ಚಿಣ್ಣ ಬಣ್ಣ ಬೇಸಿಗೆ ರಂಗ ತರಬೇತಿ ಶಿಬಿರ…
ಶಿಕಾರಿಪುರ: ಏ.೧೦ ರಿಂದ ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ಚಿಣ್ಣ ಬಣ್ಣ ಬೇಸಿಗೆ ರಂಗ ಶಿಬಿರವನ್ನು ಆಯೋಜಿಸಲಾಗಿದ್ದು ಹೆಸರಾಂತ ಸಿನಿಮಾ ಕಲಾವಿದರು, ವೃತ್ತಿಪರ ಕಲಾವಿದರಿಂದ ಸತತ ೨೧ ದಿನಗಳ ಕಾಲ ನಡೆಯಲಿರುವ ಶಿಬಿರದಲ್ಲಿ ರಂಗಭೂಮಿಯಲ್ಲಿನ ವಿವಿಧ ಪ್ರಕಾರಗಳ ಬಗ್ಗೆ ಶಿಬಿರಾರ್ಥಿಗಳಿಗೆ ಪರಿಚಯಿಸುವ ಮೂಲಕ ಕಲೆ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಬಹು ಉತ್ಕೃಷ್ಟ ಉದ್ದೇಶ ವನ್ನು ಶಿಬಿರ ಹೊಂದಿದೆ ಎಂದು ಗುಡಿ ಸಾಂಸ್ಕೃತಿಕ ಕೇಂದ್ರದ ಸಂಸ್ಥಾಪಕ ಹಾಗೂ ರಂಗಾಯಣದ ಮಾಜಿ ನಿರ್ದೇಶಕ ಇಕ್ಬಾಲ್ ಅಹ್ಮದ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಆಧುನಿಕತೆಯ ಬದುಕಿನಲ್ಲಿ ಮಕ್ಕಳಿಗೆ ಮೊಬೈಲ್ ಗೀಳು ಹೆಚ್ಚಾಗಿದ್ದು,ಇದರಿಂದಾಗಿ ನಾಡಿನ ಶ್ರೀಮಂತ ಸಾಹಿತ್ಯ,ಜನಪದ ಕಲೆ, ಸಂಸ್ಕೃತಿ, ನಾಟಕ, ಗ್ರಾಮೀಣ ಕ್ರೀಡೆ ಮತಿತಿತರ ಪ್ರಕಾರಗಳು ವಿನಾಶದತ್ತ ಸಾಗುತ್ತಿದೆ. ಈ ನಿಟ್ಟಿನಲ್ಲಿ ಯುವ ಪೀಳಿಗೆಗೆ ಪರಿಚಯಿಸಿ ಉಳಿಸಿ ಬೆಳೆಸುವ ಜವಾಬ್ದಾರಿ ನಿರ್ವಹಿಸ ಬೇಕಾಗಿದೆ ಎಂದು ತಿಳಿಸಿದರು.
ಗುಡಿ ಸಾಂಸ್ಕೃತಿಕ ಕೇಂದ್ರ ರಂಗಭೂಮಿಯ ಎಲ್ಲ ಪ್ರಕಾರಗಳ ಬಗ್ಗೆ ತರಬೇತಿಯನ್ನು ನೀಡುವ ದಿಸೆಯಲ್ಲಿ ಸುಸಜ್ಜಿತವಾಗಿ ಸಿದ್ದಗೊಳಿಸಲಾಗಿದೆ. ರಂಗಭೂಮಿ ಕಲೆ ವಿಶಾಲವಾಗಿದ್ದು ಚಿತ್ರಕಲೆ ನಾಟಕ ನೃತ್ಯ ಯಕ್ಷಗಾನ ಮೂಕಾಭಿನಯ ರಂಗಗೀತೆ ಅಭಿನಯ ಮತ್ತಿತರ ವಿವಿಧ ಪ್ರಕಾರಗಳ ಸಂಗಮವಾಗಿದೆ ಇದರೊಂದಿಗೆ ಕರಕುಶಲ ತಯಾರಿ, ಜಾನಪದ ಹಾಡು, ಗಾಳಿಪಟ ಹಾರಿಸುವುದು, ಬರಿಗಣ್ಣಿನಿಂದ ಆಕಾಶದಲ್ಲಿನ ನಕ್ಷತ್ರಗಳ ವೀಕ್ಷಣೆ, ಆವಿ ಮಣ್ಣಿನಲ್ಲಿ ಮುಖವಾಡ, ಗೊಂಬೆ ತಯಾರಿಕೆ, ಹೆಸರಾಂತ ಸಿನಿಮಾ ವೀಕ್ಷಣೆ ಮತ್ತಿತರ ಪ್ರಕಾರಗಳ ಬಗ್ಗೆ ಶಿಬಿರದಲ್ಲಿ ನೀನಾಸಂ, ಹಿರಿ ಕಿರಿ ಸಿನಿಮಾ ಕಲಾವಿದ ರಿಂದ ತರಬೇತಿ ನೀಡಲಾ ಗುವುದು ಎಂದು ತಿಳಿಸಿದರು.
೬ ರಿಂದ ೧೭ ವರ್ಷದ ಮಕ್ಕಳಿ ಗಾಗಿ ಸತತ ೨೧ ದಿನ ಆಯೋಜಿಸ ಲಾದ ಬೇಸಿಗೆ ಶಿಬಿರದಲ್ಲಿ ನಿತ್ಯ ಬೆಳಿಗ್ಗೆ ೯ ರಿಂದ ಸಂಜೆ ೫ ರವರೆಗೆ ಶಿಬಿರ ನಡೆಯಲಿದ್ದು, ನಂತರದಲ್ಲಿ ಸಾವಯುವ ಕೃಷಿ ಪದ್ದತಿ, ದೇಶೀ ವಸ್ತುಗಳ ಪ್ರೋತ್ಸಾಹಿಸುವ ದಿಸೆಯಲ್ಲಿ ಗುಡಿ ಸಂತೆ ನಡೆಯಲಿದೆ ಸಾವಯುವ ಅಕ್ಕಿ, ಸಕಲೇಶಪುರದ ಕಾಫೀ, ಟೀ ಪುಡಿ, ಎಲಕ್ಕಿ, ಶುದ್ದ ಕಬ್ಬಿನ ಹಾಲು ಕರಕುಶಲ ವಸ್ತುಗಳು ಗುಡಿ ಸಂತೆಯಲ್ಲಿ ಮಾರಾಟ ಮಾಡ ಲಾಗುವುದು ಎಂದು ತಿಳಿಸಿದರು.
ಮೊಬೈಲ್ ಟೀವಿ ಇಂಟರ್‌ನೆಟ್ ಎಂಬ ಬ್ರಾಮಕ ಲೋಕದಲ್ಲಿ ಬದುಕಿನ ಅಮೂಲ್ಯ ಬಾಲ್ಯವನ್ನು ಕಳೆದುಕೊಳ್ಳುತ್ತಿರುವ ಇಂದಿನ ಪೀಳಿಗೆಗೆ ಅಪ್ಪಟ ದೇಸೀ ಸಂಸ್ಕೃತಿಯನ್ನು ಪರಿಚಯಿಸಿ ಉಳಿಸುವುದು ತುರ್ತು ಅಗತ್ಯ ವಾಗಿದೆ ಸಮಗ್ರ ರಂಗಭೂಮಿ ಬದುಕಿನ ನೈಜ ಶಿಕ್ಷಣವಾಗಿದ್ದು, ರಂಗಭೂಮಿ ಮೂಲಕ ಶರೀರ, ಶಾರೀರ, ಆಲೋಚನೆಯ ಎಲ್ಲ ಮಜಲುಗಳ ಪರಿಚಯವಾಗಲಿದೆ ಎಂದು ತಿಳಿಸಿ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ೮೦೭೩೧೬೯೮೨೫, ೯೦೧೯೫೧೮೭೩೮, ೯೭೩೯೪೮೯೭೩೦ ಸಂಪರ್ಕಿಸುವಂತೆ ತಿಳಿಸಿದರು.
ಗುಡಿ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಕೆ.ಎಸ್ ಹುಚ್ರಾಯಪ್ಪ ಮಾತನಾಡಿ, ಮಕ್ಕಳಲ್ಲಿನ ಸುಪ್ತ ಪ್ರತಿಭೆ ಕೇವಲ ಶಿಕ್ಷಣ ಹಾಗೂ ಅತ್ಯಧಿಕ ಅಂಕಗಳಿಕೆಗೆ ಮಾತ್ರ ಸೀಮಿತವಾಗಿದ್ದು ಇದರೊಂದಿಗೆ ಕಲೆ ಸಾಹಿತ್ಯ ಸಾಂಸ್ಕೃತಿಕವಾಗಿ ಸದೃಡ ಸಮಾಜ ನಿರ್ಮಿಸಲು ಗುಡಿ ಚಿಣ್ಣ ಬಣ್ಣ ಬೇಸಿಗೆ ಶಿಬಿರವನ್ನು ಹಮ್ಮಿ ಕೊಂಡಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಶಿಬಿರದ ಉಸ್ತುವಾರಿ ನಾಗರಾಜಪ್ಪ ಇದ್ದರು.