ಕ್ರೀಡೆತಾಜಾ ಸುದ್ದಿ

ಜಾನಪದ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕಿದೆ: ಬಿವೈಆರ್

Share Below Link

ಶಿಕಾರಿಪುರ : ಜಾನಪದ ಕ್ರೀಡೆಗಳು ನಾಡಿನ ಭವ್ಯ ಇತಿಹಾಸ ಪರಂಪರೆಯನ್ನು ಪ್ರತಿಬಿಂಬಿಸುತ್ತಿದ್ದು, ಉಸ ಉತ್ಸಾಹ ಮನೋಸ್ಥೈರ್ಯದ ಜೊತೆಗೆ ಆತ್ಮವಿಶ್ವಾಸ ಹೆಚ್ಚಿಸುವ ಜನಪದ ಕ್ರೀಡೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಆಯೋಜಿಸುವಂತಹ ಕ್ರೀಡಾಂಗಣವನ್ನು ತಾಲೂಕು ಕೇಂದ್ರದಲ್ಲಿ ನಿರ್ಮಿಸಲು ಎಲ್ಲ ರೀತಿಯಲ್ಲಿ ಶ್ರಮಿಸುವುದಾಗಿ ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.


ಪಟ್ಟಣದ ಕೆಎಸ್‌ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿನ ಮಾರಿಕಾಂಬಾ ಬಯಲು ರಂಗ ಮಂದಿರದಲ್ಲಿ ಇದೇ ಪ್ರಥಮ ಬಾರಿಗೆ ಅಘೋರ ಅಭಿಮಾನಿ ಬಳಗದ ವತಿಯಿಂದ ನಡೆದ ರಾಜ್ಯ ಮಟ್ಟದ ಕುರಿ ಕಾಳಗ ಸ್ಪರ್ಧೆಗೆ ಚಾಲನೆ ಮಾತನಾಡಿದ ಅವರು, ಜನಪದ ಕ್ರೀಡೆ ಉಳಿಸಿ ಬೆಳೆಸು ವುದು ಇಂದಿನ ಅಗತ್ಯವಾಗಿದ್ದು, ಹಲವು ಕ್ರೀಡೆಗಳು ಅವಸಾನದ ಅಂಚಿನಲ್ಲಿದೆ ಎಂದ ಅವರು, ಹೋರಿ ಬೆದರಿಸುವ ಸ್ಪರ್ಧೆ ಕುರಿಕಾಳಗ ಮತ್ತಿತರ ಜನಪದ ಕ್ರೀಡೆಗಳು ಈ ನಾಡಿನ ಭವ್ಯ ಇತಿಹಾಸ ಪರಂಪರೆಯನ್ನು ಪ್ರತಿಬಿಂಬಿಸುತ್ತಿದೆ. ಪೂರ್ವಜನರು ಹುಟ್ಟು ಹಾಕಿದ ಪ್ರತಿಯೊಂದು ಕ್ರೀಡೆ ಸಹಿತ ಸಂಪ್ರದಾಯ ಪದ್ದತಿಗಳಲ್ಲಿ ವೈeನಿಕ ನೆಲೆಗಟ್ಟು ಅಡಕವಾಗಿದೆ ಕುರಿ ಕಾಳಗಕ್ಕೆ ನೂರಾರು ವರ್ಷಗಳ ಭವ್ಯ ಇತಿಹಾಸವಿದ್ದು ನೋಡುಗರನ್ನು ಅತ್ಯಾಕರ್ಷಿಸುವ ರೋಮಾಂಚನ ಕಾರಿ ಕ್ರೀಡೆಯಾಗಿ ಕುರಿ ಕಾಳಗ ಪ್ರಸಿದ್ದವಾಗಿದೆ ಎಂದು ತಿಳಿಸಿದರು.
ಕುರಿ ಕಾಳಗ ಪ್ರಾರಂಭದಿಂದ ಅಂತ್ಯದವರೆಗೂ ಕ್ರೀಡಾ ಪ್ರೇಮಿ ಗಳನ್ನು ಹಿಡಿದಿಟ್ಟುಕೊಂಡು ತುದಿ ಗಾಲಲ್ಲಿ ನಿಲ್ಲಿಸುತ್ತದೆ. ಕ್ರೀಡೆಯನ್ನು ವೀಕ್ಷಿಸುವಾಗ ನಿತ್ಯ ದೈನಿಂದಿನ ಜಂಜಟದಿಂದ ಕೆಲ ಕಾಲ ಹೊರಬಂದು ಹೊಸ ಹುರುಪನ್ನು ನೀಡಲಿದೆ. ಉಸ ಉತ್ಸಾಹ ಮನೋಸ್ಥೈರ್ಯ ಜತೆಗೆ ಆತ್ಮ ವಿಶ್ವಾಸ ಹೆಚ್ಚಿಸುವ ಜನಪದ ಕ್ರೀಡೆ ಗಳನ್ನು ಪ್ರೋತ್ಸಾಹಿಸಲು ತಾಲೂಕು ಕೇಂದ್ರದಲ್ಲಿ ಪ್ರತ್ಯೇಕ ಕ್ರೀಡಾಂಗಣ ನಿರ್ಮಿಸಲು ಎಲ್ಲ ರೀತಿಯಲ್ಲಿ ಶ್ರಮಿಸುವುದಾಗಿ ತಿಳಿಸಿದರು.
ತಾಲೂಕಿನಲ್ಲಿ ಈಗಾಗಲೇ ಹೋರಿ ಬೆದರಿಸುವ ಸ್ಪರ್ಧೆ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು ಇದೇ ರೀತಿಯಲ್ಲಿ ಕುರಿ ಕಾಳಗ, ಕೋಳಿ ಕಾಳಗ ಮತ್ತಿತರ ಎಲ್ಲ ಜನಪದ ಕ್ರೀಡೆ ನೇಪತ್ಯಕ್ಕೆ ಸರಿಯದಂತೆ ಪಕ್ಷಬೇಧ ಮರೆತು ಪ್ರತಿಯೊಬ್ಬರೂ ವೈಮನಸ್ಸು ಬಿಟ್ಟು ಪ್ರೋತ್ಸಾಹಿಸ ಬೇಕಾಗಿದೆ ಎಂದು ತಿಳಿಸಿದರು.
ಪುರಸಭಾ ಸದಸ್ಯ ಮಹೇಶ್ ಹುಲ್ಮಾರ್ ಮಾತನಾಡಿ, ಅನಾದಿ ಕಾಲದಿಂದ ಕುರಿ ಕಾಳಗ, ಹೋರಿ ಸ್ಪರ್ಧೆಗೆ ಶಿಕಾರಿಪುರ ಅತ್ಯಂತ ಪ್ರಸಿದ್ದವಾಗಿದ್ದು, ಕುರಿ ಕಾಳಗ ರೈತರಿಗೆ ಹುಮ್ಮಸ್ಸು ಹೆಚ್ಚಿಸಲಿದೆ ಎಲ್ಲ ವರ್ಗದ ಜನತೆ ಕುರಿ ಕಾಳಗವನ್ನು ಹೆಚ್ಚು ಇಷ್ಟಪಡುತ್ತಾರೆ ಎಂದ ಅವರು, ಸ್ಪರ್ಧೆಗೆ ಸಂಸದರ ಪ್ರೋತ್ಸಾಹ ಬಹು ಮುಖ್ಯ ಕಾರಣವಾಗಿದೆ. ಇದರೊಂದಿಗೆ ಮಾರಿಕಾಂಬ ದೇವಾಲಯಕ್ಕೆ ರಂಗಮಂದಿರ ನಿರ್ಮಿಸಿ ವಿಶಾಲ ಮೈದಾನ ಜಗಕ್ಕೆ ಕಾಂಪೌಂಡ್ ನಿರ್ಮಿಸಿ ದೇವಾಲಯದ ಕಳೆ ಹೆಚ್ಚಳದ ಜತೆಗೆ ಎಲ್ಲ ರೀತಿಯ ಸ್ಪರ್ಧೆಗೆ ಯಡಿಯೂರಪ್ಪನವರು, ಸಂಸದ ಶಾಸಕರ ಸಹಕಾರ ಅವಿಸ್ಮರಣೀಯ ಎಂದರು.
ಅಧ್ಯಕ್ಷತೆಯನ್ನು ಅಘೋರ ಬಳಗದ ಶಿವು ಸಂದಿಮನೆ, ನಿತಿನ್ ವಹಿಸಿದ್ದರು. ವೇದಿಕೆಯಲ್ಲಿ ಪುರಸಭಾ ಸದಸ್ಯ ಗೋಣಿ ಪ್ರಕಾಶ್, ಪ್ರಶಾಂತ ಜೀನಳ್ಳಿ, ತಾ.ಕುರುಬ ಸಮಾಜದ ಮುಖಂಡ ಕಬಾಡಿ ರಾಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ ಮಾರವಳ್ಳಿ, ವೀರಶೈವ ಸಮಾಜದ ಅಧ್ಯಕ್ಷ ಈರೇಶ್, ಮುಖಂಡ ನಗರದ ಮಹಾದೇವಪ್ಪ, ಶ್ರೀಕಾಂತ್, ಗೋಣಿ ಮಾಲತೇಶ್, ಶಿವಕುಮಾರ್ ದುರ್ಗವ್ವಾರ,ಪಚ್ಚಿ ಗಿಡ್ಡಪ್ಪ, ಭೋಗಿ ಚೇತನ, ಸಂದೀಪ ಮತ್ತಿತರರು ಉಪಸ್ಥಿತರಿದ್ದರು.
೮ ಹಲ್ಲಿನ ಹುಬ್ಬಳ್ಳಿಯ ಛತ್ರಪತಿ ಶಿವಾಜಿ ಟಗರಿಗೆ ಹಾಗೂ ೬ ಹಲ್ಲಿನ ರಾಣೇಬೆನ್ನೂರಿನ ಆರ್. ಎನ್. ಆರ್ ಬಾಳು ಟಗರಿಗೆ ಪ್ರಥಮ ಬಹುಮಾನ ಬೈಕ್ ನೀಡಲಾಯಿತು.