ತಾಜಾ ಸುದ್ದಿ

ಸಂಭ್ರಮ – ಸಡಗರದಿಂದ ಸಂಪನ್ನಗೊಂಡ ಕಾರ್ಮೆಲ್ ಮಾತೆ ಮಹೋತ್ಸವ..

Share Below Link

ಶಿವಮೊಗ್ಗ : ನಗರದ ಬಿ.ಹೆಚ್. ರಸ್ತೆಯಲ್ಲಿರುವ ಐತಿಹಾಸಿಕ ಪ್ರಸಿದ್ದ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಕಳೆದ ೯ದಿನಗಳಿಂದ ನಡೆದ ಕಾರ್ಮೆಲ್ ಮಾತೆ ಜಾತ್ರೋತ್ಸವಕ್ಕೆ ತೆರೆಬಿದ್ದಿದೆ.
ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಇಲ್ಲಿನ ಸೇಕ್ರೆಡ್ ಹಾರ್ಟ್ ಪ್ರದಾನಾಲಯದಲ್ಲಿ ದೇವತಾಯಿ ಕಾರ್ಮೆಲ್ ಮಾತೆಯ ಮಹೋತ್ಸವಕ್ಕೆ ಕಳೆದ ೯ದಿನಗಳಿಂದ ಚರ್ಚ್‌ನಲ್ಲಿ ನವದಿನಗಳ ಕಾಲ ವಿಶೇಷ ಪೂಜೆ, ಪ್ರವಚನಗಳು ನಡೆದಿದ್ದು, ಪ್ರತಿನಿತ್ಯ ದೇವತಾಯಿ ಕಾರ್ಮೆಲ್ ಮಾತೆಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತಿತ್ತು.
ಜು.೧೬ರ ನಿನ್ನೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ಮಾತೆಯ ಭಕ್ತರು ವಿಶೇಷ ಪೂಜೆ- ಹರಕೆ ಸಲ್ಲಿಸಿ ಮಾತೆಯ ಕೃಪೆಗೆ ಪಾತ್ರರಾದರು.
ಸಂಜೆ ೬.೩೦ಕ್ಕೆ ಕಾರ್ಮೆಲ್ ಮಾತೆಯ ರಾಜಬೀದಿ ಮಹೋತ್ಸವವು ಅಂತ್ಯಂತ ಸಂಭ್ರಮದಿಂದ ಜರುಗಿತು. ಕ್ರೈಸ್ತ ಧರ್ಮಿಯರೂ ಸೇರಿದಂತೆ ವಿವಿಧ ಧರ್ಮೀಯ ಭಕ್ತರು ದೇವತಾಯಿ ಕಾರ್ಮೆಲ್ ಮಾತೆಗೆ ಎಂದಿನಂತೆ ತಮ್ಮ ಭಕ್ತಿ ಸಮರ್ಪಿಸಿ, ಪೂಜಿಸಿ ಗೌರವಿಸಿದರು. ಸುರಿಯುತ್ತಿದ್ದ ಜಿಟಿಜಿಟಿ ಮಳೆಯಲ್ಲೇ ದೇವಮಾತೆಯ ರಾಜಬೀದಿ ಉತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮಾತೆಯ ಭಕ್ತರು ಪಾಲ್ಗೊಂಡು ತಮ್ಮ ಭಕ್ತಿ ಸಮರ್ಪಣೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಶ್ರದ್ಧಾ ಭಕ್ತಿಯಿಂದ, ವಿಜಂಭಣೆಯಿಂದ ಜರುಗಿದ ಈ ಸಾಂಪ್ರದಾಯಿಕ ಮಹೋತ್ಸವವು ಅಂತಿಮವಾಗಿ ದೇವಾಲಯದ ಒಳಗೆ ಪವಿತ್ರ ಪರಮಪ್ರಸಾದದ ಆರಾಧನೆಯೊಂದಿಗೆ ದೇವತಾ ಕಾರ್ಯಗಳಿಗೆ ಅಂತ್ಯ ಹಾಡಲಾಯಿತು. ನಂತರ ಚರ್ಚ್ ಹೋರಾಂಗಣದಲ್ಲಿ ಕಾರ್ಮೆಲ್ ಮಾತೆಯ ಅಲಂಕೃತ ತೇರಿನ ಎದುರು ಸಿಡಿಮದ್ದು ಪ್ರದರ್ಶನದೊಂದಿಗೆ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.