ಜಿಲ್ಲಾ ಸುದ್ದಿತಾಜಾ ಸುದ್ದಿ

ಕನ್ನಡ ಚಿತ್ರ ಸವಿಯುವ ಮನೋಸ್ಥಿತಿ ಯುವಪೀಳಿಗೆಯಲ್ಲಿ ಬೆಳೆಸಬೇಕು…

Share Below Link

ಶಿವಮೊಗ್ಗ,: ಕನ್ನಡ ಚಿತ್ರ ಸವಿಯುವ ಮನೋಸ್ಥಿತಿಯನ್ನು ಯುವಪೀಳಿಗೆಯಲ್ಲಿ ಬೆಳೆಸಬೇಕು ಎಂದು ವಿಧಾನಪರಿಷತ್ ಸದಸ್ಯೆ, ನಟಿ ಉಮಾಶ್ರೀ ಅವರು ಕರೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಹಾನಗರ ಪಾಲಿಕೆ, ವಾರ್ತಾ ಇಲಾಖೆ ಬೆಳ್ಳಿ ಮಂಡಲ, ಚಿತ್ರ ಸಮಾಜ ಆಶ್ರಯದಲ್ಲಿ ಏರ್ಪಡಿಸಿದ್ದ ದಸರಾ ಚಲನ ಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.


ಶಿವಮೊಗ್ಗ ಜಿಲ್ಲೆ ಸಂಸ್ಕಾರಕ್ಕೆ ಹೆಸರಾಗಿದೆ. ಕಲೆ, ಹೋರಾಟ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣಕ್ಕೆ ಹೆಸರು ಮಾಡಿದೆ. ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾ ಅತ್ಯಂತ ಪ್ರಸಿದ್ಧವಾಗಿದೆ ಎಂದ ಅವರು, ಸಿನಿಮಾ ರಂಗ ಇವತ್ತು ಪ್ರಗತಿಯತ್ತ ಸಾಗುತ್ತಿದೆ. ಒಳ್ಳೆಯ ಸಿನಿಮಾಗಳನ್ನು ಜನರು ನೋಡುತ್ತಾರೆ. ಮನೆಯಿಂದ ಜನರನ್ನು ಹೊರಗೆ ಕರೆದುಕೊಂಡು ಬರುವಂತಹ ವಾತಾವರಣ ನಿರ್ಮಾಣವಾಗಬೇಕಿದೆ. ಅದರಲ್ಲೂ ಕನ್ನಡದ ಸಿನಿಮಾಗಳು ಉಳಿಯಬೇಕು. ಇದರಿಂದ ಕಲಾವಿದರೂ ಉಳಿಯುತ್ತಾರೆ. ಇಂತಹ ವಾತಾವರಣ ನಿರ್ಮಿಸಬೇಕಾದದ್ದು ನಮ್ಮೆಲ್ಲರ ಹೊಣೆ ಎಂದರು.
ಇಂದಿನ ಚಲನಚಿತ್ರಗಳು ಎಲ್ಲರನ್ನೂ ತಲುಪುವಂತಾಗಬೇಕು. ಮುಖ್ಯವಾಗಿ ಮಕ್ಕಳ ಚಿತ್ರಗಳು ಹೆಚ್ಚಾಗಿ ಬರಬೇಕಾಗಿದೆ. ಚಿತ್ರಗಳಿಂದ ಮಕ್ಕಳು ಪ್ರಭಾವಿತರಾಗಬೇಕು. ಅಂತಹ ವಾತಾವರಣವನ್ನು ರೂಪಿಸಬೇಕು. ಶಿವಮೊಗ್ಗದ ದಸರಾ ಯಶಸ್ವಿಯಾಗಲಿ ಎಂದು ಹಾರೈಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಕಲೆಗೆ ಶಕ್ತಿ ಸಿಗುವಂತಹ ಕಾರ್ಯ ನಡೆಯುತ್ತಿದೆ. ಕಲಾವಿದರ ಜಗತ್ತು ಇದು. ಇದು ಉಳಿದರೆ ಬಹಳ ಚೆನ್ನಾಗಿರುತ್ತದೆ. ಆಗ ಒಟ್ಟು ೧೨ ಚಿತ್ರ ಮಂದಿರಗಳಿದ್ದವು. ಆದರೆ ಇವತ್ತು ಉಳಿದಿರುವುದು ಕೇವಲ ೪ ಮಾತ್ರ. ಚಿತ್ರಗಳಿಗೆ ಶಕ್ತಿ ಸಿಗದೇ ಹೋದರೆ ಅನೇಕ ಚಿತ್ರಮಂದಿರಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಚಿತ್ರ ರಂಗ ಚೆನ್ನಾಗಿ ಆಗುವ ರೀತಿಯಲ್ಲಿ ಯೊಚನೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಭೀಮಾ ಚಿತ್ರದ ನಟಿ ಪ್ರಿಯಾ ಶಠಮರ್ಷಣ್ ರಂಗಭೂಮಿ ಕಲಾವಿದ ಅವಿನಾಶ್, ಶಾಖಾಹಾರಿ ನಿರ್ದೇಶಕ ಸಂದೀಪ್ ಸುಂಕದ್, ನಿರ್ಮಾಪಕ ರಾಜೇಶ್ ಕೀಳಂಬಿ, ಬೆಳ್ಳಿಮಂಡಲ ಸಂಚಾಲಕ ವೈದ್ಯನಾಥ್ ಹೆಚ್.ಯು., ಚಲನಚಿತ್ರ ಸಾಹಿತಿ ಡಾ. ವಿ.ನಾಗೇಂದ್ರ ಪ್ರಸಾದ್, ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಇನ್ನಿತರರಿದ್ದರು.
ಡಾ.ಹೆಚ್.ಎಸ್.ನಾಗಭೂಷನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ನಂದನ್, ಶಿವಮೊಗ್ಗ ನಾಗರಾಜ್, ಪ್ರದೀಪ್‌ಕುಮಾರ್, ವಾಸಕಿ ಕುಮಾರ್ ಅವರಿಂದ ಛಾಯಾಚಿತ್ರ ಹಾಗೂ ಕ್ಯಾಮರಾ ಪ್ರದರ್ಶನ ಆಯೋಜಿಸಲಾಗಿತ್ತು.