ಜಿಲ್ಲಾ ಸುದ್ದಿತಾಜಾ ಸುದ್ದಿ

ಸಕ್ರೆಬೈಲ್ ಆನೆ ಬಿಡಾರದಲ್ಲಿ ಸಂಭ್ರಮದ ವಿಶ್ವ ಆನೆಗಳ ದಿನಾಚರಣೆ…

Share Below Link

ಶಿವಮೊಗ್ಗ : ಸಕ್ರೆಬೈಲಿನ ಆನೆಬಿಡಾರದಲ್ಲಿ ಇಂದು ಸಂಭ್ರಮದ ವಾತಾವರಣ. ಆನೆ ಗಳನ್ನು ಸಿಂಗರಿಸಿ, ಪೂಜ ಕಾರ್ಯ ನೆರವೇರಿಸಿ, ಆನೆಗಳಿಗೆ ವಿಶೇಷ ತಿನಿಸುಗಳಾದ ಹಣ್ಣು-ಹಂಪಲು, ಕಬ್ಬು, ತರಕಾರಿಗಳನ್ನು ನೀಡಲಾ ಯಿತು. ಇಂದು ವಿಶ್ವ ಆನೆಗಳ ದಿನಾಚರಣೆ. ಇದರ ಅಂಗವಾಗಿ ಶಿವಮೊಗ್ಗ ವನ್ಯಜೀವಿ ವಿಭಾಗ, ಶಿವಮೊಗ್ಗ ವೃತ್ತದ ವತಿಯಿಂದ ಸಕ್ರೆಬೈಲಿನ ಆನೆ ಬಿಡಾರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಕ್ರೆಬೈಲಿನ ಮೊರಾರ್ಜಿ ಶಾಲೆಯಿಂದ ಆನೆ ಬಿಡಾರದವರೆಗೆ ಶಾಲಾ ವಿದ್ಯಾರ್ಥಿಗಳು ಮತ್ತು ಅಧಿಕಾರಿ/ಸಿಬ್ಬಂದಿ ವರ್ಗದಿಂದ ಅರಣ್ಯ ಸಂರಕ್ಷಣೆ ಕುರಿತು ಜಗೃತಿ ಮೂಡಿಸುವ ಜಥಾ ಕಾರ್ಯಕ್ರಮ ನಡೆಯಿತು.


ನಂತರ ಆನೆಗಳ ಬಿಡಾರದಲ್ಲಿ ಪೂಜ ಕಾರ್ಯ ನಡೆದು, ಆನೆಗಳಿಗೆ ವಿಶೇಷ ತಿನಿಸುಗಳಾದ, ವಿವಿಧ ರೀತಿಯ ಹಣ್ಣು-ಹಂಪಲು, ಕಬ್ಬು, ತರಕಾರಿಗಳನ್ನು ಅಧಿಕಾರಿಗಳು, ದಾನಿಗಳು ನೀಡಿದರು.
ವೇದಿಕೆ ಕಾರ್ಯಕ್ರಮವನ್ನು ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಹನುಮಂತಪ್ಪ ಉದ್ಘಾಟಿಸಿದರು. ಐಯುಸಿಎನ್ ಎಸ್‌ಎಸ್‌ಸಿ ಏಷಿಯನ್ ಎಲಿಫೆಂಟ್ ಸ್ಟೆಷಲಿಸ್ಟ್ ಗ್ರೂಪ್ ವತಿಯಿಂದ ಈ ಸಂಸ್ಥೆಯ ಉಪಾಧ್ಯಕ್ಷೆ ಅಮೇರಿಕಾದ ಹೈಡಿ ರಿಡಲ್ ಅವರು ವೆಬಿನಾರ್ ಮೂಲಕ ಕೇರ್ ಆಂಡ್ ಮ್ಯಾನೇಜ್ ಮೆಂಟ್ ಆಫ್ ಎಕ್ಸ್- ಸಿಟು ಎಲಿಫೆಂಟ್ಸ್ ಕುರಿತು ಅಧಿಕಾರಿಗಳು/ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕೃಷ್ಣ ಪಟಗಾರ್ ಮಾತನಾಡಿ, ಆನೆಗಳು ಮತ್ತು ಅವುಗಳ ಆವಾಸಸ್ಥಳಗಳ ಸಂರಕ್ಷಣೆ, ಆನೆಗಳ ಪ್ರಾಮುಖ್ಯತೆ, ಮಾನವನೊಂದಿಗೆ ಆನೆಗಳ ಸಂಬಂಧ ಕುರಿತು ತಿಳಿಸುವುದು ವಿಶ್ವ ಆನೆಗಳ ದಿನಾಚರಣೆ ಉದ್ದೇಶವಾಗಿದೆ. ಸಕ್ರೆಬೈಲಿನಲ್ಲಿ ಆನೆಬಿಡಾರ ಇರುವುದರಿಂದ ಇಲ್ಲಿ ವಿಶ್ವ ಆನೆಗಳ ದಿನಾಚರಣೆ ಆಯೋಜಿಸಿದ್ದು, ಆನೆಗಳನ್ನು ಸಿಂಗರಿಸಿ ಪೂಜೆ ಮಾಡಿ, ವಿಶೇಷ ತಿನಿಸುಗಳನ್ನು ನೀಡುವ ಮೂಲಕ ಆನೆಗಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ ಆನೆಗಳ ಕುರಿತು ಜಗೃತಿ ಮೂಡಿಸಲು ಇಲ್ಲಿಯ ಮೊರಾರ್ಜಿ ಶಾಲಾ ಮಕ್ಕಳಿಂದ ಜಥಾ ಕಾರ್ಯಕ್ರಮ ನಡೆಸಲಾಗಿದೆ. ಆನೆಗಳ ಸಂರಕ್ಷಣೆ, ಮಹತ್ವದ ಕುರಿತು ವೆಬಿನಾರ್, ವೈದ್ಯಾಧಿಕಾರಿಗಳಿಂದ ಮಾವುತರು ಮತ್ತು ಕಾವಾಡಿಗರಿಗೆ ಆನೆ ಸೆರೆ ಹಿಡಿಯುವುದು, ಅವುಗಳೊಂದಿ ಗಿನ ಸಂಬಂಧದ ಕುರಿತು ತರಬೇತಿ, ತಜ್ಞರಿಂದ ಆನೆ ಕುರಿತು ಉಪನ್ಯಾಸ ನಡೆಯಲಿದೆ. ಆನೆ ಗಣತಿ ಪ್ರಕಾರ ನಮ್ಮ ರಾಜ್ಯ ಅತಿ ಹೆಚ್ಚು ಆನೆಗಳನ್ನು ಹೊಂದಿದೆ. ಸಕ್ರೆಬೈಲಿನಲ್ಲಿ ೨೦ ಆನೆಗಳಿವೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ಎನ್‌ಜಿಓ ಜೀವ್(ಜೆಐವಿ)ನ ಡಾ.ಮಮತಾ ಇವರು ಆನೆ ಮತ್ತು ಮಾನವನ ಸಹ ಅಸ್ತಿತ್ವದ ಕುರಿತು ಉಪನ್ಯಾಸ ನೀಡಿದರು. ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಪರಿಸರ ನಾಗರಾಜ್ ಆನೆಗಳ ಆವಾಸಸ್ಥಳ ಗಳು ಮತ್ತು ಅವುಗಳ ಪ್ರಾಮುಖ್ಯತೆ ಕುರಿತು ಮಾತನಾಡಿದರು.
ವನ್ಯಜೀವಿಗಳ ರಕ್ಷಣೆ ಹಾಗೂ ಪಾಲನೆಗೆ ಸಮರ್ಪಿತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಶು ವೈದ್ಯಾಧಿಕಾರಿಗಳಾದ ಡಾ.ವಿನಯ್, ಡಾ. ಮುರಳಿ ಮನೋಹರ್ ಮತ್ತು ಡಾ.ಕಲ್ಲಪ್ಪ ಇವರನ್ನು ಸನ್ಮಾನಿಸಲಾಯಿತು.
ಆನೆ ಬಿಡಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೋಮಣ್ಣ ಆನೆಯ ಮಾವುತರಾದ ಬಸವರಾಜು .ಬಿ ಹಾಗೂ ಕೃಷ್ಣ ಆನೆಯ ಕಾವಾಡಿಗ ಸಿದ್ದಿಕ್ ಪಾಷಾರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗಾಜನೂರು ಗ್ರಾ.ಪಂ ಅಧ್ಯಕ್ಷರಾದ ನಾಗರಾಜ್, ಕಾರ್ಗಲ್ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಸುರೇಶ್, ಮೊರಾರ್ಜಿ ಶಾಲೆಯ ಪ್ರಾಂಶುಪಾಲರಾದ ಲೋಕೇಶ್ ದಳವಾಯಿ, ತುಂಗ ಅಭಿವೃದ್ದಿ ಸಮಿತಿ ಅಧ್ಯಕ್ಷ ವೀರಭದ್ರ, ಇತರೆ ಅಧಿಕಾರಿ/ಸಿಬ್ಬಂದಿ, ಜೀವ್ ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.