ಅಪಘಾತ : ಕ್ರೈಸ್ತ ಧರ್ಮಗುರು ಅಂತೋಣಿ ಪೀಟರ್ ದುರುಂತ ಸಾವು
ಹೊನ್ನಾಳ್ಳಿ : ತಾಲೂಕಿನ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿನ್ನಿಕಟ್ಟೆಯ ಸವಳಂಗ ರಸ್ತೆಯಲ್ಲಿ ಜು.೨೩ರ ನಿನ್ನೆ ಮಧ್ಯಾಹ್ನ ೩.೩೦ರ ಸುಮಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶಿವಮೊಗ್ಗ ಕ್ಯಾಥೋಲಿಕ್ ಕ್ರೈಸ್ತ ಧರ್ಮ ಕ್ಷೇತ್ರದ ಫಾದರ್ ಅಂಥೋಣಿ ಪೀಟರ್ (೫೧) ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಬ್ರದರ್ ಸ್ಟೀಫನ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿ ರಸ್ತೆ ಪಕ್ಕದಲ್ಲಿ ಬಿದ್ದಿದ್ದು, ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಫಾದರ್ ಆಂಥೋಣಿ ಪೀಟರ್ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಂತ ಪ್ರತಿಭಾವಂತ ಧರ್ಮಗುರುಗಳಾಗಿದ್ದ ಫಾದರ್ ಅಂಥೋಣಿ ಪೀಟರ್ ಅವರು ಮೂಲತಃ ಶಿವಮೊಗ್ಗ ನಗರದವರಾಗಿದ್ದು, ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಪೂಜ್ಯರು ಪಿಹೆಚ್‌ಡಿ ಪದವಿ ಪಡೆದಿದ್ದರು. ಶಿವಮೊಗ್ಗ ಧರ್ಮಕ್ಷೇತ್ರದ ವಿವಿಧ ಚರ್ಚ್‌ಗಳಲ್ಲಿ ತಮ್ಮ ಅಮೂಲ್ಯವಾದ ಸೇವೆ ಸಲ್ಲಿಸಿದ್ದ ಪೂಜ್ಯರು, ಕಳೆದೊಂದು ವರ್ಷದಿಂದ ಶಿಕಾರಿಪುರ ಕಿರಿಯ ಪುಷ್ಪ ಸಂತ ತೆರೇಸಾ ಚರ್ಚ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪೂಜ್ಯ ಗುರುಗಳಾದ ಫಾದರ್ ಅಂತೋಣಿ ಪೀಟರ್ ಅವರ ಅಕಾಲಿಕ ನಿಧನ ಭಕ್ತ ಸಮೂಹದಲ್ಲಿ ತೀವ್ರ ಆಘಾತ ಉಂಟುಮಾಡಿದೆಯಲ್ಲದೇ ಇಡೀ ಕ್ರೈಸ್ತ ಸಮಾಜಕೆ ತುಂಬಲಾರದ ನಷ್ಟವಾಗಿದೆ.
ಅಂತಿಮ ದರ್ಶನ – ಅಂತ್ಯಕ್ರಿಯೆ: ಜು.೨೫ರ ನಾಳೆ ಬೆಳಿಗ್ಗೆ ೮ ಗಂಟೆಯಿಂದ ೧೦ ಗಂಟೆಯವರೆಗೆ ಶಿವವಗ್ಗದ ಪ್ರಧಾನ ದೇವಾಲಯವಾದ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಪೂಜ್ಯಗುರು ಫಾದರ್ ಅಂತೋಣಿ ಪೀಟರ್ ಅವರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅಂದು ಬೆಳಿಗ್ಗೆ ಪರಮಪೂಜ್ಯ ಬಿಷಪ್ ಫ್ರಾನ್ಸಿಸ್ ಸೆರಾವೋ ಅವರ ಸಾನಿಧ್ಯದಲ್ಲಿ ಗುರುಗಳ ಅಂತ್ಯಕ್ರಿಯೆಯ ಪೂಜಾವಿಧಿಗಳು ಜರುಗಲಿದೆ ಎಂದು ಚರ್ಚ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಭಕ್ತಾದಿಗಳು ಶಾಂತಿಯಿಂದ ಪೂಜ್ಯ ಗುರುಗಳಿಗೆ ಅಂತಿಮ ನಮನ ಸಲ್ಲಿಸುವಂತೆ ಮನವಿ ಮಾಡಲಾಗಿದೆ.
ಸಂತಾಪ: ಪೂಜ್ಯ ಗುರುಗಳಾದ ಫಾದರ್ ಅಂಥೋಣಿ ಪೀಟರ್ ಅವರ ಅಕಾಲಿನ ನಿಧನಕ್ಕೆ ಬೆಂಗಳೂರು ಮಹಾಧರ್ಮಕ್ಷೇತ್ರದ ಅರ್ಚ್ ಬಿಷಪ್ ಪೀಟರ್ ಮಚಾದೋ, ಶಿವವಗ್ಗ ಧರ್ಮಕ್ಷೇತ್ರದ ಬಿಷಪ್ ಪರಮಪೂಜ್ಯ ಫ್ರಾನ್ಸಿಸ್ ಸೆರಾವೋ, ಕಾರವಾರ ಧರ್ಮಕ್ಷೇತ್ರದ ಬಿಷಪ್ ಡುಮಿಂಗ್ ಡಯಾಸ್, ಶಿವಮೊಗ್ಗ ಧರ್ಮಕ್ಷೇತ್ರ ಶ್ರೇಷ್ಠಗುರುಗಳಾದ ರೆ|ಫಾ| ಫೆಲಿಕ್ಸ್ ನರೋನ್ಹ, ಸೇಕ್ರೆಡ್ ಹಾರ್ಟ್ ಪ್ರಧಾನಾಲಯದ ಪ್ರಧಾನ ಗುರುಗಳಾದ ರೆ|ಫಾ| ಸ್ಟ್ಯಾನಿ ಡಿಸೋಜ, ಪೂಜ್ಯ ಗುರುಗಳಾದ ರೆ|ಫಾ| ಫ್ರಾಂಕ್ಲಿನ್ ಡಿಸೋಜ, ರೆ|ಫಾ| ಜೇಸು ರಕ್ಷಕನಾದನ್, ರೆ|ಫಾ| ಸ್ಟೀಫನ್, ರೆ|ಫಾ| ಗಿಲ್ಬರ್ಟ್ ಲೋಬೋ, ರೆ|ಫಾ| ವೀರೇಶ್ ಮೋರಸ್, ರೆ|ಫಾ| ಜಾರ್ಜ್, ರೆ|ಫಾ| ಬಿಜು, ರೆ|ಫಾ| ಲಾರೆನ್ಸ್ ಸೇರಿದಂತೆ ವಿವಿಧ ಚರ್ಚ್‌ಗಳ ಧರ್ಮಗಳು, ಸಿಸ್ಟರ್‍ಸ್‌ಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಮಾಜಿ ಸಿಎಂ ಯಡಿಯೂರಪ್ಪ, ಶಿಕರಿಪುರ ಶಾಸಕ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಲ್ಫೋನ್ಸ್ ರಾಕೇಶ್ ಡಿಸೋಜ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿನ್ಸೆಂಟ್ ರೋಡ್ರಿಗಸ್, ಕಾಂಗ್ರೆಸ್ ಮುಖಂಡರಾದ ಚಿನ್ನಪ್ಪ, ಮರಿಯಪ್ಪ, ಸ್ಟ್ಯಾನಿ ಮಾರ್ಟಿಸ್, ಜ್ಯೋತಿ ಅರುಳಪ್ಪ, ಕಿರಣ್ ಫರ್ನಾಂಡಿಸ್, ಪ್ರಮುಖರಾದ ಜೋಸೆಫ್ ಟೆಲ್ಲಿಸ್, ರೇಮಂಡ್ ಡಿಮೆಲ್ಲೋ, ಮಾರ್ಕ್ ಡಿಕಾಸ್ಟಾ, ಪ್ಯಾಟ್ರಿಕ್ ಲೋಬೋ ಸೇರಿದಂತೆ ಕ್ರೈಸ್ತ ಭಕ್ತರು ಹಾಗೂ ಇನ್ನಿತರ ಗಣ್ಯಾತಿಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.