ಸಹಕಾರ ಸಂಘಗಳ ಚುನಾವಣೆಗಳು ಪಕ್ಷಾತೀತವಾಗಿರಲಿ…
ಶಿವಮೊಗ್ಗ: ಸಹಕಾರ ಸಂಘಗಳ ಚುನಾವಣೆಗಳು ಯಾವುದೇ ಪ್ರಭಾವಗಳಿಗೆ ಒಳಗಾಗದೆ ಪ್ರಜಾ ಪ್ರಭುತ್ವದ ಅಡಿಯಲ್ಲಿ ನಡೆಯಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥಗೌಡ ಹೇಳಿದರು.
ಅವರು ಇಂದು ಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ,ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಆಶ್ರಯದಲ್ಲಿ ಶಿವಮೊಗ್ಗ ಉಪ ವಿಭಾಗದಲ್ಲಿ ಚುನಾವಣೆ ನಡೆಯುವ ಸಹಕಾರ ಸಂಘಗಳ ರಿಟರ್ನಿಂಗ್ ಅಧಿಕಾರಿ ಮತ್ತು ಮುಖ್ಯ ಕಾರ್ಯ ನಿರ್ವಾಹಕರುಗಳಿಗೆ ಆಯೋಜಿಸಿದ್ದ ಚುನಾವಣೆ ಪೂರ್ವ ಸಿದ್ಧತಾ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಚುನಾವಣೆಗಳು ರಾಜಕೀಯ ಪ್ರೇರಿತ ವಾಗಬಾರದು. ಈ ಚುನಾವಣೆಗಳ ಪ್ರಕ್ರಿಯೆಗಳು ಆರು ತಿಂಗಳ ಮೊದಲೇ ಆಗಬೇಕು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಪಾತ್ರ ಇಲ್ಲಿ ಬಹಳ ಮುಖ್ಯ ಎಂದರು.
ಸಮಗ್ರವಾಗಿ ಸದಸ್ಯರ ಪಟ್ಟಿ ತಯಾರಾಗಬೇಕು. ಒಂದು ವರ್ಷದ ಮೊದಲು ಸದಸ್ಯರಾದವರಿಗೆ ಮಾತ್ರ ಮತದಾನದ ಹಕ್ಕು ಇರುತ್ತದೆ. ಯಾವುದೇ ಕಾರಣಕ್ಕೂ ಮತದಾನ ಪ್ರಕ್ರಿಯೆಯನ್ನು ಕಸಿದುಕೊಳ್ಳುವಂತಹ ಸಂಗತಿಗಳು ನಡೆಯಬಾರದು. ಯಾವುದೇ ರಾಜಕಾರಣಿಗಳ ಪ್ರವೇಶ ಸಲ್ಲದು. ಇದು ಪಕ್ಷಾತೀತವಾಗಿರುತ್ತದೆ. ಯಾವುದೇ ರಾಜಕೀಯ ಪಕ್ಷದ ಚಿಹ್ನೆಗಳು ವ್ಯಕ್ತಿಗಳ ಗುರುತು ಇರುವುದಿಲ್ಲ ಎಂದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಮಾತನಾಡಿ, ಇದೊಂದು ವಿಶೇಷ ತರಬೇತಿ ಶಿಬಿರವಾಗಿದೆ. ಚುನಾವಣಾ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳು ನಿಯಮಗಳು, ಈ ತರಬೇತಿ ಶಿಬಿರದಿಂದ ತಿಳಿಯುತ್ತವೆ. ಸಹಕಾರ ಸಂಘಗಳ ಚುನಾವಣೆ ಗಳೆಂದರೆ ರಾಜಕೀಯ ಚುನಾವಣೆಗಳು ಅಲ್ಲ. ಇಲ್ಲಿ ಎಲ್ಲ ಪಕ್ಷದವರು ಇರುತ್ತಾರೆ. ಪರಸ್ಪರ ಸ್ನೇಹದಿಂದ, ವಿಶ್ವಾಸದಿಂದ ಚುನಾವಣೆಗಳನ್ನು ಎದುರಿಸಬೇಕು ಎಂದರಲ್ಲದೆ ಸೋಲು ಗೆಲುವು ನಂತರದ ಮಾತು ಎಂದರು.
ಜಿ.ಕೆ.ರಾಮಪ್ಪ ಮತ್ತು ಶಾಂತರಾಜು ತರಬೇತಿ ನೀಡಿದರು. ಸಹಕಾರಿ ಯೂನಿಯನ್ ಬ್ಯಾಂಕ್‌ನ ಜಿಲ್ಲಾಧ್ಯಕ್ಷ ಹೆಚ್.ಯು. ಸುರೇಶ್ ವಾಟಗೋಡು ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಪಿ.ವೀರಮ್ಮ, ಎಸ್.ಎಲ್.ನಿಖಿಲ್, ಉಪಾಧ್ಯಕ್ಷ ಹೆಚ್.ಎಸ್. ಸಂಜೀವ್ ಕುಮಾರ್ ಇನ್ನಿತರರಿದ್ದರು. ಸಿಇಓ ಯಶವಂತ್ ಕುಮಾರ್ ಸ್ವಾಗತಿಸಿದರು.