ಜಿಲ್ಲಾ ಸುದ್ದಿತಾಜಾ ಸುದ್ದಿದೇಶವಿದೇಶ

ಕಥೋಲಿಕ ಕ್ರೈಸ್ತ ಮಹಾಧರ್ಮಕ್ಷೇತ್ರದ ಅರ್ಚ್‌ಬಿಷಪ್ ಪರಮ ಪೂಜ್ಯ ಡಾ. ಅಲ್ಫೋನ್ಸ್ ಅಸ್ತಂಗತ

Share Below Link

ಬೆಂಗಳೂರು : ರಾಜಧಾನಿ ಬೆಂಗಳೂರು ಮಹಾ ಧರ್ಮಕ್ಷೇತ್ರದ (ಆರ್ಚ್ ಡಯಾಸಿಸ್) ನಡೆದಾಡುವ ದೇವರು ಖ್ಯಾತಿಯ ಪರಮಪೂಜ್ಯ ಆರ್ಚ್ ಬಿಷಪ್ ಡಾ. ಅಲ್ಫೋನ್ಸ್ ಮಥಿಯಾಸ್ (೯೬) ಅವರು ಜು.೧೦ರ ಬುಧವಾರ ಸಂಜೆ ೫.೨೦ಕ್ಕೆ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನಲ್ಲಿ ವಯೋಸಹಜ ಕಾಯಿಲೆಯಿಂದ ಅಸ್ತಂಗತರಾದರು.
ಪೂಜ್ಯರು ೧೯೬೪-೧೯೮೬ರವರೆಗೆ ಚಿಕ್ಕಮಗಳೂರು ಧರ್ಮಕ್ಷೇತ್ರದ ಬಿಷಪ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಬೆಂಗಳೂರು ಮಹಾ ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿ ೧೯೮೬-೧೯೯೮ರವರೆಗೆ ಸೇವೆ ಸಲ್ಲಿಸಿದ್ದರು.


ಪೂಜ್ಯ ಮಹಾಧರ್ಮಾಧ್ಯಕ್ಷರು ೧೯೮೯ ಮತ್ತು ೧೯೯೩ರಲ್ಲಿ ಎರಡು ಅವಧಿಗೆ ಸಿಬಿಸಿಐನ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರಲ್ಲದೇ, ಕೌನ್ಸಿಲ್ ಫಾದರ್ ಆಗಿ ೨ನೇ ವ್ಯಾಟಿಕನ್ ಕೌನ್ಸಿಲ್ಸ್‌ಗೆ ಹಾಜರಾಗಿದ್ದರು.
ಪರಮಪೂಜ್ಯ ಅರ್ಚ್ ಬಿಷಪ್ ಡಾ.ಅಲ್ಫೋನ್ಸ್ ಮಥಿಯಾಸ್ ಅವರು, ೧೯೨೮ರ ಜೂನ್ ೨೨ರಂದು ಡಿಯಾಗೋ ಮಥಿಯಾಸ್ ಮತ್ತು ಫಿಲೋಮಿನಾ ಡಿಸೋಜ ಅವರ ನಾಲ್ಕನೇ ಪುತ್ರನಾಗಿ ಕರ್ನಾಟಕದ ದಕ್ಷಿಣ ಕೆನರಾ ಜಿಯ ಪಾಂಗಾಲಾದಲ್ಲಿ ಜನಿಸಿದರು.
೧೯೪೫ರ ಜೂನ್ ತಿಂಗಳಲ್ಲಿ ಡಯೋಸಿಸನ್ ಪಾದ್ರಿಯಾಗುವ ಉದ್ದೇಶದಿಂದ ಮಂಗಳೂರಿನ ಜೆಪ್ಪುವಿನಲ್ಲಿರುವ ಸೇಂಟ್ ಜೋಸೆಫ್ ಸೆಮಿನರಿ ಸೇರ್ಪಡೆಯಾದರು. ಪೂಜ್ಯರ ಪ್ರತಿಭೆಯನ್ನು ಗಮನಿಸಿದ ಚರ್ಚ್‌ನ ಮೇಲಧಿಕಾರಿಗಳು ಅವರನ್ನು ಹೆಚ್ಚಿನ ಅಧ್ಯಯನಕ್ಕಾಗಿ ಶ್ರೀಲಂಕಾದ ಕ್ಯಾಂಡಿಯ ಲ್ಲಿರುವ ಪಾಂಟಿಫಿಕಲ್ ಸೆಮಿನರಿಗೆ ಕಳುಹಿಸಿದರು, ಅಲ್ಲಿ ಅವರು ತತ್ವಶಾಸ್ತ್ರ ಮತ್ತು ದೇವತಾಶಾಸ್ತ್ರವನ್ನು ಅಧ್ಯಯನ ಮಾಡಿದರು. ೨೪ ಆಗಸ್ಟ್, ೧೯೫೪ ರಂದು ಕ್ಯಾಂಡಿಯಲ್ಲಿ ಪಾದ್ರಿಯಾಗಿ ನೇಮಕಗೊಂಡರು.
ರೆ|ಫಾ| ಅಲ್ಫೋನ್ಸ್ ಮಥಾಯಸ್ ಅವರು ಮಂಗಳೂರಿನ ಬಜ್ಪೆಯ ಸೇಂಟ್ ಜೋಸೆಫ್ ಚರ್ಚ್‌ನಲ್ಲಿ ಸಹಾಯಕ ಗುರುಗಳಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮ ಸನ್ಯಾಸ ಜೀವನ ಆರಂಭಿಸಿದ್ದರು, ಅಲ್ಲಿ ಸುಮಾರು ಒಂದು ವರ್ಷದ ಸೇವೆಯ ನಂತರ, ಅವರನ್ನು ೧೯೫೫ರಲ್ಲಿ ಕ್ಯಾನನ್ ಕಾನೂನು ಮತ್ತು ಅಂತರ ರಾಷ್ಟ್ರೀಯ ನಾಗರಿಕ ಕಾನೂನಿನಲ್ಲಿ ಉನ್ನತ ಅಧ್ಯಯನಕ್ಕಾಗಿ ರೋಮ್‌ಗೆ ಕಳುಹಿಸಲಾಯಿತು. ಅಲ್ಲಿ ಅವರು ಅರ್ಬೇನಿಯನ್ ವಿವಿ ಮತ್ತು ಲ್ಯಾಟರನ್ ವಿಶ್ವವಿದ್ಯಾಲಯದಿಂದ ಕ್ಯಾನನ್ ಲಾ ಮತ್ತು ಅಂತರರಾಷ್ಟ್ರೀಯ ನಾಗರಿಕ ಕಾನೂನಿನಲ್ಲಿ ಡಾಕ್ಟರೇಟ್ ಅಧ್ಯಯನಗಳನ್ನು ಕೈಗೊಂಡರು ಮತ್ತು ಡಿಡಿ, ಜೆಯುಡಿ, ಪಿಎಚ್‌ಎಲ್ ಪದವಿಗಳನ್ನು ಪಡೆದರು.
೧೯೫೯ರಲ್ಲಿ ಮಂಗಳೂರು ಧರ್ಮಪ್ರಾಂತ್ಯಕ್ಕೆ ಹಿಂದಿರುಗಿದ ರೆ|ಫಾ| ಅಲ್ಫೋನ್ಸ್ ಮಥಾಯಸ್ ಅವರನ್ನು ಅಂದಿನ ಬಿಷಪ್ ರೇಮಂಡ್ ಡಿ’ಮೆ ಅವರ ಕಾರ್ಯದರ್ಶಿಯಾಗಿ ಮತ್ತು ಧರ್ಮಕ್ಷೇತ್ರದ ಕುಲಪತಿಯಾಗಿ ನೇಮಿಸಲಾಯಿತು.
ಕ್ರೈಸ್ತರ ಪರಮೋಚ್ಚ ಜಗದ್ಗುರು ಪೋಪ್ ಸೇಂಟ್ ಪಾಲ್ ಐ ಅವರು ರೆ|ಫಾ| ಅಲ್ಫೋನ್ಸ್ ಮಥಾಯಸ್ ಅವರನ್ನು ೧೬ ನವೆಂಬರ್, ೧೯೬೩ ರಂದು ಹೊಸದಾಗಿ ರಚಿಸಲಾದ ಚಿಕ್ಕಮಗಳೂರು ಧರ್ಮಕ್ಷೇತ್ರದ ಪ್ರಪ್ರಥಮ ಬಿಷಪ್ (ಧರ್ಮಾಧ್ಯಕ್ಷರಾಗಿ) ಆಗಿ ನೇಮಿಸಿದರು.
ಅತ್ಯಂತ ಪ್ರತಿಭಾವಂತರಾಗಿದ್ದ ಪೂಜ್ಯರು ಅತಿ ಕಿರಿಯ ವಯಸ್ಸಿನಲ್ಲೇ ಅಂದರೆ ತಮ್ಮ ೩೫ನೇ ವಯಸ್ಸಿನಲ್ಲಿ ೫ ಫೆಬ್ರವರಿ ೧೯೬೪ ರಂದು ಚಿಕ್ಕಮಗಳೂರಿನ ಸೇಂಟ್ ಜೋಸೆಫ್ ಕ್ಯಾಥೆಡ್ರಲ್ ನಲ್ಲಿ ಬಿಷಪ್ ಆಗಿ ಪೀಠಾರೋಹಣ ಮಾಡುವ ಮೂಲಕ ಸೇವಾ ಕಾರ್ಯ ಆರಂಭಿಸಿದರು.


ಧರ್ಮಾಧ್ಯಕ್ಷರಾಗಿ ತಮ್ಮ ೨೩ ವರ್ಷಗಳ ಸೇವೆಯಲ್ಲಿ ಪರಮಪೂಜ್ಯ ಬಿಷಪ್ ಡಾ.ಅಲ್ಫೋನ್ಸ್ ಮಥಾಯಸ್ ಅವರು ಅವರು ಕೌನ್ಸಿಲ್ ಫಾದರ್ ಆಗಿ ೨ನೇ ವ್ಯಾಟಿಕನ್ ಕೌನ್ಸಿಲ್‌ಗೆ ಹಾಜರಾಗಿದ್ದರು. ನಂತರ ಪೂಜ್ಯರನ್ನು ೧೨ ಸೆಪ್ಟೆಂಬರ್ ೧೯೮೬ ರಂದು ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾ ಧರ್ಮಾಧ್ಯಕ್ಷರಾಗಿ (ಅರ್ಚ್ ಬಿಷಪ್) ನೇಮಿಸಲಾಯಿತು.
೩ ಡಿಸೆಂಬರ್ ೧೯೮೬ ರಂದು ಅವರು ಮೆಟ್ರೋಪಾಲಿಟನ್ ಅರ್ಚ್ ಬಿಷಪ್ ಆಗಿ ಪೀಠಾರೋಹಣ ಮಾಡುವ ಮೂಲಕ ಮಹಾ ಧರ್ಮಕ್ಷೇತ್ರದ ಸೇವಾಧಿಕಾರ ವಹಿಸಿಕೊಂಡರು.
೧೯೮೯ ಮತ್ತು ೧೯೯೩ರಲ್ಲಿ ಎರಡು ಅವಧಿಗೆ ಸಿಬಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಪರಮಪೂಜ್ಯ ಡಾ. ಅಲ್ಫೋನ್ಸ್ ಮಥಾಯಸ್ ಅವರು, ೧೯೭೪-೧೯೮೨ರವರೆಗೆ ಬೆಂಗಳೂರಿನ ಸೇಂಟ್ ಜನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್‌ನ ಅಧ್ಯಕ್ಷರಾಗಿದ್ದರು ಮತ್ತು ಸೇಂಟ್ ಜನ್ಸ್ ಮೆಡಿಕಲ್ ಕಾಲೇಜನ್ನು ಮೇಲ್ದರ್ಜೆಗೇರಿಸುವಲ್ಲಿ ಮಹತ್ತರವಾದ ಜವಾಬ್ದಾರಿಯನ್ನು ವಹಿಸಿದ್ದರು.
ಏಷ್ಯನ್ ಬಿಷಪ್ಸ್ ಕಾನ್ಫರೆನ್ಸ್ ಒಕ್ಕೂಟದ ಸಾಮಾಜಿಕ ಸಂವಹನಗಳ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಪೂಜ್ಯರು, ಮನಿಲಾದ ರೇಡಿಯೋ ವೆರಿಟಾಸ್ ಅಧ್ಯಕ್ಷರಾಗಿ, ವ್ಯಾಟಿಕನ್‌ನ ನ್ಯಾಯ ಮತ್ತು ಶಾಂತಿ ಮಂಡಳಿ, ಸಾಮಾಜಿಕ ಸಂವಹನಕ್ಕಾಗಿ ಪಾಂಟಿಫಿಕಲ್ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಪೂಜ್ಯ ಅರ್ಚ್ ಬಿಷಪ್ ಅವರು ಬೆಂಗಳೂರಿನ ಸೇಂಟ್ ಪೀಟರ್ಸ್ ಪಾಂಟಿಫಿಕಲ್ ಸೆಮಿನರಿಯನ್ನು ಉನ್ನತ ಮಟ್ಟಕ್ಕೇರಿಸುವಲ್ಲಿ ಶ್ರಮಿಸಿದ್ದರು.
ಸಂತಾಪ: ಪರಮಪೂಜ್ಯ ಅರ್ಚ್ ಬಿಷಪ್ ಡಾ. ಅಲ್ಫೋನ್ಸ್ ಮಥಾಯಸ್ ಅವರ ನಿಧನಕ್ಕೆ ಬೆಂಗಳೂರು ಮಹಾ ಧರ್ಮಕ್ಷೇತ್ರದ ಅರ್ಚ್ ಬಿಷಪ್ ಪರಮಪೂಜ್ಯ ಡಾ. ಪೀಟರ್ ಮಚಾದೋ, ಕರ್ನಾಟಕದ ರಾಜ್ಯದ ವಿವಿಧ ಧರ್ಮಕ್ಷೇತ್ರಗಳ ಬಿಷಪರುಗಳಾದ ಪರಮಪೂಜ್ಯ ಡಾ. ಜರಾಲ್ಡ್ ಐಸಾಕ್ ಲೋಬೋ, ಡಾ. ಫ್ರಾನ್ಸಿಸ್ ಸೆರಾವೋ, ಡಾ. ಡುಮಿಂಗ್ ಡಯಾಸ್, ಡಾ. ವಿಲಿಯಂ, ಡಾ. ಪೀಟರ್ ಪೌಲ್ ಸಲ್ಡಾನ, ಡಾ. ಡೇರಿಕ್ ಫರ್ನಾಂಡಿಸ್, ಡಾ. ಹೆನ್ರಿ ಡಿಸೋಜ, ಡಾ. ಜೋಸೆಫ್ ಅರುಮಚ್ಚಾಡತ್, ಶಿವಮೊಗ್ಗ ಸೇಕ್ರೆಡ್ ಹಾರ್ಟ್ ಕೆಥಡ್ರಲ್‌ನ ಪ್ರಧಾನ ಗುರು ರೆ|ಫಾ| ಸ್ಟ್ಯಾನಿ ಡಿಸೋಜ, ರೆ|ಫಾ| ವೀರೇಶ್ ಮೋರಸ್, ರೆ|ಫಾ| ಫೆಲಿಕ್ಸ್ ಜೋಸೆಫ್ ನರೋನ್ಹ, ರೆ|ಫಾ| ಯೇಸುರಕ್ಷಕನಾದನ್, ರೆ|ಫಾ|ಗಿಲ್ಬರ್ಟ್ ಲೋಬೋ, ರೆ|ಫಾ| ರೋಷನ್ ಪಿಂಟೋ, ರೆ|ಫಾ| ಪಯಸ್ ಡಿಸೋಜ, ಕ್ರೈಸ್ತ ಮುಖಂಡರಾದ ಅಲ್ಪೋನ್ಸ್ ರಾಕೇಶ್ ಡಿಸೋಜ, ಜೋಸೆಫ್ ಟೆಲ್ಲಿಸ್, ಕಿರಣ್ ಫರ್ನಾಂಡಿಸ್, ವಿನ್ಸೆಂಟ್ ರೋಡ್ರಿಗಸ್, ಪ್ಯಾಟ್ರಿಕ್ ಲೋಬೋ, ರೇಮಂಡ್ ಡಿಮೆಲ್ಲೋ, ಮಾರ್ಕ್ ಡಿಕಾಸ್ಟ, ಚಿನ್ನಪ್ಪ, ದೇವಸಗಾಯಿನಾದನ್, ಮರಿಯಪ್ಪ, ಸುಸೈನಾದನ್, ಸ್ಟ್ಯಾನಿ ಮಾರ್ಟಿಸ್ ಸೇರಿದಂತೆ ಎಲ್ಲಾ ಧರ್ಮಕ್ಷೇತ್ರದ ಧರ್ಮಗುರುಗಳು, ಕನ್ಯಾಸ್ತ್ರೀಯರು ಹಾಗೂ ಭಕ್ತಾದಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಜೆ. ಜಾರ್ಜ್, ಹೆಚ್.ಕೆ. ಪಾಟೀಲ್, ಕೃಷ್ಣಭೈರೇಗೌಡ, ಜಮೀರ್ ಅಹಮದ್, ಮಧು ಬಂಗಾರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಪ್ರಮುಖರಾದ ಬಿ.ಎಸ್. ಯಡಿಯೂರಪ್ಪ, ರಮೇಶ್ ಕುಮಾರ್, ಆರ್. ಅಶೋಕ್, ಹ್ಯಾರೀಸ್, ಆರ್.ವಿ. ದೇಶಪಾಂಡೆ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.