ಆರೋಗ್ಯಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಮೃತ್ಯು ಬಾವಿಯಂತೆ ಬಾಯ್ತೆರೆದು ಬಲಿಗಾಗಿ ಕಾಯುತ್ತಿರುವ ಕೊಳವೆ ಬಾವಿ…!

Share Below Link

ವಿಶೇಷ ವರದಿ: ಗಣೇಶ್ ಸೋಗೋಡು
ಹೊಸನಗರ, ಫೆ.೧೨: ಜನರ ಬದುಕು ಸುಧಾರಿಸುವ ಸಲುವಾಗಿ ಸರ್ಕಾರದ ಯೋಜನೆಗಳು ಜನ್ಮತಾಳಿದವು. ಆದರೆ ಜವಾಬ್ದಾರಿ ಹೊತ್ತ ಅಧಿಕಾರಿಗಳ ನಿರ್ಲಕ್ಷ್ಯ ಕೆಲವೊಮ್ಮೆ ಅಂತಹ ಅಮೂಲ್ಯ ಯೋಜನೆ ಗಳು ಜನ- ಜಾನುವಾರುಗಳ ಜೀವಕ್ಕೆ ಅಪಾಯವಾಗುವ ಸ್ಥಿತಿಗೆ ತಳ್ಳುತ್ತಿದೆ. ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ನೀರಿನ ಟ್ಯಾಂಕ್ ಪಕ್ಕದ ಬಾಯಿಬಿಟ್ಟು ಬಿದ್ದಿರುವ ಕೊಳವೆ ಬಾವಿಯೊಂದು ಇದೀಗ ಗ್ರಾಮಸ್ಥರ ನಿದ್ರೆ ಕೆಡಿಸಿದೆ.
ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನ ಸಂಪಳ್ಳಿ ಗ್ರಾಮದ ಮಂಕೋಡುವಿನ ಸರ್ವೇ ನಂಬರ್ ೯೩ರಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಬಲಪಡಿಸಲು ಕೊಳವೆ ಬಾವಿಯೊಂದನ್ನು ತೋಡಲಾಗಿತ್ತು. ಆದರೆ ನೀರು ದೊರಕದೆ ಕೆಲಸ ವಿಫಲವಾದ ನಂತರ, ಕೇಸಿಂಗ್ ಪೈಪ್‌ಗಳನ್ನು ತೆಗೆದು, ಆ ಬಾವಿಯನ್ನು ಯಾವುದೇ ಸುರಕ್ಷತಾ ಕ್ರಮವಿಲ್ಲದೆ ಹಾಗೆಯೇ ಬಿಟ್ಟು ಹೋಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.


ಸ್ಥಳೀಯರ ಪ್ರಕಾರ ಬಾವಿಯ ಸುತ್ತಮುತ್ತ ಮನೆಗಳಿದ್ದು, ಮಕ್ಕಳು ದಿನವೂ ಅಲ್ಲಿ ಆಟವಾಡುತ್ತಾರೆ. ರೈತರು ತಮ್ಮ ಹೊಲಗಳಿಗೆ ಹೋಗಲು ಇದೇ ದಾರಿ ಯನ್ನು ಬಳಸುತ್ತಾರೆ. ರಾತ್ರಿ ವೇಳೆಯಲ್ಲೂ ಜನ ಸಂಚಾರ ಇದೆ. ಅಲ್ಲದೆ ಈ ಭಾಗದಲ್ಲಿ ಸಾಕುಪ್ರಾಣಿಗಳು ಹಾಗೂ ಕಾಡು ಪ್ರಾಣಿಗಳ ಸಂಚಾರವೂ ಹೆಚ್ಚಿದೆ. ಇಂತಹ ಪ್ರದೇಶದಲ್ಲಿ ಬಾಯಿಬಿಟ್ಟ ಬಾವಿ ಎಂದರೆ ಅದು ಕೇವಲ ನಿರ್ಲಕ್ಷ್ಯವಲ್ಲ ಬದಲಿಗೆ ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ.
ಈಗಾಗಲೇ ಆಡಳಿತಾರೂಢ ಸರ್ಕಾರ ಹಲವು ಬಾರಿ ವಿಫಲ ಕೊಳವೆ ಬಾವಿಗಳನ್ನು ಮುಚ್ಚುವಂತೆ ಆದೇಶಿಸಿದೆ. ಆದರೆ ಸರ್ಕಾರಿ ಆದೇಶಕ್ಕೆ ಅಧಿಕಾರಿಗಳು ಕ್ಯಾರೆ ಎನ್ನದೇ ಕಾಲಹರಣ ಮಾಡುತ್ತಿzರೆ. ಮುಂದೊಂದು ದಿನ ಅವಘಡ ಸಂಭವಿಸಿದ ಮೇಲೆ ಮಾತ್ರ ಎಚ್ಚರಗೊಳ್ಳುವ ಪರಿಸ್ಥಿತಿ ಬಾರದಿರಲಿ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿzರೆ.
ಒಂದು ಮೂಲದ ಪ್ರಕಾರ ಸದರಿ ಗ್ರಾಮ ಪಂಚಾಯಿತಿಯ ಗಮನಕ್ಕೆ ಈ ವಿಷಯ ಬಂದಿದ್ದರೂ ಸಹ ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ಧೋರಣೆ ತಾಳುತ್ತಿರುವುದು ಆಘಾತಕಾರಿ ವಿಷಯವಾಗಿದೆ.
ಅಧಿಕಾರಿಗಳ ಈ ನಿರ್ಲಕ್ಷ್ಯ ಆಡಳಿತದ ಸಂಶಯಕ್ಕೆಡೆಮಾಡಿಕೊಟ್ಟಿದೆ. ಯೋಜನೆ ಆರಂಭಿಸುವಾಗ ಇರುವ ಉತ್ಸಾಹ ಅದರ ಸುರಕ್ಷತೆ ಬಗ್ಗೆ ಯಾಕಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕಳೆದ ಹಲವು ವರ್ಷಗಳಲ್ಲಿ ದೇಶದಾದ್ಯಂತ ವಿವಿಧ ಭಾಗಗಳಲ್ಲಿ ತೆರೆದ ಬಾವಿಗಳಲ್ಲಿ ಮಕ್ಕಳು ಬಿದ್ದು ದಾರುಣ ಘಟನೆಗಳು ನಡೆದಿರುವುದು ಮರೆಯು ವಂತಿಲ್ಲ. ಮುಂದೊಂದು ದಿನ ಇಂತಹ ದುರ್ಘಟನೆಗಳು ಮರುಕಳಿಸುವುದನ್ನು ತಳ್ಳಿಹಾಕುವಂತಿಲ್ಲ.
ಮುಂದಿನ ದಿನಗಳಲ್ಲಿ ಅವಘಡ ಸಂಭವಿಸುವ ಮೊದಲು ಸಂಬಂಧಿತ ಇಲಾಖೆ ಎಚ್ಚೆತ್ತು, ಇಂತಹ ಬಾವಿಗಳಿಗೆ ಮಣ್ಣು ತುಂಬಿಸಿ ಮುಚ್ಚುವ ಕ್ರಮ ಕೈಗೊಳ್ಳುತ್ತದೆಯೇ ಅಥವಾ ದುರಂತದ ನಂತರದ ಪ್ರತಿಕ್ರಿಯೆಗೆ ಮುಂದಾಗುತ್ತ ದೆಯೇ? ಮತ್ತೆ ಮರುಕಳಿಸಲಿ ಎಂದು ಕಾಯುತ್ತಿದೆಯೇ ಎಂಬುದು ಸಾರ್ವಜನಿಕ ವಲಯದಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ.

Leave a Reply

Your email address will not be published. Required fields are marked *