ಆತ್ಮಸ್ಥೈರ್ಯ ಇದ್ದರೆ ಪ್ರತಿಭೆ ಹೊರಬರಲು ಸಾಧ್ಯ…
ಶಿವಮೊಗ್ಗ : ಕೌಶಲ್ಯಗಳು ಬದುಕನ್ನು ರೂಪಿಸಲು ಪ್ರೇರಣೆ ಎಂದು ಮಾಜಿ ಸಂಸದ ಹಾಗೂ ಸಹ್ಯಾದ್ರಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಆಯನೂರು ಮಂಜುನಾಥ್ ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ, ಸಹ್ಯಾದ್ರಿ ಕಲಾ ಕಾಲೇಜು ಆಶ್ರಯದಲ್ಲಿ ಕಾಲೇಜಿನ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಬೆಂಗಳೂರಿನ ಮಲೆನಾಡು ಕೋಚಿಂಗ್ ಸೆಂಟರ್ ಸಹಕಾರದಲ್ಲಿ ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಏನೇ ಪದವಿ ಪಡೆದರೂ ಅದು ಬದುಕನ್ನು ರೂಪಿಸಲು ಸಾಧ್ಯವಾಗುವುದಿಲ್ಲ ಇದರ ಜೊತೆಗೆ ಕೌಶಲ್ಯಗಳು ಬೇಕೇಬೇಕು. ಈ ಕೌಶಲ್ಯಗಳು ನಮ್ಮ ಬದುಕನ್ನು ಆರ್ಥಿಕ ಸ್ವಾವಲಂಬನೆಯ ಜೊತೆಗೆ ಸಾಮಾಜಿಕ ಬಲವನ್ನು ಕೊಡುತ್ತವೆ ಎಂದರು.
ವಿದ್ಯಾರ್ಥಿಗಳು ಕೇವಲ ಓದಿಗೆ ಮಾತ್ರ ಸೀಮಿತವಾಗದೇ ಸಿದ್ದಾಂತ ಗಳನ್ನು ರೂಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ಸ್ಪರ್ಧಾತ್ಮಕ ಯುಗದಲ್ಲಿ ಸವಾಲುಗಳನ್ನು ಎದುರಿಸಲೇಬೇಕು. ಆತ್ಮಸ್ಥೈರ್ಯ ಇದ್ದರೆ ಮಾತ್ರ ಪ್ರತಿಭೆಗಳು ಹೊರಬರಲು ಸಾಧ್ಯ. ಜನ ಸಂಪಾದನೆ ಅತಿಮುಖ್ಯ ವಾಗುತ್ತದೆ. ನಮ್ಮ ಶಿಕ್ಷಣ ಕೂಡ ಆಂತರಿಕ ಪ್ರತಿಭೆಗಳನ್ನು ಹೊರ ಹಾಕುವಲ್ಲಿ ಸೋಲುತ್ತಿದೆ ಎಂದರು.
ಅಧ್ಯಾಪಕರು ಕೂಡ ಅಧ್ಯಯನ ಶೀಲರಾಗಬೇಕಾಗಿದೆ. ವರ್ತಮಾನಕ್ಕೆ ಸಿದ್ದರಾಗದಿದ್ದರೆ ಅವರ ಬೋಧನೆಗಳು ಸಿದ್ದಪಾಠದಂತಾಗುತ್ತದೆ. ಪದವಿಗಳು ಕೇವಲ ಯಂತ್ರವಲ್ಲ, ಅದು ಬದುಕನ್ನು ರೂಪಿಸುವಂತಿರಬೇಕು. ವಿದ್ಯಾರ್ಥಿಗಳು ಪೂರಕಜನದ ಕೌಶಲ್ಯದ ಕಡೆ ಗಮನಹರಿಸಬೇಕು. ಅನಗತ್ಯ ವಿಷಯಗಳ ಬಿಡಬೇಕು. ಏಕೆಂದರೆ ಬದುಕು ಒಂದು ಪಾಠ ಶಾಲೆ ಎಂದರು.
ಸಹ್ಯಾದ್ರಿ ಕಲಾ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ. ಗುರುಮೂರ್ತಿ ಮಾತನಾಡಿ, ಇತಿಹಾಸ ಓದಿದರಷ್ಟೇ ಸಾಲದು, ಇತಿಹಾಸವನ್ನು ನಿರ್ಮಾಣ ಮಾಡ ಬೇಕಾಗಿದೆ. ತಲೆತಗ್ಗಿಸಿ ಓದಿದರೆ, ತಲೆಎತ್ತಿ ಬಾಳಬಹುದು. ಭತ್ತ ತುಂಬುವ ಚೀಲವಾಗಬಾರದು. ಭತ್ತ ಬೆಳೆಯುವ ಗದ್ದೆಗಳಾಗಿ ಎಂದರು.
ಸರ್ಕಾರಿ ಶಾಲೆಗಳೆ ಇಂದು ಶ್ರೇಷ್ಠ ಆದರೆ ಸರ್ಕಾರಿ ಕೆಲಸ ಬೇಕು. ಸರ್ಕಾರಿ ಶಾಲೆ ಬೇಡ ಎಂಬಂತ ಸ್ಥಿತಿ ಇಂದು ಬಂದಿದೆ. ಆದ್ದರಿಂದ ಅಂಕಗಳ ಜೊತೆಗೆ ಕೌಶಲ್ಯಗಳು ಇದ್ದರೆ ವಿದ್ಯಾರ್ಥಿಗಳು ನಿರಾಶರಾಗುವುದಿಲ್ಲ. ಆತ್ಮಹತ್ಯೆಯಂತ ಯೋಚನೆಗಳು ಕೂಡ ದೂರವಾಗುತ್ತವೆ ಎಂದರು.
ಮಲೆನಾಡು ಕೋಚಿಂಗ್ ಸೆಂಟರ್‌ನ ನಿರ್ದೇಶಕರು ಮಾತನಾಡಿ, ವಿದ್ಯಾರ್ಥಿ ಗಳು ಕುತೂಹಲ ಬೆಳೆಸಿಕೊಳ್ಳಬೇಕು. ಪೋನ್‌ಗಳಲ್ಲಿ ಕಾಲ ಕಳೆಯಬೇಡಿ, ಇಂಗ್ಲೀಷ್ ಭಾಷೆ ಬೇಕು, ಆದರೆ ಅದು ವ್ಯವಹಾರಕ್ಕೆ ಮಾತ್ರ, ಬದುಕನ್ನು ಸ್ಪರ್ಧೆಯೆಂದು ತಿಳಿದುಕೊಳ್ಳಿ, ಅಂಕವೇ ಬೇರೆ, ಉದ್ಯೋಗವೇ ಬೇರೆಯಾಗಿರು ತ್ತದೆ. ಸರ್ಕಾರಿ ಶಾಲೆಗಳು ಶ್ರೇಷ್ಟ ಎಂಬುದಕ್ಕೆ ನಾವೇ ಉದಾಹರಣೆ ಯಾಗಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೈಯ್ಯದ್ ಸನಾವುಲ್ಲಾ ಮಾತನಾಡಿ, ಸಮಯ ಮರಳಿ ಬರುವುದಿಲ್ಲ, ವಿದ್ಯಾರ್ಥಿ ಜೀವನವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ, ಗುರಿ ಇಲ್ಲದ ಪ್ರಯಾಣ ಯಶಸ್ವಿಯಾಗುವುದಿಲ್ಲ ಎಂದರು.
ಸಹ್ಯಾದ್ರಿ ಕಲಾ ಕಾಲೇಜಿನ ಹಿರಿಯ ವಿದ್ಯಾರ್ಥಿ ವೈ.ಹೆಚ್. ನಾಗರಾಜ್, ಮಾಚೇನಹಳ್ಳಿ ಕೆಎಸ್‌ಆರ್‌ಪಿ ಕಮಾಂಡೆಂಟ್ ಎಸ್. ಯುವಕುಮಾರ್, ವಿಜನ ಕಾಲೇಜಿನ ಪ್ರಾಂಶುಪಾಲೆ ಡಾ.ರಾಜೇಶ್ವರಿ ಮುಂತಾದವರು ಇದ್ದರು.
ಕಾರ್ಯಕ್ರಮ ಸಂಚಾಲಕ ಡಾ. ಕೆ.ಎನ್. ಮಂಜುನಾಥ್ ಅವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.