ಪೊಲೀಸರ ತಾರತಮ್ಯ ನಿಲುವಿನ ವಿರುದ್ಧ ಸಿಡಿದೆದ್ದ ಬಿಜೆಪಿ…
ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆ ಕಾನೂನು ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಇಂದು ಬಿಜೆಪಿ ಪ್ರಮುಖರು ಜಿಲ್ಲಾಡಳಿತ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ನೀಡಿ ಆಕ್ರೋಶ ಹೊರಹಾಕಿದರು.
ಜು. ೨೬ರಂದು ಜಿಪಂ ಸಭಾಂಗಣ ದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶಿಕ್ಷಣ ಸಚಿವರ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶಿಸಿ ಸಭೆಗೆ ಅಡ್ಡಿಪಡಿಸಿದ್ದರು ಎಂಬ ಕಾರಣಕ್ಕೆ ಮೋರ್ಚಾ ಕಾರ್ಯಕರ್ತರನ್ನು ಬಂಧಿಸಿ ಅಂದು ಸಂಜೆವರೆಗೆ ಜಯನಗರ ಠಾಣೆಯ ಲ್ಲಿರಿಸಿದ್ದು, ಬಳಿಕ ಠಾಣೆಯ ಪಿಎಸ್‌ಐ ಕರ್ತವ್ಯಕ್ಕೆ ಅಡ್ಡಿಪಡಿಸಿ ದ್ದಾರೆ ಎಂದು ದೂರು ನೀಡಿದ ಮೇರೆಗೆ ಸುಮೊಟೋ ಕೇಸ್ ದಾಖಲಿಸಿಕೊಂಡು, ಯುವ ಮೋರ್ಚಾ ಕಾರ್ಯಕರ್ತರ ಮೇಲೆ ವಿವಿಧ ಸೆಕ್ಷನ್‌ಗಳನ್ನು ಹಾಕಿ ಬಳಿಕ ಬಿಡುಗಡೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ ಮತ್ತು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹಾಗೂ ಇನ್ನಿತರ ನಾಯಕರು ಮತ್ತು ಕಾರ್ಯಕರ್ತರು ಠಾಣೆ ಮುಂದೆ ಪೊಲೀಸರ ದ್ವಿಮುಖ ನೀತಿ ವಿರುದ್ಧ ಪ್ರತಿಭಟನೆ ಮಾಡಿದ್ದರು. ಆ ಸಂದರ್ಭದಲ್ಲಿ ಸದರಿ ಠಾಣೆಯ ಪೊಲೀಸರು ಶಾಸಕರಿಗೆ ಹೊರಗೆ ನಿಲ್ಲಿಸಿ ಅವಮಾನ ಮಾಡಿದ್ದಾರೆ. ಏಕಪಕ್ಷೀಯ ವರ್ತನೆ ತೋರಿದ್ದಾರೆ ಎಂದು ಬಿಜೆಪಿ ಮುಖಂಡರು ಗಂಭೀರ ಆರೋಪ ಮಾಡಿದರು.
ಕುವೆಂಪು ವಿವಿ ಘಟಿಕೋತ್ಸವ ಸಂದರ್ಭದಲ್ಲಿ ಸಭಾಂಗಣದಲ್ಲಿ ರಾಜ್ಯಪಾಲರು ಭಾಷಣ ಮಾಡು ವಾಗ ಅಡ್ಡಿಪಡಿಸಿದ್ದ ಎನ್‌ಎಸ್ ಯುಐ ಕಾರ್ಯರ್ತರ ವಿರುದ್ಧ ಯಾವುದೇ ಕೇಸ್ ದಾಖಲಿಸಿಲ್ಲ. ಪ್ರತಿಭಟನಾ ಸ್ಥಳದಿಂದ ಅವರನ್ನು ಬಿಟ್ಟು ಕಳಿಸಲಾಗಿದೆ. ಪ್ರಜಪ್ರಭುತ್ವದಲ್ಲಿ ಕೆಲವೊಂದು ಸಂದರ್ಭದಲ್ಲಿ ಹೋರಾಟಗಳು ಅನಿವಾರ್ಯ. ಸ್ವಾತಂತ್ರ್ಯ ಹೋರಾಟಗಾರ ವೀರಸಾವರ್ಕರ್ ಅವರ ಪಠ್ಯವನ್ನು ಕಿತ್ತು ಬಿಸಾಕಿದ್ದೇನೆ ಎಂಬ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಉದ್ಧಟತನದ ಮಾತನ್ನು ಖಂಡಿಸಲು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದ್ದರು ಎಂದರು.
ಆದರೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಮಾತ್ರ ಪೊಲೀಸರು ದೂರು ದಾಖಲಿಸಿದ್ದಾರೆ. ಎನ್‌ಎಸ್‌ಯುಐ ಕಾರ್ಯಕರ್ತರ ಮೇಲೆ ದೂರು ದಾಖಲಿಸದೇ ಕರ್ತವ್ಯ ಲೋಪ ಎಸಗಿದ್ದಾರೆ ಎಂಬುದು ಬಿಜೆಪಿ ಮುಖಂಡರ ಆರೋಪವಾಗಿದೆ.
ಸಾಗರದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಮೇಲೆ ಗಡಿಪಾರಿಗೆ ಶಿಫಾರಸು ಮಾಡಿ ಕೇವಲ ಮೂರು ಗಂಟೆ ಹಿಂದೆ ನೋಟಿಸ್ ನೀಡಿ ಆಮೇಲೆ ಠಾಣೆಗೆ ಬರಲಿಲ್ಲ ವೆಂದು ಇನ್ನೊಂದು ಕೇಸ್ ದಾಖಲಿಸುವ ಹುನ್ನಾರ ನಡೆಯು ತ್ತಿದೆ. ಸೇಡಿನ ರಾಜಕಾರಣ ಮಾಡಲು ಕಾಂಗ್ರೆಸ್ ಹೊರಟಿದ್ದು, ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗದ ಬಿಜೆಪಿ ಕಾಯ ಕರ್ತರ ಮೇಲೆ ವಿನಾಕಾರಣ ಕೇಸ್ ಹಾಕಲಾಗುತ್ತಿದೆ. ಹೀಗೆ ಮುಂದುವರೆದರೆ ಬಿಜೆಪಿ ದೊಡ್ಡಮಟ್ಟದ ಹೋರಾಟ ಕೈಗೊಳ್ಳಬೇ ಕಾಗುತ್ತದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಎಚ್ಚರಿಸಿದರು.
ಈ ರೀತಿಯ ಪೊಲೀಸರ ಏಕಪಕ್ಷೀಯ ವರ್ತನೆ ಬಗ್ಗೆ ಕೂಲಂಕಷ ವಿವರಣೆ ಪಡೆದು ಪರಿಶೀಲನೆ ನಡೆಸಿ ಬಳಿಕ ಕ್ರಮಕ್ಕೆ ಮುಂದಾಗಿ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಅವರು, ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ, ಸಚಿವರ ಸಭೆಗೆ ಅಡ್ಡಿಪಡಿಸಿದ ರೀತಿ ಸರಿಯಲ್ಲ, ರಾಜ್ಯಪಾಲರ ಘಟನೆ ಬಗ್ಗೆ ನನಗೆ ಮಾಹಿತಿ ಇಲ್ಲ. ರಾಜ್ಯಪಾಲರು ಪ್ರತಿಭಟನಾಕಾರರ ಜೊತೆಗೆ ಮಾತನಾಡಿ, ಪೊಲೀಸ್ ಅಧಿಕಾರಿಗಳಿಗೆ ಯಾವ ರೀತಿಯ ನಿರ್ದೇಶನ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಎರಡೂ ಘಟನೆಗಳ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಮತ್ತು ಜಯನಗರ ಠಾಣೆಯಲ್ಲಿ ಶಾಸಕರಿಗೆ ಅವಮಾನ ಮಾಡಿದ್ದರೆ ಈ ಬಗ್ಗೆ ಲಿಖಿತ ದೂರನ್ನು ಶಾಸಕರು ಕೊಟ್ಟರೆ ಅದರ ಬಗ್ಗೆಯೂ ತನಿಖೆ ನಡೆಸಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ನಂತರ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡರು ಪೊಲೀಸರ ಏಕಪಕ್ಷೀಯ ವರ್ತನೆ ಬಗ್ಗೆ ದೂರು ನೀಡಿದ್ದು, ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎಸ್.ಪಿ. ತಿಳಿಸಿದ್ದಾರೆ.
ಮಾಜಿ ಸಚಿವ ಹರತಾಳು ಹಾಲಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಎಂ.ಬಿ. ಭಾನು ಪ್ರಕಾಶ್, ಗಿರೀಶ್ ಪಟೇಲ್, ಜ್ಯೋತಿ ಪ್ರಕಾಶ್, ಎಸ್. ದತ್ತಾತ್ರಿ, ಶಿವರಾಜ್, ಹೃಷಿಕೇಶ್ ಪೈ, ಶ್ರೀನಾಥ್, ರತ್ನಾಕರ್ ಶೆಣೈ, ಮಾಲತೇಶ್, ಸಂತೋಷ್ ಬಳ್ಳೆಕೆರೆ ಮೊದಲಾದವರಿದ್ದರು.