ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ವಂಚಿಸಿದ ಕೇಂದ್ರ ಸರ್ಕಾರ: ಅಂಚೆ ಸೇವಕರ ಆಕ್ರೋಶ

Share Below Link

ಶಿಕಾರಿಪುರ: ಕಮಲೇಶ ಚಂದ್ರ ಸಮಿತಿಯ ವರದಿಯನ್ನು ಸಂಪೂರ್ಣ ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ ನೀಡಿದ ವಾಗ್ದಾನ ವನ್ನು ಉದ್ದೇಶಪೂರ್ವಕವಾಗಿ ಮರೆತು ಹಲವು ಬೇಡಿಕೆಯನ್ನು ಈಡೇರಿಸದೆ ಗ್ರಾಮೀಣ ಅಂಚೆ ಸೇವಕರನ್ನು ಮೋಸಗೊಳಿಸುವ ಹುನ್ನಾರ ರೂಪಿಸಲಾಗಿದೆ ಎಂದು ಇಲ್ಲಿನ ಗ್ರಾಮೀಣ ಅಂಚೆ ಸೇವಕರ ಸಂಘದ ಸದಸ್ಯರು ಅಧ್ಯಕ್ಷ ಪರಶುರಾಮ ನೇತೃತ್ವದಲ್ಲಿ ಮಂಗಳವಾರ ಪಟ್ಟಣದ ಪ್ರಧಾನ ಅಂಚೆ ಕಚೇರಿ ಮುಂಭಾಗ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ತಾ.ಸಂಘದ ಅಧ್ಯಕ್ಷ ಪರಶುರಾಮ ಮಾತನಾಡಿ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಇಲಾಖೆ ಯಲ್ಲಿ ಬ್ರಿಟೀಷರ ಕಾಲದಲ್ಲಿನ ಕಾನೂನು ಹಾಸುಹೊಕ್ಕಾಗಿದ್ದು ನಿತ್ಯ ೫ ಗಂಟೆ ಸೇವೆ ನಿಗದಿಪಡಿಸಿ ೮ ಗಂಟೆಯವರೆಗೆ ದುಡಿಸಲಾಗುತ್ತಿದೆ. ೧೫ ರಿಂದ ೧೬ ಹಳ್ಳಿಗೆ ಓರ್ವ ಪೋಸ್ಟರನ್ನರ್ ನೇಮಿಸಿ ಆತ ಸಂಜೆ ೪ ರೊಳಗಾಗಿ ೧೫ ಸೆಕೆಂಡಿಗೆ ಒಂದು ಪತ್ರ ಬಟವಾಡೆ ಮಾಡುವಂತೆ ಕಾನೂನು ಇಂದಿಗೂ ಚಾಲ್ತಿಯಲ್ಲಿದೆ ಸಾಮಾಜಿಕ ಭದ್ರತೆ ಇಲ್ಲದೆ ನೌಕರರು ಇಂತಹ ಅವೈeನಿಕ ಕಾನೂನು ಸಹಿಸಿಕೊಳ್ಳಲಾಗದೆ ಸಂಘಟನೆ ಮೂಲಕ ನ್ಯಾಯಕ್ಕಾಗಿ ಹೋರಾಟ ಹಮ್ಮಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ತಲುಪಿದ್ದೇವೆ ಎಂದು ತಿಳಿಸಿದರು.
ಗ್ರಾಮೀಣ ಅಂಚೆ ಸೇವಕರ ಹೋರಾಟಕ್ಕೆ ಮಣಿದು ಕೇಂದ್ರ ೨೦೧೬ರಲ್ಲಿ ಕಮಲೇಶ್ ಚಂದ್ರ ಸಮಿತಿ ಆಯೋಗ ರಚಿಸಿ ಗ್ರಾಮೀಣ ಅಂಚೆ ನೌಕರರ ಸ್ಥಿತಿಗತಿ ಬಗ್ಗೆ ಸಮಗ್ರ ಪರಿಶೀಲನೆ ಜತೆಗೆ ಅಧ್ಯಯನ ಕೈಗೊಂಡು ವರದಿ ಸಲ್ಲಿಸಿ ೭ ವರ್ಷ ವಾಗಿದ್ದು ವರದಿಯನ್ನು ಸಂಪೂರ್ಣ ವಾಗಿ ಜರಿಗೊಳಿಸದೆ ಕೇಂದ್ರ ಸರ್ಕಾರ ಹಾಗೂ ಅಂಚೆ ಇಲಾಖೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ದೂರಿದ ಅವರು, ೨೦೨೨ರ ಜೂನ್ ೧೪ ರಂದು ರಾಜಧಾನಿ ದೆಹಲಿಯಲ್ಲಿ ನಡೆದ ನೌಕರರ ಐತಿಹಾಸಿಕ ಅನಿರ್ಧಿಷ್ಟಾವಧಿ ಹೋರಾಟ, ಉಪವಾಸ ಸತ್ಯಾಗ್ರಹಕ್ಕೆ ಮಣಿದು ಸಂಘದ ರಾಷ್ಟ್ರಮಟ್ಟದ ನಾಯಕರ ಜತೆ ಅಂಚೆ ಇಲಾಖೆ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಎಲ್ಲ ಬೇಡಿಕೆಗಳನ್ನು ತಿಂಗಳೊಳಗಾಗಿ ಈಡೇರಿಸುವ ಬರವಸೆ ನೀಡಿ ಉಪವಾಸ ಸತ್ಯಾಗ್ರಹವನ್ನು ಮೊಟಕು ಗೊಳಿಸಿದ್ದು, ಸಮಿತಿ ವರದಿ ಸಲ್ಲಿಸಿ ೫ ವರ್ಷ ಕಳೆದರೂ ಹಲವು ಬೇಡಿಕೆಗಳು ಮಾತ್ರ ಈಡೇರಿಸದೆ ಕೇಂದ್ರ ದ್ರೋಹ ಬಗೆದಿದೆ ಎಂದು ಆಪಾಧಿಸಿದರು.
ನಿತ್ಯ ೮ ಗಂಟೆ ಕಾಲ ಕೆಲಸ ನೀಡಿ ಪಿಂಚಣಿ ಸಹಿತ ಎಲ್ಲ ಸೌಲಭ್ಯವನ್ನು ಒದಗಿಸಬೇಕು, ಸೇವಾ ಹಿರಿತನದ ಆಧಾರದಲ್ಲಿ ೧೨/೨೪/೩೬ ವರ್ಷ ಸೇವೆ ಸಲ್ಲಿಸಿದ ಗ್ರಾಮೀಣ ಅಂಚೆ ನೌಕರರಿಗೆ ವಿಶೇಷ ಇನ್‌ಕ್ರಿಮೆಂಟ್ ನೀಡಬೇಕು, ಗ್ರೂಪ್ ಇನ್ಶುರೆನ್ಸ್ ಕವರೇಜ್ ಮೊತ್ತ ಹಾಗೂ ಜಿಡಿಎಸ್ ಗ್ರಾಚ್ಯುಟಿ ಹಣವನ್ನು ತಲಾ ರೂ.೫ ಲಕ್ಷಕ್ಕೆ ಹೆಚ್ಚಿಸಬೇಕು, ೧೮೦ ದಿನ ರಜೆ ಉಳಿಸಿಕೊಳ್ಳಲು ಅವಕಾಶ ನೀಡಬೇಕು, ಜಿಡಿಎಸ್ ಮತ್ತು ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು ಎಂದು ಆಗ್ರಹಿಸಿ ನೌಕರರ ಬೇಡಿಕೆ ತುರ್ತಾಗಿ ಈಡೇರಿಸಲು ವಿಫಲವಾದಲ್ಲಿ ಕೇಂದ್ರ ಸಂಘಟನೆ ಹಮ್ಮಿಕೊಳ್ಳುವ ಉಗ್ರ ಪ್ರತಿಭಟನೆ ಬಿಸಿ ಎದುರಿಸ ಬೇಕಾಗಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರು ಕೇಂದ್ರದ ವಿರುದ್ದ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಬದಲ್ಲಿ ಸಂಘದ ಉಪಾಧ್ಯಕ್ಷ ಬಿ. ಸುಭಾಷಚಂದ್ರ ಮುಖಂಡ ಸೋಮೋಜಿರಾವ್, ಪ್ರತಿಭಾ, ಸುಶ್ಮಿತಾ, ಪುಷ್ಪಾ, ಕೆ.ಟಿ ಈರಪ್ಪ, ಡಿ.ಬಸವರಾಜ, ಪಾರ್ವತಮ್ಮ ಸುರಗೀಹಳ್ಳಿ, ಪ್ರತಿಭಾ, ರೇಷ್ಮಾ, ಅನುಷಾ, ರೂಪ, ಮಂಜುನಾಥ, ಅರವಿಂದ ಸಾಲೂರು ಮತ್ತಿತರರು ಹಾಜರಿದ್ದರು.