ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಅತಿಥಿ ಶಿಕ್ಷಕರು- ಉಪನ್ಯಾಸಕರಿಗೆ ಎಲ್ಲಿದೆ ನ್ಯಾಯ: ಪರಿಷತ್‌ನಲ್ಲಿ ಶಾಸಕ ಸರ್ಜಿ ಪ್ರಶ್ನೆ

Share Below Link

ಬೆಂಗಳೂರು :- ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ವೇತನವನ್ನು ಪರಿಷ್ಕೃತಗೊಳಿಸುವಂತೆ ಶಾಸಕರಾದ ಡಾ. ಧನಂಜಯ ಸರ್ಜಿ ಅವರು ಸರಕಾರವನ್ನು ಒತ್ತಾಯಿಸಿದರು.
೧೬ನೇ ಚಳಿಗಾಲದ ವಿಧಾನ ಪರಿಷತ್ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆ ಧ್ವನಿ ಎತ್ತಿದ ಅವರು, ಕಾರ್ಮಿಕ ಕಾಯಿದೆಯ ಪ್ರಕಾರವಾದರೂ ವೇತನವನ್ನು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಒಟ್ಟು ೪೮, ೬೫೭ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಎಸ್ ಎಸ್ ಎಲ್ ಸಿ ಮುಗಿಸಿ ಗ್ರೂಪ್ ಡಿ ಆಗಿಯೋ, ಸೆಕ್ಯುರಿಟಿ ಆಗಿಯೋ ಅಥವಾ ಅಟೆಂಡರ್ ಆಗಿಯೋ ಕೆಲಸ ಮಾಡಿದರೂ ಕನಿಷ್ಠ ೧೭,೫೦೦ ರೂ. ವೇತನ ಲಭಿಸುತ್ತದೆ. ಆದರೆ, ೨ ವರ್ಷ ಪಿಯುಸಿ ಮುಗಿದ ನಂತರ ಮೂರು ವರ್ಷ ಪದವಿ ಮುಗಿಸಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಕನಿಷ್ಠ ವೇತನವೂ ದೊರೆಯುತ್ತಿಲ್ಲ. ಗ್ರೂಪ್ ಡಿ, ಅಟೆಂಡರ್‌ಗಳು ಪಡೆಯುವ ಮೊತ್ತವನ್ನು ಅತಿಥಿ ಉಪನ್ಯಾಸಕರು ದುಡಿಯಬೇಕೆಂದರೆ ಕನಿಷ್ಠ ೨೫ ವರ್ಷಗಳ ಕಾಲ ಸೇವೆ ಸಲ್ಲಿಸಬೇಕಾಗು ತ್ತದೆ, ಇಂತಹ ಸ್ಥಿತಿಯಲ್ಲಿ ಅತಿಥಿ ಉಪನ್ಯಾಸಕರಿದ್ದು, ಎಲ್ಲಿದೆ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಲಾ ಮತ್ತು ಸಾಕ್ಷರತಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ, ೨೦೨೨ರಲ್ಲಿ ಅತಿಥಿ ಉಪನ್ಯಾಸಕರ ವೇತನವನ್ನು ಹೆಚ್ಚಳ ಮಾಡಲಾಗಿತ್ತು, ಮತ್ತೆ ವೇತನ ಹೆಚ್ಚಳ ಮಾಡುವುದು ಅಗತ್ಯವಾಗಿದೆ, ಈ ಬಗ್ಗೆ ಮುಂದಿನ ದಿನಗಳಲ್ಲಿ ಅಗತ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸಚಿವರ ಉತ್ತರಕ್ಕೆ ಒಪ್ಪದ ಶಾಸಕ ಡಾ.ಧನಂಜಯ ಸರ್ಜಿ ಅವರು, ಇದು ರಾಜ್ಯದ ಗಂಭೀರ ಸಮಸ್ಯೆ ಯಾಗಿದ್ದು, ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸುವ ಅವಶ್ಯಕತೆ ಇದೆ, ನಿಯಮ ೫೮ರ ಅಡಿ ಇದಕ್ಕೆ ಅರ್ಧ ಗಂಟೆ ಕಾಲ ಕಾಲಾವಕಾಶವನ್ನು ನೀಡಬೇಕು ಎಂದು ಸಭಾಪತಿಗಳನ್ನು ಕೋರಿದರು. ಮುಂದಿನ ದಿನಗಳಲ್ಲಿ ಅವಕಾಶ ನೀಡುವುದಾಗಿ ಸಭಾಪತಿಗಳು ಸಹಮತಿಸಿದರು.

Leave a Reply

Your email address will not be published. Required fields are marked *