ತಾಜಾ ಸುದ್ದಿ

ಮುಂದಿನ ದಿನಗಳಲ್ಲಿ ಅರಣ್ಯ ನಾಶಕ್ಕೆ ರಹದಾರಿಯಾಗಲಿರುವ ಅರಣ್ಯ ಸಂರಕ್ಷಣಾ ಕಾಯ್ದೆ ತಿದ್ದುಪಡಿ: ಕುಮಾರಸ್ವಾಮಿ ಆತಂಕ

Share Below Link

ಶಿವಮೊಗ್ಗ: ಅರಣ್ಯ ಸಂರಕ್ಷಣಾ ೧೯೮೦ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದ ಅರಣ್ಯ ನಾಶಕ್ಕೆ ಕಾರಣವಾಗಬಹುದು ಪರಿಸರ ತಜ್ಞ ಪ್ರೊ. ಬಿ.ಎಂ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಅವರು ಭಾನುವಾರದಂದು ನಿರ್ಮಲ ತುಂಗಾ ಅಭಿಯಾನ ಮತ್ತು ಪರಿಸರಾಸಕ್ತರು ಶಿವಮೆಗ್ಗದ ಹೊಯ್ಸಳ ಫೌಂಡೇಶನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಅರಣ್ಯ ಕಾಯ್ದೆ ೧೯೮೦ ರ ತಿದ್ದುಪಡಿಯ ಸಾಧಕ ಬಾಧಕಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕೇಂದ್ರ ಹಾಲಿ ಇರುವ ಕಾಯಿದೆಗೆ ತಿದ್ದುಪಡಿ ಮಾಡಿ ಅರಣ್ಯ ಸಂರಕ್ಷಣೆ ಕಾಯ್ದೆ ೨೦೨೩ ಅನ್ನು ಜರಿಗೆ ತರಲು ಮುಂದಾಗಿದೆ. ಈ ಕಾಯ್ದೆಯ ಮೂಲಕ ಜರಿಗೆ ತರಲು ಉದ್ದೇಶಿಸಿರುವ ಕೆಲವು ಮಹತ್ವದ ತಿದ್ದುಪಡಿ ತೀವ್ರ ಆಘಾತಕಾರಿಯಾಗಿದೆ. ಇದು ಜರಿಗೆ ಬಂದರೆ ಅರಣ್ಯ ಸಂರಕ್ಷಣೆ ಎನ್ನುವುದೇ ಮರೀಚಿಕೆಯಾಗುತ್ತದೆ. ಈ ಹೊಸ ತಿದ್ದುಪಡಿ ಕಾಯ್ದೆ ಪ್ರಕಾರ ಹಿಂದೆ ಯಾವ ಪ್ರದೇಶದಲ್ಲಿ ಅರಣ್ಯ ಎಂದು ರಿಜಿಸ್ಟರ್ಡ್ ಆಗಿರುತ್ತದೆಯೋ ಅದನ್ನು ಮಾತ್ರ ಅರಣ್ಯ ಎಂದು ಪರಿಗಣಿಸಬೇಕು. ಉಳಿದ ಪ್ರದೇಶಗಳಲ್ಲಿ ಅರಣ್ಯ ಇದ್ದರೂ ಆ ಪ್ರದೇಶಕ್ಕೆ ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯಿಸುವುದೇ ಇಲ್ಲ ಎಂದು ಹೇಳಲಾಗಿದೆ ಎಂದರು.
ಹೊಸ ತಿದ್ದುಪಡಿ ಕಾಯ್ದೆಯ ಪ್ರಕಾರ ಅರಣ್ಯದಲ್ಲಿ ಹಲವಾರು ಚಟುವಟಿಕೆಗಳನ್ನು ನಡೆಸಬಹುದಾಗಿದೆ. ಸಫಾರಿ ಮಾಡಬಹುದು, ಪರಿಸರ ಪೂರಕ ಪ್ರವಾಸ ಏರ್ಪಡಿಸಬಹುದು, ಅದಕ್ಕೆ ಪೂರಕ ಚಟುವಟಿಕೆ ನಡೆಸಬಹುದು ಎಂದಿದೆ. ಇನ್ನು ಅರಣ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನೆಡುತೋಪು ಬೆಳೆಸಲು ಅವಕಾಶ ನೀಡಲಾಗಿದೆ. ಈ ರೀತಿಯ ನಡುತೋಪು ಪರಿಸರಕ್ಕೆ ಮಾರಕವಾಗಿದ್ದು ಸಹಜ ಅರಣ್ಯ ಪ್ರಧಾನತೆ ಮೂಲೆಗುಂಪಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪರಿಸರ ತಜ್ಞ . ಶ್ರೀಪತಿ ಎಲ್.ಕೆ. ಮಾತನಾಡಿ, ಹೊಸ ತಿದ್ದುಪಡಿ ಅರಣ್ಯ ಕಾಯ್ದೆ ಮೇಲ್ನೋಟಕ್ಕೆ ಪರಿಸರ ಮಾರಕ ಅನೇಕ ಅಂಶಗಳು ಕಂಡುಬರುತ್ತಿದ್ದು , ಹೊಸ ಕಾಯ್ದೆಯಲ್ಲಿ ಪೂರಕ ಚಟುವಟಿಕೆಗಳಿಗೆ ವಶಪಡಿಸಿಕೊಂಡ ಅರಣ್ಯಕ್ಕೆ ಪರ್ಯಾಯ ಅರಣ್ಯ ಬೆಳೆಸುವ ಯಾವುದೇ ವಿಚಾರ ಕಾಯ್ದೆಯಲ್ಲಿ ಕಂಡುಬರುತ್ತಿಲ್ಲ. ಜೊತೆಗೆ ಅರಣ್ಯ ಜಗಗಳಲ್ಲಿ ಏಕ ಜತಿಯ ನೆಡುತೋಪು ಸೇರಿದಂತೆ ಯಾವುದೇ ನೆಡುತೋಪು ಬೆಳೆಸುವ ಯೋಜನೆ ನಡೆಸಿರುವುದು ಸರಿಯಲ್ಲ ಎಂದರು.
ವಿಶೇಷ ಆಮಂತ್ರಿತರಾಗಿ ಭಾಗವಹಿಸಿದ್ದ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ರಾಷ್ಟ್ರೀಯ ಸಂಚಾಲಕ ಬಸವರಾಜ ಪಾಟೀಲ್ ಮಾತನಾಡಿ, ಅರಣ್ಯ ಕಾಯ್ದೆ ತಿದ್ದುಪಡಿಯಿಂದ ಆಗುವ ಪರಿಣಾಮಗಳ ಕುರಿತು ಪರಿಸರ ತಜ್ಞರ ಚರ್ಚೆ ಅರ್ಥಪೂರ್ಣವಾಗಿದೆ. ಜರಿಗೆ ತರಲು ಉದ್ದೇಶಿಸಿರುವ ತಿದ್ದುಪಡಿ ಕಾಯ್ದೆಯಲ್ಲಿ ಅನೇಕ ಲೋಪದೋಷಗಳನ್ನು ತಜ್ಞರು ಸಭೆಯ ಗಮನಕ್ಕೆ ತಂದಿದ್ದಾರೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಮಾಜಿ ನಗರಸಭಾ ಅಧ್ಯಕ್ಷ ಎಂ.ಶಂಕರ್ ವಹಿಸಿದ್ದರು. ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಮಾಧವನ್,ಮಾಚೇನಹಳ್ಳಿ ಕೈಗಾರಿಕಾ ವಸಹತು ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ, ಬಾಲಕೃಷ್ಣ ನಾಯ್ಡು, ಲೋಕೇಶ್ವರಪ್ಪ, ತ್ಯಾಗರಾಜ ಮಿತ್ಯಾಂತ, ದಿನೇಶ್ ಶೇಟ್, ರಾಜೇಶ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.