ಜಿಎಸ್‌ಬಿ ವಿದ್ಯಾರ್ಥಿಗಳಿಗೆ ಪುರಸ್ಕಾರ- ಚೈತನ್ಯನಿಧಿ ವಿತರಣೆ…
ಶಿವಮೊಗ್ಗ: ನ.೧೦ರಂದು ಶಿವಮೊಗ್ಗದ ಗೋಪಾಳದ ಬಂಟರ ಭವನದಲ್ಲಿ ಪೂಜ್ಯ ಶ್ರೀ ಪರ್ತಗಾಳಿ ಜೀವೋತ್ತಮ ಮಠಾಧೀಶರ ದಿವ್ಯ ಉಪಸ್ಥಿತಿಯಲ್ಲಿ ಜಿ.ಎಸ್.ಬಿ.ಸಮಾಜ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜಶಿವಮೊಗ್ಗ ಸಹಯೋಗದೊಂದಿಗೆ ಜಿ.ಎಸ್.ಬಿ. ವಿದ್ಯಾರ್ಥಿ ವೇತನ ವಿತರಣೆ, ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆ, ಶೈಕ್ಷಣಿಕ ಪ್ರೇರಣಾ ಕಾರ್‍ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಕುಟುಂಬ ಚೈತನ್ಯ ನಿಧಿಯ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಅಂದು ಬೆಳಿಗ್ಗೆ ೮ರಿಂದ ೯-೧೫ರವರೆಗೆ ನೊಂದಣಿ, ಬೆಳಿಗ್ಗೆ ೯-೧೫ರಿಂದ ೯-೪೫ ಸಾಮೂಹಿಕ ರಾಮನಾಮ ಜಪ, ನಂತರ ಮಲ್ಯಾಡ್ ಕ್ಯಾನ್ಸರ್ ಆಸ್ಪತ್ರೆಯ ಸಂಸ್ಥಾಪಕರಾದ ಡಾ. ನರೇಂದ್ರ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಾಗರದ ಖ್ಯಾತ ಉದ್ಯಮಿ ಶಿವಾನಂದ್ ಭಂಡಾರ್‌ಕರ್ ಅಧ್ಯಕ್ಷತೆ ವಹಿಸಲಿದ್ದು, ಹಲವು ಗಣ್ಯರು ಅತಿಥಿಗಳಾಗಿರುತ್ತಾರೆ.
ಬೆಳಿಗ್ಗೆ ೧೦ರಿಂದ ೧೧.೩೦ರವರೆಗೆ ಆರ್‌ಎನ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಸುಧೀರ್ ಪೈ ಕೆ.ಎಲ್. ದಿಕ್ಸೂಚಿ ಭಾಷಣ ಮಾಡುವರು. ಶೈಕ್ಷಣಿಕ ಮತ್ತು ವೃತ್ತಿ ಪ್ರೇರಣಾ ಕಾರ್‍ಯಾಗಾರವನ್ನು ಶ್ರೀಶಾ ಶೈಕ್ಷಣಿಕ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ನಡೆಸಲಿದ್ದಾರೆ.
ಅಂದು ಮಧ್ಯಾಹ್ನ ೧.೪೫ಕ್ಕೆ ನಗರದ ಸರ್ಕ್ಯೂಟ್ ಹೌಸ್‌ನಿಂದ ಬಂಟರ ಭವನದವರೆಗೆ ಗೋಕರ್ಣ ಪರ್ತಗಾಳಿ ಮಠದ ಶ್ರೀ ವಿದ್ಯಾಧೀಶ ಶ್ರೀಗಳವರನ್ನು ಪೂರ್ಣಕುಂಭ ದೊಂದಿಗೆ ಸ್ವಾಗತ ನೀಡಿ ಬರಮಾಡಿಕೊಳ್ಳಲಾಗುವುದು. ನಂತರ ಶ್ರೀಗಳವರು ಮಂತ್ರಾಕ್ಷತೆ ನೀಡಿ ಆಶೀರ್ವಚನ ನೀಡಲಿರುವರು.
ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಜಿಎಸ್‌ಬಿ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ವೃದ್ದಾಪ್ಯ ಅನಾರೋಗ್ಯ ಇನ್ನಿತರ ಕಾರಣಗಳಿಂದ ಆರ್ಥಿಕ ಅಶಕ್ತತೆ ಇರುವ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಅರ್ಹ ೫೦ ಜಿ.ಎಸ್.ಬಿ. ಕುಟುಂಬಗಳಿಗೆ ಪ್ರತಿ ತಿಂಗಳು ೧ ಸಾವಿರ ರೂ. ಮಾಸಾಶನದ ಕುಟುಂಬ ಚೈತನ್ಯ ನಿಧಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.
ಜಿಎಸ್‌ಬಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸು ವಂತೆ ಅವರು ಕರೆ ನೀಡಿದರು.
ವೇದಿಕೆಯ ಸಂಚಾಲಕ ಆರ್.ವಿವೇಕಾನಂದ ಶೆಣೈ, ಅಧ್ಯಕ್ಷ ಸತೀಶ್ ಹೆಗಡೆ, ಶಿವಮೊಗ್ಗ ಗೌಡಸಾರಸ್ವತ ಸಮಾಜದ ಅಧ್ಯಕ್ಷ ಭಾಸ್ಕರ್ ಜಿ.ಕಾಮತ್, ವಿದ್ಯಾ ಪೋಷಕ ನಿಧಿ ಜಿಲ್ಲಾ ಸಂಯೋಜಕ ಮಣ್ಣೂರು ಪ್ರಕಾಶ್ ಪ್ರಭು, ರಾಜೇಂದ್ರ ಪೈ, ವಾಸುದೇವ ಪೈ, ವಿವೇಕಾನಂದ ನಾಯಕ, ಶ್ರೀಕಾಂತ್ ಕಾಮತ್ ಇನ್ನಿತರರಿದ್ದರು.