ಬಿಜೆಪಿಯಿಂದ ಸಂವಿಧಾನ ಸನ್ಮಾನ್ ಅಭಿಯಾನ..
ಶಿವಮೊಗ್ಗ: ಜಿಲ್ಲಾ ಬಿಜೆಪಿಯಿಂದ ಜಿಲ್ಲಾದ್ಯಂತ ನ.೨೬ರಿಂದ ಜ.೨೬ ರವರೆಗೆ ಎರಡು ತಿಂಗಳ ಕಾಲ ಸಂವಿಧಾನ ಸನ್ಮಾನ್ ಅಭಿಯಾನ ಆಯೋಜಿಸಿದೆ ಎಂದು ಅಭಿಯಾನದ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ರಾಜ್ಯ ಬಿಜೆಪಿಯ ಮಾರ್ಗದರ್ಶನ ದಲ್ಲಿ ಇಡೀ ರಾಜ್ಯದಾದ್ಯಂತ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಂವಿಧಾನ ಸನ್ಮಾನ್ ಅಭಿಯಾನವನ್ನು ಆಯೋಜಿಸಿದ್ದು, ಇದರ ಅಂಗವಾಗಿ ಜಿಲ್ಲಾ ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ತಾಲ್ಲೂಕು ಕೇಂದ್ರಗಳಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಕುರಿತಂತೆ ರಸಪ್ರಶ್ನೆ, ಭಾಷಣ, ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದರು.
ಎರಡು ತಿಂಗಳು ಕಾಲ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ ಚಿಂತಕರು, ಸ್ಥಳೀಯ ಮಟ್ಟದ ಗಣ್ಯರು, ಸಹಕಾರ ಸಂಘಗಳು, ಸಂಘ ಸಂಸ್ಥೆಗಳು ನಮ್ಮ ಜೊತೆ ಕೈ ಜೋಡಿಸಲಿವೆ. ಸಾಮಾಜಿಕ ನ್ಯಾಯಕ್ಕಾಗಿ ನಾಗರೀಕರು ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ಈ ಕಾರ್ಯಕ್ರಮವನ್ನು ನಾವು ಆಯೋಜಿಸಿದ್ದೇವೆ ಎಂದರು.
ಬಿಜೆಪಿಗೆ ಸ್ಪಷ್ಟ ಬಹುಮತ ಬಂದರೆ ಸಂವಿಧಾನವನ್ನೇ ತಿದ್ದುಪಡಿ ಮಾಡುತ್ತಾರೆ. ಮೀಸಲಾತಿಯನ್ನು ಕಸಿದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ಸಿಗರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಈ ಅಭಿಯಾನದ ಮೂಲಕ ನಾವು ಅದನ್ನು ಸುಳ್ಳು ಎಂದು ತಿಳಿಸುತ್ತೇವೆ. ಸಂವಿಧಾನ ರಚನೆಯಾದ ಮೇಲೆ ಕಾಂಗ್ರೆಸ್ ನೇತೃತ್ವದ ಸರ್ಕಾರ ತಿದ್ದುಪಡಿ ಮಾಡಿದಷ್ಟು ಬೇರೆ ಯಾರು ಮಾಡಿಲ್ಲ. ಇಂದಿರಾ ಗಾಂಧಿಯವರು ಸಂವಿಧಾನವನ್ನು ತಿದ್ದುಪಡಿ ಮಾಡಿದ್ದು, ಅವರ ಸ್ವಾರ್ಥಕ್ಕೆ ಅನೇಕ ಬಾರಿ ಅವರು ತಿದ್ದುಪಡಿ ಮಾಡಿದ್ದಾರೆ. ತುರ್ತು ಪರಿಸ್ಥಿತಿಯನ್ನು ಕೂಡ ಹೇರಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸುಮಾರು ೧೦೬ ಬಾರಿ ಸಂವಿಧಾನ ತಿದ್ದುಪಡಿಯಾಗಿದೆ. ಕಾಂಗ್ರೆಸ್ಸೇತರ ಸರ್ಕಾರಗಳು ೩೧ ಬಾರಿ ತಿದ್ದುಪಡಿ ಮಾಡಿದ್ದಾರೆ. ವಾಜಪೇಯಿ ಸರ್ಕಾರ ೧೪ ಬಾರಿ ತಿದ್ದುಪಡಿ ಮಾಡಿದೆ. ಮೋದಿ ಸರ್ಕಾರ ೮ ಬಾರಿ ಮಾತ್ರ ತಿದ್ದುಪಡಿ ಮಾಡಿದೆ ಎಂದು ಮಾಹಿತಿ ನೀಡಿದರು.
ಭಾರತದ ಸಂವಿಧಾನ ಜಗತ್ತಿನಲ್ಲಿಯೇ ವಿಶೇಷವಾಗಿದ್ದು, ಅಂಬೇಡ್ಕರ್ ಇದರ ರೂವಾರಿ ಯಾಗಿದ್ದಾರೆ. ಅಂಬೇಡ್ಕರ್‌ಗೆ ಗೌರವ ಕೊಡುವಂತಹ ಕೆಲಸವನ್ನು ಬಿಜೆಪಿ ಮಾಡುತ್ತಲೆ ಬಂದಿದೆ. ಆದ್ದರಿಂದ ಕಾಂಗ್ರೆಸ್‌ನವರು ಬಿಜೆಪಿ ಸಂವಿಧಾನ ತಿದ್ದುಪಡಿ ಮಾಡುತ್ತದೆ ಎಂದು ವಿಷಬೀಜ ಬಿತ್ತುವುದನ್ನು ಕೂಡಲೇ ನಿಲ್ಲಿಸಬೇಕು ಎಂದರು. ಶಿವರಾಜ್, ವಿನ್ಸಂಟ್, ಮಂಗಳ, ಮೂರ್ತಿ, ಅಣ್ಣಪ್ಪ, ರಾಮು ಇದ್ದರು.