ಕಣ್ಮನಸೆಳೆದ ಕಲಾ ದಸರಾ..
ಶಿವಮೊಗ್ಗ : ಇಂದು ನಗರದ ಶಿವಪ್ಪ ನಾಯಕ ಆರಮನೆಯಲ್ಲಿ ಆಯೋಜಿಸಿದ್ದ ಕಲಾ ದಸರಾ ನೋಡುಗರ ಕಣ್ಮನ ಸೆಳೆಯಿತು. ಕಲಾದಸರಾ ಭಾಗವಾಗಿ ಚಿತ್ರ ಕಲಾ ಪ್ರದರ್ಶನ ಮತ್ತು ಛಾಯಾ ಚಿತ್ರ ಪ್ರದರ್ಶನ ಆಯೋಜಿಸಲಾಗಿದ್ದು, ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ೨೫ಕ್ಕೂ ಹೆಚ್ಚು ಕಲಾವಿದರು, ಸ್ಥಳ ದಲ್ಲಿಯೇ ವಿವಿಧ ಕಲಾ ಕೃತಿಗಳನ್ನು ರಚಿಸಿ, ಅಚ್ವರಿ ಮೂಡಿಸಿದರು.
ವಿಶೇಷವಾಗಿ ಕಲಾ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಕಲಾವಿದರೊಬ್ಬರು, ಕಲಾ ದಸರಾ ಉದ್ಘಾಟನೆಗೆ ಬಂದಿದ್ದ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರ ಭಾವಚಿತ್ರವನ್ನು ಸ್ಥಳದಲ್ಲಿಯೇ ರಚಿಸಿ, ಅವರ ಮೆಚ್ಚುಗೆಗೆ ಪಾತ್ರವಾದರು.
ಬೆಳಗ್ಗೆ ಕಲಾದಸರಾ ಉದ್ಘಾಟಿಸಿದ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಮಾತನಾಡಿ, ರಾಜ್ಯದಲ್ಲಿಯೇ ಎರಡನೇ ಅತೀ ಸಂಭ್ರಮ ಮತ್ತು ಸಡಗರದಿಂದ ಅರ್ಥಪೂರ್ಣ ಆಚರಣೆಗೆ ಶಿವಮೊಗ್ಗ ದಸರಾ ಹೆಸರಾಗಿದೆ. ಕಲಾದಸರಾದ ಮೂಲಕ ಚಿತ್ರಕಲೆ ಮತ್ತು ಛಾಯಾ ಚಿತ್ರ. ಪ್ರದರ್ಶನವನ್ನು ಕಂಡಾಗ ಮನಸ್ಸಿಗೆ ಮುದ ನೀಡುತ್ತದೆ. ನಾನು ಕೂಡ ಕಲಾವಿದನಾಗಬೇಕೆಂಬ ಹಂಬಲ ಮೂಡಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಅಮೂಲ್ಯವಾದ ವನ್ಯ ಜೀವಿಗಳಿವೆ. ಪ್ರಕೃತಿ ಸೌಂದರ್ಯವಿದೆ. ಅದರ ಚಿತ್ರಣವನ್ನು ಇಲ್ಲಿ ಕಾಣ ಬಹುದು. ಇದನ್ನು ಕಂಡಾಗ ಪ್ರಕೃತಿಯ ಜೊತೆಗೆಯೇ ಇರಬೇಕೆಂದು ಮನಸು ಹೇಳುತ್ತದೆ. ಪರಿಸರದ ಬಗ್ಗೆ ಜಗೃತಿ ಕೂಡ ಮೂಡತ್ತದೆ ಎಂದರು.
ಮಕ್ಕಳ ಪ್ರತಿಭೆಯ ಅನಾವರಣ ಇಲ್ಲಿ ಆಗಿದೆ. ಶಾಲಾಮಕ್ಕಳಿಗೆ ಇದು ಪ್ರೇರಣೆಯಾಗುತ್ತದೆ ಎಂದರು.
ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಮಾತನಾಡಿ, ಛಾಯಾ ಚಿತ್ರಗಳು ಮನುಷ್ಯನ ಮನಸ್ಸಿಗೆ ಹತ್ತಿರವಾದ ವಿಷಯ. ನಾನು ಕೂಡ ಒಬ್ಬ ಛಾಯಾಗ್ರಹಕನೆ. ಛಾಯಾಗ್ರಹಣಕ್ಕೆ ತಾಳ್ಮೆ , ಆಸಕ್ತಿ ಅತೀ ಅಗತ್ಯ ಎಂದರು. ಶಿವಮೊಗ್ಗ ಯೋಜನಾ ನಿರ್ದೇಶಕ ರಂಗ ಸ್ವಾಮಿ, ಆಯುಕ್ತರಾದ ಕವಿತಾ ಯೋಗಪ್ಪನವರ್, ಡಾ. ಪ್ರಶಾಂತ್ ಪೈ, ಉಪ ಆಯುಕ್ತ ತುಷಾರ್ ಹೊಸೂರು ಇದ್ದರು.ಇಂದು ಸಂಜೆ ವಿವಿಧ ಕಲಾ ತಂಡಗಳಿಂದ ಶಿವಪ್ಪ ನಾಯಕ ವೃತ್ತದಿಂದ ಗಾಂಧಿ ಬಜರ್ ಮೂಲಕ ಶಿವಪ್ಪ ನಾಯಕ ಆರಮನೆವರೆಗೆ ಕಲಾ ಜಥಾ ಹಮ್ಮಿಕೊಳ್ಳಲಾಗಿದೆ.