ಶಿವಮೊಗ್ಗದಲ್ಲಿ ಗ್ಯಾಂಗ್‌ವಾರ್ ಹತ್ಯೆಗೆ ಪೊಲೀಸರ ವೈಫಲ್ಯ ಕಾರಣ..
ಶಿವಮೊಗ್ಗ : ಮೇ ೮ರ ನಿನ್ನೆ ಸಂಜೆ ನಗರದಲ್ಲಿ ನಡೆದ ಗ್ಯಾಂಗ್‌ವಾರ್ ನಲ್ಲಿ ಇಬ್ಬರು ಯುವಕರು ಹತ್ಯೆಯಾಗಿದ್ದು, ಇದಕ್ಕೆ ಪೊಲೀಸರ ವೈಫಲ್ಯವೇ ಕಾರಣ ಎಂದು ಆರೋಪಿಸಿದ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಜಿಲ್ಲೆಯಿಂದ ಜಗ ಖಾಲಿ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಂತಿಸುವ್ಯವಸ್ಥೆ ಇದೆ ಎಂದು ಹೇಳುತ್ತಾರೆ. ಆದರೆ ಒಂದಿಲ್ಲೊಂದು ಕಾರಣಗಳಿಗೆ ಕೊಲೆಗಳು ನಡೆಯುತ್ತಲೇ ಇವೆ. ಈ ಕೊಲೆಯ ಹಿಂದೆ ರೌಡಿಗಳ ಪಾತ್ರವಿದೆ. ಪೊಲೀಸ್ ಇಲಾಖೆಗೆ ಈ ಕುರಿತು ಸಮಗ್ರ ಮಾಹಿತಿ ಇತ್ತು. ಚುನಾವಣೆಯ ದಿನ ಕೆಲವು ಕಡೆ ತಲವಾರುಗಳು ಹೊರ ಬಂದಿದ್ದವು. ಲಷ್ಕರ್ ಮೊಹಲ್ಲಾದಲ್ಲೂ ಕೂಡ ತಲವಾರುಗಳು ಇದ್ದವು ಎಂಬ ಸ್ಪಷ್ಟ ಮಾಹಿತಿ ಪೊಲೀಸರಿಗೆ ಗೊತ್ತಿತ್ತು. ಆದರೂ ಕೂಡ ಅವರು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ ಅವರು, ಒಂದಿಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ನಿನ್ನೆ ನಡೆದ ಜೋಡಿ ಕೊಲೆಗಳನ್ನು ತಪ್ಪಿಸಬಹುದಿತ್ತು ಎಂದರು.
ನಗರದ ಕೋಟೆ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಅವರು ಬೇಜವಾಬ್ದಾರಿಯಿಂದ ವರ್ತಿಸಿ ದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅವರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಕೊಲೆ ಮಾಡಿದವರು ಹೊಳಲೂರಿನಲ್ಲಿ ಉಳಿದು ಕೊಂಡಿದ್ದರು ಎಂಬ ಮಾಹಿತಿ ಇದೆ. ಅಲ್ಲದೆ ಯಲ್ಲಮ್ಮನ ದೇವಸ್ಥಾನದ ಬಳಿಯ ಹಿಂದುಗಳ ಮನೆಯೊಂದನ್ನು ಕೆಲವರು ಬಾಡಿಗೆ ಪಡೆದಿದ್ದಾರೆ. ಅಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂಬ ಮಾಹಿತಿಗಳು ಸಹ ಇವೆ. ಗಾಂಜ, ಅಫೀಮುಗಳ ಸಾಗಣಿಕೆ ಇದೆ. ಅದರ ಪರಿಣಾಮವೇ ಈ ರೀತಿಯ ಘಟನೆಗಳಿಗೆ ಕಾರಣ ವಾಗಿವೆ. ಕಳೆದ ಹಲವು ದಿನಗಳ ಹಿಂದೆ ಸರ್ಕಾರಿ ನೌಕರನೊಬ್ಬನ ಮೇಲೆ ಹಲ್ಲೆಯಾಗಿತ್ತು. ದೂರು ಕೊಟ್ಟರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಕೂಡ ಸುಮ್ಮನಿದೆ ಎಂದು ದೂರಿದರು.
ಆಕಸ್ಮಾತ್ ಚುನಾವಣೆಯ ದಿನ ಇಂತಹ ಘಟನೆ ನಡೆದಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಲು ಆಗುವುದಿಲ್ಲ. ಜಿಲ್ಲಾ ರಕ್ಷಣಾಧಿಕಾರಿಗಳು ಈ ಬಗ್ಗೆ ಕೇಳಿದರೆ ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಶಿವಮೊಗ್ಗ ನಗರದಲ್ಲಿ ಶಾಂತಿಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಘಟನೆಗೆ ಸಂಬಂಧ ಪಟ್ಟಂತೆ ಕೋಟೆ ಪೊಲೀಸ್ ಸ್ಟೇಷನ್ ಎಸ್‌ಐ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಹಾಗೆಯೇ ಶಾಂತಿ ಕಾಪಾಡಲು ಆಗದ ಜಿಲ್ಲಾರಕ್ಷಣಾಧಿಕಾರಿಗಳು ನಮ್ಮ ಜಿಲ್ಲೆಯಲ್ಲಿ ಇದ್ದರೆಷ್ಟು ಹೋದರೆಷ್ಟು ಕೂಡಲೇ ಅವರು ಜಗ ಖಾಲಿ ಮಾಡಲಿ ಎಂದು ಆಗ್ರಹಿಸಿದರು.
ಇಂತಹ ಘಟನೆಗಳು ಮರುಕಳಿಸಿ ದರೆ ಬಿಜೆಪಿ ಜನಾಂದೋಲನ ಮಾಡಬೇಕಾದ ಅವಶ್ಯಕತೆ ಬರುತ್ತದೆ. ಹಿಂದುಗಳನ್ನು ಗಡಿಪಾರು ಮಾಡುವ ಪೊಲೀಸರು, ತಲ್ವಾರನ್ನು ಝಳಪಿಸುವವರನ್ನು ಸುಮ್ಮನೆ ಬಿಡುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.
ಜಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಅರುಣ್ ಡಿ.ಎಸ್., ಪ್ರಮುಖರಾದ ನಾಗರಾಜ್, ಮೋಹನ್‌ರೆಡ್ಡಿ, ಚಂದ್ರಶೇಖರ್, ಅಣ್ಣಪ್ಪ ಮುಂತಾದವರಿದ್ದರು.