ನೂತನ ಜಿಲ್ಲಾಡಳಿತ ಭವನ ಸೇರಿದಂತೆ ಜಿಲ್ಲೆಯ ಸರ್ವಾಂಗಿಣ ಅಭಿವೃದ್ಧಿ …
ಶಿವಮೊಗ್ಗ: ಈ ದೇಶವನ್ನು ವಿದೇಶಿಯರ ಆಡಳಿತದಿಂದ ಮುಕ್ತಿಗೊಳಿಸುವಲ್ಲಿ ನಾಡಿನ ಲಕ್ಷಾಂತರ ಜನ ಜತಿ, ಮತ, ಪಂಥ ತೊರೆದು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ದ್ದಾರೆ. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಭಗತ್ ಸಿಂಗ್, ಸುಭಾಸ್‌ಚಂದ್ರ ಬೋಸ್, ರಾಣಿ ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕ ಹೋರಾಟಗಾರರ ತ್ಯಾಗದ ಫಲ ಇಂದಿನ ಸ್ವಾತಂತ್ರ್ಯ ದಿನಾಚರಣೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾ ಗಿದ್ದರು. ವಿಶೇಷವಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಈಸೂರಿನ ಸ್ವಾತಂತ್ರ್ಯ ಹೋರಾಟಗಾರರ ನೆನಪು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈಸೂರಿನ ಐವರು ಹೋರಾಟ ಗಾರರು ನೇಣಿಗೆ ಕೊರಳೊಡ್ಡಿ ಹುತಾತ್ಮರಾಗಿದ್ದು ನಿಜಕ್ಕೂ ನೋವಿನ ಸಂಗತಿ. ಆ ಎಲ್ಲಾ ಹೋರಾಟಗಾರರಿಗೆ ಕೋಟಿ ಕೋಟಿ ನಮನಗಳು ಎಂದರು.
ಈ ಜಿಲ್ಲೆ ಅನೇಕ ಹೋರಾಟ ಗಾರರಿಗೆ ಜನ್ಮ ನೀಡಿದ, ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಪೂಜ್ಯ ತಂದೆ ಯವರಾದ ಎಸ್. ಬಂಗಾರಪ್ಪನವರು ಸೇರಿದಂತೆ ನಾಲ್ಕು ಮುಖ್ಯಮಂತ್ರಿ ಗಳನ್ನು ನೀಡಿದ ಹಾಗೂ ರಾಷ್ಟ್ರಕವಿ ಗಳಾದ ಕುವೆಂಪು, ಜಿ ಎಸ್ ಶಿವರುದ್ರಪ್ಪ ಮತ್ತು ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿನ ಅಸಂಖ್ಯಾತ ಖ್ಯಾತನಾಮರು ಹುಟ್ಟಿದ ಪುಣ್ಯಭೂಮಿ ನಮ್ಮ ಜಿಲ್ಲೆ ಎಂದರು.
ಜಿಲ್ಲೆಯಲ್ಲಿ ವೃತ್ತಿಪರ ಶಿಕ್ಷಣ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಅಂತೆಯೇ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ನಗರದ ಪ್ರಮುಖ ಸ್ಥಳದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಹಾಗೂ ಪ್ರಸ್ತಾಪಿಸಲಾ ಗಿರುವ ಆಯುಷ್ ವಿಶ್ವವಿದ್ಯಾಲಯ ಆರಂಭಿಸಲು ವಿಶೇಷ ಗಮನ ಹರಿಸಲಾಗುವುದು ಎಂದರು.
ಪ್ರಸ್ತುತ ಸಂದರ್ಭದಲ್ಲಿ ಮುಂಗಾರು ಮಳೆ ವಿಳಂಬವಾದರೂ ಜಿಲ್ಲೆಯಲ್ಲಿ ಬಿದ್ದಿರುವ ಮಳೆಯ ಪ್ರಮಾಣ ಪೂರ್ಣ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ. ಹಿಂಗಾರು ಮಳೆ ರೈತರ ನಿರೀಕ್ಷೆಯಂತೆ ಬರುವ ಆಶಾ ಭಾವನೆ ಹೊಂದಲಾಗಿದೆ. ಈಗಾಗಲೇ ಬಿದ್ದಿರುವ ಮಳೆಯಿಂದಾಗಿ ಆಗಿರುವ ಜನ-ಜನುವಾರುಗಳ ಜೀವಹಾನಿ, ಬೆಳೆಹಾನಿಗಳ ಮಾಹಿತಿ ಸಂಗ್ರಹಿಸಿ, ಸಂತ್ರಸ್ಥರಿಗೆ ಕೂಡಲೆ ಪರಿಹಾರಧನ ಬಿಡುಗಡೆಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಶಿಕ್ಷಣ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಶಿಕ್ಷಣ ಇಲಾಖೆಯ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವ ಉದ್ದೇಶ ಹೊಂದಿದ್ದೇನೆ. ಶಾಲೆಗಳ ಆರಂಭದ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಶೂಗಳನ್ನು ಪೂರೈಸಲಾಗಿದೆ. ಈ ಹಿಂದೆ ೧ ರಿಂದ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರಕ್ಕೆ ೧ ಮೊಟ್ಟೆಯನ್ನು ನೀಡುತ್ತಿದ್ದು, ಈಗ ವಾರಕ್ಕೆ ೨ ಮೊಟ್ಟೆ ನೀಡುವುದ ರೊಂದಿಗೆ ೧೦ನೇ ತರಗತಿವರೆಗೆ ಈ ಯೋಜನೆ ವಿಸ್ತರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಹಲವು ದಶಕಗಳಿಂದ ಕಗ್ಗಂಟಾಗಿರುವ ಶರಾವತಿ ಮುಳುಗಡೆ ಸಂತ್ರಸ್ಥರು ಹಾಗೂ ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ವಿಶೇಷ ಆಸಕ್ತಿ ವಹಿಸಿದ್ದು, ಶೀಘ್ರದಲ್ಲಿ ಸದರಿ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದರು.
ಸಮಾರಂಭದಲ್ಲಿ ಪೊಲೀಸ್ ಹಾಗೂ ಶಾಲಾ ಮಕ್ಕಳ ತಂಡದಿಂದ ಆಕರ್ಷಕ ಕವಾಯತು. ದೇಶ ಭಕ್ತಿ ಗೀತೆಗಳಿಗೆ ನೃತ್ಯ ಹಾಗೂ ಸಾಮೂಹಿಕ ಕವಾಯತು ನಡೆಯಿತು. ಸರ್ಕಾರದ ಗ್ಯಾರಂಟಿ ಯೋಜನೆಗಳ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮಿ ಶಂಕರನಾಯ್ಕ, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್, ಜಿ.ಪಂ. ಸಿಇಓ ಸ್ನೇಹಲ್‌ಸುಧಾಕರ್ ಲೋಖಂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.