ತಮ್ಮ ಪ್ರತನಿಧಿಯಾಗಿ ನನ್ನನ್ನು ಆಶೀರ್ವದಿಸಿ: ಶಿಕ್ಷಕರಲ್ಲಿ ಬೆಣ್ಣೂರು ಮನವಿ
ಶಿವಮೊಗ್ಗ : ಗುರುಗಳನ್ನು ದೇವತಾ ಸ್ಥಾನದಲ್ಲಿ ಗುರುತಿಸಿದ ಸಂಸ್ಕೃತಿಯುಳ್ಳ ದೇಶ ನಮ್ಮದು. ಆದರೆ ಅದೇ ಗುರುಗಳ ಗಮನವನ್ನ ಬೇರೆಡೆಗೆ ಸೆಳೆದು, ತನ್ನ ಸ್ವಾರ್ಥಕ್ಕಾಗಿ ವಾಮ ಮಾರ್ಗದ ಮೂಲಕ ಮತ್ತೊಮ್ಮೆ ವಿಧಾನ ಪರಿಷತ್ ಪ್ರವೇಶಿಸಲು ತಮ್ಮ ಚೇಲಾಗಳ ಮೂಲಕ ಶಿಕ್ಷಕ ವೃಂದಕ್ಕೆ ಬಾಡೂಟ ಹಾಗೂ ಮದ್ಯಪಾನ ಕೂಟ ಸೇರಿದಂತೆ ಇನ್ನಿತರೆ ಅನೈತಿಕ ಚಟುವಟಿಕೆಗಳಿಗೆ ಸೆಳೆದು ಹಾದಿತಪ್ಪಿಸುತ್ತಿರುವುದು ವಿಷಾದನೀಯ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಂಜೇಶ್ ಬೆಣ್ಣೂರು ಅವರು ತಿಳಿಸಿದ್ದಾರೆ.
ಅಂತೆಯೇ ಶಿಕ್ಷಕ ವೃಂದಕ್ಕೆ ಬಹಿರಂಗವಾಗಿ ಮನವಿ ಮಾಡಿಕೊಂಡಿರುವ ಅವರು, ಹಣ, ಬಾಡೂಟ, ಮದ್ಯವನ್ನು ನಿಮ್ಮಿಷ್ಟದಂತೆ ಸ್ವೀಕರಿಸಿ ಅಥವಾ ತಿರಸ್ಕರಿಸಿ, ಅದು ನಿಮಗೆ ಬಿಟ್ಟಿದ್ದು, ಆದರೆ ದಯಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಒಂದು ಬದಲಾವಣೆ ಯಾಗಬೇಕು ಎಂದರೆ ನನಗೆ ಬೆಂಬಲಿಸಿ, ನಾನು ಪ್ರಾಮಾಣಿಕ ವಾಗಿ ನಿಮ್ಮ ಸೇವೆ ಮಾಡುತ್ತೇನೆ ಎಂದಿದ್ದಾರೆ.
ಕ್ಷಣಿಕ ಸುಖಕ್ಕಾಗಿ ಆತುರದ ನಿರ್ಧಾರ ಮಾಡಬೇಡಿ. ಇದು ನಮ್ಮ ದೇಶವನ್ನು ಮುನ್ನ್ನಡೆಸುವ ಶಿಕ್ಷಕರ ಸುರಕ್ಷತೆಗೆ, ಗೌರವಕ್ಕೆ ನೇರವಾಗಿ ಸಂಬಂಧಿಸಿದ ವಿಷಯವಾಗಿದೆ. ಇತ್ತೀಚಿಗೆ ಕರಾವಳಿಯ ಕುಂದಾಪುರದಲ್ಲಿ ನಡೆದಿರುವುದು ಘಟನೆ ವಿಷಾದನೀಯ ಸಂಗತಿ. ಮಂಜಯ್ಯ ಶೆಟ್ಟಿ ಎಂಬುವರ ೪೩ ವರ್ಷಗಳ ವೈವಾಹಿಕ ಸಂಭ್ರಮಾಚರಣೆ ಹೆಸರಿನಲ್ಲಿ ನಡೆಸಿದ ಪಾರ್ಟಿಯಲ್ಲಿ ಉಡುಪಿ ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಕುಂದಾಪುರ ತಸಿಲ್ದಾರರ ನೇತೃತ್ವದ ತಂಡ ದಾಳಿ ಮಾಡುವುದು ಹಾಗೂ ಈ ಮೂಲಕ ಸಾರ್ವಜನಿಕರಿಗೆ ರವಾನೆಯಾಗಿರುವ ಸಂದೇಶ ಇಡೀ ಶಿಕ್ಷಕ ಸಮುದಾಯಕ್ಕೆ ಮುಜುಗರ ಉಂಟಾಗಿದೆ ಎಂದ ಅವರು, ಇನ್ನಾದರೂ ಎಚ್ಚೆತ್ತಕೊಂಡು ಪವಿತ್ರ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬ ಶಿಕ್ಷಕರೂ ಕೂಡ ತಾವು ನಡೆಯಬೇಕಿರುವ ಹಾದಿ ಹೇಗಿರಬೇಕೆಂಬುದನ್ನು ಅರಿತು ಸಚ್ಚಾರಿತ್ರ್ಯವುಳ್ಳ ತಮ್ಮನ್ನು ಇಡೀ ಶಿಕ್ಷಕ ವೃಂದದ ಪ್ರತಿನಿಧಿಯಾಗಿ ಆಶೀರ್ವದಿಸಬೇಕೆಂದ ನಂಜೇಶ್ ಬೆಣ್ಣೂರ್ ಅವರ ಮನವಿ ಮಾಡಿದ್ದಾರೆ.