ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಹೋಳಿಯ ಬಣ್ಣದಲ್ಲಿ ಮನಸೆಳೆದ ಚೆಂದುಳ್ಳಿ ಚೆಲುವೆ: ಒಂದು ಬಣ್ಣ.. ಒಂದು ನಗು… ಒಂದು ಪ್ರೀತಿ…

Share Below Link

ಹೋಳಿ ಎಂದರೆ ಬಣ್ಣಗಳ ಹಬ್ಬ. ಅಂದು ಸಾಮಾನ್ಯವಾಗಿ ಬಹುತೇಕ ಎಲ್ಲರ ಮುಖದಲ್ಲೂ ನಗು, ಸಂಭ್ರಮ ಮತ್ತು ಸ್ನೇಹದ ಸಿಂಚನ ಮನೆಮಾಡಿರುತ್ತದೆ. ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಪರಸ್ಪರ ಬಣ್ಣ ಎರಚಿಕೊಂಡು ಸಂತೋಷ ಹಂಚಿಕೊಳ್ಳುವ ಸುಂದರ ಕ್ಷಣ ಅದು.
ಆದರೆ ಈ ವರ್ಷದ ಹೋಳಿ ಅದೇಕೋ ನನ್ನ ಪಾಲಿಗೆ ಸ್ವಲ್ಪ ವಿಭಿನ್ನವಾಗಿತ್ತು. ನಗರವೆಲ್ಲ ಬಣ್ಣಗಳ ಸಂಭ್ರಮದಲ್ಲಿ ತೇಲುತ್ತಿದ್ದರೂ ನನ್ನ ಮನಸ್ಸಿನೊಳಗೆ ಮಾತ್ರ ಏನೋ ವಿಚಿತ್ರ ಖಾಲಿತನ. ಈ ಬಾರಿ ಹೋಳಿ ಆಡಬೇಕು ಎನ್ನುವ ಉತ್ಸಾಹವೇ ನನಗಿರಲಿಲ್ಲ.
ಆದರೂ ರೂಢಿಯಂತೆ ವೈಟ್ ಲಿನಿನ್ ಕುರ್ತಾ ಧರಿಸಿ ಬುಲೆಟ್ ಏರಿ ಗಾಂಧಿ ಬಜರ್ ಕಡೆ ಹೊರಟೆ. ಸ್ನೇಹಿತರಿಗೆ ಹಬ್ಬದ ಶುಭಾಶಯ ಹೇಳಿ, ನಂತರ ನನ್ನ ದೈನಂದಿನ ಕೆಲಸಕ್ಕೆ ಹಿಂತಿರುಗೋಣ ಎಂಬುದಷ್ಟೇ ನನ್ನ ಪ್ರೋಗ್ರಾಂ ಆಗಿತ್ತು.
ಗಾಂಧಿ ಬಜರ್ ತಲುಪಿದಾಗ ನನ್ನ ಜಿಗರಿ ದೋಸ್ತ್‌ಗಳು ಎಂದಿನಂತೆ ಬಣ್ಣದ ಪುಡಿಗಳೊಂದಿಗೆ ಸಿದ್ಧರಾಗಿದ್ದರು. ಯಾಕ್ ಮಚ್ಚಾ… ಈ ಸಲ ಹೋಳಿ ಆಡಕ್ಕಿಲ್ವಾ… ಎಂದು ಕೇಳುತ್ತಾ ನನ್ನ ಮೇಲೆ ಬಣ್ಣ ಎರಚಲು ಮುಂದಾದರು.
ನಾನು ಸಣ್ಣ ನಗುವೊಂzನ್ನು ಬೀರಿ…
ಇಲ್ಲ ಕಣ್ರೋ… ಈ ಬಾರಿ ಯಾಕೋ ಹೋಳಿ ಆಡೋಕೆ ನನಗೆ ಮೂಡ್ ಇಲ್ಲ. ಹಾಗೇ ನಿಮಗೆ ವಿಶ್ ಮಾಡಿ ಹೋಗೋಣ ಅಂತ ಬಂದೆ ಎಂದು ಹೇಳಿ ಎಲ್ಲರಿಗೂ wish ಮಾಡಿ ಅಲ್ಲಿಂದ ಹೊರಟೆ.
ನನಗರಿವಿಲ್ಲದಂತೆ ನನ್ನ ಬುಲೆಟ್ ಸದ್ದು ಮಾಡುತ್ತಾ ನೆಹರೂ ರಸ್ತೆ ಮೂಲಕ ಸೀದಾ ಗೋಪಿ ಸರ್ಕಲ್ ಕಡೆ ಸಾಗುತ್ತಿತ್ತು. ಆದರೆ ಅಲ್ಲಿ ಕಂಡ ದೃಶ್ಯ ಮತ್ತಷ್ಟು ಸಂಭ್ರಮಭರಿತವಾಗಿತ್ತು. ಯುವಕ-ಯುವತಿಯರು ಗುಂಪು ಗುಂಪಾಗಿ ಸೇರಿ ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ, ಡಿಜೆ ಸೌಂಡ್‌ಗೆ ಹೆಜ್ಜೆ ಹಾಕುತ್ತಾ ಹೋಳಿಯ ಹಬ್ಬವನ್ನು ಸಂಭ್ರಮಿಸುತ್ತಿದ್ದರು. ಮುಂದೆ ಸಾಗುವುದಕ್ಕೂ ಆಗದಷ್ಟು ಜನಸಂದಣಿ.


ಸರಿ, ಹೀಗೇ ನಿಧಾನವಾಗಿ u – turn ತೆಗೆದುಕೊಂಡು ಹೋಗಿಬಿಡೋಣ ಎಂದು ಯೋಚಿಸುವಷ್ಟರಲ್ಲಿ ಏಕಾಏಕಿ ಯಾರೋ ನನ್ನ ಮೇಲೆ ಬಣ್ಣ ಎರಚಿಬಿಟ್ಟರು!
happy holi…! ಎಂದು ಮಧುರ ಧ್ವನಿಯೊಂದು ಕೇಳಿಸಿತು. ನಾನು ಬೆಚ್ಚಿಬಿದ್ದಂತೆ ತಿರುಗಿ ನೋಡಿದೆ.
ಬೊಗಸೆತುಂಬಾ ಬಣ್ಣ ಹಿಡಿದು ಅಲ್ಲಿ ನಿಂತಿದ್ದಳು… ನಗುಮೊಗದ ಚೆಂದುಳ್ಳಿ ಚೆಲುವೆ!
ಬಣ್ಣದ ಪುಡಿಯ ನಡುವೆ ಮಿಂಚುತ್ತಿದ್ದ ಅವಳ ಕಣ್ಣುಗಳು, ಮುಖ ತುಂಬಾ ಹರಡಿದ್ದ ಆ ನಿಷ್ಕಲ್ಮಷ ನಗು, ಆ ಕ್ಷಣದಲ್ಲಿ ಹೋಳಿಯ ಎ ಬಣ್ಣಗಳೂ ಅವಳ ಸೇರಿಕೊಂಡಂತಿತ್ತು. ನಿರೀಕ್ಷಿಸದ ಆ ಸಂದರ್ಭದಲ್ಲಿ ಒಂದು ಕ್ಷಣ ನನಗೆ ಕೋಪವೂ ಬಂತು. ಆದರೆ ಅದನ್ನು ತೋರಿಸಿಕೊಳ್ಳದೆhank you, wish you the same ಎಂದು ಹೇಳಿ ಸ್ವಲ್ಪ ಮುಂದೆ ಸಾಗಿದೆ.
ಆದರೆ ಏನೋ ನನ್ನೊಳಗೆ ಕಾಡಿತು. ಹಠಾತ್ ಹಿಂದಿರುಗಿ ನೋಡಿದೆ. ಆ ಕ್ಷಣದ ನನಗರಿವಿಲ್ಲದೆ ನಾನು ಅವಳ ಕಣ್ಣುಗಳ ಬಲೆಯಲ್ಲಿ ಸಿಲುಕಿಬಿಟ್ಟಿz.
ಅವಳದ್ದು ಕೇವಲ ಒಂದು ನಗು ಅಲ್ಲ, ಅದು ನನ್ನ ಬದುಕಿನ ಬಣ್ಣವಾಗಿತ್ತು. ಅವಳನ್ನು ನೋಡುತ್ತಾ ನನ್ನ ಮನಸ್ಸು ಹೀಗೆ ಗುನುಗಿತು…
ಬಣ್ಣಾ… ನನ್ನ ಒಲವಿನ ಬಣ್ಣಾ…
ನನ್ನ ಬದುಕಿನ ಬಣ್ಣಾ…
ನೀ ನಕ್ಕರೆ ಹಸಿರು ಉಸಿರು, ಉಲ್ಲಾಸದ ಉಸಿರು
ನೂರಾಸೆಯ ಚಿಲುಮೆಯೇ ಬಣ್ಣಾ… ಬಣ್ಣಾ…
ಆ ಕ್ಷಣದಲ್ಲಿ ನನಗೆ ಸ್ಪಷ್ಟವಾಯಿತು. ಹೋಳಿ ಆಡೋಕೆ ಮೂಡ್ ಇಲ್ಲ ಎಂದು ಹೊರಟಿದ್ದ ನಾನು, ನಿಜವಾಗಿ ನನ್ನ ಬದುಕಿನ ಬಣ್ಣವನ್ನೇ ಹುಡುಕುತ್ತಿzನೋ ಎಂದು.
ಅವಳ ಕಣ್ಣುಗಳು, ಅವಳ ನಿಷ್ಕಲ್ಮಷ ನಗು, ಅದೇ ಕ್ಷಣದಲ್ಲಿ ನನ್ನ ಮನಸ್ಸು ಸೋತುಹೋಯಿತು ಅವಳ ಪ್ರೀತಿಗೆ. ಆಗ ಮತ್ತೆ ನನ್ನ ಹೃದಯ ಮತ್ತೊಮ್ಮೆ ಹೀಗೆ ಹಾಡಿತು…
ಆಕಾಶದ ದೀಪವು ನೀನು
ನಿನ್ನ ಕಂಡಾಗ ಸಂತೋಷವೇನು
ಆ ನೋಟದಲಿ ಹಿತವೇನು
ಮರೆಯಾದಾಗ ನೋವೇನು…
ಆ ದಿನ ನಾನು ಹೋಳಿ ಆಡಲೇ ಇಲ್ಲ. ಆದರೆ ಅದೇ ದಿನ ನನ್ನ ಬದುಕಿನಲ್ಲಿ ಅತ್ಯಂತ ಸುಂದರವಾದ ಬಣ್ಣದ ಹಬ್ಬ ಆರಂಭವಾಯಿತು. ಬಣ್ಣ ಎರಚಿದ ಆ ಕ್ಷಣದಲ್ಲಿ ನನಗರಿವಿಲ್ಲದೇ ಒಂದು ಬಣ್ಣಬಣ್ಣದ ಪ್ರೀತಿ ನನ್ನ ಹೃದಯದಲ್ಲಿ ಹುಟ್ಟಿಕೊಂಡಿತು.

Leave a Reply

Your email address will not be published. Required fields are marked *