ಹೇಳಿದರು.
ಒತ್ತುವರಿ, ರಸ್ತೆ ನಿರ್ಮಾಣ, ಗೃಹ ಲಕ್ಷ್ಮಿ ಯೋಜನೆಯಡಿ ಹಣ ಬಂದಿಲ್ಲ, ಪಡಿತರ ಸಮಸ್ಯೆ, ವರ್ಗವಾದರೂ ಇನ್ನು ಬಿಡುಗಡೆ ಮಾಡಿಲ್ಲ ಹೀಗೆ ಅನೇಕ ಸಮಸ್ಯೆಗಳು ಅಹವಾಲಿನಲ್ಲಿ ಕೇಳಿಬಂದವು. ರಾಜ್ಯದಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದರು. ಪ್ರತಿಯೊಬ್ಬ ಅರ್ಜಿದಾರರ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿದ ಮುಖ್ಯಮಂತ್ರಿ ಗಳು ನೇರವಾಗಿ ಆಯಾ ಜಿಲ್ಲೆಯ ಡಿಸಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು.ಮಧ್ಯಾಹ್ಮ ೧ ಗಂಟೆ ಸುಮಾರಿಗೆ ವಿವಿಧ ಇಲಾಖೆವಾರು ಸುಮಾರು ೧,೧೪೭ ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ ತಕ್ಷಣವೇ ೨೦ ಅರ್ಜಿಗಳನ್ನು ಸ್ಥಳದಲ್ಲಿ ಪರಿಹರಿಸಲಾಯಿತು.
ಕುರುಬರಿಗೆ ಪೂಜೆಗೆ ಅವಕಾಶ ಕೊಡಿ: ಕಲಬುರಗಿ ತಾಲೂಕಿನ ಮೇಳಕುಂದಾ(ಬಿ) ಗ್ರಾಮದಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಸರ್ವೆ ನಂ.೧೧೪ರಲ್ಲಿ ೩೦ ಎಕರೆ ಪ್ರದೇಶದಲ್ಲಿ ಶ್ರೀ ಮಾಳಿಂಗರಾಯ ದೇವಸ್ಥಾನ ಇದ್ದು, ತಲೆ ತಲಾಂತರದಿಂದ ಕುರುಬ ಸಮುದಾಯದವರು ದೇವಸ್ಥಾನದ ಪೂಜೆ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚೆಗೆ ಅನ್ಯ ಸಮುದಾಯದವರು ಇದನ್ನು ಅಕ್ರಮಿಸಿಕೊಂಡು ಕುರುಬ ಸಮುದಾಯದ ಪೂಜಾರಿಗಳ ಮೇಲೆ ಹಲ್ಲೆ ಮಾಡಿದ್ದು, ಇದನ್ನು ನಿಯಂತ್ರಿಸಿ ಕುರುಬ ಸಮುದಾಯದವರಿಗೆ ಮೊದಲಿನಂತೆ ದೇವಸ್ಥಾನದಲ್ಲಿ ಪೂಜೆ ಮಾಡಲು ಅವಕಾಶ ಮಾಡಿ ಕೊಡಬೇಕು ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಹಾದೇವಪ್ಪ ಮುತ್ಯಾ ಅವರು ಸಿ.ಎಂ. ಬಳಿ ಮನವಿ ಮಾಡಿದ್ದು, ಈ ಸಂಬಂಧ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಿ.ಎಂ. ಕಚೇರಿಯಿಂದ ಡಿ.ಸಿ. ಅವರಿಗೆ ನಿರ್ದೇಶನ ನೀಡಲಾಯಿತು.


ಜನತಾದರ್ಶನಕ್ಕೆ ಬ್ರೇಕ್ ಕೊಡದೇ ಸ್ಥಳದಲ್ಲೇ ಊಟ ಸೇವಿಸಿದ ಸಿಎಂ: ಮಧ್ಯಾಹ್ನದ ಊಟದ ಬಿಡುವಿನಲ್ಲಿ ಊಟಕ್ಕೆಂದು ಮನೆಗೆ ತೆರಳಲು ಎದ್ದ ಮುಖ್ಯಮಂತ್ರಿಗಳು, ಬಳಿಕ ಅಹವಾಲು ಸಲ್ಲಿಸಲು ಬಂದಿರುವವರ ಸಂಖ್ಯೆ ಇನ್ನೂ ಸಿಕ್ಕಾಪಟ್ಟೆ ಇದೆ ಎಂದು ತಿಳಿದು ಅಹವಾಲು ಸ್ವೀಕರಿಸುವ ಟೇಬಲ್ಲಿಗೇ ಊಟ ತರಿಸಿಕೊಂಡು ಅಲ್ಲೇ ಕುಳಿತು ಊಟ ಸೇವಿಸಿದರು.
ಚಿಕ್ಕಮಗಳೂರು ಜಿಲ್ಲೆ ಕರ್ಕಿಪೇಟೆಯ ದಿನೇಶ್ ಎಂಬುವವರು ೪೦ ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಬಂದಿದ್ದು, ಸೆಕ್ಷನ್ ೫೦, ೫೩ ಹಾಗೂ ೫೭ ರಡಿ ಸಕ್ರಮಗೊಳಿಸಲು ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಕುರಿತು ಯಾವುದೇ ರೀತಿಯ ಕ್ರಮ ಆಗಿಲ್ಲ. ಸಾಗುವಳಿ ಚೀಟಿ ಒದಗಿಸುವಂತೆ ಮರು ಮನವಿ ಯನ್ನು ಸಿಎಂಗೆ ಸಲ್ಲಿಸಿದರು.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಗಳು ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆನ್ ಲೈನ್ ಮೂಲಕ ಮುಖ್ಯಮಂತ್ರಿಗಳು ಚಿಕ್ಕಮಗಳೂರು ಡಿಸಿ ಗೆ ಸೂಚಿಸಿದರು.
ಹುಣಸೂರಿನ ಕಲ್ಲಹಳ್ಳಿ ಪಂಚಾಯ್ತಿಯ ಲಕ್ಷ್ಮೀಬಾಯಿ ಎನ್ನುವವರು ಅಲೆಮಾರಿ ಡೋಂಗ್ರಿ ಗೆರೆಸಿಯಾ ಸಮುದಾಯದವರಿಗೆ ೪೦ ಮನೆಗಳು ಮಂಜೂರಾಗಿವೆ. ಇವರಿಗೆ ಮನೆ ಕಟ್ಟಲು ಮಂಜೂರಾತಿ ನೀಡುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಿಎಂ ಅಲೆಮಾರಿ ಅಭಿವೃದ್ಧಿ ನಿಗಮದ ಎಂಡಿ ಅವರನ್ನು ಕರೆದು, ಅರ್ಜಿಯನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸಿ ತಮಗೆ ವರದಿ ನೀಡಬೇಕು ಎಂದು ಸೂಚಿಸಿದರು.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಫುಡ್ ಪಾರ್ಕ್‌ನಲ್ಲಿ ಉದ್ಯಮಿ ಮಲ್ಲೇಶಪ್ಪ ಸಿದ್ದಪ್ಪ ಕಲ್ಲೂರ ಅವರು ನಿವೇಶನ ಖರೀದಿಗೆ ನಿಗದಿತ ಹಣ ಪಾವತಿ ಮಾಡಿ ೭ ವರ್ಷವಾದರೂ ಇದುವರೆಗೆ ನೊಂದಣಿಯಾಗಿಲ್ಲ. ಕೂಡಲೆ ನಿವೇಶನ ಉದ್ಯಮಿದಾರರ ಹೆಸರಿಗೆ ನೊಂದಾಯಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿ ಡಿಸಿ ಬಿ.ಫೌಜಿಯಾ ತರನ್ನುಮ್ ಅವರಿಗೆ ಸೂಚನೆ ನೀಡಿದರು.