ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಏ.6: ಓಕುಳಿ ಮಹೋತ್ಸವ – ಆಂಜನೇಯಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವ

Share Below Link

ಹೊನ್ನಾಳಿ: ವ್ಯಾಸ ಮಹರ್ಷಿ ಪ್ರತಿಷ್ಠಾಪಿತ ತಾಲೂಕಿನ ಕುಂದೂರು ಶ್ರೀ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಭಕ್ತಾದಿಗಳ ಸಮ್ಮುಖದಲ್ಲಿ ವಿಜಂಭಣೆಯಿಂದ ನೆರವೇರಿತು.
ಶ್ರೀ ಆಂಜನೇಯ ಸ್ವಾಮಿಯ ಕೋರೂಟದ ಬಳಿಕ ಏ.೩ರ ಬುಧವಾರ ಮಧ್ಯರಾತ್ರಿಯಿಂದ ೪ರ ಗುರುವಾರ ಮುಂಜನೆಯವರೆಗೆ ಗಜೋತ್ಸವ ವಿಜಂಭಣೆಯಿಂದ ಜರುಗಿತು. ಬಳಿಕ ಮಧ್ಯಾಹ್ನ ೧೨.೨೨ಕ್ಕೆ ವೈಭವದ ರಥೋತ್ಸವ, ಡೊಳ್ಳು, ಭಜನೆ, ತಮಟೆ, ಕಹಳೆ, ಜಗಟೆ, ಚಕ್ರವಾದ್ಯ, ಸಮಾಳ ಮೇಳಗಳ ಅದ್ದೂರಿ ಮಂಗಳಕರ ನಿನಾದದ ಮಧ್ಯೆ ಸನಾತನ ಪದ್ಧತಿಯಂತೆ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮರಥಾರೋಹಣ ಹಾಗೂ ಉತ್ಸವಗಳು ವೈಭವದಿಂದ ನಡೆದವು. ಭಕ್ತರು ತೇರಿಗೆ ಬಾಳೆಹಣ್ಣು, ಮೆಣಸಿನಕಾಳು, ಮಂಡಕ್ಕಿ ಮತ್ತಿತರ ವಸ್ತುಗಳನ್ನು ಸಮರ್ಪಿಸುತ್ತಿದ್ದ ದೃಶ್ಯ ಕಂಡು ಬಂತು. ರಥ ಮುಂದಕ್ಕೆ ಚಲಿಸಿದ ನಂತರ ಭಕ್ತರು ತೇರಿಗೆ ಸಮರ್ಪಿಸಿದ ಮೆಣಸಿನಕಾಳುಗಳನ್ನು ಆಯ್ದು ಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.


ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಮತ್ತಿತರ ಜಿಗಳು ಸೇರಿದಂತೆ ರಾಜ್ಯದ ವಿವಿಧ ಭಾಗ ಗಳಿಂದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತಮ್ಮ ಹರಕೆ, ಕಾಣಿಕೆ ಸಮರ್ಪಿಸಿದರು.
ಏ.೫ರ ಶುಕ್ರವಾರ ಮಧ್ಯಾಹ್ನ ೩ರಿಂದ ಸಂಜೆ ೬.೩೦ರವರೆಗೆ ಶ್ರೀ ಆಂಜನೇಯ ಸ್ವಾಮಿಯ ವಿಶಿಷ್ಟವಾದ ಮುಳ್ಳೋತ್ಸವ ಹಾಗೂ ಕಾರ್ಣಿಕ ಮಹೋತ್ಸವ ನಡೆಯಿತು. ದೇವಾಲಯದ ಪಕ್ಕದ ಅಗಸೆ ಬಾಗಿಲಿಗೆ ಹೊಂದಿಕೊಂಡಂತೆ ಎತ್ತರದ ಕಾರೆ ಮುಳ್ಳಿನ ಗದ್ದುಗೆ ಸಿದ್ಧಪಡಿಸಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಆರಂಭದಲ್ಲಿ ದಾಸಪ್ಪನವರು ಮುಳ್ಳುಗದ್ದುಗೆ ಏರುವ ಮೂಲಕ ವಿದ್ಯುಕ್ತವಾಗಿ ಈ ಕಾರ್ಯಕ್ರಮ ಪ್ರಾರಂಭವಾಯಿತು.
ಬಡವ-ಬಲ್ಲಿದ, ಜತಿ-ಮತ ಭೇದವಿಲ್ಲದೆ ಹರಕೆ ಹೊತ್ತ ಸಮಸ್ತ ಭಕ್ತಾದಿಗಳು ಸಾಮೂಹಿಕವಾಗಿ ಗದ್ದುಗೆ ಏರಿ ಮುಳ್ಳು ತುಳಿಯುವ ದೃಶ್ಯ ಭಯಾನಕವಾಗಿದ್ದರೂ ಭಕ್ತಿಯ ಪರಾಕಾಷ್ಟೆಯಿಂದ ಇವೆಲ್ಲವೂ ಗೌಣವಾಗುತ್ತವೆ. ನಂತರ ಧಾರ್ಮಿಕ ವಿಧಿ-ವಿಧಾನ ದಿಂದ ದೇವರ ಪಲ್ಲಕ್ಕಿ ಏರಿದ ನಂತರ ಕಾರ್ಣಿಕ ನುಡಿಯುವ ದಾಸಪ್ಪ ನವರ ದೇವವಾಣಿ ಮೊಳಗಿತು.
ಏ.೬ರಂದು ಬೆಳಿಗ್ಗೆ ೧೦.೩೦ಕ್ಕೆ ಓಕುಳಿ ಮಹೋತ್ಸವ, ರಾತ್ರಿ ೮ಕ್ಕೆ ಶ್ರೀ ಆಂಜನೇಯ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಜವುಳ, ಬಾಯಿ ಬೀಗ, ಮುದ್ರಾಧಾರಣೆ ಮುಂತಾದ ಭಕ್ತರ ಹರಕೆ-ಸೇವೆಗಳು ನಡೆಯುತ್ತವೆ.
ಉಪ ತಹಸೀಲ್ದಾರ್ ಮಂಜುನಾಥ್ ಕೆ.ಇಂಗಳಗೊಂದಿ, ಪ್ರಭಾರ ರಾಜಸ್ವ ನಿರೀಕ್ಷಕ ಬಸವರಾಜ ಜವಳಿ, ಕುಂದೂರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಜೆಬಿಎಚ್ ಪ್ರಭಾಕರಮೂರ್ತಿ. ಕುಂದೂರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಸಿ.ಕೆ. ಶೇಖರಪ್ಪ, ಕಾರ್ಯದರ್ಶಿ ಎಸ್.ಎಂ. ಜಗದೀಶ್, ಪ್ರಧಾನ ಅರ್ಚಕ ಕೆ.ಎಸ್. ಶ್ರೀನಿವಾಸ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಜಿ. ಶಿವಕುಮಾರ್, ಕೆ.ಜಿ. ಗುರುರಾಜ್ ಪಟೇಲ್, ಕುಂದೂರು ಗ್ರಾಪಂ ಮಾಜಿ ಅಧ್ಯಕ್ಷರಾದ ಎಸ್. ಧನಂಜಯ್, ರಹಮತ್ ಉ ಖಾನ್, ತಾಪಂ ಮಾಜಿ ಅಧ್ಯಕ್ಷ ತಿಪ್ಪೇಶಪ್ಪ, ಕುಂದೂರು ಗ್ರಾಪಂ ಅಧ್ಯಕ್ಷೆ ರತ್ನಮ್ಮ ಕರಿಬಸಪ್ಪ, ಉಪಾಧ್ಯಕ್ಷ ಚಿದಾನಂದಮೂರ್ತಿ, ಸದಸ್ಯರಾದ ಎಸ್.ಆರ್. ಪ್ರಸನ್ನ ಕುಮಾರ್, ರೇಖಾ ಎನ್.ಜಿ. ರೇವಣಸಿದ್ಧಪ್ಪ ಸೇರಿದಂತೆ ಕುಂದೂರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.