ನವೆಂಬರ್ 11 : ರಾಷ್ಟ್ರೀಯ ಶಿಕ್ಷಣ ದಿನ…
ಯಾವುದೇ ಒಂದು ರಾಷ್ಟ್ರದ ಸರ್ವತೋಮುಖ ಬೆಳವಣಿಗೆ ಯಲ್ಲಿ ಶಿಕ್ಷಣದ ಪಾತ್ರ ಬಹಳ ಇರುತ್ತದೆ. ಏಕೆಂದರೆ ಶಿಕ್ಷಣವು ದೇಶದ ಅಭಿವೃದ್ಧಿಯ ಸೂಚ್ಯಂಕ ವಾಗಿರುತ್ತದೆ. ಶಿಕ್ಷಣ ವ್ಯವಸ್ಥೆಯು ನಮ್ಮ ಭಾರತ ದೇಶದಲ್ಲಿ ಕಾಲದಿಂದ ಕಾಲಕ್ಕೆ ಬಹಳಷ್ಟು ಬದಲಾವಣೆಗಳನ್ನು ಅನುಭವಿಸಿದೆ. ಆಗಾಗ್ಯೆ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೆತ್ತಿಕೊಂಡಿದೆ.
ಭಾರತ ಹಳ್ಳಿಗಳ ದೇಶವಾಗಿರುವುದರಿಂದ ಹಳ್ಳಿಗಳ ಉದ್ಧಾರದ ಮೂಲಕವೇ ದೇಶದ ಉದ್ಧಾರ ಸಾಧ್ಯವಾಗುತ್ತದೆ. ಮೊದಲು ಹಳ್ಳಿ ಹಳ್ಳಿಗಳಲ್ಲಿ ಶಿಕ್ಷಣವು ಎಲ್ಲರಿಗೂ ಲಭ್ಯವಾಗಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಎಲ್ಲರಿಗೂ ಕೈಗೆಟುಕಬೇಕು. ಈ ನಿಟ್ಟಿನಲ್ಲಿ ಶಿಕ್ಷಣದ ಮಹತ್ವ ಮತ್ತು ಪ್ರಯೋಜನಗಳನ್ನು ದೇಶದ ಎ ಪ್ರಜೆಗಳಲ್ಲೂ ಅರಿವು ಮೂಡಿಸುವ ಮತ್ತು ನಮ್ಮ ದೇಶದ ಮೊದಲ ಶಿಕ್ಷಣ ಸಚಿವರಾದ ಮಲಾನಾ ಅಬುಲ್ ಕಲಾಂ ಅಜಾದ್ ರವರನ್ನು ಸ್ಮರಿಸುವ ದೃಷ್ಟಿಯಿಂದ ಪ್ರತಿವರ್ಷ ನ.೧೧ನೇ ತಾರೀಖನ್ನು ರಾಷ್ಟ್ರೀಯ ಶಿಕ್ಷಣ ದಿನವೆಂದು ಆಚರಿಸಲಾಗುತ್ತದೆ.
ಮಲಾನಾ ಅಬುಲ್ ಕಲಾಂ ಆಜದ್ ಅವರನ್ನು ಗೌರವಿಸಲು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ೨೦೦೮ರಲ್ಲಿ ‘ರಾಷ್ಟ್ರೀಯ ಶಿಕ್ಷಣ ದಿನ’ ಎಂದು ನ.೧೧ ಅನ್ನು ಘೋಷಿಸಿತು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ೨೦೦೮ರಲ್ಲಿ ಬಿಡುಗಡೆ ಮಾಡಿದ ಪ್ರಕಟಣೆ ಯಲ್ಲಿ, ಭಾರತದ ಈ ಮಹಾನ್ ಪುತ್ರನ ಜನ್ಮದಿನವನ್ನು ಸ್ಮರಿಸಲು ಸಚಿವಾಲಯವು ನಿರ್ಧರಿಸಿದೆ. ಭಾರತದಲ್ಲಿ ಶಿಕ್ಷಣಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಮೂಲಕ, ನ.೧೧ ರಿಂದ ೨೦೦೮ ರಿಂದ ಪ್ರತಿ ವರ್ಷ ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸಲಾಗು ತ್ತದೆ ಎಂದು ಹೇಳಿದೆ.
ಮಲಾನಾ ಅಬುಲ್ ಕಲಾಂ ಆಜದ್ ರವರು ೧೮೮೮ರಲ್ಲಿ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಜನಿಸಿದರು. ಅವರ ತಂದೆ ಮಲಾನಾ ಖೈರುದ್ದೀನ್ ಅವರು ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸ ರಾಗಿದ್ದರಿಂದ ಅವರು ತಮ್ಮ ಮಗನನ್ನು ಆರಂಭಿಕ ವರ್ಷಗಳಲ್ಲಿಯೇ ತಮ್ಮ ಶಿಕ್ಷಣದ ಅಡಿಯಲ್ಲಿ ತಂದರು. ಇವರ ಪೂರ್ಣ ಹೆಸರು ಅಬುಲ್ ಕಲಾಂ ಮೊಹಿಯುದ್ದೀನ್ ಅಹಮದ್ ಎಂದು. ಅಜದ್ ಎಂಬುದು ಇವರ ಕಾವ್ಯನಾಮವಾಗಿದೆ. ಇವರು ಪ್ರಸಿದ್ಧ ಪರ್ತಕರ್ತರೂ ಹಾಗೂ ಉರ್ದು ಲೇಖಕರೂ ಆಗಿದ್ದರು. ಭಾರತೀಯ ಸ್ವಾತಂತ್ರ್ಯ ಹೋರಾಟದ ಅಗ್ರಗಣ್ಯ ನಾಯಕರಲ್ಲಿ ಒಬ್ಬರು. ಅವರು ಮಹಾನ್ ವಿದ್ವಾಂಸರೂ ಕವಿಯೂ ಆಗಿದ್ದರು.
ಮಲಾನಾ ಆಜದ್ ರವರು ಧಾರ್ಮಿಕ ಸುಧಾರಕರಾದ ಸರ್ ಸೈಯದ್ ಅಹ್ಮದ್ ಖಾನ್ ಅವರ ಆಧುನಿಕತಾವಾದಿ ಲೇಖನಗಳಿಂದ ಪ್ರೇರಣೆಗೊಂಡಿದ್ದರು. ಅವರ ಹದಿಹರೆಯದ ವರ್ಷಗಳಲ್ಲಿ, ಇವರು ೧೯೧೨ರಲ್ಲಿ ಉರ್ದು ವಿನಲ್ಲಿ ಬ್ರಿಟಿಷರ ನೀತಿಗಳನ್ನು ಟೀಕಿಸಲು ಕಲ್ಕತ್ತಾ ಮೂಲದ ಉರ್ದು ಪತ್ರಿಕೆಯಾದ ಅಲ್- ಹಿಲಾಲ್ ಎಂಬ ವಾರಪತ್ರಿಕೆ ಯನ್ನು ಪ್ರಕಟಿಸಿದರು. ನಂತರ ಬ್ರಿಟಿಷ್ ಅಧಿಕಾರಿಗಳು ನಿಷೇಧಿಸಿದರು. ಆದ್ದರಿಂದ ನಂತರದ ದಿನಗಳಲ್ಲಿ ಅವರು ಮತ್ತೊಂದು ವಾರಪತ್ರಿಕೆ ಅಲ್-ಬಾಗಾವನ್ನು ಪ್ರಾರಂಭಿಸಿದರು. ಅಂದಿನ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಅವರು ಎರಡು ಸಂದರ್ಭಗಳಲ್ಲಿ ಅಂದರೆ ೧೯೨೩ ಮತ್ತು ೧೯೪೦ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು.
ಮಲಾನಾ ಆಜದ್ ರವರು ಭಾರತದ ಸ್ವಾತಂತ್ರ್ಯ ಚಳವಳಿಯ ಅತ್ಯಂತ ಕ್ರಿಯಾಶೀಲ ನಾಯಕರಾಗಿದ್ದರು. ಅವರು ಖಿಲಾಫತ್ ಚಳವಳಿಯಲ್ಲಿ (೧೯೨೦-೨೪) ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆ ನಡುವೆ ಅಖಿಲ ಭಾರತ ಖಿಲಾಫತ್ ಸಮಿತಿಯ ಅಧ್ಯಕ್ಷ ಹುzಯನ್ನು ಅಲಂಕರಿಸಿದ್ದರು. ನಂತರ ಆಜದ್ ರವರು ಮಹಾತ್ಮಾ ಗಾಂಧಿಯವರಿಂದ ಪ್ರೇರಣೆಗೊಂಡು ನಾಗರಿಕ ಅಸಹಕಾರ ಚಳವಳಿಯ ಉಪಕ್ರಮಗಳಾದ ದಂಡಿ ಮಾರ್ಚ್ (೧೯೩೦) ಮತ್ತು ಕ್ವಿಟ್ ಇಂಡಿಯಾ ಚಳವಳಿಯಲ್ಲಿ (೧೯೪೨) ಸಕ್ರಿಯವಾಗಿ ಭಾಗವಹಿಸಿದ್ದರು. ೧೯೨೦-೧೯೪೫ರ ನಡುವಿನ ಅವಧಿಯಲ್ಲಿ ಅನೇಕ ಸಂದರ್ಭಗಳಲ್ಲಿ ಸೆರೆವಾಸ ಅನುಭವಿಸಿದರು. ಬ್ರಿಟಿಷರೊಂದಿಗೆ ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಬಾರಿ ಮಾತುಕತೆಗಳಲ್ಲಿ ತೊಡಗಿದ್ದರು. ಅದರಲ್ಲಿ ಅವರು ದೇಶದ ವಿಭಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಅವರು ಸಂವಿಧಾನ ಸಭೆಯ ಐದು ವಿಭಿನ್ನ ಸಮಿತಿಗಳ ಸದಸ್ಯರಾಗಿದ್ದರು ಹಾಗೂ ರಾಷ್ಟ್ರೀಯ ಭಾಷೆ ಮತ್ತು ಶಿಕ್ಷಣದ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿದ್ದರು.
ಸ್ವಾತಂತ್ರ್ಯದ ನಂತರ, ಮಲಾನ ಆಜದ್ ಅವರು ನಮ್ಮ ದೇಶದ ಮೊದಲ ಪ್ರಧಾನ ಮಂತ್ರಿಗಳಾದ ಪಂಡಿತ್ ಜವಾಹರ್ ಲಾಲ್ ನೆಹರೂರವರು ನೇತೃತ್ವದ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಯಾಗಿ ನೇಮಕವಾದರು. ೧೯೪೭ ರಿಂದ ೧೯೫೮ ರವರೆಗೆ ಒಂದು ದಶಕದ ಕಾಲ ಈ ಹುzಯನ್ನು ಅಲಂಕರಿಸಿದ್ದರು.
ಭಾರತ ಮತ್ತು ಪೂರ್ವ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯವನ್ನು ಭದ್ರಪಡಿಸಲು ಭಾರತೀಯ ಸಾಂಸ್ಕೃತಿಕ ಸಂಬಂಧವನ್ನು ಸ್ಥಾಪಿಸುವಲ್ಲಿ ಅವರು ಶ್ರಮಿಸಿದರು. ೧೯೪೮ರಲ್ಲಿ ವಿಶ್ವವಿದ್ಯಾನಿಲಯ ಶಿಕ್ಷಣ ಆಯೋಗವನ್ನು , ೧೯೫೨ರಲ್ಲಿ ಪ್ರೌಢಶಿಕ್ಷಣ ಸಮಿತಿ ಆಯೋಗ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗವನ್ನು ರಚಿಸಿದರು. ಇವರು ಕೈಗೊಂಡ ಸುಧಾರಣೆಗಳು ದೇಶದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾದವು.
ಮಲಾನಾ ಆಜದ್ ಅವರು ಮಹಿಳಾ ಶಿಕ್ಷಣವನ್ನು ಬಲವಾಗಿ ಪ್ರತಿಪಾದಿಸಿದರು. ೧೯೪೯ರಲ್ಲಿ ಕೇಂದ್ರ ಅಸೆಂಬ್ಲಿಯಲ್ಲಿ, ಅವರು ಸಮಾಜದ ಅರ್ಧದಷ್ಟು ಮಹಿಳೆಯರ ಪ್ರಗತಿಗೆ ಪರಿಗಣನೆ ಯನ್ನು ನೀಡದಿದ್ದರೆ ರಾಷ್ಟ್ರೀಯ ಶಿಕ್ಷಣವು ಸೂಕ್ತವಲ್ಲ ಎಂದು ತಮ್ಮ ವಾದವನ್ನು ಮುಂದಿಟ್ಟರು. ಅವರು ಆಧುನಿಕ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡಿದರು ಮತ್ತು ಶೈಕ್ಷಣಿಕ ಅನುಕೂಲತೆಗಳಿಗಾಗಿ ಇಂಗ್ಲಿಷ್ ಭಾಷೆಯನ್ನು ಬಳಸಲು ಪ್ರತಿಪಾದಿಸಿದರು.
ಆದರೆ ಪ್ರಾಥಮಿಕ ಶಿಕ್ಷಣ ಮಾತ್ರ ಮಾತೃಭಾಷೆಯಲ್ಲಿಯೇ ನೀಡಬೇಕೆಂದು ಅವರು ನಂಬಿದ್ದರು ಅದನ್ನೇ ಪ್ರಚುರಪಡಿಸಿದರು. ಮಲಾನಾ ಆಜದ್ ಅವರು ೧೯೫೮ ರ ಫೆ.೨೨ ರಂದು ನಿಧನರಾದರು. ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ವಿದ್ವಾಂಸ ಮತ್ತು ಕವಿಯಾಗಿ ಅವರ ಪ್ರಯತ್ನಗಳನ್ನು ಗುರುತಿಸಿ ೧೯೯೨ರಲ್ಲಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗಿದೆ. ಆಜದ್ ಅವರು ಅರೇಬಿಕ್, ಹಿಂದಿ, ಇಂಗ್ಲಿಷ್, ಉರ್ದು, ಪರ್ಷಿಯನ್ ಮತ್ತು ಬೆಂಗಾಲಿ ಸೇರಿದಂತೆ ಹಲವಾರು ಭಾಷೆಗಳನ್ನು ಬಲ್ಲವರಾಗಿದ್ದರು. ಅನೇಕ ಪುಸ್ತಕಗಳನ್ನು ಬರೆದರು.
ಇಂದಿನ ರಾಷ್ಟ್ರೀಯ ಶಿಕ್ಷಣ ದಿನದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಜಗೃತಿ ಮೂಡಿಸುವ ಮೂಲಕ ವಾರ್ಷಿಕವಾಗಿ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಗುತ್ತದೆ. ಆಸಕ್ತಿದಾಯಕ ಸೆಮಿನಾರ್‌ಗಳು, ಚಟುವಟಿಕೆಗಳು, ಯೋಜನೆ ಗಳಲ್ಲಿ ಕೆಲಸ ಮಾಡುವುದು, ಪ್ರಬಂಧಗಳನ್ನು ಬರೆಯುವುದು ಮತ್ತು ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಆಚರಿಸಲಾಗುತ್ತದೆ. ಆದ್ದರಿಂದ ನಾವೆಲ್ಲರೂ ಶಿಕ್ಷಣವೇ ಶಕ್ತಿ ಮತ್ತು ಶಿಕ್ಷಣವೇ ಬದುಕು ಎಂದು ನಂಬಿ ಬಾಳೋಣ ಹಾಗೂ eನವನ್ನು ಹಂಚೋಣ.
ಕೆ.ಎನ್. ಚಿದಾನಂದ, ಸಾಹಿತಿಗಳು, ಹಾಸನ